ಗದಗ | ಪ್ರತಿಷ್ಠಿತ ಬ್ರ್ಯಾಂಡ್‌ನ ಅಡುಗೆ ಎಣ್ಣೆ ಪಾಕೆಟ್‌ನಲ್ಲಿ ನೀರು!

ಗದಗ : ದಿನೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿನಿತ್ಯ ಎಲ್ಲರಿಗೂ ಬೇಕಾಗುವ ಅಡುಗೆ ಎಣ್ಣೆಯ ಪಾಕೆಟ್‌ನಲ್ಲಿ ಎಣ್ಣೆಯ ಬದಲಾಗಿ ನೀರು ಇರುವದನ್ನು ನೋಡಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗದಗ ನಗರದ ಗಂಗಾಪೂರ ಪೇಟೆಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿರುವ ಸೋಮು ಮೇಟಿ ಎಂಬುವರು ಮಾರುಕಟ್ಟೆಯಲ್ಲಿರುವ ಬಸವೇಶ್ವರ ಕಿರಾಣಿ ಸ್ಟೋರ್‌ನಲ್ಲಿ ಮಂಗಳವಾರ ಒಂದು ಬಾಕ್ಸ್ ಪ್ರತಿಷ್ಠಿತ ಬ್ರ್ಯಾಂಡ್‌ನ ಎಣ್ಣೆಯ ಪಾಕೆಟ್‌ಗಳನ್ನು ಖರೀದಿಸಿದ್ದಾರೆ. ನಂತರ ಅದನ್ನು ತಂದು ಮಾರಾಟ ಮಾಡುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ಒಂದು ಪಾಕೆಟ್‌ನ್ನು ಪಡೆದು ಮನೆಗೆ ಹೋಗಿ ಒಡೆದು ನೋಡಿದಾಗ ಅದರಲ್ಲಿ ಬರೀ ನೀರು ಇರುವುದು ಕಂಡು ಬಂದಿದೆ.
ಈ ಬಗ್ಗೆ ಗ್ರಾಹಕ, ಸೋಮು ಅವರ ಗಮನ ಸೆಳೆದಾಗ ಅವರೂ ಸಹ ಎರಡು ಪಾಕೆಟ್ ಒಡೆದು ನೋಡಿದಾಗ ಅದರಲ್ಲಿಯೂ ಸಹ ನೀರು ಕಂಡು ಬಂದಿದೆ. ಇದರಿಂದ ಗಾಬರಿಗೊಂಡು ತಾನು ಖರೀದಿಸಿದ ಗ್ರೇನ್ ಮಾರ್ಕೇಟ್‌ನಲ್ಲಿರುವ ಬಸವೇಶ್ವರ ಕಿರಾಣಿ ಸ್ಟೋರ್ ಮಾಲೀಕರಲ್ಲಿ ಕೇಳಿಕೊಂಡಾಗ ಈ ಬಗ್ಗೆ ತನಗೂ ಇದಕ್ಕೂ ಸಂಬಂದವಿಲ್ಲ ನಾನೂ ಕೂಡಾ ರಾವಲ್ ಎಜೆನ್ಸಿ ಎಂಬವರಿಂದ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಆಹಾರ ಸುರಕ್ಷತೆಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿ ಸಂಶಯಾಸ್ಪದವಾಗಿ ಕಂಡು ಬಂದ ಆಹಾರ ಮಾದರಿಗಳನ್ನು ಪಡೆದು ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಸಿಕೊಟ್ಟರು.
ಅಲ್ಲದೆ, ಇದೇ ಸಂದರ್ಭದಲ್ಲಿ ಚಿಕ್ಕಮಕ್ಕಳು ತಿನ್ನುವ ಆಹಾರ ಪದಾರ್ಥಗಳು ಅವಧಿ ಮೀರಿದನ್ನು ಕಂಡು ಬಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆದರು. ನಂತರ ಅಧಿಕಾರಿಗಳು ರಾವಲ್ ಎಜೆನ್ಸಿ ಅವರ ಕಚೇರಿಗೆ ತೆರಳಿ ಅಲ್ಲಿಯೂ ಹೋಗಿ ಆಹಾರ ಪದಾರ್ಥದ ಮಾದರಿಗಳನ್ನು ಪರಿಶೀಲಿಸಿ ವರದಿ ಪಡೆದುಕೊಂಡರು.
ಯಾರ ಭಯವಿಲ್ಲದೆ ನಿರಾಳವಾಗಿ ನಡೆಯುತ್ತಿರುವ ಇಂತಹ ಕೃತ್ಯಗಳಿಗೆ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರಸಭೆ, ಕಡಿವಾಣ ಹಾಕಬೇಕಿದೆ.