ಗ್ರಾಮಗಳನ್ನು ಅಭಿವೃದ್ಧಿಪಡಿಸದೆ ದೇಶ ಅಭಿವೃದ್ಧಿ ಅಸಾಧ್ಯ: ಬಸವರಾಜ ಬೊಮ್ಮಾಯಿ

ಗದಗ: ಗ್ರಾಮಗಳ ಅಭಿವೃದ್ಧಿ ಮಾಡದೇ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ಸ್ವಾಭಿಮಾನದ ದೇಶ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಗ್ರಾಮದೇವಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ಭಾರತ ದೇಶದ ಒಂದು ಹಳ್ಳಿಯ ಸಾಮಾಜಿಕ ವ್ಯವಸ್ಥೆ ಹೇಗಿದೆ ಅನ್ನುವುದು ಇಲ್ಲಿ ಸೇರಿರುವ ಜನರಿಂದ ತಿಳಿಯುತ್ತದೆ. ಗ್ರಾಮ ದೇವಿಯ ಸಮುದಾಯ ಭವನ ನಿರ್ಮಾಣ ಮಾಡುವುದು ಒಂದು ನಿಮಿತ್ಯ ಮಾತ್ರ, ಆದರೆ, ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರಿಗೆ ನೀಡುವ ಬೀಜ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಡಿಸೇಲ್, ಪೆಟ್ರೊಲ್ ಬಳಕೆ ಮಾಡುವ ರೈತರ ಖರ್ಚು ಹೆಚ್ಚಾಗಿದೆ. ಗಾಡಿಗೆ ಹಾಕುವ ಎಣ್ಣೆ ಹಾಗೂ ಸಂಜೆ ಹಾಕುವ ಎಣ್ಣೆಯ ದರವೂ ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಜನತೆ ಸಾಲದ ಸೂಲದಲ್ಲಿ ಸಿಲುಕುವಂತೆ ಆಗಿದೆ. ಇದು ಬದಲಾವಣೆ ಆಗಬೇಕು. ಅಂದಾಗ ಮಾತ್ರ ಈ ದೇಶಕ್ಕೆ ನಾಡಿಗೆ ಭವಿಷ್ಯ ಇದೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಕ್ಕಾಗ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.
ಪ್ರಧಾನಮಂತ್ರಿ ಆವಾಸ ಯೋಜನೆ, ಗ್ರಾಮ್ ಸಡಕ್ ಯೋಜನೆ, ಈಗ ಮನೆ ಮನೆಗೆ ಸೋಲಾರ ವ್ಯವಸ್ಥೆ ಅಳವಡಿಸಿ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಿ ನೀವು ಉತ್ಪಾದಿಸುವ ವಿದ್ಯುತ್ ಗೆ ಸರ್ಕಾರ ದುಡ್ಡು ಕೊಡುತ್ತದೆ. ಕಳೆದ ಹನ್ನೊಂದು ವರ್ಷದಲ್ಲಿ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಮೊದಲು ನಗರ ಪ್ರದೇಶಗಳಿಗೆ ಮಾತ್ರ ಅಡುಗೆ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿತ್ತು. ಈಗ ಹಳ್ಳಿಗಳಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಎಸ್ ಎಸ್ ಪಾಟೀಲ್, ಸಿ.ಸಿ.ಪಾಟೀಲ್, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಗ್ರಾಮೀಣ ಮಂಡಳದ ಅಧ್ಯಕ್ಷರಾದ ಬೂದಪ್ಪ ಹಳ್ಳಿ ಮುಖಂಡರಾದ ಬಿ.ಎಸ್ ಚಿಂಚಲಿ, ಶಾಂತಣ್ಣ ಕಲಕೇರಿ, ಕೃಷ್ಣಾ ರಾಠೋಡ್, ಅಲ್ಲಾಸಾಬ ಪೀರಕಣ್ಣವರ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದ ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನಾಶೀರ್ವಾದವನ್ನು ಪಡೆಯಲಾಯಿತು.