‘ಡಾಕ್ಟರ್ ಸಾಹೇಬ್’ ಜೀವನ ಚರಿತ್ರೆಯ ಹಿಂದೆ...

ಚರಿತ್ರೆ ಯಾರನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ನಿಜಕ್ಕೂ ಕುತೂಹಲಕರ; ಅದು ನಮ್ಮ ಊಹೆಗೆ ನಿಲುಕದ ವಿಷಯ ಕೂಡ. ಒಳ್ಳೆಯ ಕೆಲಸಗಳಿಗೆ ಯಾರು ಯಾರನ್ನು ಹೇಗೆ ಪ್ರೇರೇಪಿಸುತ್ತಾರೆ ಎಂಬುದು ಕೂಡ ಆಕಸ್ಮಿಕ.
ಒಂದು ಪುಟ್ಟ ಊರಿನಿಂದ ತಿಪಟೂರಿಗೆ ಬಂದು ಬಿ.ಎ. ಓದುತ್ತಿದ್ದ ಹುಡುಗನಿಗೆ ಕರುಣಾಕರನ್ ಮೇಷ್ಟರು ಕೆ.ವಿ. ಸುಬ್ಬಣ್ಣ ಅನುವಾದಿಸಿದ ರಾಮಮನೋಹರ ಲೋಹಿಯಾರ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕ ಕೊಟ್ಟರು. ಮಲಯಾಳಂ ಮಾತೃಭಾಷೆಯ ಕರುಣಾಕರನ್ ಕನ್ನಡ ಪ್ರೊಫೆಸರಾಗಿದ್ದರು. ಮಲಯಾಳಂ ಕತೆಗಳನ್ನು ಕನ್ನಡಿಸುತ್ತಿದ್ದರು. ಅವರು ಕೊಟ್ಟ ಲೋಹಿಯಾ ಪುಸ್ತಕವನ್ನು ಆಗ ಬಿ.ಕಾಂ. ವಿದ್ಯಾರ್ಥಿಯಾಗಿದ್ದ, ಈಗ ಖ್ಯಾತ ರಂಗ ನಿರ್ದೇಶಕರಾಗಿರುವ, ನಟರಾಜ ಹೊನ್ನವಳ್ಳಿಯವರೂ ಓದಿದರು. ಆ ಇಬ್ಬರು ಕಾಲೇಜ್ ಹುಡುಗರಲ್ಲಿ ನಾನೂ ಒಬ್ಬ.
ಅದೇ ಸರಿಸುಮಾರಿಗೆ, ತುಮಕೂರು ಜಿಲ್ಲೆಯಲ್ಲಿ ರೈತಸಂಘವನ್ನು ಸಂಘಟಿಸುತ್ತಿದ್ದ ಮಧುಗಿರಿ ಕಡೆಯ ಜಿ. ಶ್ರೀನಿವಾಸಕುಮಾರ್ ಲೋಹಿಯಾ ರೆಡ್ ಬುಕ್ ಹಿಡಿದುಕೊಂಡು ತಿಪಟೂರಿಗೆ ಬಂದರು. ಈ ಪುಸ್ತಕವನ್ನು ನಾವು ನೋಡುವುದಕ್ಕಿಂತ ಹತ್ತು ವರ್ಷಗಳ ಮೊದಲು ಸಮಾಜವಾದಿ ಯುವಜನಸಭಾದ ತರುಣ ಸಮಾಜವಾದಿಗಳಾದ ಎಂ.ಡಿ. ನಂಜುಂಡಸ್ವಾಮಿ ಹಾಗೂ ಪೂರ್ಣಚಂದ್ರ ತೇಜಸ್ವಿ ಇಬ್ಬರೂ ಸೇರಿ ಲೋಹಿಯಾರ ಆಯ್ದ ಮುಖ್ಯ ಚಿಂತನೆಗಳ ಈ ಪುಸ್ತಕವನ್ನು ಕನ್ನಡಿಗರಿಗಾಗಿ ರೂಪಿಸಿದ್ದರು. 1970ರ ಸುಮಾರಿಗೆ ಮೂಡಿಗೆರೆಯ ತೇಜಸ್ವಿಯವರ ತೋಟದ ಮನೆಯ ಜಗಲಿಯ ಮೇಲೆ ಮೂವತ್ತು, ಮೂವತ್ತೈದರ ಆಸುಪಾಸಿನ ಈ ಇಬ್ಬರು ಸಮಾಜವಾದಿ ಚಿಂತಕರು ಲೋಹಿಯಾರ ಇಂಗ್ಲಿಷ್ ಪುಸ್ತಕಗಳನ್ನು ಹರಡಿಕೊಂಡು ಕೂತು ಈ ರೆಡ್ ಬುಕ್ ಮಾಡಿದ ಬಗ್ಗೆ ನನ್ನ ಕಲ್ಪನೆಯ ಚಿತ್ರ ನಿಜವಾದ ಚಿತ್ರದಂತೆ ನನ್ನಲ್ಲಿ ಅಚ್ಚೊತ್ತಿದೆ.
ಲೋಹಿಯಾ ನಮ್ಮೊಳಗೆ ಪ್ರವೇಶಿಸಿದ್ದು ಈ ರೆಡ್ ಬುಕ್ ಹಾಗೂ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕದ ಮೂಲಕ. ಅದೆಲ್ಲ ಈ ಇಬ್ಬರು ಕಾಲೇಜು ಹುಡುಗರಿಗೆ ಎಷ್ಟು ಅರ್ಥವಾಯಿತೋ ಈಗ ನೆನಪಿಲ್ಲ. ಆದರೆ ಲೋಹಿಯಾರ ತೀಕ್ಷ್ಣ ಮಾತುಗಳು ನಮ್ಮೊಳಗೆ ಇಳಿಯತೊಡಗಿದವು. ಅದರಲ್ಲೂ ಮುಖ್ಯವಾಗಿ, ರಾಷ್ಟ್ರಪತಿ ಬಾಬೂ ರಾಜೇಂದ್ರಪ್ರಸಾದ್ ಬಹಿರಂಗವಾಗಿ ಕಾಶಿಯಲ್ಲಿ ನೂರು ಜನ ಬ್ರಾಹ್ಮಣರ ಕಾಲು ತೊಳೆದಾಗ ಅದನ್ನು ಖಂಡಿಸುತ್ತಾ ಲೋಹಿಯಾ ಹೇಳಿದ ಮಾತು: ‘ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೈಗಳು ಶೂದ್ರರನ್ನೂ ದಲಿತರನ್ನೂ ಒದೆಯುವ ಕಾಲುಗಳ ಜೊತೆಗೇ ಇರುತ್ತವೆ.’
ಆ ಕಾಲದಿಂದ ಇವತ್ತಿನವರೆಗೂ ನನ್ನಲ್ಲಿ ಉಳಿದಿರುವ ನೂರಾರು ಲೋಹಿಯಾ ಕಾಣ್ಕೆಗಳಲ್ಲಿ ಕೆಲವು ಹೀಗಿವೆ:
‘ಭಾರತೀಯರು ಇಡೀ ಜಗತ್ತಿನಲ್ಲೇ ಅಪಾರ ದುಃಖಿಗಳು; ಜಾತಿಭೇದ, ಲಿಂಗಭೇದ ಮಾಡುವ ಅವರ ಧೋರಣೆಯೇ ಈ ಮನಸ್ಥಿತಿಗೆ ಕಾರಣ’
‘ಕೆಲವರನ್ನಾದರೂ ಕೋಪಾವಿಷ್ಠಗೊಳಿಸದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ’
‘ಗಂಡು-ಹೆಣ್ಣಿನ ಸಂಬಂಧದಲ್ಲಿ ಬಲಾತ್ಕಾರ ಹಾಗೂ ಕೊಟ್ಟ ಮಾತು ತಪ್ಪುವುದು ಎರಡೇ ಅಪರಾಧ...’
ಈ ಥರದ ಮಾತುಗಳನ್ನು ಗೆಳೆಯರೆಲ್ಲ ಉರು ಹೊಡೆದವರಂತೆ ಹೇಳಿಕೊಂಡು ಅಡ್ಡಾಡುತ್ತಿದ್ದೆವು. ಹೀಗೆ ಹೊರಗೆ ಆಡುತ್ತಿದ್ದ ಮಾತುಗಳು ಮೆಲ್ಲಗೆ ಒಳಗಿಳಿದು ಮುಂದೆ ಏನೇನೋ ಆಗಿದ್ದು ನಮ್ಮ ಸ್ವಂತದ ಚರಿತ್ರೆಯ ಭಾಗವಾಗಿಹೋಗಿದೆ. ಈ ಬಗೆಯ ಅನುಭವ ಪಯಣಗಳು ಕೇವಲ ಖಾಸಗಿ ಅನುಭವಗಳಲ್ಲ; ಇವೆಲ್ಲ ಸಾಂಸ್ಕೃತಿಕ ವಿದ್ಯಮಾನಗಳು ಎಂಬ ಕಾರಣಕ್ಕಾಗಿ ಇದನ್ನೆಲ್ಲ ಇಲ್ಲಿ ಹೇಳುತ್ತಿರುವೆ. ಮೊದಲ ಬಾರಿಗೆ ಕಾರ್ಲ್ ಮಾರ್ಕ್ಸ್, ಸಿಮೊನ್ ದ ಬುವಾ ಓದಿದ ಹುಡುಗ, ಹುಡುಗಿಯರಿಗೂ ಹೀಗಾಗಿರಬಹುದು.
ಇದಾದ ಒಂದೆರಡು ವರ್ಷಗಳಲ್ಲಿ ಲೋಹಿಯಾರನ್ನು ಓದಿರುವ ಹುಡುಗ ಎಂಬ ಕಾರಣದಿಂದಲೂ ಆಗ ತರುಣ ಬಂಡಾಯ ಲೇಖಕರಾಗಿದ್ದ ಕಾಳೇಗೌಡ ನಾಗವಾರ ನನ್ನನ್ನು ತಮ್ಮೊಡನೆ ಸೇರಿಸಿಕೊಂಡರು. ಕೆ.ವಿ. ಸುಬ್ಬಣ್ಣ ಅದ್ಭುತವಾಗಿ ಕನ್ನಡಿಸಿರುವ ಲೋಹಿಯಾರ ‘ಸೌಂದರ್ಯ ಮತ್ತು ಮೈಬಣ್ಣ’, ‘ರಾಮ ಕೃಷ್ಣ ಶಿವ’ ಎಂಬ ಯುಗಪ್ರವರ್ತಕ ಲೇಖನಗಳ ಬಗ್ಗೆ ಕಾಳೇಗೌಡರು ಮೈದುಂಬಿಕೊಂಡು ಮಾತಾಡುತ್ತಿದ್ದರು. ಅವರ ಲೋಹಿಯಾ ಸಂಭ್ರಮ ನನ್ನಂಥ ಹಲವರಲ್ಲಿ ಹಬ್ಬತೊಡಗಿತು.
ನಂತರ, 1990ರ ಸುಮಾರಿಗೆ ಕರ್ನಾಟಕ ಸರಕಾರ ರಾಮಮನೋಹರ ಲೋಹಿಯಾ ಸಂಪುಟಗಳ ಸಮಗ್ರ ಕೃತಿಗಳ ಅನುವಾದಗಳ ಸಂಪುಟಗಳ ಯೋಜನೆಯ ಸಂಪಾದಕೀಯ ಹೊಣೆ ನನ್ನ ಹೆಗಲೇರಿತು. ಅದಕ್ಕೂ ಕಾಳೇಗೌಡರೇ ಕಾರಣ. ಇವೆಲ್ಲ ಪುಟ್ಟ ಊರಿನಿಂದ ಬಂದ ಯಾವುದೇ ಲೇಖಕನ ಬದುಕಿನ ಭಾಗ್ಯಶಾಲಿ ತಿರುವುಗಳು ಎಂಬ ಅಚ್ಚರಿ, ಕೃತಜ್ಞತೆಗಳಿಂದ ಈ ಮಾತುಗಳನ್ನು ಬರೆಯುತ್ತಿರುವೆ.
ಲೋಹಿಯಾ ಕನ್ನಡಾನುವಾದದ ಕೃತಿಗಳ ಸಂಪಾದಕರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ- ಜವಾಬ್ದಾರಿ-ಶ್ರಮ ಎಲ್ಲ ಬೆರೆತು ರೂಪಿಸತೊಡಗಿದ ಲೋಹಿಯಾ ಸಂಪುಟಗಳಿಗಾಗಿ ಏಳೆಂಟು ಸಾವಿರ ಪುಟಗಳನ್ನು ಅಪ್ಪಟ ಕನ್ನಡ ಪುಸ್ತಕಗಳಾಗುವಂತೆ ಸತತವಾಗಿ ಎಡಿಟ್ ಮಾಡಿದ ಬೌದ್ಧಿಕ ಶ್ರಮ ಮುಂದೆ ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಬರೆಯುವವರೆಗೂ ನಡೆದು ಬಂದಂತಿದೆ. ಈ ‘ಡಾಕ್ಟರ್ ಸಾಹೇಬ್’ ಬರವಣಿಗೆ ಇದ್ದಕ್ಕಿದ್ದಂತೆ ಶುರುವಾದದ್ದರ ಹಿಂದೆ ಕೂಡ ಒಂದು ಆಕಸ್ಮಿಕ ತಿರುವು ಇತ್ತು:
ಸಿನೆಮಾವಲಯದ ಗೆಳೆಯರ ಸಂಗ ನನ್ನನ್ನು ಲೋಹಿಯಾ ಜೀವನಚರಿತ್ರೆಯತ್ತ ಒಯ್ದದ್ದು ಕುತೂಹಲಕರ. ಕೋವಿಡ್ ಕಾಲದ ಅಜ್ಞಾತವಾಸದಲ್ಲಿ ಸಿನೆಮಾ ನಿರ್ದೆಶಕ ರಾಘು ಶಿವಮೊಗ್ಗ, ನಟ ಕಿರಣ್ ನಾಯಕ್ ಜೊತೆಗೆ ನನ್ನ ಸ್ಕ್ರೀನ್ಪ್ಲೇ ಬರವಣಿಗೆಯ ಕಲಿಕೆ ಶುರುವಾಯಿತು. ಇದ್ದಕ್ಕಿದ್ದಂತೆ ಲೋಹಿಯಾ ಡಾಕ್ಯುಮೆಂಟರಿ, ಲೋಹಿಯಾ ಸಿನೆಮಾದ ಐಡಿಯಾಗಳು ಮೂಡಿಬಂದವು. ಗೆಳೆಯರ ಸಲಹೆ-ಮಾರ್ಗದರ್ಶನ-ಹುರಿದುಂಬಿಕೆ ಎಲ್ಲ ಸೇರಿ ಎರಡು ಗಂಟೆಯ ಲೋಹಿಯಾ ಸಿನೆಮಾದ ಸ್ಕ್ರೀನ್ಪ್ಲೇವರೆಗೂ ಆಟ ಬೆಳೆಯತೊಡಗಿತು. ಹಲವರ ವಿಮರ್ಶೆ, ಸಲಹೆ ಪಡೆದು ತಿದ್ದುವ ಕೆಲಸವೂ ಶುರುವಾಯಿತು. ಚಿತ್ರಕತೆ ಬರೆಯುವ ಕಲೆಯ ಮೊದಲ ಪಾಠಗಳನ್ನು ಈ ಕಸರತ್ತಿನಲ್ಲಿ ಕಲಿತ ಮೇಲೆ ಹಾಲಿವುಡ್ ಚಿತ್ರಕತೆಯ ಗುರುಗಳ ಹಲವು ಪುಸ್ತಕಗಳ ಓದೂ ಜೊತೆಗೆ ಬೆರೆಯಿತು; ಇದರಿಂದಾಗಿ ನನ್ನ ಇನ್ನಿತರ ಬರವಣಿಗೆಗಳಿಗೂ ಚಿತ್ರಕ ಗುಣ ದೊರೆಯತೊಡಗಿತು.
ಈ ಸರಿಸುಮಾರಿನಲ್ಲಿ ಒಂದು ಸಂಜೆ ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ, ಗೆಳೆಯ ಚ.ಹ ರಘುನಾಥ್, ಇದ್ದಕ್ಕಿದ್ದಂತೆ ‘ಕಾದಂಬರಿ ಬರೀಲಿಲ್ವ ಸಾರ್?’ ಎಂದರು. ಧಾರಾವಾಹಿಗೆ ಬೇಕಾದ ಕಾದಂಬರಿಯೊಂದರ ಹುಡುಕಾಟದ ಸೂಚನೆಯೂ ಅವರ ಮಾತಿನಲ್ಲಿದ್ದಂತಿತ್ತು.
ಥಟ್ಟನೆ, ‘ಲೋಹಿಯಾ ಜೀವನ ಚರಿತ್ರೆ?’ ಅಂದೆ.
‘ಯಾಕಾಗಬಾರದು?’ ಎಂದರು ರಘು.
ಲೋಹಿಯಾ ಜೀವನಯಾನದ ಬರವಣಿಗೆಯ ಬಿತ್ತನೆಯ ಬೀಜ ಬಿದ್ದಿತ್ತು! ಮುಂದಿನ ಮೂರುನಾಲ್ಕು ತಿಂಗಳಲ್ಲಿ ‘ಡಾಕ್ಟರ್ ಸಾಹೇಬ್’ ಧಾರಾವಾಹಿ ಶುರುವಾಗಿಯೇ ಬಿಟ್ಟಿತು. ಮುಂದಿನ ನಾಲ್ಕು ತಿಂಗಳ ಕಾಲ ಕೂತಲ್ಲಿ, ನಿಂತಲ್ಲಿ, ಕನಸಿನಲ್ಲಿ ಲೋಹಿಯಾ! ಹತ್ತು ಕಂತಿನಲ್ಲಿ ಮುಗಿಸಲು ಹೊರಟಿದ್ದ ಧಾರಾವಾಹಿ ಇಪ್ಪತ್ತೆರಡು ವಾರ ಮುನ್ನಡೆಯಿತು. ಓದುಗ, ಓದುಗಿಯರು ವಾರವಾರ ಸ್ಪಂದಿಸುತ್ತಿದ್ದರು. ಅದಾದ ನಂತರ ಇನ್ನಷ್ಟು ಸಂಶೋಧನೆ, ಬ್ರಿಟಿಷ್ ವಸಾಹತುಶಾಹಿಯ ದಾಖಲೆಗಳು, ಆರ್ಕೈವ್ ಸಾಮಗ್ರಿಗಳು, ಹತ್ತು ಹದಿನೈದು ಸಾವಿರ ಪುಟಗಳ ಓದು... ಇವೆಲ್ಲ ಸೇರಿ ‘ಡಾಕ್ಟರ್ ಸಾಹೇಬ್’ ಕೊನೆಗೂ ಹೊರ ಬರುತ್ತಿದೆ.
ನಾನು ಬಲ್ಲಂತೆ ಲೋಹಿಯಾರ ಈ ಪ್ರಮಾಣದ ಸಮಗ್ರ ಜೀವನ ಚರಿತ್ರೆ ಈ ಬಗೆಯಲ್ಲಿ ಇಂಡಿಯಾದಲ್ಲಿ ಈತನಕ ಬಂದಂತಿಲ್ಲ. ಇಡೀ ಬರವಣಿಗೆಯಲ್ಲಿ ಶ್ರಮ ಎನ್ನುವುದು ಎಂದೂ ಬಳಲಿಸದಂತೆ ನನ್ನನ್ನು ಆವರಿಸಿಕೊಂಡ ಲೋಹಿಯಾರ ಬದುಕು, ಚಿಂತನೆ, ಬರಹ, ಮಾತು, ವ್ಯಗ್ರತೆ... ಇನ್ನೂ ಏನೇನೋ ಸೇರಿ ‘ಡಾಕ್ಟರ್ ಸಾಹೇಬ್’ ಈಗ ಐನೂರು ಪುಟಗಳ ಪುಸ್ತಕವಾಗಿ ನಿಮ್ಮೆದುರು ಬರುತ್ತಿದೆ.
ಭಾರತದ ಕೆಲವೇ ಕೆಲವು ಶ್ರೇಷ್ಠ ಆಧುನಿಕ ಚಿಂತಕರ ಸಾಲಿನಲ್ಲಿರುವ ಹಾಗೂ ಭಾರತದ ಶ್ರೇಷ್ಠ ರಾಜಕೀಯ ಚಿಂತಕರಾಗಿರುವ ಲೋಹಿಯಾ ಬದುಕು-ಬರಹ ಇವತ್ತಿಗೂ ಯಾರಲ್ಲೇ ಆದರೂ ಹೊಸ ಪ್ರಜ್ಞೆ ರೂಪಿಸಬಲ್ಲದು ಎಂಬುದು ನನ್ನ ಖಚಿತ ನಂಬಿಕೆ.
ಸಾಧ್ಯವಾದರೆ, ಬೆಂಗಳೂರಿನ ಮಹಾರಾಣಿ ಕಾಲೇಜಿನ ಪಕ್ಕದಲ್ಲಿ, ಏಟ್ರಿಯಾ ಹೋಟೆಲ್ ಎದುರು ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣಕ್ಕೆ 12 ಅಕ್ಟೋಬರ್ ಸೋಮವಾರ ಸಂಜೆ 5:30ರ ಹೊತ್ತಿಗೆ ಬನ್ನಿ. ಅವತ್ತು ಲೋಹಿಯಾ ಸ್ಮರಣೆಯ ದಿನ. 1967ರ ಅಕ್ಟೋಬರ್ 12ರ ನಡುರಾತ್ರಿ ರಾಮಮನೋಹರ ಲೋಹಿಯಾ ತೀರಿಕೊಂಡರು.
‘ತೀರಿಕೊಂಡವರ ಸತ್ವ ಬದುಕಿ ಉಳಿದವರ ಬೆನ್ನಹುರಿಯಲ್ಲಿ ಬೆಳೆಯುತ್ತದೆ’ ಎಂಬ ನೀಷೆಯ ಮಾತನ್ನು ಆಗಾಗ ನಂಬಿ ನೆನೆಯುವ ನನಗೆ, ‘ಡಾಕ್ಟರ್ ಸಾಹೇಬ್’ ಜೀವನಯಾನ ಐವತ್ತೊಂಭತ್ತು ವರ್ಷಗಳ ಕೆಳಗೆ ತೀರಿಕೊಂಡ ಲೋಹಿಯಾ (1910-1967) ಇದೀಗ ಕನ್ನಡ ಮಣ್ಣಿನಲ್ಲಿ ಮರಳಿ ಹುಟ್ಟುವ ರೀತಿಗೆ ಸಾಕ್ಷಿಯಾಗಬಲ್ಲದು ಎನ್ನಿಸುತ್ತಿದೆ; ಆ ಭಾವವನ್ನು ನಿಮ್ಮೊಡನೆ ಹೇಳಿಕೊಂಡರೆ ತೀರಾ ತಪ್ಪಾಗಲಿಕ್ಕಿಲ್ಲ!






