Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. 9/11: ಮರುಕಳಿಸಿದ ಸಂಕೇತ

9/11: ಮರುಕಳಿಸಿದ ಸಂಕೇತ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್16 Sept 2026 11:55 AM IST
share
9/11: ಮರುಕಳಿಸಿದ ಸಂಕೇತ

1973ರಲ್ಲಿ ಮೊದಲನೆಯ 9/11ನ್ನು ಸೃಷ್ಟಿಸಿದ ಅಮೆರಿಕ, 2001ರಲ್ಲಿ ಮತ್ತೊಂದು 9/11ಕ್ಕೆ ಬಲಿಯಾಯಿತು. ಇದೀಗ 2026ರ ಇನ್ನೊಂದು 9/11ರ ಹೊಸ ಬೆಳವಣಿಗೆ, ಸಣ್ಣ ಪುಟ್ಟ ಗುಂಪುಗಳು ಕೂಡ ಸೂಪರ್‌ಪವರ್‌ಗಳನ್ನು ಎದುರಾಗಬಲ್ಲ ಸಾಧ್ಯತೆಯನ್ನು ತೋರಿಸುತ್ತಿರುವ ರೀತಿ ಲೋಕದ ಯುದ್ಧೋನ್ಮಾದದ ಅಮಲನ್ನು ಇಳಿಸಬಲ್ಲದೆ? ಅದು ಸಂಕೇತಗಳನ್ನು ಯಾರು ಯಾವ ರೀತಿ ಓದುತ್ತಾರೆ ಎಂಬುದನ್ನೂ ಅವಲಂಬಿಸಿದೆ!

ಸಂಕೇತಗಳು ಸೃಷ್ಟಿಯಾಗುವ ರೀತಿ ಹಾಗೂ ಸಂಕೇತಗಳನ್ನು ಸಂದರ್ಭ, ಸಮುದಾಯ, ಕಾಲ, ದೇಶ, ಗುಂಪುಗಳು ಸೃಷ್ಟಿಸುವ ರೀತಿ ಈಗ ಎಲ್ಲರಿಗೂ ಪರಿಚಿತ. ವಿದ್ಯಮಾನಗಳು ಕೂಡ ಸಂಕೇತಗಳನ್ನು ಸೃಷ್ಟಿಸುತ್ತವೆ. ಅನೇಕ ಸಲ ಈ ಸಂಕೇತಗಳ ಅರ್ಥ ಒಂದೇ ರೂಪದ್ದಾಗಿರುವುದಿಲ್ಲ. ಸಂಕೇತ, ರೂಪಕಗಳ ವಿದ್ಯಾರ್ಥಿಯಾದ ಈ ಅಂಕಣಕಾರನಿಗೆ ಈ ಥರದ ವಿದ್ಯಮಾನಗಳು ಸಾಂಸ್ಕೃತಿಕ-ರಾಜಕೀಯ ಅಧ್ಯಯನಗಳಿಗೆ ಹೊಸ ಹೊಳಹುಗಳನ್ನು ಕೊಡುತ್ತಿರುತ್ತವೆ. ಇಂಥದೊಂದು ಸಂಕೇತ ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ಸೆಪ್ಟಂಬರ್ 11ನೆಯ ತಾರೀಕು ಮತ್ತೆ ಎದುರಾಯಿತು.

ಅವತ್ತು ಜಗತ್ತಿನ ಸುದ್ದಿಜಾಲಗಳಲ್ಲಿ 9/11 ಎಂಬ ಶೀರ್ಷಿಕೆ ಮತ್ತೆ ಮತ್ತೆ ಕಾಣತೊಡಗಿತು. ಈಚಿನ ದಶಕಗಳಲ್ಲಿ ಜಗತ್ತಿನ ನೆನಪಿನಲ್ಲಿ ಖಾಯಂ ಆಗಿ ಉಳಿದಿರುವ 9/11 ಎಂಬ ಸಂಕೇತ ಜಗತ್ತಿನ ಮಾಧ್ಯಮಗಳಲ್ಲಿ ಇದೀಗ ಮತ್ತೆ ಎದ್ದು ಕಾಣಲು ಕಾರಣವಿತ್ತು: ಈ ಸಾಂಕೇತಿಕ ದಿನಾಂಕದ ಹುಟ್ಟಿಗೆ ಕಾರಣವಾದ ಭಯಾನಕ ಘಟನೆಗಳು ನಡೆದು ಇದೇ ಸೆಪ್ಟಂಬರ್ 11ಕ್ಕೆ ಇಪ್ಪತ್ತೈದು ವರ್ಷವಾಯಿತು.

ಇಪ್ಪತ್ತೈದು ವರ್ಷಗಳ ಕೆಳಗೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲೆ ನಡೆದ ದಾಳಿ ನಿಮಗೆ ನೆನಪಿರಬಹುದು. ಅವತ್ತು ಇದು ಅತಿಭೀಕರ ಭಯೋತ್ಪಾದನೆಯೆಂದು ಅಮೆರಿಕ ಹಾಗೂ ಯೂರೋಪು ಬಣ್ಣಿಸಿದರೆ, ಅಮೆರಿಕವನ್ನು ಕಂಡರಾಗದವರು ಇದು ಅಮೆರಿಕದ ಭಯೋತ್ಪಾದನೆಗೆ ಆದ ಗರ್ವಭಂಗ ಎಂದರು. ಒಬ್ಬನ ಪಾಲಿಗೆ ಭಯೋತ್ಪಾದಕನಾದವನು ಮತ್ತೊಬ್ಬನ ಪಾಲಿಗೆ ಸ್ವಾತಂತ್ರ್ಯ ಹೋರಾಟಗಾರನಾಗುವ ರೀತಿ ಈ ವಿದ್ಯಮಾನಕ್ಕೆ ಬಂದ ಪ್ರತಿಕ್ರಿಯೆಯಲ್ಲೂ ಕಾಣುತ್ತಿತ್ತು! ಈ ಹಿನ್ನೆಲೆಯಲ್ಲಿ, 9/11 ಎಂಬ ಸಂಕೇತ ಜಗತ್ತಿನ ವಿವಿಧ ಭಾಗಗಳಲ್ಲಿ, ವಿವಿಧ ಧರ್ಮಗಳು, ಪಂಥಗಳ ಅನುಯಾಯಿಗಳಲ್ಲಿ ಯಾವ ಯಾವ ಯಾವ ಅರ್ಥ ಹುಟ್ಟಿಸುತ್ತಾ ಬಂದಿದೆ ಎಂಬುದನ್ನು ಊಹಿಸಬಹುದು.

2001ನೆಯ ಇಸವಿಯ 9/11 ದಿನವನ್ನು ಅಮೆರಿಕನ್ ಚರಿತ್ರೆಯ ಭೀಕರ ದಿನವೆಂದು ಮತ್ತೆ ಮತ್ತೆ ನೆನೆಯುತ್ತಿದ್ದ ಅಮೆರಿಕಕ್ಕೆ, ಅದಕ್ಕಿಂತ ಇಪ್ಪತ್ತೆಂಟು ವರ್ಷಗಳ ಕೆಳಗೆ ಹುಟ್ಟಿದ್ದ 9/11 ಸಂಕೇತವನ್ನೂ ಖ್ಯಾತ ಚಿಂತಕ ನೋಮ್ ಚಾಮ್ಸ್ಕಿ ಒಮ್ಮೆ ನೆನಪಿಸಿದರು. ‘ಫಸ್ಟ್ 9/11’ ಎನ್ನಲಾಗುವ ಈ ಸಂಕೇತ ಲ್ಯಾಟಿನ್ ಅಮೆರಿಕದ ಚಿಲಿಯಲ್ಲಿ ಸೃಷ್ಟಿಯಾಗಲು ಅಮೆರಿಕದ ಹುನ್ನಾರ ಕಾರಣವಾಗಿತ್ತು.

9. 11. 1973. ಅವತ್ತು ಚಿಲಿ ದೇಶದಲ್ಲಿ ಒಂದು ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆಯಿತು. ಚಿಲಿಯ ರಾಷ್ಟ್ರಾಧ್ಯಕ್ಷ ಸಾಲ್ವಡಾರ್ ಅಯಂಡೆಯ ಬದುಕಿನ ಕೊನೆಯಾಯಿತು. ‘ಪಾಪ್ಯುಲರ್ ಸೋಷಲಿಸ್ಟ್ ಪಾರ್ಟಿ’ಯ ನಾಯಕ ಅಯಂಡೆ ಚಿಲಿಯಲ್ಲಿ ಜನರಿಂದ ಚುನಾಯಿತನಾದ ಪ್ರಥಮ ಮಾರ್ಕ್ಸಿಸ್ಟ್ ಅಧ್ಯಕ್ಷನಾಗಿದ್ದ. ಅವತ್ತಿನ ಮಿಲಿಟರಿ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ಅಮೆರಿಕದ ಕೈವಾಡವಿತ್ತು ಎಂಬುದು ಈಗ ಜನಜನಿತವಾಗಿದೆ. ಅಯಂಡೆಯ ಸಾವು ಆತ್ಮಹತ್ಯೆಯೋ, ಹತ್ಯೆಯೋ ಎಂಬುದು ವಿವಾದಾಸ್ಪದವಾಗಿಯೇ ಉಳಿದಿದೆ. ಅಮೆರಿಕನ್ ಕೈವಾಡ ಮಿಲಿಟರಿ ಸರ್ವಾಧಿಕಾರಿ ಆಗಸ್ಟೊ ಪೀನೋಶೆಯನ್ನು ಚಿಲಿಯ ಆಡಳಿತದಲ್ಲಿ ತಂದು ಕೂರಿಸಿತು.

ಸವಾರ್ಧಿಕಾರಿ ಪೀನೋಶೆ ಚಿಲಿಯಲ್ಲಿ ನಾಗರಿಕ ಹಕ್ಕುಗಳ ಹರಣದ ಬರ್ಬರ ಹಿಂಸಾಸರಣಿಯನ್ನೇ ಶುರು ಮಾಡಿದ. ಸರ್ವಾಧಿಕಾರ ಹೊಸ ಹೊಸ ಹಿಂಸೆಗಳನ್ನು ಸೃಷ್ಟಿಸುವ ರೀತಿಯನ್ನು ಚರಿತ್ರೆ ಮತ್ತೊಮ್ಮೆ ಕಂಡಿತು. ಪ್ರಜಾಪ್ರಭುತ್ವ ಮಾರ್ಗದಲ್ಲಿ ಚುನಾಯಿತನಾಗಿದ್ದ ಕಮ್ಯುನಿಸ್ಟ್ ಅಧ್ಯಕ್ಷನನ್ನು ಕೆಳಗಿಳಿಸಿ ಜನಕಂಟಕ ಸರ್ವಾಧಿಕಾರಿಯನ್ನು ಪ್ರತಿಷ್ಠಾಪಿಸಿದ ಅಮೆರಿಕದ ಪಾಪಕೃತ್ಯದ ಫಲವಾಗಿ ಫಸ್ಟ್ 9/11 ಎಂಬ ದಿನ ಲ್ಯಾಟಿನ್ ಅಮೆರಿಕದಲ್ಲಿ ಭೀಕರ ನೆನಪಾಗಿ ದಾಖಲಾಯಿತು. ಚಿಲಿಯ ಜನಮಾನಸದಲ್ಲಿ ಉಳಿದಿರುವ ಈ 9/11ರ ಸಂಕೇತವನ್ನು ಮರೆತಂತಿದ್ದ ಅಮೆರಿಕವನ್ನು ಇಪ್ಪತ್ತೆಂಟು ವರ್ಷದ ನಂತರ ಮತ್ತೊಂದು 9/11 ಬೆಚ್ಚಿ ಬೀಳಿಸಿತು.

ಇಪ್ಪತ್ತೈದು ವರ್ಷಗಳ ಕೆಳಗೆ ಜಗತ್ತನ್ನು ಅಲುಗಾಡಿಸಿದ್ದ 9/11 ದಿನದ ಘಟನೆಯ ವಿವರಗಳನ್ನು ನೆನಪಿಸಿಕೊಳ್ಳಿ:

2001ನೇ ಇಸವಿಯ ಸೆಪ್ಟಂಬರ್ 11ರ ಬೆಳಗ್ಗೆ ಅಲ್ ಖಾಯಿದಾ ಸಂಘಟನೆಯ ತಂಡ ಎರಡು ವಿಮಾನಗಳನ್ನು ಹೈಜಾಕ್ ಮಾಡಿ ಅಮೆರಿಕದ ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್‌ನ ಉತ್ತರ ಟವರ್ ಹಾಗೂ ದಕ್ಷಿಣ ಟವರ್ ಕಡೆಗೆ ನುಗ್ಗಿಸಿತು. ಮೂರನೆಯ ವಿಮಾನವನ್ನು ವಾಶಿಂಗ್ಟನ್‌ನ ಪೆಂಟಗನ್ ಕಡೆಗೆ ನುಗ್ಗಿಸಲಾಯಿತು. ಅಮೆರಿಕದ ಪಾರ್ಲಿಮೆಂಟ್ ವೈಟ್‌ಹೌಸ್ ಕಡೆಗೆ ನುಗ್ಗಲು ಹೊರಟಿತ್ತೆಂದು ಊಹಿಸಲಾದ ನಾಲ್ಕನೆಯ ವಿಮಾನದ ದಿಕ್ಕನ್ನು ಆ ವಿಮಾನದ ಪ್ರಯಾಣಿಕರೇ ಧೀರೋದಾತ್ತವಾಗಿ ಮುನ್ನುಗ್ಗಿ ಬದಲಿಸಿದ್ದರು. ಈ ಪ್ರಯಾಣಿಕರು ತಮ್ಮ ಕೈಗೆ ಸಿಕ್ಕ ಫುಡ್ ಟ್ರಾಲಿ, ಬೆಂಕಿ ನಂದಿಸುವ ಸಿಲಿಂಡರ್, ಕುದಿವ ನೀರಿನ ಪಾತ್ರೆ ಇತ್ಯಾದಿಗಳನ್ನು ಹಿಡಿದುಕೊಂಡು ಪೈಲಟ್ ಕೂರುವ ಕಾಕ್‌ಪಿಟ್ ಕಡೆಗೆ ನುಗ್ಗಿದರು. ಹೈಜಾಕರ್-ಪೈಲಟ್ ವಿಮಾನವನ್ನು ಬೇರೆ ದಿಕ್ಕಿಗೆ ನುಗ್ಗಿಸಿದ. ವಿಮಾನ ಪೆನ್ಸೆಲ್ವಿಯಾದ ಬಯಲಿಗೆ ಅಪ್ಪಳಿಸಿತು.

ವಿಮಾನದಲ್ಲಿದ್ದ ಯಾರೊಬ್ಬರೂ ಬದುಕಿ ಉಳಿಯಲಿಲ್ಲ. ಕಂಟ್ರೋಲ್ ರೂಮಿನ ಸಂಭಾಷಣೆಯ ದಾಖಲೆಗಳು, ವಾಯ್ಸ್ ರೆಕಾರ್ಡರ್‌ಗಳು, ಟೆಲಿಫೋನ್ ಕರೆಗಳ ಆಧಾರದ ಮೇಲೆ ವಿಮಾನದ ಪ್ರಯಾಣಿಕರ ಬದುಕಿನ ಕೊನೆಗಳಿಗೆಯ ಧೀರೋದಾತ್ತ ಸಾಹಸ ಆನಂತರ ಲೋಕಕ್ಕೆ ಗೊತ್ತಾಯಿತು. ಈ ಪ್ರಯಾಣಿಕರನ್ನು ನೆನೆಯುವ ರಾಷ್ಟ್ರೀಯ ಸ್ಮಾರಕ ಪೆನ್ಸೆಲ್ವಿಯಾದ ಸ್ಟೋನಿಕ್ರೀಕ್ ಟೌನ್‌ಶಿಪ್‌ನಲ್ಲಿದೆ.

ಈ ದಾಳಿಯನ್ನು ರೂಪಿಸಿದ ಉಸಾಮ ಬಿನ್ ಲಾದೆನ್, ‘‘ಇನ್ನು ಮುಂದೆ ಅಮೆರಿಕ ಸದಾ ಸಣ್ಣಪುಟ್ಟ ಯುದ್ಧದಲ್ಲಿ ತೊಡಗುವಂತೆ ಮಾಡುವ ಮೂಲಕ ಅದರ ಆರ್ಥಿಕತೆಯನ್ನು ಭಗ್ನಗೊಳಿಸುವ ಯತ್ನವಿದು’’ ಎಂದಿದ್ದ. ಜಗತ್ತಿನ ಅತ್ಯಂತ ತೀಕ್ಷ್ಣವಾದ ಇಂಟೆಲಿಜೆನ್ಸ್ ಸರ್ವಿಸ್ ಎನ್ನಲಾದ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಈ ಮಟ್ಟದ ಅಪಾಯವನ್ನು ನಿರೀಕ್ಷಿಸಿರಲಿಲ್ಲ. ಉಸಾಮಗಾಗಿ ಅಮೆರಿಕ ಮುಂದಿನ ಹತ್ತು ವರ್ಷ ಹುಡುಕುತ್ತಲೇ ಇತ್ತು. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನದ ಎಲ್ಲೆಯೊಳಕ್ಕೆ ಪ್ರವೇಶಿಸಿದ ಅಮೆರಿಕನ್ ಗುಪ್ತ ಪಡೆ ಮೇ 2011ರ ಸಂಜೆ ಅಲ್ಲಿನ ಅಬ್ಬೊತ್ತಾಬಾದಿನ ಮನೆಯಲ್ಲಿದ್ದ ಉಸಾಮನನ್ನು ಹತ್ಯೆ ಮಾಡಿತು.

9/11ರ ಪರಿಣಾಮಗಳನ್ನು ಹಾಗೂ ಬಿನ್ ಲಾದೆನ್ ಹತ್ಯೆಯನ್ನು ಅಮೆರಿಕ ದಕ್ಕಿಸಿಕೊಂಡಿದೆಯೋ ಅಥವಾ ಬಿನ್ ಲಾದೆನ್ ಮಾಡಿದ್ದ ಊಹೆಯಂತೆ ತನ್ನ ಸೂಪರ್ ಪವರ್ ಇಮೇಜನ್ನು ಉಳಿಸಿಕೊಳ್ಳಲು ಹಲವು ಯುದ್ಧಗಳಿಗೆ ಸಿಕ್ಕಿಕೊಂಡು ತನ್ನ ಆರ್ಥಿಕ ಬಿಕ್ಕಟ್ಟು-ಸಂಕಟಗಳನ್ನು ಹೆಚ್ಚಿಸಿಕೊಳ್ಳುತ್ತಿದೆಯೋ? ಇಂಥ ಗಂಭೀರ ಪ್ರಶ್ನೆಗಳನ್ನು ಅಂತರ್ ರಾಷ್ಟ್ರೀಯ ವಿದ್ಯಮಾನಗಳ ವಸ್ತುನಿಷ್ಠ ತಜ್ಞರಷ್ಟೇ ಉತ್ತರಿಸಬಲ್ಲರು. ಲಾದೆನ್ ಹತ್ಯೆಯ ನಂತರ, 13 ಮೇ 2013ರಂದು ಅಮೆರಿಕದ ಅಧ್ಯಕ್ಷ ಒಬಾಮ ‘‘ಟೆರರಿಸಂ ವಿರುದ್ಧ ಯುದ್ಧ ಮುಗಿಯಿತು’’ ಎಂದು ಘೋಷಿಸಿದ್ದೂ ಆಯಿತು. ಆದರೂ, ಅಮೆರಿಕ ಆ ಹಾದಿ ಬಿಟ್ಟು ಹೊರಳಲಿಲ್ಲ. ಲೋಕದ ಎಲ್ಲ ಬಗೆಯ ಶಸ್ತ್ರಾಸ್ತ್ರಗಳ ಹಿಂಸಾಸರಣಿಯ ಜುಟ್ಟು ಈಗ ದೇಶಗಳ ಕೈಯಲ್ಲಿಲ್ಲ; ಅದು ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯ ಕೈಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು.

2001ರ ಘಟನೆ ನಡೆದು ಇಪ್ಪತ್ತೈದು ವರ್ಷವಾಗಿದ್ದರಿಂದ ಈ ವರ್ಷದ ಸೆಪ್ಟಂಬರ್ 11ರಂದು ಇದನ್ನೊಂದು ‘ಲೀಡ್ ಸ್ಟೋರಿ’ ಮಾಡಲು ಜಗತ್ತಿನ ಮಾಧ್ಯಮಗಳು ಸಿದ್ಧತೆ ಮಾಡಿಕೊಂಡಿದ್ದವು; ಅವಲೋಕನ, ಸಂದರ್ಶನ, ಸ್ಪೆಷಲ್ ಸ್ಟೋರಿಗಳ ಪ್ರಸಾರಗಳನ್ನು ಶುರು ಮಾಡಲು ಹೊರಟಿದ್ದವು. ಆದರೆ ಅವತ್ತೇ 9/11ರ ಸಂಕೇತವನ್ನು ಹಿಮ್ಮೆಟ್ಟಿಸಿ ಮತ್ತೊಂದು ಸಂಕೇತವನ್ನು ಸ್ಥಾಪಿಸುವ ರೀತಿಯಲ್ಲಿ ಇರಾನ್ ಬೆಂಬಲಿತ ಹೌದಿಗಳು ಯಮನ್ ಮೇಲೆ ಹಿಡಿತ ಸಾಧಿಸಲೆತ್ನಿಸಿದರು. ಈ ಹೌದಿ ಆಕ್ರಮಣ ಈ ವರ್ಷದ ಸೆಪ್ಟಂಬರ್ 11ರಂದೇ ಪೂರ್ಣಗೊಂಡಿದ್ದು ಪೂರ್ವಯೋಜಿತವೋ, ಆಕಸ್ಮಿಕವೋ ಊಹಿಸುವುದು ಕಷ್ಟ. ಆದರೂ ಈ ಹೌದಿ ದಾಳಿ ಇಪ್ಪತ್ತೈದು ವರ್ಷಗಳ ಹಿಂದಿನ ಸೆಪ್ಟೆಂಬರ್ 11ರ ನೆನಪನ್ನು ಹಿಮ್ಮೆಟ್ಟಿಸಿ ಜಗತ್ತಿನ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ನಿಜ. ಇಪ್ಪತ್ತೈದು ವರ್ಷಗಳ ಹಿಂದಿನ ಉಸಾಮಾ ನಡೆಯನ್ನು ಅಮೆರಿಕ ಹೇಗೆ ಊಹಿಸಿರಲಿಲ್ಲವೋ ಹಾಗೆಯೇ ಇವತ್ತು ಹೌದಿಗಳ ಈ ನಡಿಗೆಯನ್ನೂ ಅಮೆರಿಕವೂ ಸೇರಿದಂತೆ ವಿವಿಧ ದೇಶಗಳ ಭದ್ರತಾ ಪಡೆಗಳು ಊಹಿಸಿದ್ದಂತೆ ಕಾಣುತ್ತಿಲ್ಲ.

ಪ್ರತೀ ವರ್ಷ 9/11 ಎಂಬ ಭೀಕರ ನೆನಪಿಗೆ ಮರಳುವ ಅಮೆರಿಕ ಆ ಭೀಕರ ಘಟನೆಯ ನಂತರವೂ ಕಾಲು ಕೆರೆದು ಯುದ್ಧಕ್ಕಿಳಿಯುವ ಚಾಳಿ ಬಿಟ್ಟಿಲ್ಲ. ಅಮೆರಿಕ, ಇಸ್ರೇಲ್ ಇರಾನ್ ಮೇಲೆ ಆರಂಭಿಸಿದ ಯುದ್ಧದ ಭಾಗವಾಗಿಯೇ ಈಗ ಇರಾನ್ ಬೆಂಬಲಿತ ಹೌದಿ ಪಡೆಗಳ ಆಕ್ರಮಣ ನಡೆದಿರುವುದು ಸ್ಪಷ್ಟ. ಹೌದಿಗಳು ಯಮನ್ ಬಳಿಯ ಕೆಂಪು ಸಮುದ್ರದ ಕರಾವಳಿಯ ಮೇಲೆ ಹಿಡಿತ ಸಾಧಿಸಿರುವುದರಿಂದ ಇರಾನ್‌ನ ಕೈ ಮೇಲಾಗಲಿದೆ ಎಂದು ಕೆಲವರು ಹೇಳುತ್ತಿದ್ದರೆ, ಇದು ತಾತ್ಕಾಲಿಕ ಗೆಲುವು ಎನ್ನುವವರಿದ್ದಾರೆ. ತನ್ನ ದೇಶದ ಸಂರಕ್ಷಣೆಗಾಗಿ ಅಮೆರಿಕವನ್ನು ನಂಬಿಕೊಂಡಿದ್ದ ಸೌದಿ ಅರೇಬಿಯದ ಯುವರಾಜ ನೆರವಿಗಾಗಿ ಮಾಡುತ್ತಿರುವ ಮೊರೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಈತನಕ ಕಿವಿಗೊಟ್ಟಿಲ್ಲ! ನಿತ್ಯ ಬದಲಾಗುವ ಅಮೆರಿಕದ ಅಧ್ಯಕ್ಷೀಯ ವರಸೆಯ ಲೆಕ್ಕಾಚಾರಗಳೇ ಬೇರೆ ಅಥವಾ ಮತ್ತೊಂದು 9/11 ಸಂಕೇತದ ದೀರ್ಘಕಾಲಿಕ ಅರ್ಥ ಅಮೆರಿಕಕ್ಕೆ ಹೊಳೆದಿರಬಹುದೆ?

ಕಾರಣ, 1973ರಲ್ಲಿ ಮೊದಲನೆಯ 9/11ನ್ನು ಸೃಷ್ಟಿಸಿದ ಅಮೆರಿಕ, 2001ರಲ್ಲಿ ಮತ್ತೊಂದು 9/11ಕ್ಕೆ ಬಲಿಯಾಯಿತು. ಇದೀಗ 2026ರ ಇನ್ನೊಂದು 9/11ರ ಹೊಸ ಬೆಳವಣಿಗೆ, ಸಣ್ಣ ಪುಟ್ಟ ಗುಂಪುಗಳು ಕೂಡ ಸೂಪರ್‌ಪವರ್‌ಗಳನ್ನು ಎದುರಾಗಬಲ್ಲ ಸಾಧ್ಯತೆಯನ್ನು ತೋರಿಸುತ್ತಿರುವ ರೀತಿ ಲೋಕದ ಯುದ್ಧೋನ್ಮಾದದ ಅಮಲನ್ನು ಇಳಿಸಬಲ್ಲದೆ? ಅದು ಸಂಕೇತಗಳನ್ನು ಯಾರು ಯಾವ ರೀತಿ ಓದುತ್ತಾರೆ ಎಂಬುದನ್ನೂ ಅವಲಂಬಿಸಿದೆ!

(ಅಂಕಣಕಾರರು ಪ್ರಾಧ್ಯಾಪಕರು, ವಿಮರ್ಶಕರು ಮತ್ತು ಚಿಂತಕರು)

Tags

America
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X