ಕಪ್ಪು ನವೋದಯ-ದಲಿತ ನವೋದಯ

ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿದ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಹ್ಯಾರ್ಲೆಮ್ ನವೋದಯ ಕೂಡ ನಮ್ಮ ಚಿಂತನೆಯಲ್ಲಿ ಸೇರುವ ಅಗತ್ಯವಿದೆ ಎನ್ನಿಸಿತು. ದಲಿತ ಚಳವಳಿ, ದಲಿತ ಸಾಹಿತ್ಯ ಕುರಿತ ಕ್ಲೀಷಾಮಯ ಸವಕಲು ಮಾತುಗಳನ್ನು ಬಿಟ್ಟು, ಭದ್ರಾವತಿ, ಮೈಸೂರು, ಕೋಲಾರ, ರಾಯಚೂರು ಮುಂತಾದೆಡೆ ನಡೆದ ಕನ್ನಡ ನೆಲದ ದಲಿತ್ ರೆನೈಸಾನ್ಸ್ ಅಥವಾ ದಲಿತ ನವೋದಯವನ್ನು ಅಧ್ಯಯನ ಮಾಡಿದರೆ ವಿಶ್ವದ ವಿಮೋಚನೆಯ ಹೋರಾಟಗಳ ಅಧ್ಯಯನಗಳು ಕನ್ನಡದತ್ತಲೂ ತಿರುಗತೊಡಗುತ್ತವೆ!
ಯುರೋಪಿಗೊಂದು ರೆನೈಸಾನ್ಸ್ ಇದ್ದಂತೆ, ಅಮೆರಿಕದಲ್ಲಿ ನೆಲೆಸಿದ್ದ ಕರಿಯರ ಬದುಕಿನಲ್ಲೂ ಒಂದು ರೆನೈಸಾನ್ಸ್ ಅಥವಾ ನವೋದಯ ನಡೆಯಿತು. 1918-30ರ ನಡುವೆ ನಡೆದ ಈ ನವೋದಯದ ಭಾಗವಾಗಿ ಅಮೆರಿಕದಲ್ಲಿ ನೂರು ವರ್ಷಗಳ ಕೆಳಗೆ ಪ್ರಕಟವಾದ ಒಂದು ಪುಸ್ತಕದ ಹೆಸರು ‘ದ ನ್ಯೂ ನೀಗ್ರೊ’.
ಆಫ್ರಿಕನ್ನರನ್ನು ಕಂಡು ಅಸಹ್ಯದಿಂದ ಯುರೋಪಿಯನ್ನರು ಬಳಸುತ್ತಿದ್ದ ‘ನೀಗ್ರೋ’, ‘ನಿಗ್ಗರ್’ ಎಂಬ ಪದಗಳು ಅವರನ್ನು ಹೀಗಳೆಯುವ ಅವಮಾನಕರ ಪದಗಳು. ಇವತ್ತು ಈ ಪದಗಳನ್ನು ಬಳಸಿದರೆ ಒದೆ ಬೀಳುತ್ತದೆ. ಇಂಡಿಯಾದಲ್ಲಿ ಅವಮಾನಕರವಾದ ಜಾತಿಸೂಚಕ ಪದಗಳನ್ನು ಹೀಗಳೆಯಲು ಬಳಸಿದರೆ ಎಂಥ ಪ್ರತಿಕ್ರಿಯೆ ಬರುತ್ತದೋ ಅಂಥ ಪ್ರತಿಕ್ರಿಯೆ ಅಮೆರಿಕದಲ್ಲೂ ಈಗ ಬರುತ್ತದೆ. ಆದರೆ 1925ರಲ್ಲಿ ಅಲೈನ್ ಲಾಕ್ ಸಂಪಾದಿಸಿದ ‘ದ ನ್ಯೂ ನೀಗ್ರೋ’ ಸಂಕಲನದಲ್ಲಿರುವ ಲೇಖಕ, ಲೇಖಕಿಯರು ‘ನೀಗ್ರೋ’ ಎಂಬ ಅವಮಾನದ ಪದವನ್ನೇ ಆತ್ಮವಿಶ್ವಾಸದ ಪದವನ್ನಾಗಿಸಿಕೊಂಡು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡರು.
ಗುಲಾಮನಾಗಿದ್ದ ‘ಹಳೆಯ ನೀಗ್ರೋ’ನ ಕೀಳರಿಮೆ, ಅವಮಾನಗಳ ಎದುರು, ತನ್ನನ್ನು ತಾನು ಅರಿತ, ತನ್ನ ಸ್ಥಿತಿಯನ್ನು ಬದಲಾಯಿಸುವ, ಸ್ವಾಭಿಮಾನದ ‘ಹೊಸ ನೀಗ್ರೋ’ನ ಹುಟ್ಟನ್ನು ಈ ಸಂಕಲನದ ಬರಹಗಳು ಸಾರುತ್ತಿದ್ದವು. ಭಾರತದಲ್ಲೂ ದಲಿತ, ಆದಿವಾಸಿ ಸಾಹಿತ್ಯದಲ್ಲಿ ಕೆಲವು ಲೇಖಕರು ಜಾತಿಯ ಹೆಸರುಗಳನ್ನು ಸ್ವಾಭಿಮಾನದ ಸಂಕೇತವಾಗಿ ಇಟ್ಟುಕೊಂಡರು. ಕನ್ನಡದಲ್ಲಿ ಗಂಗಾರಾಂ ಚಂಡಾಳ, ಸುಬ್ಬು ಹೊಲೆಯಾರ್ ಥರದವರು ಕೂಡ ಇಂಥ ಬಂಡಾಯದ ವಿಶ್ವಪರಂಪರೆಯ ಭಾಗವಾಗಿದ್ದಾರೆನ್ನಬಹುದು.
ಎಲಿನಾರ್ ಝೆಲಿಯಟ್ 1996ರಲ್ಲಿ ಪ್ರಕಟಿಸಿದ ‘ಫ್ರಂ ಅನ್ಟಚಬಲ್ ಟು ದಲಿತ್’ ಪುಸ್ತಕದಲ್ಲಿ ‘ಅಸ್ಪಶ್ಯ’ನೊಬ್ಬ ‘ದಲಿತ’ ಆಗಿ ಹೊಸ ವ್ಯಕ್ತಿತ್ವ, ಸ್ವಾಭಿಮಾನವನ್ನು ಗಳಿಸಿಕೊಳ್ಳುವ ಬೆಳವಣಿಗೆಯ ಹೆಜ್ಜೆಗಳನ್ನು ತೋರಿಸಿದ್ದರು. ಭಾರತದ ದಲಿತ ಚಳವಳಿ ಕುರಿತ ಈ ಥರದ ನೋಟಗಳುಳ್ಳ ಅಧ್ಯಯನಗಳ ಹಿನ್ನೆಲೆಯಲ್ಲಿ ‘ದ ನ್ಯೂ ನೀಗ್ರೋ’ ಪ್ರಕಟವಾದ ಕಾಲದ ಹ್ಯಾರ್ಲೆಮ್ ರೆನೈಸಾನ್ಸ್ ಥರದ ಮೈಲಿಗಲ್ಲುಗಳೂ ಇದ್ದಂತಿವೆ. ಈ ಹಿನ್ನೆಲೆಯಲ್ಲಿ, ಶತಮಾನ ದಾಟಿದ ಆಫ್ರೋ-ಅಮೆರಿಕನ್ನರ ‘ಹ್ಯಾರ್ಲೆಮ್ ರೆನೈಸಾನ್ಸ್’ ಕುರಿತು ಈ ಟಿಪ್ಪಣಿ:
ಅಮೆರಿಕದಲ್ಲಿ ನಡೆದ ಈ ‘ಹ್ಯಾರ್ಲೆಮ್ ರೆನೈಸಾನ್ಸ್’ ಆಫ್ರೋ-ಅಮೆರಿಕನ್ನರ ಬದುಕಿನ ಮುಖ್ಯ ತಿರುವಾಯಿತು. ಅಮೆರಿಕದ ನ್ಯೂಯಾರ್ಕ್ ನಗರದ ಒಂದು ಭಾಗ ಹ್ಯಾರ್ಲೆಮ್. ಅಲ್ಲಿನ ರಂಗಭೂಮಿಯಲ್ಲಿ ಕಪ್ಪು ನಟರು ಹೊಸ ರೀತಿಯಲ್ಲಿ ರೂಪುಗೊಳ್ಳತೊಡಗಿದರು. ಕಲೆ, ಸಾಹಿತ್ಯ ಹಾಗೂ ರಂಗಭೂಮಿಗಳು ಸಮಾಜವನ್ನು ಬದಲಿಸಬಲ್ಲವೆಂಬ ನಂಬಿಕೆಯಿಂದ ಈ ನಟರು ಹೊರಟಿದ್ದರು. ಅದಕ್ಕೊಂದು ರಾಜಕೀಯ ಮುಖವೂ ಇತ್ತು. ಅಮೆರಿಕದ ದಕ್ಷಿಣ ಭಾಗ ಹಾಗೂ ಮಿಡ್ವೆಸ್ಟ್ ಭಾಗಗಳಲ್ಲಿ ವರ್ಣಗಲಭೆಗಳು ಶುರುವಾದಾಗ ಕರಿಯರಿಗೆ ಹ್ಯಾರ್ಲೆಮ್ ಒಂದು ಆಶ್ರಯತಾಣವಾಯಿತು. ಆಫ್ರೋ-ಅಮೆರಿಕನ್ ಸಮಾಜವಾದಿಗಳು ‘ಮೆಸೆಂಜರ್’ ಎಂಬ ವೈಚಾರಿಕ ಪತ್ರಿಕೆ ಹೊರಡಿಸಿದರು. ಜಮೈಕಾದ ಮಾರ್ಕಸ್ ಗಾರ್ವೇ ‘ಬ್ಯಾಕ್ ಟು ಆಫ್ರಿಕಾ’ ಚಳವಳಿಯನ್ನು ಶುರು ಮಾಡಿದರು; ಎಲ್ಲ ಕಪ್ಪು ಜನರೂ ಆಫ್ರಿಕಾಕ್ಕೆ ಮರಳಬೇಕು ಎಂದು ಕರೆ ಕೊಟ್ಟರು.
ಹ್ಯಾರ್ಲೆಮ್ ಪ್ರದೇಶದಲ್ಲಿ ಸೇರತೊಡಗಿದ ಕರಿಯರ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ನೃತ್ಯ, ಫ್ಯಾಶನ್, ರಾಜಕಾರಣ, ಗಂಭೀರ ಅಧ್ಯಯನ ಹೀಗೆ ಹಲವು ವಲಯಗಳಲ್ಲಿ ನವೋದಯ ಆರಂಭವಾಯಿತು. ಜಾಝ್ ಸಂಗೀತಗಾರರು ಹ್ಯಾರ್ಲೆಮ್ ಕಡೆಗೆ ಬರತೊಡಗಿದರು. ಹ್ಯಾರ್ಲೆಮ್ ನವೋದಯದ ಫಲವಾಗಿ ಆಫ್ರೋ-ಅಮೆರಿಕನ್ ವಲಯದಿಂದ ಹೊಸ ಕಾದಂಬರಿಕಾರರು, ಕವಿಗಳು, ಸಮಾಜವಿಜ್ಞಾನಿಗಳು ಮೂಡಿ ಬಂದರು. ಅವರು ಕಪ್ಪುಜನರ ಅನನ್ಯ ಗುಣಗಳನ್ನು ಶೋಧಿಸತೊಡಗಿದರು. ಡುಬೈಸ್, ಕ್ಲಾಡ್ ಮೆಕೇ, ಲಾಂಗ್ಸ್ಟನ್ ಹ್ಯೂಸ್ ಮೊದಲಾದವರು ಕಪ್ಪು ಜನರ ಧ್ವನಿಗಳಷ್ಟೇ ಅಲ್ಲ, ಒಟ್ಟು ಅಮೆರಿಕನ್ ಸಾಹಿತ್ಯದ ಮುಖ್ಯ ಧ್ವನಿಗಳಾಗಿಯೂ ಹೊರ ಹೊಮ್ಮಿದರು.
ಈ ಘಟ್ಟದಲ್ಲಿ ಬಿಳಿಯರ ಮನ ಬದಲಿಸುವಲ್ಲಿ ಕಾವ್ಯ ಹಾಗೂ ಆತ್ಮಚರಿತ್ರೆಗಳು ಮಹತ್ತರ ಕೆಲಸ ಮಾಡತೊಡಗಿದವು. ಅಮೆರಿಕದ ಬಿಳಿಯರಿಗಿಲ್ಲದ ವಿಶಿಷ್ಟ ಶಕ್ತಿ ಕರಿಯರಿಗೆ ಇದೆ; ಬಿಳಿಯರ ನಾಗರಿಕತೆ ಪತನಗೊಳ್ಳುತ್ತಿದೆ ಎಂದು ಹ್ಯಾರ್ಲೆಮ್ ಲೇಖಕ, ಲೇಖಕಿಯರು ಗಟ್ಟಿ ದನಿಯಲ್ಲಿ ಹೇಳಲಾರಂಭಿಸಿದರು. ಆದರೆ ಹ್ಯಾರ್ಲೆಮ್ ನವೋದಯ ಹೊಮ್ಮಿಸಿದ್ದ ಆಶಾವಾದ ಬಹುಕಾಲ ಉಳಿಯಲಿಲ್ಲ. 1929ರ ಹೊತ್ತಿಗೆ ಅಮೆರಿಕದಲ್ಲಿ ಆರ್ಥಿಕ ಕುಸಿತ ಶುರುವಾಯಿತು. ಈ ನೆವದಲ್ಲಿ ಕಪ್ಪು ಜನರನ್ನು ಕೊಲ್ಲುವ ಕ್ರೂರ ಘಟ್ಟ ಆರಂಭವಾಯಿತು. ಹ್ಯಾರ್ಲೆಮ್ ನವೋದಯ ಕರಿಯರಲ್ಲಿ ಹುಟ್ಟಿಸಿದ್ದ ಹೊಸ ಭರವಸೆ ಕುಸಿಯತೊಡಗಿತು.
ಆದರೆ ಹ್ಯಾರ್ಲೆಮ್ ನವೋದಯ ಬಿತ್ತಿದ ಕಪ್ಪು ಸ್ಫೂರ್ತಿ ಆಫ್ರಿಕಾ ಖಂಡದ ದೇಶಗಳಲ್ಲೂ ಹಲವು ವರ್ಷ ಮುಂದುವರಿಯಿತು. ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿದ್ದ ಆಫ್ರಿಕನ್ ಕವಿ ಲೆಪಾಲ್ಡ್ ಸೆಂಘರ್ ಹ್ಯಾರ್ಲೆಮ್ ನವೋದಯದ ಪ್ರತಿಧ್ವನಿ ಎಂಬಂತೆ ಮುಂದೊಮ್ಮೆ ತನ್ನ ‘ನ್ಯೂಯಾರ್ಕ್’ ಪದ್ಯದಲ್ಲಿ ‘ಎಲೆ ನ್ಯೂಯಾರ್ಕ್, ಕಪ್ಪು ರಕ್ತ ಹರಿಯಲಿ ನಿನ್ನೊಳಗೆ’ ಎಂದು ಬರೆದ. ಕರಿಯರನ್ನು ‘ನೀಗ್ರೋ’ ಎಂಬ ಅವಹೇಳನದ ಪದ ಬಳಸಿ ಹೀಗಳೆಯುತ್ತಿದ್ದ ಬಿಳಿಯರ ಮುಖಕ್ಕೆ ರಾಚುವಂತೆ ಫ್ರೆಂಚ್ ಆಫ್ರಿಕಾದ ಲೇಖಕರು ‘ನೀಗ್ರೋತನ’ (ನೆಗ್ರಿಟ್ಯೂಡ್) ಎಂಬ ಚಳವಳಿಯನ್ನೇ ಹುಟ್ಟು ಹಾಕಿದರು.
‘ಅಮೆರಿಕದ ನೀಗ್ರೋಗಳ ಬದುಕಿನ ಭೀಕರ ಅನುಭವಗಳನ್ನು ಹೇಳಲು ಇನ್ನೂ ಭಾಷೆಯೇ ಸೃಷ್ಟಿಯಾಗಿಲ್ಲ’ ಎಂದು ಜೇಮ್ಸ್ ಬಾಲ್ಡ್ವಿನ್‌ಗೆ ಅನ್ನಿಸತೊಡಗಿತು. ಬಾಲ್ಡ್ವಿನ್ ಕಪ್ಪು ಜನರ ಆಳದ ಸಿಟ್ಟಿಗೆ ತಾತ್ವಿಕ ರೂಪ ಕೊಟ್ಟ. ಇದೆಲ್ಲದರ ನಡುವೆ, ಅಮೆರಿಕದ ಆಫ್ರಿಕನ್ನರು ಹಾಗೂ ಇನ್ನಿತರ ಕರಿಯರು ತಮ್ಮ ಚರ್ಮದ ಬಣ್ಣದ ಕೀಳರಿಮೆಯನ್ನು ಮೀರಲು ಹಾಗೂ ಕಪ್ಪು ಸಂಸ್ಕೃತಿಯ ಶಕ್ತಿ ಹಾಗೂ ವಿಶಿಷ್ಟ ಅಸ್ತಿತ್ವವನ್ನು ಪ್ರತಿಪಾದಿಸಲು 1960ರ ದಶಕದಲ್ಲಿ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳವಳಿಯನ್ನು ಆರಂಭಿಸಿದರು. ಮುಂದೆ ಮಾಯಾ ಏಂಜೆಲೊ, ಆ್ಯಲಿಸ್ ವಾಕರ್, ಟೋನಿ ಮಾರಿಸನ್ ಅಮೆರಿಕದ ಬರವಣಿಗೆಯ ದಿಕ್ಕನ್ನೇ ಬದಲಿಸಿದರು.
ಹಲವು ದಿಕ್ಕುಗಳಿಂದ ಶುರುವಾದ ತಮ್ಮ ಬಿಡುಗಡೆಗೆ ಹಿಂಸಾಮಾರ್ಗವನ್ನು ಹಿಡಿಯುವುದೋ ಅಥವಾ ಅಹಿಂಸಾ ಮಾರ್ಗವನ್ನು ಹಿಡಿಯುವುದೋ ಎಂಬ ಗೊಂದಲ ಕೂಡ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆಫ್ರೋ-ಅಮೆರಿಕನ್ನರಿಗೆ ಎದುರಾಯಿತು. ಇದೆಲ್ಲದರ ನಡುವೆ, ಕರಿಯರ ಮೇಲೆ ಬಿಳಿಯರ ಮಾರುಕಟ್ಟೆಯ ಹಿಡಿತ ಸಾಧಿಸುವ ಪ್ರಯತ್ನಗಳು ಶುರುವಾದವು. ಕರಿಯರು ನಡೆಸುತ್ತಿದ್ದ ಬಡ ಪ್ರದೇಶಗಳ ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ಮೇಲೆ ಸರಕಾರ ನಿರ್ಬಂಧ ಹೇರಿತು. ಅಲಬಾಮಾ ರಾಜ್ಯದ ಬರ್ಮಿಂಗ್ ಹ್ಯಾಂ ಕಡೆ ಗಲಭೆಗಳಾದವು. ಆ ಕಾಲದಲ್ಲಿ ಗುಡ್ ಫ್ರೈಡೇಯ ದಿನ ಚರ್ಚೊಂದನ್ನು ಸುತ್ತುವರಿದ ಜನರನ್ನು ಬಂಧಿಸಲಾಯಿತು. ಅವತ್ತು ಬಂಧನಕ್ಕೊಳಗಾದವರಲ್ಲಿ ಕ್ರೈಸ್ತ ಬ್ಯಾಪ್ಟಿಸ್ಟ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡ ಇದ್ದರು.
‘ನಾವು ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು’ ಎಂದು ಘೋಷಿಸಿದ ಕಿಂಗ್ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು. ಬಂಧನದಲ್ಲಿದ್ದಾಗ ಜೈಲಿನಲ್ಲಿ ಸಿಕ್ಕ ಟಾಯ್ಲೆಟ್ ಪೇಪರ್ ಹಾಗೂ ದಿನಪತ್ರಿಕೆಗಳ ಮೇಲೆ ಹತ್ತೊಂಭತ್ತು ಪುಟಗಳ ಪತ್ರ ಬರೆದು ಕಪ್ಪು ಜನರ ಅಸಹನೆಯ ಕಾರಣಗಳನ್ನು ವಿವರಿಸಿದರು. ‘ಲೆಟರ್ ಫ್ರಂ ಎ ಬರ್ಮಿಂಗ್‌ಹ್ಯಾಮ್ ಜೈಲ್’ ಎಂಬ ಪ್ರಖ್ಯಾತ ಪತ್ರದ ಒಂದು ಭಾಗ: ‘ಬರ್ಮಿಂಗ್‌ಹ್ಯಾಮ್‌ನಲ್ಲಿ ನೀಗ್ರೋಗಳ ಮನೆಯ ಮೇಲೆ ಆದಷ್ಟು ಬಾಂಬ್ ದಾಳಿ ಇನ್ಯಾವ ನಗರದಲ್ಲೂ ಆಗಿಲ್ಲ.
ಏಶ್ಯ ಹಾಗೂ ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಗಳಿಸಲು ಜೆಟ್ ವೇಗದಲ್ಲಿ ಚಲಿಸುತ್ತಿವೆ; ಆದರೆ ನಾವಿಲ್ಲಿ ಜಟಕಾ ಗಾಡಿಯ ವೇಗದಲ್ಲಿ ಲಂಚ್ ಕೌಂಟರಿನಲ್ಲಿ ಒಂದು ಕಪ್ ಕಾಫಿ ಪಡೆಯಲು ಹೋರಾಡುತ್ತಿದ್ದೇವೆ’
ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕದ ಕರಿಯರ ನಾಯಕರಾದ ಇತಿಹಾಸ ಈಗ ಎಲ್ಲರಿಗೂ ಗೊತ್ತಿದೆ: ಅವರ ಪ್ರಖ್ಯಾತ ಭಾಷಣ ‘ಐ ಹ್ಯಾವ್ ಎ ಡ್ರೀಮ್’ನ ಸಾಲುಗಳಿವು: ‘‘ನನಗೊಂದು ಕನಸಿದೆ ‘ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು’ ಎಂದು ನನಗೊಂದು ಕನಸಿದೆ.’’
‘ಐ ಹ್ಯಾವ್ ಎ ಡ್ರೀಮ್’ ಎಂಬ ಕಿಂಗ್ ಕನಸಿನ ಪಲ್ಲವಿ ಚರಿತ್ರೆಯಲ್ಲಿ ಪ್ರಬಲ ರೂಪಕವಾಯಿತು. ಎಲ್ಲ ಬಗೆಯ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಾ ಬಂತು. 1964ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಕಿಂಗ್ ನಾಲ್ಕು ವರ್ಷಗಳ ನಂತರ ಹತ್ಯೆಯಾದರು. ಇಷ್ಟೆಲ್ಲ ಬಲಿದಾನಗಳ ನಡುವೆ ಹ್ಯಾರ್ಲೆಮ್ ರೆನೈಸಾನ್ಸ್ ನಿಧಾನಕ್ಕೆ ಫಲ ಕೊಡತೊಡಗಿತು. ಆಫ್ರೋ ಅಮೆರಿಕನ್ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದರ ಹಿಂದೆ
ನೂರು ವರ್ಷಗಳ ಕೆಳಗೆ ಶುರುವಾದ ‘ಹ್ಯಾರ್ಲೆಮ್ ನವೋದಯ’ವೂ ಇತ್ತು.
ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿದ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಹ್ಯಾರ್ಲೆಮ್ ನವೋದಯ ಕೂಡ ನಮ್ಮ ಚಿಂತನೆಯಲ್ಲಿ ಸೇರುವ ಅಗತ್ಯವಿದೆ ಎನ್ನಿಸಿತು. ದಲಿತ ಚಳವಳಿ, ದಲಿತ ಸಾಹಿತ್ಯ ಕುರಿತ ಕ್ಲೀಷಾಮಯ ಸವಕಲು ಮಾತುಗಳನ್ನು ಬಿಟ್ಟು, ಭದ್ರಾವತಿ, ಮೈಸೂರು, ಕೋಲಾರ, ರಾಯಚೂರು ಮುಂತಾದೆಡೆ ನಡೆದ ಕನ್ನಡ ನೆಲದ ದಲಿತ್ ರೆನೈಸಾನ್ಸ್ ಅಥವಾ ದಲಿತ ನವೋದಯವನ್ನು ಅಧ್ಯಯನ ಮಾಡಿದರೆ ವಿಶ್ವದ ವಿಮೋಚನೆಯ ಹೋರಾಟಗಳ ಅಧ್ಯಯನಗಳು ಕನ್ನಡದತ್ತಲೂ ತಿರುಗತೊಡಗುತ್ತವೆ!







