ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಕೆ : ಶಾಸಕ ಯತೀಂದ್ರ

ಗದಗ : ವರ್ಷಾಂತ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದು ಪ್ರತಿವರ್ಷ ಹೀಗೆಯೇ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಸುರ್ಜೇವಾಲ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಲ್ಲದೆ, ಮುಂದಿನ 5 ವರ್ಷ ನಾನೇ ಇರುತ್ತೇನೆ, ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಜಿಎಸ್‌ಟಿ ವಿಚಾರವಾಗಿ ಕೇಂದ್ರದ ವಿರುದ್ಧ ಹರಿಹಾಯ್ದ ಯತೀಂದ್ರ, ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟ ಆಗುತ್ತಿದೆ. ಅದಕ್ಕೆ ಪರಿಹಾರ ಕೊಡಬೇಕೆಂದು ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ ಎಂದು ಹೇಳಿದರು.
‘ಐ ಲವ್ ಮುಹಮ್ಮದ್’ ಎಂಬ ಘೋಷಣೆ ಬ್ಯಾನರ್ ಹೊಸದೇನಲ್ಲ. ಬ್ಯಾನರ್ ಮೊದಲೆಲ್ಲಾ ಹಾಕುತ್ತಿದ್ದರು. ಈಗ ಅದನ್ನು ವಿವಾದವಾಗಿ ಸೃಷ್ಟಿ ಮಾಡಿದ್ದಾರೆ. ಇವೆಲ್ಲವೂ ಅನಗತ್ಯ ವಿವಾದಗಳು. ಪ್ರತಿಯೊಂದು ಧರ್ಮದವರು ತಮ್ಮ ಮಹನೀಯರು, ದೇವರ ಮೆಚ್ಚುಗೆ ಬ್ಯಾನರ್ ಹಾಕಿದರೆ ಏನೂ ತಪ್ಪಿಲ್ಲ ಎಂದು ಯತೀಂದ್ರ ಪ್ರತಿಕ್ರಿಯಿಸಿದರು.







