ಹೋಮದ ಹೊಗೆಯಲ್ಲಿ ಬಡವರ ಮುಖಗಳು

ನಾವೆಲ್ಲ ಹೈಸ್ಕೂಲ್ ಬಿಟ್ಟು ಕಾಲೇಜಿಗೆ ಹೊರಡುತ್ತಿದ್ದ ಕಾಲದಲ್ಲಿ ಅಬ್ರಹಾಂ ಕೊವೂರ್ ಎಂಬ ಹೆಸರು ನಮ್ಮ ಕಿವಿಯ ಮೇಲೆ ಬೀಳತೊಡಗಿತ್ತು. ಕೊಂಚ ಕಣ್ಣು ಬಿಟ್ಟ ಮೇಲೆ ಪ್ರೊಫೆಸರ್ ಅಬ್ರಹಾಂ ಕೊವೂರ್ ಶ್ರೀಲಂಕಾದ ಖ್ಯಾತ ವಿಚಾರವಾದಿ ಎಂಬುದು ತಿಳಿಯಿತು. ಅವರನ್ನು ಸಮಾಜವಾದಿ ಯುವಜನಸಭಾದ ನಾಯಕ ಎಂ.ಡಿ. ನಂಜುಡಸ್ವಾಮಿ ಕರ್ನಾಟಕಕ್ಕೂ ಆಹ್ವಾನಿಸಿದರು. ವಿಚಾರವಾದ, ವೈಚಾರಿಕತೆಗಳನ್ನು ಹಬ್ಬಿಸುತ್ತಾ, ಪವಾಡ ಪುರುಷರ ಮೋಸಗಳನ್ನು ಬಯಲು ಮಾಡುತ್ತಿದ್ದ ಕೊವೂರರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಎಂ.ಡಿ.ಎನ್. ಹೊಸ ತಲೆಮಾರಿನ ಹುಡುಗರನ್ನು ವಿಚಾರವಂತರನ್ನಾಗಿ ಮಾಡುತ್ತಿದ್ದರು. ಅವುಗಳಲ್ಲಿ ಭಾಗಿಯಾಗುತ್ತಿದ್ದ ಕವಿ ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಥರದವರು ಈ ಕುರಿತು ಮುಂದೆ ನಮ್ಮಂಥವರಿಗೆ ಹೇಳುತ್ತಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಎಚ್. ನರಸಿಂಹಯ್ಯ ನವರು ಕರ್ನಾಟಕದಲ್ಲಿ ಅಬ್ರಹಾಂ ಕೊವೂರರ ಭಾಷಣಗಳನ್ನು, ಪವಾಡ ಬಯಲು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ತೇಜಸ್ವಿ, ಲಂಕೇಶ್ ಮುಂತಾದವರ ವೈಚಾರಿಕ ಪ್ರಜ್ಞೆ ಕೂಡ ಈ ಕಾಲದ ಈ ಚಟುವಟಿಕೆಗಳಲ್ಲಿ ರೂಪುಗೊಂಡಿತು. ಈ ವೈಚಾರಿಕ ಪರಂಪರೆಯನ್ನು ಬೆಳೆಸಿದ ಕೆ. ರಾಮದಾಸ್, ಬರಗೂರು ರಾಮಚಂದ್ರಪ್ಪ, ಬಿ.ವಿ.ವೀರಭದ್ರಪ್ಪ, ಶ್ರೀಕಂಠ
ಕೂಡಿಗೆ, ಎಸ್. ಆರ್. ಹಿರೇಮಠ್ ಥರದ ಸಾವಿರಾರು ಮೇಷ್ಟರು ಕರ್ನಾಟಕದಲ್ಲಿದ್ದರು; ಈಗಲೂ ಅಂಥವರು ಇದ್ದಾರೆ. ಇಂಥ ನೂರಾರು ಹೆಸರುಗಳನ್ನು ನೀವು ನೆನಪಿಸಿಕೊಳ್ಳಬಹುದು. ದೂರದ ಸಣ್ಣ ಪುಟ್ಟ ಊರುಗಳಲ್ಲಿದ್ದ ನಮ್ಮಂಥ ಸಾವಿರಾರು ಹುಡುಗರು ಇದೆಲ್ಲದರಿಂದ ಸ್ಫೂರ್ತಿಗೊಂಡು ತಕ್ಕ ಮಟ್ಟಿನ ವಿಚಾರವಂತರೂ, ಲೇಖಕರೂ ಆದದ್ದು ಕೂಡ ಕರ್ನಾಟಕದಲ್ಲಿ ನಡೆಯುತ್ತಾ ಬಂದಿದೆ.
ಅಬ್ರಹಾಂ ಕೊವೂರ್ ಐವತ್ತು ವರ್ಷಗಳ ಕೆಳಗೆ ಜ್ಯೋತಿಷಿಗಳಿಗೆ ಹಾಕಿದ ಒಂದು ಸವಾಲು ಆಗ ಎಲ್ಲೆಡೆ ವೈಚಾರಿಕ ಕಂಪನವನ್ನೆಬ್ಬಿಸಿತು:
ನಾವು ಒದಗಿಸುವ ಜಾತಕ ಅಥವಾ ಹಸ್ತರೇಖೆಯ ಮುದ್ರಿತ ಪ್ರತಿಯ ಆಧಾರದ ಮೇಲೆ ಜ್ಯೋತಿಷಿಗಳು ಎರಡು ಪ್ರಶ್ನೆಗಳಿಗೆ ಖಚಿತವಾದ ಉತ್ತರ ನೀಡಬೇಕು:
1.ಈ ವ್ಯಕ್ತಿ ಗಂಡೋ, ಹೆಣ್ಣೋ?
2.ಈ ವ್ಯಕ್ತಿ ಬದುಕಿದ್ದಾರೋ? ತೀರಿಕೊಂಡಿದ್ದಾರೋ?
ಈ ಅಂಶಗಳನ್ನು ನಿರ್ಣಯಿಸಿ ಹೇಳಲು ಜ್ಯೋತಿಷಿಗಳಿಗೆ ಹತ್ತು ಜಾತಕಗಳು ಹಾಗೂ ಹತ್ತು ಹಸ್ತರೇಖೆಗಳ ಮುದ್ರಿತ ಪ್ರತಿಗಳನ್ನು ಒದಗಿಸಲಾಗುವುದು. ಇವುಗಳ ಜೊತೆಗೆ ಕೆಳಕಂಡ ವಿವರಗಳ ಆಧಾರಗಳನ್ನು ಕೂಡ ಒದಗಿಸಲಾಗುವುದು:
1. ಮಗು ಹುಟ್ಟಿದ ಖಚಿತ ನಿಮಿಷ.
2.ಮಗು ಹುಟ್ಟಿದ ಸ್ಥಳ ಹಾಗೂ ಹುಟ್ಟಿದ ಸರಿಯಾದ ದಿಕ್ಕುಗಳ ವಿವರಗಳನ್ನು ಒದಗಿಸಲಾಗುವುದು.
ಈ ಸವಾಲನ್ನು ಸ್ವೀಕರಿಸಿ ಸರಿಯಾದ ಉತ್ತರ ಹೇಳಿದವರಿಗೆ 1970ರ ದಶಕದಲ್ಲಿ ಕೊವೂರ್ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು. ಅಂದಿನ ಒಂದು ಲಕ್ಷ ರೂಪಾಯಿ ಇಂದಿನ ಎಷ್ಟು ಲಕ್ಷ ರೂಪಾಯಿಗೆ ಸಮ ಎಂಬುದನ್ನು ಅರ್ಥಶಾಸ್ತ್ರಜ್ಞರು ಲೆಕ್ಕ ಹಾಕಿ ಹೇಳಬೇಕು. ಕೊವೂರ್ ಈ ಬಹುಮಾನ ಘೋಷಿಸಿದಾಗ ಜ್ಯೋತಿಷಿಗಳಿಗೆ ಕೆಲವು ರಿಯಾಯಿತಿಗಳನ್ನೂ ಕೊಟ್ಟರು: ಈ ಬಹುಮಾನ ಪಡೆಯಲು ಜ್ಯೋತಿಷಿಗಳು ಸದರಿ ವ್ಯಕ್ತಿಗಳ ಭವಿಷ್ಯ ಕುರಿತು ಹೇಳಬೇಕಾಗಿಲ್ಲ; ಇವರಿಗೆ ಸಿಗಬಹುದಾದ ಪದವಿ, ಹುದ್ದೆ, ಮುಂದಿನ ಘಟನಾವಳಿಗಳ ಬಗ್ಗೆ ಏನೂ ಹೇಳಬೇಕಾಗಿಲ್ಲ. ಈ ಹತ್ತೂ ವ್ಯಕ್ತಿಗಳ ಬಗ್ಗೆ ಮೇಲೆ ಕೇಳಿದ ಎರಡು ವಿಷಯಗಳಿಗೆ ಉತ್ತರ ಕೊಟ್ಟರೆ ಸಾಕು.
ಕೊವೂರ್ 1978ರಲ್ಲಿ ತೀರಿಕೊಂಡರು. ಅವರ ಜೀವಿತಕಾಲದಲ್ಲಿ ಹಾಗೂ ಆನಂತರವೂ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಶನ್ ಈ ಸವಾಲನ್ನು, ಬಹುಮಾನವನ್ನು ಇವತ್ತಿಗೂ ಹಾಗೇ ಮುಂದುವರಿಸಿದೆ. ಇನ್ನೂ ಯಾರೂ ಬಹುಮಾನ ಪಡೆದಿಲ್ಲ.
ಇದೆಲ್ಲವನ್ನೂ ಕಂಡುಂಡ ಕರ್ನಾಟಕದ ಆ ವೈಚಾರಿಕ ಯಗದಲ್ಲಿ ಮೂಡಿದ ಬಸವಲಿಂಗಪ್ಪನವರು ದಿಟ್ಟ ವಿಚಾರವಾದಿ ರಾಜಕಾರಣಿಯಾಗಿ ಆ ಮಾರ್ಗವನ್ನು ಸಮಾಜದಲ್ಲೂ ಹಬ್ಬಿಸಿದರು. ಕರ್ನಾಟಕದ ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡ, ಕೃಷ್ಣನ್, ಪಂಪಾಪತಿ, ಕೆ.ಎಚ್. ರಂಗನಾಥ್, ಎಂ.ಡಿ. ನಂಜುಂಡಸ್ವಾಮಿ ಥರದವರು; ವಿಧಾನ ಪರಿಷತ್ತಿನಲ್ಲಿ ಎಚ್. ನರಸಿಂಹಯ್ಯ, ಸಿದ್ಧಲಿಂಗಯ್ಯ, ಎಲ್. ಹನುಮಂತಯ್ಯ ಮೊದಲಾದ ಹಲವರು ಪ್ರಖರ ವೈಚಾರಿಕ ವಿಷಯಗಳನ್ನು ಮಂಡಿಸಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯನವರು ಕೂಡ ಬಹುತೇಕವಾಗಿ ಸಾರ್ವಜನಿಕ ಜೀವನದಲ್ಲಿ ವೈಚಾರಿಕ ಭಾಷೆಯನ್ನು ಬಳಸುತ್ತಲೇ ಬಂದಿದ್ದಾರೆ. ಇಂಥದೊಂದು ಕರ್ನಾಟಕ ಇರುವುದನ್ನೇ ಮರೆತಂತಿರುವ ಇಂದಿನ ನಾಯಕರಿಗೆ, ಸಾರ್ವಜನಿಕ ವ್ಯಕ್ತಿಗಳಿಗೆ ಇದನ್ನು ಮತ್ತೆ ಗಟ್ಟಿಯಾಗಿ ನೆನಪಿಸುವ ಕಾಲ ಈಗ ಇದ್ದಕ್ಕಿದ್ದಂತೆ ಬಂದಿದೆ:
ಮೊನ್ನೆ ಕರ್ನಾಟಕದ ರಾಜಕಾರಣದಲ್ಲಿ ಕ್ಷಿಪ್ರ ಬದಲಾವಣೆಗಳು ನಡೆದ ದಿನ, ಹೊಸ ಮುಖ್ಯಮಂತ್ರಿಯ ಹೆಸರು ಪ್ರಕಟವಾಗುವ ಮುನ್ನ, ಬಂದ ವರದಿಗಳು ಹೀಗಿದ್ದವು:
1. ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಜಿ. ಪರಮೇಶ್ವರ್ ಹೋಮ-ಹವನ ಮುಗಿಸಿ ಮನೆಯಿಂದ ಹೊರ ಬಂದರು.
2. ಮುಖ್ಯಮಂತ್ರಿ ಪದವಿ ನಿಕ್ಕಿಯಾಗಿದ್ದ ಡಿ. ಕೆ. ಶಿವಕುಮಾರರ ದಿಕ್ಕು ದೆಸೆ ತಿರುಗುವ ಮೊದಲೇ ಅವರ ಪ್ರೈವೇಟ್ ರಾಜಗುರುಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಬಾಗಿಲಿನ ದಿಕ್ಕು, ಕುರ್ಚಿಯ ದಿಕ್ಕುಗಳನ್ನು ಕ್ಷಿಪ್ರವಾಗಿ ತಿರುಗಿಸುತ್ತಿದ್ದರು.
ಡಾ. ಪರಮೇಶ್ವರ್ ಕೃಷಿ ವಿಜ್ಞಾನದಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪಡೆದವರು. ಡಿ.ಕೆ. ಶಿವಕುಮಾರ್ ಪೊಲಿಟಿಕಲ್ ಸೈನ್ಸ್ ಎಂ.ಎ. ಪದವಿ ಪಡೆದವರು ಎಂಬುದು ನೆನಪಾಗುತ್ತದೆ. ಮೈ ತುಂಬ ನಿಂಬೆ ಹಣ್ಣು, ಮಣಿಕಟ್ಟಿನ ತುಂಬ ಬಣ್ಣದ ದಾರಗಳನ್ನು ಕಟ್ಟಿಕೊಂಡವರ ಕುಟುಂಬದ ಮೇಲೆರಗಿದ ಭೀಕರ ‘ದುರಿತಗಳ ಬಲ್ಲುಲಿ’ (ಇದು ಕವಿ ಜನ್ನನ ಬಣ್ಣನೆ) ಹೇಳಿದವರು ಯಾರೂ ಇಲ್ಲ ಎಂಬ ವಾಸ್ತವ ಸತ್ಯ ನಮ್ಮ ಕಣ್ಣ ಮುಂದೇ ಇದೆ. ‘ವಾಸ್ತವ ಸ್ಥಿತಿ’ ಮರೆತು ‘ವಾಸ್ತು ಸ್ಥಿತಿ’ಗೆ ಆತುಕೊಳ್ಳುವವರು ಈ ಸತ್ಯಗಳನ್ನು ಕಣ್ಣು ಬಿಟ್ಟು ನೋಡಬೇಕು.
ಈ ಥರದ ‘ಧರ್ಮಕಾರಣ’ ಕಂಡ ಆಧುನಿಕ ಮನಸ್ಸಿನವರಿಗೆ ‘ಭಯವೇ ಧರ್ಮದ ಮೂಲವಯ್ಯ’ ಎನ್ನಿಸಿದರೆ ಅಚ್ಚರಿಯಲ್ಲ. ಇಂದಿನ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಈ ಬಗೆಯ ಬಹಿರಂಗ ಸಂದೇಶ ಕೊಡುತ್ತಿರುವಾಗ ರಾಜ್ಯದ ಯಾವ್ಯಾವ ಥರದ ಕುರ್ಚಿ ಆಕಾಂಕ್ಷಿಗಳು ಯಾವ್ಯಾವ ಜೋತಿಷ್ಯ, ಹಲ್ಲಿ ಶಕುನ, ಗಿಳಿಶಾಸ್ತ್ರ, ಮಾಟ ಮಂತ್ರಗಳ ಮೊರೆ ಹೋಗುತ್ತಿರಬಹುದು ಎಂಬುದನ್ನು ನೀವೇ ಊಹಿಸಬಹುದು.
ಮೇಲೆ ಕೊಟ್ಟಿರುವ ಬಿಡಿ ಬಿಡಿ ಚಿತ್ರಗಳ ಅರ್ಥಗಳನ್ನು ಈ ಅಂಕಣದ ಓದುಗ ಓದುಗಿಯರಿಗೆ ಬಿಡಿಸಿ ಹೇಳಬೇಕಾಗಿಲ್ಲ.
ಇಂಥ ಕರ್ನಾಟಕದ ಎದುರು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೇವಲ ಏಳೆಂಟು ವರ್ಷಗಳ ಕೆಳಗೆ ಎಂ.ಎ. ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳು ಒಂದು ಸೂರ್ಯಗ್ರಹಣದ ದಿನ ನನ್ನ ಕ್ಲಾಸಿಗೆ ಬಂದಿದ್ದ ಗಳಿಗೆಯನ್ನು ಹೆಮ್ಮೆಯಿಂದ ನೆನೆಯುತ್ತೇನೆ. ಆ ಸಲ ಸೂರ್ಯಗ್ರಹಣದ ದಿನ ಜನ ಹೊರಗೆ ಸುಳಿಯಬಾರದೆಂದು ಕಂದಾಚಾರಿಗಳು ಭಾರೀ ಗಾಳಿ ಸುದ್ದಿ ಹಬ್ಬಿಸಿದ್ದರು. ಇದೇ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಹಲವು ಮೇಷ್ಟ್ರುಗಳು, ಮೇಡಂಗಳು ಕೂಡ ಆವತ್ತು ಹತ್ತು ಗಂಟೆಯ ಸುಮಾರಿಗೆ ಕ್ಯಾಂಪಸ್‌ಗೆ ಕಾಲಿಟ್ಟಿರಲಿಲ್ಲ!
ಇವತ್ತು ಕ್ಲಾಸು ತಪ್ಪಿದರೂ ತಪ್ಪಬಹುದು ಎಂಬ ಒಳಾಸೆಯಿಂದಲೇ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರ್‌ಗೆ ಅಡಿಯಿಟ್ಟ ನನಗೆ ಹುಡುಗ, ಹುಡುಗಿಯರು ಧಡ ಧಡ ಕ್ಲಾಸ್ ರೂಮಿನತ್ತ ಹೋಗುತ್ತಿದ್ದ ದೃಶ್ಯ ಕಂಡು ಬಂತು. ಅವತ್ತು ಕ್ಲಾಸಿಗೆ ಹೋಗಿ ಯಾವ ಪಾಠ ಮಾಡಿದೆ ಎಂಬುದು ಮರೆತು ಹೋಗಿದೆ. ಆದರೆ ಅವತ್ತು ನಿಜಕ್ಕೂ ಹೃದಯ ತುಂಬಿಬಂದು, ‘ನಿಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ ಅಭಿಮಾನ ಎನ್ನಿಸುತ್ತಿದೆ’ ಎಂದು ಆ ಹುಡುಗ, ಹುಡುಗಿಯರಿಗೆ ಬಾಯ್ತುಂಬ ಹೇಳಿದ್ದು ಸ್ಪಷ್ಟವಾಗಿ ನೆನಪಿದೆ. ಆ ಪ್ರಾಮಾಣಿಕ ಮೆಚ್ಚುಗೆ ಅವರ ವೈಚಾರಿಕ ನೋಟವನ್ನು ಇನ್ನಷ್ಟು ಗಟ್ಟಿಗೊಳಿಸಿರಬಹುದು ಎಂದು ನಂಬುವೆ.
ಇದೇ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲವೇ ದಶಕಗಳ ಕೆಳಗೆ ಜಿ.ಎಸ್. ಶಿವರುದ್ರಪ್ಪ, ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಬರಗೂರು ರಾಮಚಂದ್ರಪ್ಪ ಥರದವರು ಪಾಠ ಮಾಡಿದ್ದಕ್ಕೆ ಸಾಕ್ಷಿಯೆಂಬಂತೆ; ಗಂಭೀರವಾದ ಕನ್ನಡ ಸಾಹಿತ್ಯಾಧ್ಯಯನವೇ ಕಲಿಸಿದ ಸ್ಪಷ್ಟ ವೈಚಾರಿಕ ನೋಟಗಳಿಗೆ ಪುರಾವೆಯೆಂಬಂತೆ ಆ ಹೊಸ ಕಾಲದ ಹುಡುಗ, ಹುಡುಗಿಯರ ಅವತ್ತಿನ ನಡೆಯಿತ್ತು. ಇದೇ ಅಧ್ಯಯನ ಕೇಂದ್ರದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಹುಟ್ಟಿನ ಕಾಲದಲ್ಲಿ ನಡೆದ ತೀಕ್ಷ್ಣ ಚರ್ಚೆಗಳು ಸಾಹಿತ್ಯ ಕೃತಿಗಳ ಆಳವಾದ ವಿಶ್ಲೇಷಣೆಗಳು ಎಲ್ಲವೂ ಅಂತರಗಂಗೆಯಂತೆ ಅಲ್ಲಿ ಹರಿಯುತ್ತಲೇ ಇದ್ದಂತಿತ್ತು. ಇದೆಲ್ಲದರ ಫಲವಾಗಿ ಮೂಡಿದ ಹೊಸ ಕಾಲದ ಗ್ರೂಪ್ ಫೋಟೊದಂತೆ ಆವತ್ತಿನ ಕ್ಲಾಸ್ ರೂಂ ಚಿತ್ರ ನನ್ನ ಚಿತ್ತದಲ್ಲಿ ನೆಲೆಸಿ ಹೆಮ್ಮೆ ಮೂಡಿಸುತ್ತಲೇ ಇರುತ್ತದೆ.
ನಾನು ಇವತ್ತಿಗೂ ನಂಬಿಕೆಯಿಟ್ಟಿರುವುದು ಇಂಥ ಹೊಸ ತಲೆಮಾರುಗಳಲ್ಲಿ; ತಮ್ಮದೇ ರೀತಿಯಲ್ಲಿ ಕರ್ನಾಟಕದ ವೈಚಾರಿಕ ಪರಂಪರೆಯನ್ನು ಗಟ್ಟಿಗೊಳಿಸುವ, ಹೆಚ್ಚಿನ ಸ್ವಾರ್ಥವಿಲ್ಲದ ಹುಡುಗ, ಹುಡುಗಿಯರ ತಂಡಗಳಲ್ಲಿ ಹಾಗೂ ಬಿಡಿ ಬಿಡಿ ವ್ಯಕ್ತಿಗಳಲ್ಲಿ. ‘ಹಸಿವು ಮುಕ್ತ ಕರ್ನಾಟಕ’ ದ ಕನಸು ‘ಹವನಯುಕ್ತ ಕರ್ನಾಟಕ’ದ ದುಸ್ವಪ್ನವಾಗದಂತೆ; ಈಗ ರಾಜ್ಯದಲ್ಲಿರುವ ‘ಗ್ಯಾರಂಟಿ’ ‘ಭಾಗ್ಯ’ಗಳ ಬದಲಿಗೆ ನಿಂಬೆಹಣ್ಣು, ಮಣಿಕಟ್ಟಿನ ದಾರಗಳ ಉಚಿತ ಭಾಗ್ಯದತ್ತ ಕರ್ನಾಟಕ ಹೊರಳುವ ಮುನ್ನ ಕನ್ನಡ ಹೊಸ ತಲೆಮಾರು ಖಚಿತ ದನಿ ಎತ್ತತೊಡಗಿದೆ. ಹೋಮ-ಹವನಗಳು ಎಬ್ಬಿಸುವ ಹೊಗೆಯಲ್ಲಿ ಬಡವರ, ನೊಂದವರ ಮುಖಗಳು ಕಣ್ಮರೆಯಾಗುತ್ತವೆ ಎಂಬ ಸರಳ ಸತ್ಯ ಈ ಹುಡುಗ ಹುಡುಗಿಯರಿಂದಲಾದರೂ ನಮ್ಮ ನಾಯಕರ ಮಬ್ಬುಗಣ್ಣುಗಳಿಗೆ ಕಾಣುವಂತಾಗಲಿ.






