ಟೀಕೆ ಟಿಪ್ಪಣಿಗಳ ಹೊಸ ಮುದ್ರಣ

ಈಅಂಕಣ ಬರೆಯುವ ದಿನ (ರವಿವಾರ) ಪಿ. ಲಂಕೇಶರ ‘ಟೀಕೆ ಟಿಪ್ಪಣಿ’ ಬರಹಗಳ ಮೂರು ಸಂಪುಟಗಳು ಬೆಂಗಳೂರಿನಲ್ಲಿ ಬಿಡುಗಡೆಯಾದವು. ಪತ್ರಿಕೆಯೊಂದರ ಸಂಪಾದಕೀಯ ಟಿಪ್ಪಣಿಗಳಲ್ಲಿ ತೀರಾ ಖಾಸಗಿ, ಪೂರ್ಣ ಸಾರ್ವಜನಿಕ ಹಾಗೂ ನಿತ್ಯದ ಅಧಿಕಾರ ರಾಜಕಾರಣ ಈ ಮೂರನ್ನೂ ಬೆಸೆಯುವ ವಿಶಿಷ್ಟ ಮಾರ್ಗವನ್ನು ಕಲಿಸಿದ ಬರಹಗಳಿವು. ಕನ್ನಡ ಪತ್ರಿಕಾಬರವಣಿಗೆಯ ನೈತಿಕತೆ, ನಿರೂಪಣೆ, ಚಹರೆ, ಶೈಲಿಗಳನ್ನು ಬದಲಿಸಿದ ಈ ಟೀಕೆ ಟಿಪ್ಪಣಿಗಳನ್ನು ಕುರಿತು ಕರ್ನಾಟಕದ ಜಾಣ ಜಾಣೆಯರು ಮತ್ತೊಮ್ಮೆ ಧ್ಯಾನಿಸಲು ಈ ಹೊಸ ಮುದ್ರಣಗಳು ಪ್ರೇರೇಪಣೆಯಾಗಲಿ.
1997ರ ಸುಮಾರಿಗೆ ಲಂಕೇಶರು ಒಂದು ಸಂಜೆಯ ಮಾತಿನ ನಡುವೆ ಈ ಟೀಕೆ ಟಿಪ್ಪಣಿಗಳನ್ನು ಆಯ್ದು ಎರಡು, ಮೂರು ಸಂಪುಟಗಳಲ್ಲಿ ಜೋಡಿಸಲು ನನಗೆ ಹೇಳಿದ ನಂತರ, ಎರಡು ಸಂಪುಟಗಳು 1998, 1999ರಲ್ಲಿ ಸಿದ್ಧವಾದವು. ಕೊನೆಯ ವರ್ಷಗಳಲ್ಲಿ ಲಂಕೇಶರ ಜೊತೆಗಿದ್ದ ನಾವೆಲ್ಲ ಎಷ್ಟು ನಿಧಾನಜೀವಿಗಳಾಗಿದ್ದೇವೆಂದರೆ, ನಾವು ಲಂಕೇಶರು ಚಿರಂಜೀವಿ ಎಂದುಕೊಂಡಿದ್ದೆವು. 1999ರ ಕೊನೆಗೆ ಟೀಕೆ ಟಿಪ್ಪಣಿಯ ಮೂರನೆಯ ಸಂಪುಟ ಕೊಂಚ ಬಿಡುಬೀಸಾಗಿ ಮುದ್ರಣಕ್ಕೆ ಸಿದ್ಧವಾಗತೊಡಗಿತ್ತು. ಆದರೆ ಲಂಕೇಶರು 24 ಜನವರಿ 2000ದ ರಾತ್ರಿ ನಿರ್ಗಮಿಸಿದರು. ಮೂರನೇ ಸಂಪುಟ ಅವರಿದ್ದಾಗಲೇ ಬರದೇ ಹೋದುದಕ್ಕೆ, ಮಾತಿಗೆ ತಪ್ಪಿದ್ದಕ್ಕೆ, ಪೆಚ್ಚೆನ್ನಿಸುತ್ತಲೇ ಇರುತ್ತದೆ.
ಮೊನ್ನೆ 2026ರ ಮಾರ್ಚ್ 8ರಂದು ಟೀಕೆ ಟಿಪ್ಪಣಿಯ ಮೂರನೆಯ ಸಂಪುಟವನ್ನು ಅಚ್ಚಿಗೆ ಕಳಿಸುವ ಸಂದರ್ಭದಲ್ಲಿ ಲಂಕೇಶರು ಸಂಪಾದಿಸಿದ ‘ಲಂಕೇಶ್ ಪತ್ರಿಕೆ’ಯ ಕೊನೆಯ ಸಂಚಿಕೆಯಲ್ಲಿರುವ ‘ಈ ಸಂಚಿಕೆ’ ಅಂಕಣವನ್ನು ಗಮನಿಸಿದೆ. ತಮ್ಮ ಕೊನೆಯ ಬರಹದಲ್ಲಿ ಅವರು ಬರೆಯುವ ಮಾತು: ‘ಇದನ್ನೆಲ್ಲ ನಾನು ಒಂದು ರೀತಿಯ ಪ್ರಜ್ಞಾಪ್ರವಾಹ ರೂಪದಲ್ಲಿ ಹೇಳುತ್ತಿದ್ದೇನೆ.’ ಇದು ಲಂಕೇಶರು 2000ನೇ ಇಸವಿಯ 24ನೇ ತಾರೀಕು ತಮ್ಮ ಜೀವಿತದ ಕೊನೆಯ ಸಂಜೆ, 6-7 ಗಂಟೆಯ ನಡುವೆ ಬರೆದ ಮಾತು. ಇದು ಒಂದರ್ಥದಲ್ಲಿ ಅವರ ಇಡೀ ಜೀವಮಾನದ ಬರವಣಿಗೆಯ ರೀತಿಯನ್ನೇ ಸೂಚಿಸಿದಂತಿದೆ.
ಹತ್ತಿರ ಹತ್ತಿರ ಇಪ್ಪತ್ತು ವರ್ಷ ಕಾಲ ತಮ್ಮ ಪತ್ರಿಕೆಯಲ್ಲಿ ಹಲವು ಬಗೆಯ ಅಂಕಣಗಳನ್ನು ಬರೆದ ಲಂಕೇಶರ ಗದ್ಯದಲ್ಲಿ ಈ ಪ್ರಜ್ಞಾಪ್ರವಾಹದ ಅಂಶ ಸದಾ ಇತ್ತು. 1997ರಿಂದೀಚೆಗೆ ಅವರು ‘ಈ ಸಂಚಿಕೆ’ ಎಂಬ ಪತ್ರಿಕೆಯ ಆರಂಭದ ಅಂಕಣದಲ್ಲಿ ಪತ್ರಿಕೆ ಅಚ್ಚಿಗೆ ಹೋಗುವ ಮುನ್ನ ಆ ಕ್ಷಣದ ಅನಿಸಿಕೆಗಳನ್ನು ಬರೆಯತೊಡಗಿದ್ದರು. ‘ಈ ಸಂಚಿಕೆ’ ಅಂಕಣ ಒಂದರ್ಥದಲ್ಲಿ ಶ್ರೇಷ್ಠ ಲೇಖಕನೊಬ್ಬನ ಪ್ರಜ್ಞಾಪ್ರವಾಹದ ಗಂಭೀರ ಹಾಗೂ ಲವಲವಿಕೆಯ ‘ಫೇಸ್ ಬುಕ್’ ಥರ ಇತ್ತು. ಇವತ್ತು ನಿಜಕ್ಕೂ ಫೇಸ್ ಬುಕ್ಕನ್ನು ಸೃಜನಶೀಲವಾಗಿ, ಗಂಭೀರವಾಗಿ ಹಾಗೂ ಸಾಮಾಜಿಕವಾಗಿ ಬಳಸಬಯಸುವ ಲೇಖಕ, ಲೇಖಕಿಯರು ಲಂಕೇಶರ ‘ಈ ಸಂಚಿಕೆ’ಗಳನ್ನು ಓದಿ ಕಲಿಯಬಹುದು.
ಈಗ ‘ಟೀಕೆ ಟಿಪ್ಪಣಿ’ಯ ಮೂರನೆಯ ಸಂಪುಟದಲ್ಲಿ ‘ಈ ಸಂಚಿಕೆ’ ಅಂಕಣದ ಕೊನೆಯ ಬರಹವನ್ನಷ್ಟೇ ಕೊಟ್ಟಿರುವೆ. ಲಂಕೇಶ್ ತಮ್ಮ ಜೀವಿತದ ಕೊನೆಯ ಸಂಜೆ ಬರೆದ ಈ ಬರಹದಲ್ಲೂ, ಅವರ ವ್ಯಕ್ತಿತ್ವದ, ಒಟ್ಟು ಬದುಕಿನ ಹಾಗೂ ಅವರ ಇಪ್ಪತ್ತು ವರ್ಷಗಳ ಪತ್ರಿಕೋದ್ಯಮದ ಮೂಲ ಕಾಳಜಿಗಳು ಹಾಗೇ ಇದ್ದವು: ಹೆಣ್ಣು, ರಾಜಕಾರಣ, ಸಮಾಜ, ಬರವಣಿಗೆಯ ಕಲೆಗೆ ನಿರಂತರ ಸಾಣೆ ಹಿಡಿದುಕೊಳ್ಳುವ ಕೆಲಸ, ಸಾಹಿತ್ಯ ವಿಮರ್ಶೆ, ಸಾರ್ವಜನಿಕ ಸಂಸ್ಕೃತಿ-ಸಾಹಿತ್ಯ ಸಂಸ್ಕೃತಿಯಲ್ಲಿ ನೈತಿಕತೆ. ತಮ್ಮ ಕೊನೆಯ ಬರಹಕ್ಕೆ ಅವರು ಕೊಟ್ಟ ತಲೆಬರಹ: ‘ಶ್ರೇಷ್ಠ ಗದ್ಯ ಎಂಬ ಶ್ರೇಷ್ಠ ಕಲೆ.’
ಬರೆಯುವ ಮನುಷ್ಯನೊಬ್ಬನ ವ್ಯಕ್ತಿತ್ವ-ಸಂವೇದನೆ ಅವನು ಬಳಸುವ ಎಲ್ಲ ಪ್ರಕಾರಗಳಲ್ಲೂ ಹೆಚ್ಚುಕಡಿಮೆ ಥರದಲ್ಲಿ ಒಂದೇ ರೀತಿಯಲ್ಲಿ ಹರಿಯತೊಡಗುತ್ತವೆ ಎಂಬುದು ನನ್ನ ನಂಬಿಕೆ. ಲಂಕೇಶರ ಕೊನೆಯ ‘ರೆಡ್ ಏಂಜೆಲ್’ ಮುಂತಾದ ಕತೆಗಳ ಈ ಮುಕ್ತ ಹರಿವು ಅಥವಾ ಪ್ರಜ್ಞಾಪ್ರವಾಹ ಅವರ ನೀಲು ಪದ್ಯಗಳಲ್ಲಿ, ‘ಟೀಕೆ ಟಿಪ್ಪಣಿ’ಗಳಲ್ಲಿ ‘ಈ ಸಂಚಿಕೆ’ಯಲ್ಲಿ; ನಮ್ಮ ಜೊತೆಗಿನ ಮುಸ್ಸಂಜೆಯ ಮಾತುಕತೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಈ ಮಾತನ್ನು ಐದು ವರ್ಷ ಕಾಲ ಅವರನ್ನು ಸಾಕಷ್ಟು ನೋಡಿ, 1980ರಿಂದ 2000ನೇ ಇಸವಿಯ ಮೊದಲ ತಿಂಗಳವರೆಗೂ ಲಂಕೇಶರು ಬರೆದ ಹತ್ತಿರ ಹತ್ತಿರ 950 ಟೀಕೆ ಟಿಪ್ಪಣಿಗಳನ್ನು ಕಾಲಕಾಲಕ್ಕೆ ಓದಿರುವ ಆಧಾರದ ಮೇಲೆ ಹೇಳುತ್ತಿದ್ದೇನೆ.
ಲಂಕೇಶರ ನಿರ್ಗಮನದ ನಂತರದ ಇಪ್ಪತ್ತಾರು ವರ್ಷಗಳ ನಂತರವೂ ಈ ಟೀಕೆ ಟಿಪ್ಪಣಿಗಳು ಹೊಸ ಹೊಸ ತಲೆಮಾರುಗಳ ಸಂಗಾತಿಯಾಗಿ ಮುಂದುವರಿದಿವೆ. ಲಂಕೇಶರ ಟೀಕೆ ಟಿಪ್ಪಣಿಗಳನ್ನು ಇದೀಗ 2025-26ರಲ್ಲಿ ಮತ್ತೆ ಇಡಿಯಾಗಿ ಓದುವಾಗಲೂ ಅವು ಎಂದಿನಂತೆಯೇ ಆತ್ಮೀಯವಾಗಿ ಕಾಣತೊಡಗಿದವು. ಬರಹಗಳ ಬನಿ ಹಿಂಗಿಲ್ಲ; ಜೀವಂತಿಕೆ ಮುಕ್ಕಾಗಿಲ್ಲ. ಸಮಕಾಲೀನ ಅರ್ಥ ಹೊರಡುತ್ತಲೇ ಇದೆ. ಎರಡು, ಮೂರನೇ ಸಂಪುಟದಲ್ಲಿರುವ ಹಲವು ಬರಹಗಳನ್ನು ಬರೆಯುವ ಕಾಲಕ್ಕೆ ಲಂಕೇಶ್ ಮಿದುಳಿನ ಸ್ಟ್ರೋಕಿನಿಂದ ಚೇತರಿಸಿಕೊಳ್ಳುತ್ತಿದ್ದರು; ದೇಹ ಶಿಥಿಲವಾಗತೊಡಗಿತ್ತು. ಒಂದು ಕಣ್ಣು ಮುಚ್ಚಿಕೊಂಡಿತ್ತು. ಮತ್ತೊಂದು ಕಣ್ಣು ಯಾವಾಗ ಮುಚ್ಚಿಕೊಳ್ಳುತ್ತದೋ ಎಂಬ ಆತಂಕವಿತ್ತು. ದೇಹದ ಶಿಥಿಲತೆ ಹಾಗೂ ಸಾವಿನ ಆತಂಕವನ್ನು ಮುಖಾಮುಖಿಯಾಗುವ ಏಕಮಾತ್ರ ಸಾಧನವೆಂಬಂತೆ ಅವರು ತೊಡಗಿದ ಬರವಣಿಗೆ ಅವರಿಗೆ ತೀವ್ರ ಸ್ವ-ಪರೀಕ್ಷೆಯ ಸಾಧನವಾಗಿತ್ತು.
ಲಂಕೇಶರ ‘ಫಿಲಾಸಫಿ’ ಎನ್ನುವುದು ‘ಅನುದಿನದ ಫಿಲಾಸಫಿ.’ ಬದುಕನ್ನು, ವ್ಯಕ್ತಿಗಳನ್ನು, ರಾಜಕೀಯವನ್ನು, ಮನುಷ್ಯ ಸಂಬಂಧಗಳನ್ನು ನಿತ್ಯದ ವಿವರಗಳಲ್ಲಿ ಹೇಗೆ ನೋಡಬೇಕು ಎಂಬ ಅನುದಿನದ ಫಿಲಾಸಫಿಯನ್ನು ಈ ಟೀಕೆ ಟಿಪ್ಪಣಿಗಳು ಹೇಳುತ್ತಿದ್ದವು. ಈ ಫಿಲಾಸಫಿಯ ಸೂಕ್ಷ್ಮಗಳನ್ನು ಟೀಕೆ ಟಿಪ್ಪಣಿಗಳನ್ನು ಓದಿಯೇ ನನ್ನಂಥ ಲಕ್ಷಾಂತರ ಜನ ಕಲಿತಿದ್ದಾರೆ. ಲಂಕೇಶರ ಕೊನೆಯ ವರ್ಷಗಳ ಬರಹಗಳ ಈ ಅನುದಿನದ ಫಿಲಾಸಫಿಗೆ ಕಾಯಿಲೆ, ದೇಹ, ಮನಸ್ಸು, ಆರೋಗ್ಯದ ನಿತ್ಯದ ಸವಾಲುಗಳು ಹೆಚ್ಚು ಹೆಚ್ಚು ಸೇರಿಕೊಂಡವು; ಎಂಥ ಸ್ಥಿತಿಯಲ್ಲೂ ಬದುಕುವ ದಾಹ, ಬದುಕುವ ಕಲೆ, ಹಲ್ಲು ಕಚ್ಚಿ ಬದುಕಿದವರ, ಬದುಕಬಯಸುವವರ ಅನುಭವಗಳು ಸೇರಿಕೊಳ್ಳತೊಡಗಿದವು. ಈ ಬರಹಗಳು ಖಾಸಗಿ ಎಂದರೆ ಖಾಸಗಿ; ಸಾರ್ವಜನಿಕ ಎಂದರೆ ಸಾರ್ವಜನಿಕ. ಕಾರಣ, ಖಾಸಗಿ ಎನ್ನಬಹುದಾದ ಬರಹಗಳಲ್ಲಿ ಕೂಡ ಲಂಕೇಶ್ ಓದುಗರ ನಿತ್ಯದ ಕಷ್ಟ ಸುಖಗಳಿಗೆ ದನಿಯಾಗುತ್ತಲೇ ಇರುತ್ತಾರೆ. ಆದ್ದರಿಂದ ಇವು ಸಾರ್ವತ್ರಿಕ.
ತಮ್ಮ ಬದುಕಿನ ಕೊನೆಯ ಸಂಜೆ, ಲಂಕೇಶರಿಗೆ ಉಳಿದಿದ್ದ ಕೊನೆಯ ಗಂಟೆಗಳಲ್ಲಿ ಅವರು ಬರೆದ ‘ಶ್ರೇಷ್ಠ ಗದ್ಯ ಎಂಬ ಶ್ರೇಷ್ಠ ಕಲೆ’ ಲೇಖನದಲ್ಲಿರುವ ಒಂದು ನೋಟ:
‘ನಾವೆಲ್ಲ ಮಹಾ ಸಿಟ್ಟಿನ, ತಪ್ಪು ತಿಳಿಯುವ, ಗೊಂದಲದ ಮನುಷ್ಯರು ಎಂದು ನಾನು ಬಲ್ಲೆ. ಆದ್ದರಿಂದಲೇ ನಾವು ಸಾಂಸ್ಕೃತಿಕವಾಗಿ ಮುಖ್ಯವಾದವರ ಬಗ್ಗೆ ಮಾತಾಡುವಾಗ ಗಾಢವಾಗಿ ಚಿಂತಿಸಬೇಕು. ನಮ್ಮನ್ನು ಹೊಗಳುವವರನ್ನೆಲ್ಲ ಹೊಗಳುತ್ತಾ ಕೂರಬಾರದು... ಎಂಥೆಂಥ ಜನ ಇದ್ದಾರೆ ನೋಡಿ! ಅವರು ಎಂದೂ ಏನನ್ನೂ ಓದುವುದಿಲ್ಲ... ನಾವು ನಮ್ಮ ಸಮಕಾಲೀನರಲ್ಲಿ ಯಾರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿಬಿಡಬೇಕು. ಅವರ ಸಾಧನೆಯ ಬಗ್ಗೆ ತಾತ್ಸಾರ ಪಡಕೂಡದು.’
ಕನ್ನಡದ ಶ್ರೇಷ್ಠ ಲೇಖಕನೊಬ್ಬನ ಆರಂಭದ ಕಾಳಜಿಗಳು ಮಾಗಿ, ಕೊನೆಯ ಸಂಜೆಯವರೆಗೂ ಜೀವಂತವಾಗಿದ್ದುದನ್ನು ಈ ಕೊನೆಯ ಟಿಪ್ಪಣಿಯೂ ಸೂಚಿಸುತ್ತದೆ. ಮೇಷ್ಟ್ರು, ಕತೆಗಾರ, ಕವಿ ನಾಟಕಕಾರ, ವಿಮರ್ಶಕ, ಸಂಪಾದಕ ಮುಂತಾದ ಹಲವು ಪಾತ್ರಗಳು ಬೆರೆತ ಸಂಕೀರ್ಣ ವ್ಯಕ್ತಿತ್ವದಿಂದ ಮೈದಾಳಿದ ಈ ಕಾಳಜಿಗಳು ಕೊನೆತನಕ ಗಾಢವಾಗಿದ್ದವು. ಲಂಕೇಶರ ಟೀಕೆ ಟಿಪ್ಪಣಿಗಳು ಅವರ ಇಷ್ಟೆಲ್ಲ ಪಾತ್ರಗಳಿಂದ ಹಲವು ಎಳೆಗಳನ್ನು ಪಡೆದು ಇವತ್ತಿಗೂ ಜೀವಂತ ಹಾಗೂ ಸಮೃದ್ಧವಾಗಿವೆ. ಅವರು ಸಂಪಾದಿಸಿದ ‘ಲಂಕೇಶ್ ಪತ್ರಿಕೆ’ಯ ಕೊನೆಯ ಸಂಚಿಕೆಯಲ್ಲಿ ಪ್ರಕಟವಾದ ಅವರ ‘ನೀಲು’ ಪದ್ಯ:
ಸಾಧು ಸಂತರು ಜಂಗಮರು ಗುರುಗಳು
ತಾವು ಕಟ್ಟಿಕೊಂಡು ಹುಟ್ಟಿದ
ಲೈಂಗಿಕ ಭಾಗ್ಯದ ಬಗ್ಗೆ
ಆಸೆ, ಹತಾಶೆಯಲ್ಲಿ ನರಳುವರು.
ಈ ನೀಲು ಪದ್ಯ ಸೂಚಿಸುತ್ತಿರುವ ಆಸೆ ಹತಾಶೆಗಳ ಶೋಧನೆಗಳ ನಡುವೆಯೇ ಕಟ್ಟುವ, ಬದಲಿಸುವ, ಬದಲಾಗುವ ನೈತಿಕ ಕಾಳಜಿಗಳು ಲಂಕೇಶರ ಕೊನೆಯ ಬರಹದವರೆಗೂ ಇದ್ದವು. ಕಳೆದ ನಲವತ್ತು ವರ್ಷಗಳಲ್ಲಿ ಈ ಟೀಕೆ ಟಿಪ್ಪಣಿಗಳಿಂದ ಸಾವಿರಾರು ಜನ ಲೇಖಕ, ಲೇಖಕಿಯರು ಅಂಕಣ, ಸಂಪಾದಕೀಯ, ಗದ್ಯ, ಸಮಾಜವಿಮರ್ಶೆ, ಸಾಹಿತಿ-ಸಾಹಿತ್ಯಗಳನ್ನು ನೋಡುವ ಬಗೆಗಳು, ರಾಜಕೀಯ ವಿಶ್ಲೇಷಣೆಗಳು...ಮುಂತಾದವುಗಳ ಹಲವು ಮಾದರಿಗಳನ್ನು ಅರಿವಿದ್ದೋ ಅರಿವಿಲ್ಲದೆಯೋ ಕಲಿತಿದ್ದಾರೆ. ಕನ್ನಡ ಚಿಂತಕ, ಚಿಂತಕಿಯರು ಸಮಾಜವಾದಿ ಚಿಂತನೆಯ ಹೊಸ ರೂಪಗಳನ್ನು ಅರಿತಿದ್ದಾರೆ. ಲಂಕೇಶರನ್ನು ತೆಳುವಾಗಿ ಅನುಕರಿಸಿ ಕನ್ನಡ ಮನಸ್ಸಿನ ಅಭಿರುಚಿ ಕೆಡಿಸಿದ ಪತ್ರಕರ್ತರೂ, ಲೇಖಕರೂ ಇದ್ದಾರೆ. ಅದೇನೇ ಇದ್ದರೂ, ಕಾಲದ ಕನ್ನಡಿಯಂತಿರುವ ಈ ಬರಹಗಳನ್ನು ಮತ್ತೆ ಮತ್ತೆ ಓದುವವರು ತೀವ್ರವಾಗಿ ಯೋಚಿಸುವ, ಒಳಹೊರಗನ್ನು ಬೆಸೆಯುವ ಚಿಂತನೆಯ ಕಲೆಯನ್ನು, ಬದುಕುವ ಕಲೆಯನ್ನು ಕಲಿಯಬಲ್ಲರು ಎಂಬುದು ನನ್ನ ನಂಬಿಕೆ.
ಈ ಟೀಕೆ ಟಿಪ್ಪಣಿಗಳನ್ನು ಮತ್ತೆ ಮತ್ತೆ ನಿಕಟವಾಗಿ ಓದುವ ಯಾರೇ ಆಗಲಿ, ಹಿರಿಯರಿರಲಿ ಕಿರಿಯರಿರಲಿ, ದಕ್ಷವಾದ ಬರವಣಿಗೆಯ ಕಲೆಯನ್ನು ಗ್ಯಾರಂಟಿ ಕಲಿಯಬಲ್ಲರು ಎಂದು ಖಚಿತವಾಗಿ ಹೇಳಬಲ್ಲೆ.






