ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಪತ್ತೆ; ಏನೆಲ್ಲಾ ಆಭರಣಗಳು ಸಿಕ್ಕಿವೆ?

ಗದಗ : ಅದು ಐತಿಹಾಸಿಕ ಗ್ರಾಮ. ಶಿಲ್ಪ ಕಲೆಯ ತೊಟ್ಟಿಲು, ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ ಆ ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳ ಐತಿಹಾಸಿಕ ಪ್ರತೀತಿ ಇರುವ ಸ್ಥಳವದು. ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರ ಕರ್ಮಭೂಮಿಯದು. ಆ ಗ್ರಾಮದಲ್ಲಿ ಮನೆ ಕಟ್ಟಡದ ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆಯಾಗಿದೆ. ಪತ್ತೆಯಾದ ಚಿನ್ನದ ಆಭರಣಗಳನ್ನು ಈಗ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗಂಗವ್ವ ರಿತ್ತಿ ಎಂಬುವರ ಮನೆ ನಿರ್ಮಾಣದ ಅಡಿಪಾಯ ಸಂದರ್ಭದಲ್ಲಿ ಹೊನ್ನಿನ ಬಿಂದಿಗೆ ಸಿಕ್ಕಿದೆ. ಅದು ಅವರ ಮಗನಾಗ ಪ್ರಜ್ವಲ್ ರಿತ್ತಿಗೆ ದೊರತಿದೆ. ಅದನ್ನು ಸ್ಥಳಿಯರಿಗೆ ತೋರಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿದೆ. ನಿಧಿ ಪತ್ತೆಯಾಗಿದ್ದರ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ನಿಧಿ ಸುದ್ಧಿ ಕೇಳಿ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಎಡಿಸಿ ದುರ್ಗೆಶ್, ತಹಶಿಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ನಿಧಿಯನ್ನು ವಶಕ್ಕೆ ಪಡೆದುಕೊಂಡು, ಪರಿಶೀಲನೆ ನಡೆಸಿದರು. ಸುಮಾರು 470 ಗ್ರಾಂ ತೂಕದ ಬಂಗಾರ ಆಭರಣಗಳು ದೊರೆತಿವೆ. ಇನ್ನು ಅಕ್ಕಸಾಲಿಗರನ್ನು ಬರಮಾಡಿಕೊಂಡು ಮಡಿಕೆಯಲ್ಲಿನ ಚಿನ್ನವನ್ನು ಪರಿಶೀಲನೆ ಮಾಡಿಸಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿ, ತೂಕ ಮಾಡಲಾಯಿತು. 22 ವಿವಿಧ ಚಿನ್ನದ ಆಭರಣಗಳು ಹಳೆ ಕಾಲದ ಆಭರಣಗಳು ಎನ್ನಲಾಗುತ್ತಿದೆ.
ಸದ್ಯ ಇದರ ಮೌಲ್ಯ ಸುಮಾರು 65 ರಿಂದ 70 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಗ್ರಾಮದ ಹಿರಿಯರು, ಮುಖಂಡರ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಜಿಲ್ಲಾಡಳಿತದ ಖಜಾನೆಗೆ ಆಭರಣವನ್ನು ಒಪ್ಪಿಸಿದ್ದಾರೆ. ಇನ್ನೂ ಕುಟುಂಬದ ಪ್ರಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನೇನು ಆಭರಣ ಸಿಕ್ಕಿವೆ? :
ಕುಟುಂಬಸ್ಥರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇನ್ನು ಸಿಕ್ಕ ಆಭರಣಗಳಲ್ಲಿ ಕೈ ಖಡಗ, ಕಂಠಹಾರ, ಕುತ್ತಿಗೆ ಸರ, ದೊಡ್ಡ ಹಾರ, ಬಂಗಾರದ ಗುಂಡುಗಳು, ಉಂಗುರ, ಕಿವಿ ಓಲೆ, ನಾಗಮುದ್ರೆಗಳು, ನಾಗಮಣಿ ಉಂಗುರ, ಸರಗಳು, ಬಳೆ, ಕಾಲ್ಗೆಜ್ಜೆ, ಬಿಲ್ಲೆಗಳು, ವಜ್ರ ಕಚಿತ ಉಂಗುರ ಸೇರಿದಂತೆ ಅನೇಕ ಆಭರಣಗಳು ತೊರೆಕಿವೆ. ನಿಧಿ ಸಿಕ್ಕ ತಕ್ಷಣ ಲಕ್ಕುಂಡಿ ಪ್ರಾಧಿಕಾರದ ಮುಖ್ಯಸ್ಥ ನೇರವಾಗಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ವಿಷಯ ತಿಳಿಸಿದ್ದಾರೆ.
ನಿಧಿ ಸಿಕ್ಕ ಸ್ಥಳ ಈಗ ನಿಷೇಧಿತ ಪ್ರದೇಶ :
ಈಗ ನಿನ್ನೆ ಸಿಕ್ಕ ನಿಧಿ ಹೊಸದೊಂದು ಸಮಸ್ಯೆಗೆ ಕಾರಣವಾಗಿದೆ. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಲ್ಲುವ ಆತಂಕ ಎದುರಾಗಿದೆ.
ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಸರಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮನೆಯವರು, ʼನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿʼ ಎಂದು ಕೇಳಿಕೊಂಡಿದ್ದಾರೆ.
ʼನಿಧಿ ಸಿಕ್ಕಾಗ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ. ಹೊಲ ಮಾರಿ ಮನೆ ಕಟ್ಟಲು ಆರಂಭಿಸಿದ್ದೇವೆʼ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.



















