ಮೈಕೆಲ್ ಜಾಕ್ಸನ್- ಜಾನೆಟ್ ಜಾಕ್ಸನ್

ಅಮೆರಿಕದ ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಎಂಭತ್ತರ ದಶಕದಲ್ಲಿ ತನ್ನ ಚರ್ಮದ ಬಣ್ಣ ಬದಲಿಸಿಕೊಂಡ ಕತೆ ನಿಮಗೆ ಗೊತ್ತಿರಬಹುದು. ರಾಮಮನೋಹರ ಲೋಹಿಯಾ ಬರೆದ ಅಪೂರ್ವ ಸೌಂದರ್ಯಮೀಮಾಂಸೆ ‘ಸೌಂದರ್ಯ ಮತ್ತು ಮೈಬಣ್ಣ’ ಪ್ರಬಂಧವನ್ನು ಮೈಕೆಲ್ ಓದಿದ್ದರೆ, ತನ್ನ ಚರ್ಮದ ಬಣ್ಣ ಬದಲಿಸಿಕೊಳ್ಳಲು ಕೊಂಚ ಹಿಂದೆಮುಂದೆ ನೋಡುತ್ತಿದ್ದನೇನೋ! ಲೋಹಿಯಾ 1951ರಲ್ಲಿ ಅಮೆರಿಕಕ್ಕೆ ಹೋಗಿ ಆಫ್ರೋ-ಅಮೆರಿಕನ್ನರ ಹೋರಾಟ ಬೆಂಬಲಿಸಿ ಮಾತಾಡಿದಾಗ ಮೈಕೆಲ್ ಇನ್ನೂ ಹುಟ್ಟಿರಲಿಲ್ಲ. 1960ರಲ್ಲಿ ಲೋಹಿಯಾ ‘ಬ್ಯೂಟಿ ಆಂಡ್ ಸ್ಕಿನ್ ಕಲರ್’ ಹಾಗೂ ‘ಕ್ವಶ್ಚನ್ ಆಫ್ ಸ್ಕಿನ್ ಕಲರ್’ ಲೇಖನಗಳನ್ನು ಬರೆದಾಗ ಮೈಕೆಲ್ ಎರಡು ವರ್ಷದ ಹುಡುಗ!
ಜಗತ್ತಿನ ಜನಪ್ರಿಯ ಸಂಸ್ಕೃತಿಯನ್ನು ಆಳಿದ ಮೈಕೆಲ್ ಜಾಕ್ಸನ್ ಎಂಭತ್ತರ ದಶಕದಲ್ಲಿ ಚರ್ಮದ ಬಣ್ಣಬದಲಾವಣೆಯ ಅತ್ಯಾಧುನಿಕ ಮಾರ್ಗಗಳನ್ನು ಬಳಸಿ, ಬಿಳಿಯನಾದ. ಮೈಕೆಲ್ ಬಿಳಿಯನಾದ ನಂತರದಲ್ಲಿ ಒಮ್ಮೆ ಅವನ ತಂಗಿ ಹಾಡುಗಾರ್ತಿ ಜಾನೆಟ್ ಜಾಕ್ಸನ್ ಫೋಟೊ ನೋಡಿದೆ. ಆಕೆ ಬಾಲ್ಯದಲ್ಲಿದ್ದಂತೆಯೇ ಇದ್ದಳು. ಮೈಕೆಲ್ ಕೂಡ ತಾರುಣ್ಯದ ತನಕ ಅವಳಂತೆಯೇ ಇದ್ದ. ಅಯ್ಯೋ! ಬಿಳಿಯನಾಗಲು ಹೋಗಿ ಮೈಕೆಲ್ ಮೂಲ, ಮುಗ್ಧ ಮುಖವನ್ನೇ ಕಳಕೊಂಡನಲ್ಲ ಎನ್ನಿಸಿ ಪೆಚ್ಚೆನ್ನಿಸಿತು.
ಕರಿಯರಿಗೂ, ಬಿಳಿಯರಿಗೂ ಆರಾಧ್ಯದೈವವಾಗಿದ್ದ
ಡ್ಯಾನ್ಸರ್-ಸಿಂಗರ್ ಮೈಕೆಲ್ ಜಾಕ್ಸನ್‌ಗೆ ತನ್ನ ಬದುಕಿನ ಒಂದು ಹಂತದಲ್ಲಿ ತನ್ನ ಕಪ್ಪು ಚರ್ಮವನ್ನು ಒಪ್ಪಿಕೊಳ್ಳಲಾಗದಂಥ ಕೀಳರಿಮೆ ಬೆಳೆದಂತಿದೆ. ಮೈಕೆಲ್ ತನ್ನ ಚರ್ಮ ಬಿಳಿಯಾಗಿಸಿಕೊಳ್ಳಲು ಸುರಿದ ಹಣ, ಅದಕ್ಕಾಗಿ ಅವನು ಹಾದುಹೋಗಿರಬಹುದಾದ ಮಾನಸಿಕ ಪಡಿಪಾಟಲು, ಪಟ್ಟ ದೈಹಿಕ ಕಷ್ಟಗಳು? ಇವೆಲ್ಲ ನಮ್ಮ ಊಹೆಗೆ ಬಿಟ್ಟದ್ದು. ಮೈಕೆಲ್ ಜಾಕ್ಸನ್‌ನ ಈ ನಡೆಯ ಹಿಂದೆ ಕಪ್ಪಿನ ಬಗ್ಗೆ ಬಿಳಿಯರ ಭೀಕರ ಪೂರ್ವಗ್ರಹ, ಕಪ್ಪು ಜನರ ಕೀಳರಿಮೆ ಎರಡೂ ಕೆಲಸ ಮಾಡಿದ್ದವು. ಜಗತ್ತಿನ ಚರಿತ್ರೆಯಲ್ಲಿ ಎಷ್ಟೆಲ್ಲ ಬದಲಾವಣೆಗಳಾದರೂ, ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾದರೂ, ಯೂರೋಪಿನ ಬಿಳಿಯರಲ್ಲಿ ಕರಿಯರ ಬಗೆಗೆ ಇದ್ದ ಪೂರ್ವಗ್ರಹಗಳು ಮಾಯವಾಗುವುದು ಇನ್ನೂ ಸಾಧ್ಯವಾಗಿಲ್ಲ. ಕಪ್ಪು ಬಣ್ಣದ
ಬಗೆಗಿನ ಬಿಳಿಯರ ಅಸಹನೆಯಂತೂ ಕರಿಯರ ಮನಸ್ಥಿತಿಯ ಮೇಲೆ ಸದಾ ಒತ್ತಡ ಹೇರುತ್ತಲೇ ಬಂದಿದೆ.
ಇವತ್ತಿಗೂ ಅಮೆರಿಕದಲ್ಲಿ ಕರಿಯ-ಬಿಳಿಯ ಗಂಡು-ಹೆಣ್ಣುಗಳ ಜೋಡಿಯನ್ನು ನೋಡಿದಾಗ ಬಿಳಿಯರು ಅದನ್ನು ಅಸಹಜವಾಗಿ ಕಾಣುತ್ತಾರಂತೆ. ಈಗ ಕರಿಯರ ಶಕ್ತಿ ಹೆಚ್ಚಿರುವುದರಿಂದ ಬಿಳಿಯರ ಅಸಹನೆ ಹೆಚ್ಚು ಕಾಣಿಸಿಕೊಳ್ಳದಿರಬಹುದು. ಒಬ್ಬ ಉದಾರವಾದಿ ಬಿಳಿಯ ಲೇಖಕ ತನ್ನ ನಿಷ್ಠುರ ಆತ್ಮಪರೀಕ್ಷೆಯ ಗಳಿಗೆಯಲ್ಲಿ ‘ಇವತ್ತಿಗೂ ನೀಗ್ರೋಗಳ ಬಗ್ಗೆ ನನಗೆ ಇರುವ ಅಸಹನೆ ಇನ್ನಿತರ ಯಾವುದೇ ವಿಚಾರಗಳ ಬಗ್ಗೆ ಇರುವ ಅಸಹನೆಗಿಂತ ಭಿನ್ನವಾದದ್ದು’ ಎಂದು ಐವತ್ತು ವರ್ಷಗಳ ಕೆಳಗೆ ಬರೆದಿದ್ದ. ‘ಈಗಲೂ ಬಿಳಿಯ ಪೊಲೀಸರು ಕರಿಯ ವಿಚಾರಣಾಧೀನ ಕೈದಿಗಳನ್ನು ಹಿಂಸಿಸುವುದು ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ; ಆದರೆ ಕರಿಯರನ್ನು ಮುಟ್ಟುವುದು ಕಷ್ಟ ಎಂಬ ಅಷ್ಟಿಷ್ಟು ಭಯ ಅಮೆರಿಕದ ಬಿಳಿಯರಲ್ಲಿ ಈಚಿನ ವರ್ಷಗಳಲ್ಲಿ ಹುಟ್ಟಿದೆ. ಅದು ಕರಿಯರ ಸಂಘಟನೆಯ ಗೆಲುವು ಎನ್ನಬಹುದು’ ಎಂದು ಕೆಲವು ವರ್ಷಗಳ ಕೆಳಗೆ ಅಮೆರಿಕಕ್ಕೆ ಹೋಗಿ ಬಂದ ಪ್ರೊಫೆಸರ್ ಜಾಫೆಟ್ ಹೇಳಿದ್ದರು.
ನ್ಯಾಶನಲ್ ಲಾ ಯೂನಿವರ್ಸಿಟಿಯಲ್ಲಿ ಕೆಲವು ವರ್ಷಗಳ ಕೆಳಗೆ ಆಫ್ರೋ ಅಮೆರಿಕನ್ನರು ಹಾಗೂ ಇಂಡಿಯಾದ ದಲಿತರನ್ನು ಕುರಿತ ಮಹತ್ವದ ವಿಚಾರ ಸಂಕಿರಣ ನಡೆದಾಗ ಬೆಂಗಳೂರಿಗೆ ಬಂದಿದ್ದ ಅಮೆರಿಕದ ಪ್ರೊ. ಕೆವಿನ್ ಬ್ರೌನ್ ಹಾಗೂ ಅವರ ಮಗ ಡೆವಿನ್ ಬ್ರೌನ್ ಜೊತೆ ಕೆಲವು ಗಂಟೆಗಳ ಕಾಲ ಮಾತಾಡುವ ಅವಕಾಶ ಸಿಕ್ಕಿತ್ತು. ಆಫ್ರಿಕನ್-ಅಮೆರಿಕನ್ನರ ಬಗ್ಗೆ ಇವತ್ತಿಗೂ ಬಿಳಿಯರಲ್ಲಿ ತರ್ಕಾತೀತ ಅಸಹನೆ ಕಾಣಿಸಿಕೊಳ್ಳುತ್ತಲೇ ಇರುವ ಬಗ್ಗೆ ಕೆವಿನ್ ಹೇಳುತ್ತಿದ್ದರು. ‘ಇಂಡಿಯಾದಲ್ಲಿ ಅನೇಕರು ‘ನೀನು ಇಂಡಿಯನ್ನಾ?’ ಎಂದಾಗ ನನಗೆ ರೋಮಾಂಚನವಾಯಿತು’ ಎಂದರು ಕೆವಿನ್ ಬ್ರೌನ್. ಇಂಡಿಯಾದಲ್ಲಿ ಯಾರೂ ತನ್ನನ್ನು ‘ಬ್ಲ್ಯಾಕ್’ ಎನ್ನುತ್ತಿಲ್ಲವೆಂದು ಕೆವಿನ್ ಬ್ರೌನ್‌ಗೆ ಹಾಯೆನ್ನಿಸಿದಂತಿತ್ತು.
ಕೆವಿನ್ ಹೆಂಡತಿ ಬಿಳಿಯ ಕಕೇಷಿಯನ್ ಸಮುದಾಯದವರು. ಅವರ ಮಗ ಡೆವಿನ್ ಬ್ರೌನ್‌ಗೆ ಗೋಧಿ ಮೈಬಣ್ಣವಿದೆ. ಆದರೂ ಅವನು ಪಬ್ಲಿಕ್ ಸ್ಕೂಲಿನಲ್ಲಿ ಓದುವಾಗ ಒಂದಿಬ್ಬರು ಬಿಳಿಯ ಹುಡುಗರು ‘ನಿಗ್ಗರ್’ಎಂದು ಹೀಗಳೆಯುತ್ತಿದ್ದರು. ಕೆಲವು ದಶಕಗಳಿಂದ ‘ನೀಗ್ರೋ’ ‘ನಿಗ್ಗರ್’ ಎಂಬ ಬೈಗುಳದ ಪದಗಳನ್ನು ಬಳಸಬಾರದು ಎಂಬ ಪ್ರಜ್ಞೆ ಅಮೆರಿಕದಲ್ಲಿ ಹಬ್ಬಿದ್ದರೂ, ಹಳೆಯ ಹೀಗಳಿಕೆ ಮಾತ್ರ ನಿಂತಿಲ್ಲ. ತನ್ನ ಉದಾರವಾದಿ ಗೆಳೆಯರು ಕೂಡ ‘ನೀನು ಕರಿಯರಲ್ಲೆಲ್ಲ ಅತ್ಯಂತ ಬಿಳಿಯ’ ಎಂದಾರೇ ಹೊರತು, ‘ನನ್ನನ್ನು ನಾನಿರುವಂತೆಯೇ ಪೂರ್ತಿ ಒಪ್ಪಿಕೊಳ್ಳಲು ತಯಾರಿಲ್ಲ’? ಎನ್ನುವುದು ಹುಡುಗ ಡೆವಿನ್‌ನನ್ನು ಕಾಡಿದೆ.
ಕಳೆದ ನೂರು ವರ್ಷಗಳಲ್ಲಿ, ಅದರಲ್ಲೂ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳವಳಿಯ ನಂತರ ಅಮೆರಿಕದ ಬ್ಲ್ಯಾಕ್ ಲಿಟರೇಚರ್ ಹಾಗೂ ಚಿಂತನೆಗಳು ಗಟ್ಟಿಯಾದ ಕಪ್ಪು ಸೌಂದರ್ಯ ಮೀಮಾಂಸೆಯನ್ನು ಸೃಷ್ಟಿಸಿಕೊಂಡಿವೆ. ಕರಿಯರ ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಬದಲಾಗಿದೆ. ಆದರೂ ಅವರ ಕೆಲವು ವರ್ಗಗಳು ಕಪ್ಪು ಚರ್ಮದ ಬಗೆಗಿನ ಕೀಳರಿಮೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ. ಆಫ್ರಿಕನ್ ದೇಶವಾಸಿಗಳಿಗೆ ಇರದಿದ್ದ ಬಣ್ಣ ಕುರಿತ ಕೀಳರಿಮೆ ಅಮೆರಿಕದ ಕರಿಯರನ್ನು ಆಗಾಗ ಕಾಡಿದೆ. ಐದಾರು ಶತಮಾನಗಳ ಕೆಳಗೆ ಆಫ್ರಿಕಾ ಖಂಡಗಳಿಗೆ ಬಿಳಿಯರು ಬರುವ ತನಕ ದೇಶಿ ಆಫ್ರಿಕನ್ನರು ತಮ್ಮನ್ನು ತಾವು ‘ಕಪ್ಪು’ ಎಂದು ಜರಿದುಕೊಂಡಿರಲಿಲ್ಲ ಎಂಬುದು ನೆನಪಾಗುತ್ತದೆ.
ಅದೇನೇ ಇರಲಿ, ಕಳೆದ ದಶಕಗಳಲ್ಲಿ ಕೆಲವು ವರ್ಗಗಳ ಆಫ್ರೋ-ಅಮೆರಿಕನ್ನರು ಚರ್ಮದ ಬಣ್ಣದ ಬದಲಾವಣೆಗೆ ಮಾಡುತ್ತಿರುವ ಪ್ರಯತ್ನಗಳು ಕೆಲ ಬಗೆಯ ಆಳದ ಮಾನಸಿಕ ಸಂಕೀರ್ಣತೆಗಳನ್ನು ಥಿಯರಿಗಳಿಂದ ನಿವಾರಿಸುವುದು ಕಷ್ಟ ಎಂಬುದನ್ನೂ ಸೂಚಿಸುತ್ತವೆ. ಕಳೆದ ನಾಲ್ಕು ಶತಮಾನಗಳ ಕೆಳಗೆ ಜಮೈಕಾದ ಕಡೆಯಿಂದ ಗುಲಾಮರಾಗಿ ಬಂದು ಅಮೆರಿಕದಲ್ಲಿ ನೆಲೆಸಿದವರ ಸಂತತಿಯ ಒಂದು ವರ್ಗ ತಮ್ಮ ಚರ್ಮವನ್ನು ಬ್ಲೀಚ್ ಮಾಡಿಸಿಕೊಳ್ಳುತ್ತಿರುವ ರೀತಿಯನ್ನು ರೊನಾಲ್ಡ್ ಹಾಲ್ ಅಧ್ಯಯನ ಮಾಡಿದ್ದಾರೆ. ಅವರು ಕೂಡ ಅವತ್ತು ಬೆಂಗಳೂರಿನ ವಿಚಾರ ಸಂಕಿರಣಕ್ಕೆ ಬಂದಿದ್ದರು. ರೊನಾಲ್ಡ್ ತಮ್ಮ ಅಧ್ಯಯನದಲ್ಲಿ ‘ವರ್ಣಭೇದದ ಹೊಡೆತ ತಪ್ಪಿಸಿಕೊಳ್ಳಲು ಕೊಂಚ ಸಿರಿವಂತರಾದ ಕರಿಯರು ಕಂಡುಕೊಂಡಿರುವ ಮಾರ್ಗ ಚರ್ಮದ ಬಣ್ಣವನ್ನೇ ತಕ್ಕ ಮಟ್ಟಿಗೆ ಬದಲಾಯಿಸಿಕೊಳ್ಳುವುದು’ ಎಂಬುದನ್ನು ದಾಖಲಿಸಿದ್ದಾರೆ.
ಮಧ್ಯವಯಸ್ಸಿನ ಮಹಿಳೆಯರು, ಹೊಸ ಕಾಲದ ಹುಡುಗಿಯರು ಹಾಗೂ ಕೆಲವೆಡೆ ಗಂಡಸರು ಕೂಡ ತಮ್ಮ ಚರ್ಮವನ್ನು ಬ್ಲೀಚ್ ಮಾಡಿಸಿಕೊಳ್ಳುವುದನ್ನು ದಾಖಲಿಸಿದ್ದ ರೊನಾಲ್ಡರ ವೀಡಿಯೊಗಳನ್ನೂ ನೋಡಿದೆ. ‘ಮಧ್ಯಮ, ಮೇಲುಮಧ್ಯಮ ವರ್ಗದ ಕಪ್ಪು ಮಹಿಳೆಯರ ತಿಂಗಳ ಖರ್ಚಿನಲ್ಲಿ ಸೌಂದರ್ಯಸಾಧನಗಳನ್ನು ಕೊಳ್ಳುವ ಖರ್ಚೇ ಹೆಚ್ಚು ಇದೆ’ ಎನ್ನುತ್ತಾರೆ ರೊನಾಲ್ಡ್! ‘ಇದು ಇನ್ನು ಕೆಲವು ದಶಕಗಳಲ್ಲಿ ನಿರ್ಣಾಯಕ ಫಲಿತಾಂಶ ನೀಡಲಿದೆ’ ಎಂಬುದು ಅವರ ನಂಬಿಕೆ. ‘ಆದರೆ ಇದು ಜಮೈಕಾ ಮೂಲದ ಕೆಲವು ಕರಿಯರಲ್ಲಿ ಮಾತ್ರ ಕಾಣಿಸಿಕೊಂಡಿರುವ ಪ್ರವೃತ್ತಿ ಅಷ್ಟೆ’ ಎಂದರು ಕೆವಿನ್ ಬ್ರೌನ್.
ಆಫ್ರೋ-ಅಮೆರಿಕನ್ನರ ಈ ಸಂಕೀರ್ಣ ಸವಾಲುಗಳ ಹಿನ್ನೆಲೆಯಲ್ಲಿ ಕೂಡ ನನಗೆ ಲೋಹಿಯಾ ಲೇಖನ ಹಲವು ಸಲ ನೆನಪಾಗುತ್ತಿರುತ್ತದೆ. ‘ಸೌಂದರ್ಯ ಮತ್ತು ಮೈಬಣ್ಣ’ ಲೇಖನ ಭಾರತದ ಸ್ಥಿತಿಯ ಜೊತೆಜೊತೆಗೇ ಯುರೋಪಿನ ಬಿಳಿಯರು ಕರಿಯರಲ್ಲಿ ಸೃಷ್ಟಿಸಿದ ಕೀಳರಿಮೆಯ ರಾಜಕಾರಣವನ್ನೂ ಚರ್ಚಿಸುತ್ತದೆ: ‘ಯೂರೋಪಿನ ಬಿಳಿಯ ಜನ ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲದಿಂದ ಜಗತ್ತನ್ನೇ ಅಡಿಯಾಳಾಗಿಸಿಕೊಂಡಿದ್ದಾರೆ. ಯೂರೋಪಿನ ಈ ಬಿಳಿಯರಂತೆ ಆಫ್ರಿಕಾದ ನೀಗ್ರೋಗಳು ಜಗತ್ತನ್ನು ಆಳಿದ್ದರೆ ಹೆಣ್ಣಿನ ಸೌಂದರ್ಯದ ಲಕ್ಷಣಗಳು ನಿಸ್ಸಂದೇಹವಾಗಿ ಬೇರೆಯಾಗುತ್ತಿದ್ದವು. ಆಗ ಕವಿಗಳೂ ಲೇಖಕರೂ ನೀಗ್ರೋ ಜನರ ಚರ್ಮದ ಮೃದುವಾದ ರೇಶ್ಮೆ ನುಣುಪನ್ನೂ, ಸತ್ವೋದ್ರೇಕಗೊಳಿಸುವ ಅದರ ಸ್ಪರ್ಶವನ್ನೂ, ಕಣ್ತುಂಬುವ ಸೊಬಗನ್ನೂ ಕುರಿತು ಮಾತಾಡುತ್ತಿದ್ದರು, ಹಾಡಿಕೊಳ್ಳುತ್ತಿದ್ದರು. ಅವರ ತುಟಿ, ಮೂಗುಗಳಲ್ಲಿ ಮಾರ್ದವ ಕೋಮಲತೆಗಳನ್ನು ಕಾಣುವ ರಸಕಲ್ಪನೆಯ ಕಡೆಗೆ ಸೌಂದರ್ಯ ಪ್ರಜ್ಞೆ ಹೊರಳುತ್ತಿತ್ತು. ರಾಜಕಾರಣವೂ ಸೌಂದರ್ಯಕಲ್ಪನೆಯನ್ನು ರೂಪಿಸಬಲ್ಲದು.’
ಮೈಕೆಲ್ ಜಾಕ್ಸನ್ ಇಂಡಿಯನ್ ಫಿಲಾಸಫರ್ ಲೋಹಿಯಾರ ಮಾತನ್ನು ಕೇಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿತ್ತು. ಬಣ್ಣ ಕುರಿತು ಅಣ್ಣನ ಕೀಳರಿಮೆಯನ್ನು ಅಂಟಿಸಿಕೊಳ್ಳದೆ ತನ್ನ ಪಾಡಿಗೆ ತನ್ನ ಸಂಗೀತದಲ್ಲಿ ಮುಳುಗಿ, ತನ್ನ ವ್ಯಕ್ತಿತ್ವದ ಸೌಂದರ್ಯ ಇಮ್ಮಡಿಗೊಳ್ಳುವಂತೆ ಹಾಡಿದ ಜಾನೆಟ್ ಜಾಕ್ಸನ್‌ಗೆ ಇದ್ದ ಶಕ್ತಿ ತನ್ನ ಕಲೆಯಿಂದ ಜಗತ್ತನ್ನೇ ಆಳಿದ ಅಣ್ಣನಿಗೆ ಇರಲಿಲ್ಲ! ಜಗತ್ತೇ ತನ್ನನ್ನು ಆರಾಧಿಸಿದರೂ ಮೈಕೆಲ್ ಜಾಕ್ಸನ್ ಒಳಗಿದ್ದ ಬಣ್ಣದ ಕೀಳರಿಮೆ ಮಾಯವಾಗಲಿಲ್ಲ ಎಂದರೆ, ಬಣ್ಣ ಕುರಿತ ಎಂಥೆಂಥ ಮಾನಸಿಕ ಸಾಂಸ್ಕೃತಿಕ ಆಯುಧಗಳು ಈ ಲೋಕದಲ್ಲಿವೆ ಎನ್ನಿಸುತ್ತದೆ. ಇನ್ನು ಜಾತಿ, ಬಣ್ಣ ಕುರಿತ ಇಂಥ ಭೀಕರ ಆಯುಧಗಳ ನಿತ್ಯ ತವರಾದ ಭಾರತದಲ್ಲಿ ಇವತ್ತಿಗೂ ತಯಾರಾಗುವ, ತಕ್ಷಣ ಕಾಣುವ-ತಕ್ಷಣ ಕಾಣದ, ಇಂಥ ಆಯುಧಗಳ ಕತೆಯನ್ನು ಜಾಣ ಓದುಗ, ಓದುಗಿಯರಿಗೆ ಬಿಡಿಸಿ ಹೇಳಬೇಕಾಗಿಲ್ಲ.







