ಗದಗ: ಪ್ರವಾಹಪೀಡಿತ ಪ್ರದೇಶಗಳಿಗೆ ಸಚಿವ ಎಚ್.ಕೆ.ಪಾಟೀಲ್ ಭೇಟಿ

ಗದಗ : ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಗೀಡಾದ ನರಗುಂದ ಹಾಗೂ ರೋಣ ಭಾಗದ ಹಳ್ಳಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ್ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿದ ಜನಪ್ರತಿನಿಧಿಗಳು ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಕುರ್ಲಗೇರಿ ಗ್ರಾಮದ ಮೇಲ್ಸೇತುವೆ ಕೆಳಭಾಗಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತುರ್ತು ತೆರವುಗೊಳಿಸಲು ಸಚಿವ ಎಚ್.ಕೆ.ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುರ್ಲಗೇರಿ ನಿವಾಸಿಗಳ ಸ್ಥಳಾಂತರ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕುರಿತು, ಮನೆಗಳ ಸಮರ್ಪಕ ಹಂಚಿಕೆ ಆಗದ ಕುರಿತು ಸಚಿವರಲ್ಲಿ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು ಮತ್ತು ಹೊಲಗಳಲ್ಲಿ ಒಡ್ಡು ಒಡೆದ ಕುರಿತು ಸಚಿವರ ಗಮನಕ್ಕೆ ತಂದರು.
ಈ ವೇಳೆ ಸಚಿವರು ಮಾತನಾಡಿ, ಕುರ್ಲಗೇರಿ ನೂತನ ಗ್ರಾಮಕ್ಕೆ ಜನರು ಸ್ಥಳಾಂತರ ಗೊಂಡಿಲ್ಲ. ಈ ಹಿನ್ನೆಲೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಮನೆ ಅಗತ್ಯವಿರುವವರ ಪಟ್ಟಿ ಸಿದ್ಧಪಡಿಸಿ ಅವರಿಗೆ ಮನೆ ಹಂಚಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಬಳಿಕ ಹದಲಿ, ಯಾವಗಲ್, ಸುರಕೋಡ ಗ್ರಾಮಗಳಿಗೆ ಭೇಟಿ ನೀಡಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿ ಪರಿಶೀಲನೆ ನಡೆಸಿದರು.
ಕಳೆದ ಬಾರಿ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆಹಾನಿ ರೈತರಿಗೆ ಸರಕಾರ ಘೋಷಿಸಿದ್ದ ಮಧ್ಯಂತರ ಬೆಳೆ ಪರಿಹಾರ ಖಾತೆಗೆ ಇನ್ನೂ ಬಾರದ ಕುರಿತು ರೈತರು ಅಳಲು ತೋಡಿಕೊಂಡರು. ಕಳೆದ ಬಾರಿ ಮಧ್ಯಂತರ ಬೆಳೆ ಹಾನಿ ಪರಿಹಾರ ಮತ್ತು ಪ್ರಸಕ್ತ ಸಾಲಿನ ಬೆಳೆಹಾನಿ ಕ್ಷೇತ್ರವನ್ನು ತುರ್ತು ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಿದ್ದು ಪಾಟೀಲ, ರಾಜಗೌಡ ಇತರರು ಉಪಸ್ಥಿತರಿದ್ದರು.
ನರಗುಂದ ಕ್ಷೇತ್ರದ ನಾಲ್ಕಾರು ಹಳ್ಳಿಗಳ ಜನರು ಪ್ರವಾಹ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುತ್ತಾರೆ. ಶಿಗ್ಗಾವಿಯಿಂದ ನರಗುಂದ, ರೋಣ ಕ್ಷೇತ್ರ ಮುಕ್ತಾಯದ ವರೆಗೂ ಬೆಣ್ಣೆಹಳ್ಳಕ್ಕೆ ತಡೆಗೋಡೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಸರಕಾರ ಘೋಷಿಸಿದ ಯೋಜನೆ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ.
-ಸಿ.ಸಿ.ಪಾಟೀಲ್, ಶಾಸಕ