Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಆತ್ಮಗೀತ ಮತ್ತು ಮುಖಗೀತ!

ಆತ್ಮಗೀತ ಮತ್ತು ಮುಖಗೀತ!

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್9 Jun 2025 9:51 AM IST
share
ಆತ್ಮಗೀತ ಮತ್ತು ಮುಖಗೀತ!

ಆತ್ಮಚರಿತ್ರಾತ್ಮಕ ಬರವಣಿಗೆಗಳನ್ನು ಕುರಿತು ಮಾತಾಡುವವರ ವೈಖರಿ, ಅವುಗಳಿಗೆ ಪ್ರತಿಕ್ರಿಯಿಸುವವರ ಭಾಷೆ, ಧೋರಣೆ ಒಮ್ಮೊಮ್ಮೆ ನಗೆ ಉಕ್ಕಿಸುವಂತಿರುತ್ತದೆ. ಅಂಥದೊಂದು ಪ್ರಸಂಗ:

ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ತೀರಿಕೊಂಡ ನಂತರ ಅವರ ಪತ್ನಿ ತಮ್ಮ ಪತಿಯನ್ನು ಕುರಿತ ನೆನಪುಗಳ ಪುಸ್ತಕವನ್ನು ಬರೆದು ಪ್ರಕಟಿಸಿದರು. ಆಗ ಈ ಪುಸ್ತಕವನ್ನು ಪತ್ರಿಕೆಯೊಂದರಲ್ಲಿ ಪರಿಚಯಿಸಿದ್ದ ಲೇಖಕರೊಬ್ಬರು, ಕಳೆದ ವರ್ಷ ತೀರಿಕೊಂಡ ಮತ್ತೊಬ್ಬ ಲೇಖಕ ‘ಚಂದ್ರಕೀರ್ತಿ’ಯವರ ಪತ್ನಿಗೆ ಒಂದು ಉಚಿತ ಸುಪಾರಿ ಸಲಹೆ ಕೊಟ್ಟರು: ‘‘ನೀವು ನಿಮ್ಮ ನೆನಪುಗಳನ್ನು ಬರೆಯಿರಿ; ಆಗ ‘ಚಂದ್ರಕೀರ್ತಿ’ಯವರ ಬಗ್ಗೆ ನಾವು ಈವರೆಗೆ ಕಾಣದಿರುವ ಮುಖಗಳು ಕಾಣುತ್ತವೆ.’’

ಈ ಸಲಹೆ ಓದಿದಾಗ ನನಗೂ ಒಂದು ಸಲಹೆ ಕೊಡಬೇಕೆನ್ನಿಸಿತು: ಈ ಥರದ ಉಚಿತಾನುಚಿತ ಸಲಹೆ ಕೊಟ್ಟಿರುವ ಸದರಿ ಲೇಖಕ ತನ್ನ ಸ್ವಂತ ಪತ್ನಿಗೆ ಈಗಲೇ ಸುಪಾರಿ ಕೊಟ್ಟು, ಸ್ವತಃ ತಾನು ‘ಕಾಣದ’ ಮುಖಗಳನ್ನು ಬರೆಯಲು ಕೇಳಿಕೊಳ್ಳುವುದು ಒಳ್ಳೆಯದಲ್ಲವೆ! ತನ್ಮೂಲಕ ಈ ಲೇಖಕ ತಾನು ಕಾಣದ ತನ್ನ ಅಗೋಚರ ವ್ಯಕ್ತಿತ್ವವನ್ನು ತನ್ನ ಪತ್ನಿಯ ಮೂಲಕ ಕಂಡುಕೊಂಡು ಬದುಕಿದ್ದಾಗಲೇ ಆನಂದಪಡುವುದು ಅಥವಾ

ದುಃಖಪಡುವುದು ಲಾಭಕರವಲ್ಲವೆ!

ಅದೇನೇ ಇದ್ದರೂ, ಎಂದೂ ಬರೆಯದ ಕೆಲವರನ್ನು ಆತ್ಮಚರಿತ್ರೆಯ ಪ್ರಕಾರವೇ ಬರೆಯುವಂತೆ ಮಾಡುವುದು ನಿಜಕ್ಕೂ ಕುತೂಹಲಕರ.

ಲೇಖಕಿ ಅಥವಾ ಲೇಖಕ ತನ್ನ ಸ್ವಂತವನ್ನು ಅಥವಾ ಸೆಲ್ಫ್ ಅನ್ನು ಶೋಧಿಸಿಕೊಂಡು ಬರೆಯುವ ‘ಆಟೋಬಯಾಗ್ರಫಿ’ ಪ್ರಕಾರ

ಇಂಗ್ಲಿಷಿನಿಂದ ಭಾರತೀಯ ಭಾಷೆಗಳಿಗೆ ಬಂತೋ ಅಥವಾ ಮೊಗಲ್ ದೊರೆ ಬಾಬರ್ ಬರೆದ ‘ಬಾಬರ್‌ನಾಮಾ’ ಥರದ ಬರವಣಿಗೆಗಳಿಂದ ಭಾರತೀಯರಿಗೆ ಹೆಚ್ಚು ಪರಿಚಿತವಾಯಿತೋ ಹೇಳುವುದು ಕಷ್ಟ. ತೊಂಭತ್ತು ಪುಟಗಳ ‘ಬಾಬರ್‌ನಾಮಾ’ ಕುರಿತು ಲಂಕೇಶರು 1991ರಲ್ಲಿ ಬರೆದ ‘ಬಾಬರ್’ ಎಂಬ ‘ಟೀಕೆ ಟಿಪ್ಪಣಿ’ ಓದಿದಾಗ ‘ಬಾಬರ್‌ನಾಮಾ’ ಭಾರತದ ಆತ್ಮಚರಿತ್ರೆಯ ಆರಂಭದ ಮುಖ್ಯ ಮಾದರಿಯಂತೆ ಕಂಡಿತ್ತು. ಆತ್ಮಚರಿತ್ರೆಯ ಪ್ರಕಾರ ಬಾಬರ್‌ಗೆ ಒಲಿದಿರುವ ರೀತಿಯನ್ನು ಕನ್ನಡ ಜಾಣಜಾಣೆಯರಿಗೆ ತೋರಿಸಿದ ಲಂಕೇಶರ ಟೀಕೆ ಟಿಪ್ಪಣಿಯ ಶಕ್ತಿ ಕೂಡ ಅಷ್ಟೇ ಮಹತ್ವದ್ದು ಎನ್ನಿಸಿತು.

ಇದಾದ ಕೆಲವು ವರ್ಷಗಳ ನಂತರ, 1997ರಲ್ಲಿ ಲಂಕೇಶ್ ತಮ್ಮ ‘ಹುಳಿಮಾವಿನ ಮರ’ ಆತ್ಮಕತೆ ಬರೆದರು. ಇಂಗ್ಲಿಷಿನ ‘ಆಟೋಬಯಾಗ್ರಫಿ’ ಪ್ರಕಾರ ಸೃಷ್ಟಿಸಿದ ಮಾದರಿಗೆ ಅತ್ಯಂತ ಹತ್ತಿರವಿರುವ ಕನ್ನಡ ಆತ್ಮಚರಿತ್ರೆಯೆಂದರೆ :ಹುಳಿಮಾವಿನ ಮರ’ ಎಂದು ನನಗೆ ಇವತ್ತಿಗೂ ಅನ್ನಿಸುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಈಚಿನ ಪ್ರತಿಕ್ರಿಯೆಯೊಂದನ್ನು ನೋಡುತ್ತಿದ್ದಾಗ, ಲಂಕೇಶರ ಆತ್ಮಚರಿತ್ರೆ ‘ಹುಳಿಮಾವಿನ ಮರ’ ಪ್ರಕಟವಾದಾಗ ಕೇಳಿಬಂದ ಕೆಲವು ಗೊಣಗುಗಳು ನೆನಪಾದವು:

ಲಂಕೇಶರ ಆತ್ಮಚರಿತ್ರೆಯಲ್ಲಿ ‘ನನ್ನ ಹೆಸರಿಲ್ಲ’; ‘ನಾನು ಲಂಕೇಶ್‌ಗೆ ಅಷ್ಟು ಹತ್ತಿರವಾಗಿದ್ದೆ, ನನ್ನ ಬಗ್ಗೆ ಬರೆದಿಲ್ಲ’; ‘ನಾನು ಲಂಕೇಶ್‌ಗೆ ಬ್ಯಾಂಕಿನಲ್ಲಿ ಸಾಲ ಕೊಡಿಸಿದ್ದೆ. ಅದರ ಬಗ್ಗೆ ಲಂಕೇಶ್ ಬರೆದೇ ಇಲ್ಲ?’ ಇತ್ಯಾದಿಯಾಗಿ ಕೆಲವರು ಗೊಣಗಿದ್ದರು. ಆ ಕಾಲದಲ್ಲಿ ನಾನು ಬರೆದ ‘ಆತ್ಮಚರಿತ್ರೆಯ ಆತ್ಮ’ ಎಂಬ ಟಿಪ್ಪಣಿಯೊಂದರಲ್ಲಿ ಇಂಥ ಪ್ರತಿಕ್ರಿಯೆಗಳನ್ನು ಕುರಿತು ಪ್ರತಿಕ್ರಿಯೆ ಬರೆದ ನೆನಪು: ಆತ್ಮಚರಿತ್ರೆ ಬರೆದವರ ಆತ್ಮಕ್ಕೆ ಹತ್ತಿರವಾಗಿರುವ ಸಂಗತಿಗಳು ಮಾತ್ರ ಅವರ ಆತ್ಮಚರಿತ್ರೆಯಲ್ಲಿ ಬರುತ್ತವೆ; ನೀವು ಲೇಖಕನೊಬ್ಬನ ಆತ್ಮಕ್ಕೆ ತಲುಪಿಯೇ ಇಲ್ಲ ಎಂದರೆ, ಅವನ ಆತ್ಮಚರಿತ್ರೆಯಲ್ಲಿ ನೀವು ಬರುವ ಸಂಭವವೇ ಇರುವುದಿಲ್ಲ, ಅಲ್ಲವೆ?

ಮೊನ್ನೆ ಗೆಳೆಯನೊಬ್ಬ ತನ್ನ ವಾರಿಗೆಯ ಲೇಖಕನೊಬ್ಬ ಬರೆದ ಆತ್ಮಚರಿತ್ರೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ನೋಡಿದಾಗ ಲಂಕೇಶರ ‘ಹುಳಿಮಾವಿನ ಮರ’ದ ಬಗ್ಗೆ ನಾನು ಬರೆದ ಆ ಟಿಪ್ಪಣಿ ಮತ್ತೆ ಮನಸ್ಸಿಗೆ ಬಂತು. ಈ ಗೆಳೆಯನ ಹೆಸರು ‘ರಾಜು’ ಎಂದಿಟ್ಟುಕೊಳ್ಳೋಣ. ಅವತ್ತು ರಾಜು ಚರ್ಚಿಸುತ್ತಿದ್ದ ಆತ್ಮಚರಿತ್ರೆಯನ್ನು ಬರೆದಿದ್ದ ಲೇಖಕ ಹುಬ್ಬಳ್ಳಿಯಲ್ಲಿದ್ದ; ರಾಜು ಕೂಡ ಆಗ ಹುಬ್ಬಳ್ಳಿಯಲ್ಲಿದ್ದ. ಇಬ್ಬರೂ ಪರಿಚಿತರು. ಆದರೆ ಸದರಿ ಲೇಖಕ ಹುಬ್ಬಳ್ಳಿಯಲ್ಲಿದ್ದ ಕಾಲವನ್ನು ಕುರಿತು ಬರೆದದ್ದರಲ್ಲಿ ರಾಜುವಿಗೆ ಕೆಲವು ದೋಷಗಳು ಕಾಣಿಸಿದವು: ಉದಾಹರಣೆಗೆ, ಐದು ವರ್ಷ ತನ್ನನ್ನು ಸಾಕಿದ್ದ ಹುಬ್ಬಳ್ಳಿಯ ಬಗ್ಗೆ ಈತ ಎರಡೇ ಎರಡು ಪ್ಯಾರಾ ಮಾತ್ರ ಬರೆದಿದ್ದಾನೆ. ತನಗೆ ಕೆಲಸ ಕೊಡಿಸಲು ನೆರವಾದ ‘ಪುಟ್ಟಪ್ಪ’ ಹಾಗೂ ‘ಚಂದ್ರಪ್ಪ’ನವರ ಬಗ್ಗೆ ಅವನ ಆತ್ಮಚರಿತ್ರೆಯಲ್ಲಿ ಒಂದು ಕೃತಜ್ಞತೆಯ ಸಾಲು ಕೂಡ ಇಲ್ಲ... ಇತ್ಯಾದಿ.

ಬರೆವ ವ್ಯಕ್ತಿಯ ಆತ್ಮವನ್ನು ಸೋಕದ ವಿಚಾರಗಳು ಆತನ ಆತ್ಮಚರಿತ್ರೆಯಲ್ಲಿ ಅದರಲ್ಲೂ ಅದನ್ನು ಬರೆಯುವ ಕಾಲದಲ್ಲಿ ಬರಬೇಕಾಗಿತ್ತೆಂದು ಇತರರು ಹುಡುಕುವುದರಲ್ಲಿ ಅರ್ಥವೇನಿದೆ ಎಂಬ ಪ್ರಶ್ನೆ ಈಗ ಮತ್ತೆ ಎದುರಾಯಿತು. ಹಿಂದೊಮ್ಮೆ ವಿ.ಎಸ್. ನೈಪಾಲ್ ಎಂ.ಕೆ. ಗಾಂಧಿಯವರ ಆತ್ಮಚರಿತ್ರೆ ‘ಮೈ

ಎಕ್ಸ್‌ಪರಿಮೆಂಟ್ ವಿತ್ ಟ್ರೂತ್’

ಆರ್ ‘ದ ಸ್ಟೋರಿ ಆಫ್ ಮೈ ಲೈಫ್’ ಕುರಿತು ಎತ್ತಿದ ಪ್ರಶ್ನೆಗಳ ಸಂದರ್ಭದಲ್ಲೂ ಹೀಗೆನ್ನಿಸಿತ್ತು. ಮೋಹನದಾಸ್ ಕರಮಚಂದ ಗಾಂಧಿ ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಪ್ರತೀ ವಾರ ‘ನವಜೀವನ’ ಪತ್ರಿಕೆಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಆತ್ಮಚರಿತ್ರೆಯಲ್ಲಿ ಸರಳ ಹಾಗೂ ಸತ್ಯದ ಬರವಣಿಗೆಯ ಮಾದರಿಯನ್ನು ಸೃಷ್ಟಿಸಿದರು. ಯಾರಾದರೂ ಬರವಣಿಗೆ ಕಲಿಯಲು ಇದು ಒಳ್ಳೆಯ ಆರಂಭದ ಮಾಡೆಲ್ ಕೂಡ.

ಆದರೆ ಮುಂದೆ ನೈಪಾಲ್‌ಗೆ ಗಾಂಧೀಜಿಯ ಆತ್ಮಚರಿತ್ರೆಯಲ್ಲಿ ಒಂದು ಮುಖ್ಯ ದೋಷ ಕಂಡಿತು: ಎಷ್ಟೋ ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದ ಗಾಂಧಿ ಅಲ್ಲಿನ ಲ್ಯಾಂಡ್‌ಸ್ಕೇಪ್‌ಗಳ ಬಗ್ಗೆ ಒಂದು ಸಾಲನ್ನೂ ಬರೆದಿಲ್ಲ; ಅವರು ಅಷ್ಟೊಂದು ತಮ್ಮೊಳಗೇ ಹೂತು ಹೋಗಿದ್ದರು ಎಂಬರ್ಥದ ಮಾತುಗಳನ್ನು ನೈಪಾಲ್ ತಮ್ಮ ‘ಇಂಡಿಯಾ: ಎ ವೂಂಡೆಡ್ ಸಿವಿಲೈಸೇಶನ್’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ಓದಿದಾಗ, ‘ಅರೆ! ಮೋಹನದಾಸ ಕರಮಚಂದ ಗಾಂಧಿ ತನ್ನನ್ನು ತಾನು ಕಂಡುಕೊಳ್ಳಲು, ತಾನು ಯಾರು ಎಂಬುದನ್ನು ಹುಡುಕಿಕೊಳ್ಳಲು ಈ ಆತ್ಮಚರಿತ್ರೆ ಬರೆದಿದ್ದಾರೆ; ಆದರೆ ಅಂಥ ದೊಡ್ಡ ಲೇಖಕ ನೈಪಾಲ್‌ಗೆ- ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಈ ಕೆರಿಬಿಯನ್ ಲೇಖಕನಿಗೆ- ಕೂಡ ಆತ್ಮಚರಿತ್ರೆಯ ಬರವಣಿಗೆಯ ಸೂಕ್ಷ್ಮಗಳು ಹೊಳೆಯಲಿಲ್ಲವಲ್ಲ!’ ಎಂದು ಸೋಜಿಗವಾಯಿತು. ತನ್ನ ವ್ಯಕ್ತಿತ್ವದ ಇನ್‌ಸ್ಕೇಪ್ ಹುಡುಕುತ್ತಿದ್ದ ಲೇಖಕನಿಗೆ ಹೊರಗಿನ ಲ್ಯಾಂಡ್‌ಸ್ಕೇಪ್ ಅಷ್ಟು ಮುಖ್ಯ ಅನ್ನಿಸದಿದ್ದರೆ ಅದು ಸಹಜವೇ!

ಅದೇನೇ ಇರಲಿ, ಲೇಖಕ, ಲೇಖಕಿಯರು ಬರವಣಿಗೆಯ ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಮಾತಾಡಿದಾಗ ನಾನು ಕೊಡುವ ಸಲಹೆ: ‘ಬರೇ ಪ್ರಾಕ್ಟೀಸಿಗಾದರೂ ಪರವಾಗಿಲ್ಲ; ನಿಮ್ಮ ಅನುಭವದ ವಿವರಗಳನ್ನೇ ಬರೆಯಲು ಪ್ರಯತ್ನಿಸಿ. ಅದನ್ನೆಲ್ಲ ಪ್ರಕಟಿಸದಿದ್ದರೂ ಪರವಾಗಿಲ್ಲ.’

ಯಾಕೆಂದರೆ, ಸ್ವಂತದ ಬಗ್ಗೆ ಬರೆಯತೊಡಗಿದಾಗ ನೆನಪುಗಳು ಉಕ್ಕಿ ಹರಿದು ಬಂದು- ಅಥವಾ ಕವಿ ವರ್ಡ್ಸ್‌ವರ್ತ್ ಹೇಳುವಂತೆ’ ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಆಗಿ- ನಮ್ಮ ಕೈ ಬರವಣಿಗೆಗೆ ಕುದುರಿಕೊಳ್ಳತೊಡಗುತ್ತದೆ. ತುಂಬಾಡಿ ರಾಮಯ್ಯನವರು ಒಂದು ಕಾಲದಲ್ಲಿ ಇದ್ದಕ್ಕಿದ್ದಂತೆ ತಮ್ಮ ಅನುಭವದ ಬಗ್ಗೆ ಗೆಳೆಯರೊಡನೆ ಮಾತಾಡುತ್ತಲೇ ಬರವಣಿಗೆಗೆ ಕುದುರಿಕೊಂಡು ‘ಮಣೆಗಾರ’ ಆತ್ಮಕತೆ ಬರೆದಿದ್ದು ಹೀಗೇ ಎಂಬುದನ್ನು ಗಮನಿಸಿದ್ದೇನೆ. ಆತ್ಮಕತೆ ಪ್ರತೀ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಆದ್ದರಿಂದಲೇ ಬರೆಯಲು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹುಟ್ಟಬಹುದು ಎಂದು ನಾನು ಹೇಳಿದ್ದು. ಗೆಳೆಯರೊಬ್ಬರಿಗೆ ಮರೆವಿನ ಕಾಯಿಲೆ ಬಂದಾಗ

ನಾನು ಅವರಿಗೆ ಕೊಟ್ಟ ಸಲಹೆ ಕೂಡ ಇದೇ. ಅವರು ಈ ನಿಟ್ಟಿನಲ್ಲಿ ಒಂಚೂರು ಪ್ರಯತ್ನ ಮಾಡಿದಾಗ ಅವರ ನೆನಪು ಅಷ್ಟಿಷ್ಟು ಮರಳಿ ಬಂದದ್ದೂ ಇದೆ.

ಹತ್ತೊಂಭತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಕವಿ ಕೋಲರಿಜ್ ತಾನು ನಿತ್ಯ ಓದಿದ್ದನ್ನು, ಯೋಚಿಸಿದ್ದನ್ನು ಬರೆದಿಡುತ್ತಿದ್ದ. ಇಂಥ ಜರ್ನಲ್ ಬರವಣಿಗೆ ಪಶ್ಚಿಮದ ಲೇಖಕರಲ್ಲಿ ತೀರಾ ಸಾಮಾನ್ಯ. ಇದು ‘ಸ್ವಂತ’ದ ಬರವಣಿಗೆಯಾದರೂ ತೀರಾ ಖಾಸಗಿ ಅಲ್ಲ. ಬರೆಯುವ ಅಸಲಿ ಚಡಪಡಿಕೆ

ಉಳ್ಳವರು ಇಂಥ ಜರ್ನಲ್ಲುಗಳಲ್ಲಿ ತಾವು ಕಂಡ, ಓದಿದ, ಕೇಳಿದ, ಎಲ್ಲದರ ಬಗೆಗೂ ತಮ್ಮ ಸ್ಪಂದನವನ್ನು ದಾಖಲಿಸುವುದು ಅವರವರ ಮಾತು, ಬರಹ, ಟೀಚಿಂಗ್, ಚರ್ಚೆ, ಪತ್ರಿಕೋದ್ಯಮ, ಭಾಷಣ ಹಾಗೂ ನಿರಂತರ ಬೌದ್ಧಿಕ ಬೆಳವಣಿಗೆ... ಎಲ್ಲದಕ್ಕೂ ನೆರವಾಗಬಲ್ಲದು.

ಆದರೆ ನಿತ್ಯ ತಾವು ಹೋದಲ್ಲೆಲ್ಲ ತೆಗೆದುಕೊಂಡ ಸೆಲ್ಫಿಗಳನ್ನು,

ಫೋಟೊ ಹಾಕಿಕೊಂಡು, ಅದನ್ನೇ ಬಣ್ಣಿಸಿ ಕೊಂಡು, ಅದಕ್ಕೆ ಬರುವ ಲೈಕುಗಳನ್ನೇ ಮತ್ತೆ ಮತ್ತೆ ನೋಡಿಕೊಳ್ಳುವ ಕ್ಷಿಪ್ರ ಬರವಣಿಗೆಯಿಂದ ಬರೆವ ಕಲೆ ದಕ್ಕುವುದು ಕಷ್ಟ! ಆತ್ಮಗೀತಕ್ಕೂ ಮುಖಗೀತಕ್ಕೂ ಎಷ್ಷೊಂದು ವ್ಯತ್ಯಾಸ!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X