Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು

ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್22 Dec 2025 11:40 AM IST
share
ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು

ನಾವು ನಿಜಕ್ಕೂ ಅಂಟಿಕೊಂಡ ಸ್ನೇಹಿತರಾದ ಮೇಲೆ, ಅಲ್ಲಿ ಎಲ್ಲವನ್ನೂ ಹೇಳುವ ಅವಕಾಶವಿರಬೇಕು; ಅಲ್ಲಿ ಹೆಚ್ಚಿನ ಸುಳ್ಳಿಗೆ ಅವಕಾಶವಿರಬಾರದು. ಈಕೆ ಮಹಿಳೆಯೆಂದಾಗಲಿ ಅಥವಾ ನಮ್ಮ ಕಡೆಯವರೆಂದಾಗಲಿ, ನಮ್ಮ ಜಾತಿಯವರೆಂದಾಗಲಿ, ದುರ್ಬಲರೆಂದಾಗಲೀ ಮುಖಸ್ತುತಿ ಮಾಡಬಾರದು. ಒಂದು ವಿಚಾರದಲ್ಲಿ ನಮ್ಮನ್ನು ಒಪ್ಪಲಿಲ್ಲವೆಂದ ಮಾತ್ರಕ್ಕೆ ಅವರನ್ನು ದ್ವೇಷಿಸಬಾರದು. ಅಲ್ಲಿ ಮೆಚ್ಚುಗೆ, ಟೀಕೆಗಳೆರಡೂ ಸಹಜವಾಗಿರಬೇಕು.

ಮೊನ್ನೆ ಬೆಂಗಳೂರಿನಲ್ಲಿ ಗೆಳೆಯ, ಖ್ಯಾತ ರಂಗ ನಿರ್ದೇಶಕ, ನಟರಾಜ್ ಹೊನ್ನವಳ್ಳಿ ಯವರಿಗೆ ಸಿ.ಜಿ.ಕೆ. ಪ್ರಶಸ್ತಿ ಕೊಡುವ ಸಭೆಯಲ್ಲಿ ಮಾತಾಡುವ ಸಂದರ್ಭ ಎದುರಾಯಿತು. ಗೆಳೆಯನ ಸಾಧನೆಯ ಹಾದಿಯನ್ನು ಹಿಂದಿರುಗಿ ನೋಡುತ್ತಾ, ಮಾತಾಡಲೆತ್ನಿಸಿದೆ. ಅದನ್ನೆಲ್ಲ ಇಲ್ಲಿ ಹೇಳದೆ, ನನ್ನ ಹಾಗೂ ಅವರ ಮೂವತ್ತೈದು ವರ್ಷದ ಸ್ನೇಹದ ಅನುಭವದ ಮೂಲಕ ‘ಸ್ನೇಹ’ ಎಂಬ ಜೀವಧಾರಕ ಮೌಲ್ಯದ ಬಗ್ಗೆ ಕೆಲವು ಅನ್ನಿಸಿಕೆಗಳನ್ನು ಇಲ್ಲಿ ಕೊಡಲೆತ್ನಿಸುವೆ.

ಗೆಳೆಯ-ಕವಿ ಎಜ್ರಾಪೌಂಡ್ ತೀರಿಕೊಂಡಾಗ ಅವನ ಸಮಕಾಲೀನ ಇಂಗ್ಲಿಷ್ ಕವಿ ಎಲಿಯಟ್ ಬರೆದ ಮಾತು: ‘ಇನ್ನು ನನ್ನ ಜೋಕುಗಳನ್ನು ಯಾರ ಬಳಿ ಹಂಚಿಕೊಳ್ಳಲಿ?’ ಹಿಂದೊಮ್ಮೆ ಲಂಕೇಶರು ನೆನಸಿಕೊಂಡಿದ್ದ ಈ ಮಾತು ಮೂವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ನನ್ನಲ್ಲಿ ಉಳಿದುಬಿಟ್ಟಿದೆ.

ಎಲಿಯಟ್ ಉದ್ಗಾರದ ಅರ್ಥವೇನು? ಜೋಕುಗಳನ್ನು ಯಾರ ಬಳಿ ಬೇಕಾದರೂ ಹಂಚಿಕೊಳ್ಳಲು ಸಾಧ್ಯವಿಲ್ಲವೆ? ಖಾಸಗಿ ಜೋಕುಗಳು, ಅದರಲ್ಲೂ ಜಾಣ ಲಿಟರರಿ ಜೋಕುಗಳು, ಸರ್ದಾರ್ಜಿ ಜೋಕುಗಳ ಥರ ಸಾರ್ವತ್ರಿಕವಲ್ಲ. ಅವು ಗೆಳೆಯ, ಗೆಳತಿಯರ ನಡುವೆ, ನಮ್ಮ ಸಂವೇದನೆ ಹಂಚಿಕೊಂಡವರ ಜೊತೆಯಷ್ಟೇ ಹೆಚ್ಚಿನ ಪ್ರತಿಧ್ವನಿ ಪಡೆಯುವುದು. ಇದನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಸಾಹಿತ್ಯವಲಯದ ಜೋಕುಗಳು ಅಥವಾ ಪತ್ರಿಕೋದ್ಯಮದ ವಲಯದ ಜೋಕುಗಳಲ್ಲಿ ಬರುವ ಪಾತ್ರಗಳು ಕೇಳುಗರಿಗೆ ಪರಿಚಯವಿದ್ದರೆ ಮಾತ್ರ ಅವು ಕ್ಲಿಕ್ಕಾಗುತ್ತವೆ ಎಂಬುದನ್ನು ಕಂಡಿದ್ದೇನೆ. ಸಾಹಿತ್ಯ ವಲಯದ ನನ್ನ ಜೋಕುಗಳು ನನ್ನ ಇಂಜಿನಿಯರ್ ಗೆಳೆಯರ ವಲಯದಲ್ಲಿ ಕ್ಲಿಕ್ಕಾಗುವುದಿಲ್ಲ. ಅವರಿಗೆ ಕಂಬಾರ ಯಾರು, ಶ್ರೀಕೃಷ್ಣ ಆಲನಹಳ್ಳಿ ಯಾರು ಎಂದು ಕ್ಲಾಸ್ ಮಾಡಿ, ನಂತರ ಆ ಜೋಕುಗಳನ್ನು ಸಿಡಿಸುವುದು ಕಷ್ಟ! ಅಷ್ಟೇ ಅಲ್ಲ, ಮಾತಾಡುತ್ತಿರುವ ಇಬ್ಬರ ನಡುವೆ ಆತ್ಮೀಯತೆ, ಪ್ರೀತಿ ಇದ್ದಾಗ ಮಾತ್ರ ಜೋಕ್ ತಮಾಷೆಯಾಗುವುದು. ‘ಪ್ರೀತಿಯಿಲ್ಲದ ಮೇಲೆ ಜೋಕಿಗೆ ನಗೆ ಅರಳೀತು ಹೇಗೆ?!’ (‘ಪ್ರೀತಿಯಿಲ್ಲದೆ ಹೂವು ಅರಳೀತು ಹೇಗೆ?’ ಎಂದ ರಾಷ್ಟ್ರಕವಿಗಳ ಕ್ಷಮೆ ಕೋರಿ!)

ನೀವು ಗಮನಿಸಿರಬಹುದು: ಪರಸ್ಪರ ಸಂಬಂಧ ಇರುವವರ ನಡುವೆ ಮಾತ್ರ ಅರಿವಿಗೆ ಬರುವ ಖಾಸಗಿ ಅರ್ಥಗಳು, ಧ್ವನ್ಯಾರ್ಥಗಳು ನೀವು ಜೋಕುಗಳನ್ನು ಸಿಡಿಸುವಾಗಲೂ ಇರುತ್ತವೆ. ಈ ಸಂಭಾಷಣೆಗಳಲ್ಲಿ ‘ಅವಳು’ ಅಂದರೆ ಇಬ್ಬರಿಗೂ ಗೊತ್ತಿರುವ ‘ಅವಳು’ ಮಾತ್ರ! ‘ಇದು ಕೊರಗರ ಸಂಸ್ಕೃತಿ’ ಎಂದು ಲೇಖಕನೊಬ್ಬ ನಗುತ್ತಾನೆಂದಿಟ್ಟುಕೊಳ್ಳಿ; ಅದು ‘ಆ ಅಕಾಡೆಮಿ ಮೆಂಬರ್‌ಶಿಪ್ ಸಿಗಲಿಲ್ಲ’, ‘ನನಗೆ ಈ ಅವಾರ್ಡ್ ಸಿಗಲಿಲ್ಲ’, ‘ಆ ಸೆಮಿನಾರಿಗೆ ನನ್ನ ಕರೆದಿಲ್ಲ’ ಎಂದು ‘ಕೊರಗುವವರ’ ಬಗೆಗಿನ ಬೆಂಗಳೂರ್ ಜೋಕ್! ಈ ಜೋಕ್ ಈ ವಲಯದವರಿಗೆ ತಕ್ಷಣ ಅರ್ಥವಾಗುತ್ತದೆ! ಈ ಅಂಕಣಕಾರನ ಅದೃಷ್ಟ! ಸಂಧ್ಯಾಸ್ನೇಹಿತರ ಜೊತೆ ಈ ಪುಲಕ ಆಗಾಗ ಚಿಮ್ಮುತ್ತಲೇ ಇರುತ್ತದೆ. ನನ್ನಂಥವರ ಮಾರನೆಯ ದಿನದ ಲವಲವಿಕೆಯ ಮೂಲ ಇಂಥ ಸಂಜೆಗಳಲ್ಲೂ ಇರಬಲ್ಲದು.

ಹೀಗೆಂದುಕೊಳ್ಳುತ್ತಾ, ಖಲೀಲ್ ಗಿಬ್ರಾನ್ ಗೆಳೆತನ ಕುರಿತು ಬರೆದ ‘ಆನ್ ಫ್ರೆಂಡ್‌ಶಿಪ್’ ಎಂಬ ಕವಿತೆಯತ್ತ ತಿರುಗಿದೆ. ಗಿಬ್ರಾನ್ ಕವಿತೆಯ ಕೆಲ ಭಾಗಗಳ ಮೊದಲ ನೋಟದ ಸರಳಾನುವಾದವನ್ನು ಇಲ್ಲಿ ಕೊಡುತ್ತಿರುವೆ:

‘ಗೆಳೆತನ ಕುರಿತು ಮಾತಾಡಿ’ ಎಂದು ತರುಣನೊಬ್ಬ ಕೇಳಿದ.

ಅದಕ್ಕೆ ಇವನು ಹೇಳಿದ:

‘ನಿನ್ನ ಗೆಳೆಯ ನಿನ್ನ ಬೇಕು ಬೇಡಗಳನ್ನು ಪೂರೈಸುವವನು.

ನೀನು ಪ್ರೀತಿಯಿಂದ ಬಿತ್ತುವ ಹೊಲ ಗದ್ದೆಗಳಲ್ಲಿ ಕೃತಜ್ಞತೆಯಿಂದ ಕೊಯ್ಯುವ ಕೊಯಿಲು ಅವನು.

ಅವನು ನಿನ್ನ ನೆಮ್ಮದಿಯ ತಾಣ, ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿ.

ಯಾಕೆ ಗೊತ್ತ? ನೀನು ಹಸಿದು ಅವನಲ್ಲಿಗೆ ಬರುವೆ;

ನೆಮ್ಮದಿಗಾಗಿ ಅವನ ಹುಡುಕಿ ಬರುವೆ.

ಹೀಗೆ ‘ಆನ್ ಫ್ರೆಂಡ್‌ಶಿಪ್’ ಕವಿತೆಯ ಮೊದಲ ಓದಿನಲ್ಲಿ ತಟ್ಟಿದ ಪ್ರತಿಮೆಗಳ ತಕ್ಷಣದ ಅರ್ಥಗಳನ್ನು ಕನ್ನಡಿಸುತ್ತಾ, ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂದು ಉಸುರಿದ ಕವಿ ಬೇಂದ್ರೆಯನ್ನು ನೆನೆಯುತ್ತಾ, ಆ ಕವಿತೆಯ ಸಾಲುಗಳಿಗೆ ಮತ್ತೆ ವಾಪಸಾದೆ. ‘ಈ ಕವಿತೆ ಆರಂಭದಲ್ಲಿ ಗೆಳೆತನ ಕುರಿತು ಪ್ರಶ್ನೆ ಕೇಳಿದ ತರುಣನ ದೃಷ್ಟಿಯಲ್ಲಿ ಗೆಳೆತನ ಎಂದರೇನೆಂಬುದನ್ನು ವಿವರಿಸುತ್ತದೆ; ಮುಂದಿನ ಭಾಗಗಳಲ್ಲಿ ಕವಿಯ ದರ್ಶನ ಗೆಳೆತನದ ಅರ್ಥವನ್ನು ವಿಸ್ತರಿಸುತ್ತದೆ’ ಎಂದು ವಿಶ್ಲೇಷಕರೊಬ್ಬರು ಸೂಚಿಸುತ್ತಾರೆ. ಕವಿತೆಯ ಮುಂದಿನ ಭಾಗ:

ಗೆಳೆಯ ತನ್ನ ಎದೆಯಲ್ಲಿದ್ದುದನ್ನೆಲ್ಲ ಹೇಳಿದಾಗ,

‘ಅದು ಸರಿಯಲ್ಲ’ ಎಂದು ನಿನಗನ್ನಿಸಿದರೆ ನಿನಗೆ ದಿಗಿಲಾಗದು;

‘ಅದು ಸರಿ’ ಎನ್ನಬೇಕೆನಿಸಿದರೆ, ಆ ಮಾತು ನಿನ್ನ ಗಂಟಲಲ್ಲೇ ಉಳಿಯದು.

ಅವನು ಮೌನವಾಗಿದ್ದಾಗ ಅವನೆದೆಯ ಮಾತನ್ನು ಕೇಳಿಸಿಕೊಳ್ಳುವುದನ್ನು ನಿನ್ನೆದೆ ನಿಲ್ಲಿಸದು.

ಯಾಕೆ ಗೊತ್ತಾ? ಗೆಳೆತನದಲ್ಲಿ ಮಾತಿಲ್ಲದೆ ಎಲ್ಲ ಯೋಚನೆ,

ಎಲ್ಲ ಬಯಕೆ, ಎಲ್ಲ ನಿರೀಕ್ಷೆಗಳು ಹುಟ್ಟುವುವು, ಪರಸ್ಪರ ತಲುಪುವುವು;

ಆ ಆನಂದವನ್ನು ನೀನು ಬಿಚ್ಚಿ ಹೇಳದಿದ್ದರು ಕೂಡ ಇದೆಲ್ಲ ನಡೆಯುವುದು.

ಗೆಳೆಯ ಹೊರಟಾಗ ನೀನು ಶೋಕಿಸುವುದಿಲ್ಲ ಯಾಕೆ ಗೊತ್ತ? ಅವನಲ್ಲಿ ನೀನು ಹೆಚ್ಚು ಮೆಚ್ಚುವುದೆಲ್ಲ

ಅವನಿಲ್ಲದಿರುವಾಗ ಇನ್ನಷ್ಟು ಒಡೆದು ಕಾಣುವುದು-

ಬೆಟ್ಟ ಹತ್ತುವವನಿಗೆ, ಬಯಲಲ್ಲಿ ನಿಂತಾಗ ಬೆಟ್ಟ ಚೆನ್ನಾಗಿ ಕಾಣುವ ಹಾಗೆ.

ಗೆಳೆತನದಲ್ಲಿ ನಿನ್ನ ಸತ್ವ-ಚೈತನ್ಯಗಳ ಆಳವಾಗಿಸಿಕೊಂಬ ಆಸೆ ಬಿಟ್ಟು ಬೇರಾವ ಉದ್ದೇಶವೂ ನಿನಗಿಲ್ಲದಿರಲಿ.

ನಿನ್ನ ಅತ್ಯುತ್ತಮವೆಲ್ಲ ನಿನ್ನ ಗೆಳೆಯನಿಗಿರಲಿ.

ನಿನ್ನೊಳಗಿನ ಅಲೆಗಳ ಏರಿಳಿತ ಅವನಿಗೆ ಗೊತ್ತಿರಲಿ;

ಜೊತೆಗೆ, ನಿನ್ನೊಳಗಿನ ಪ್ರವಾಹದ ಉಕ್ಕು ಕೂಡ.

ಸಮಯ ಕೊಲ್ಲಲು ನೀ ಹುಡುಕಿಹೊರಡುವ ಗೆಳೆಯ ಅದೆಂಥ ಗೆಳೆಯ?

ನೀ ಬದುಕಲು ಬಯಸುವ ಗಳಿಗೆ, ಗಂಟೆಗಳಿದ್ದಾಗ ಮಾತ್ರ ಅವನ ಹುಡುಕಿ ಹೊರಡು.

ಯಾಕೆ ಗೊತ್ತ? ಅವನು ನಿನ್ನ ಬೇಕು, ಬೇಡಗಳನ್ನು ತುಂಬುವನು;

ನಿನ್ನ ಖಾಲಿತನವನ್ನಲ್ಲ.

ಗೆಳೆತನದ ಸವಿಯಲ್ಲಿ ನಗುವಿರಲಿ, ಆನಂದ ಕೊಡುಕೊಳ್ಳುವುದಿರಲಿ.

ಯಾಕೆ ಗೊತ್ತ? ಸಣ್ಣಪುಟ್ಟ ತುಣುಕುಗಳ ಇಬ್ಬನಿಯಲ್ಲಿ ಹೃದಯ ತನ್ನ ಬೆಳಗು ಪಡೆಯುವುದು; ಮತ್ತೆ ಚೈತನ್ಯ ಪಡೆಯುವುದು.

1923ರಲ್ಲಿ ಈ ಕವಿತೆ ಬರೆದ ಖಲೀಲ್ ಗಿಬ್ರಾನ್ ಥರದ ದೊಡ್ಡ ಕವಿಗೆ ಅನ್ನಿಸಿದ್ದು ನಮಗೂ ಅಷ್ಟಿಷ್ಟು ಅನ್ನಿಸಿರಬಹುದು. ಈ ಕವಿತೆ ‘ಅವನು’ ಎನ್ನುತ್ತಿರುವಾಗಲೂ, ಇದನ್ನು ‘ಅವಳು; ಎಂದು ಓದುತ್ತಾ ನಿಮ್ಮ ಗೆಳತಿಗೂ ಈ ಕವಿತೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಸ್ವಾತಂತ್ರ್ಯ ಕವಿತೆಯ ಓದಿನಲ್ಲಿ ಇದ್ದೇ ಇದೆ!

ಖಲೀಲ್ ಗಿಬ್ರಾನ್ ಸ್ನೇಹದ ಬಗ್ಗೆ ಬರೆದ ಈ ಕವಿತೆಯನ್ನು ಕನ್ನಡಿಸುತ್ತಿರುವಾಗ, ಹತ್ತು ವರ್ಷಗಳ ಕೆಳಗೆ ತೀರಿಕೊಂಡ ಸಹೋದ್ಯೋಗಿ-ಗೆಳತಿ ವಸು ಮಳಲಿ ಎಲ್ಲರಲ್ಲೂ ಸ್ನೇಹಭಾವ ಮೂಡಿಸುತ್ತಿದ್ದ ಬಗ್ಗೆ ಗೆಳೆಯರು ಮಾತಾಡುತ್ತಿದ್ದುದು ನೆನಪಾಯಿತು. ಆಗಿನಿಂದಲೂ ಅರ್ಥಪೂರ್ಣ ಸ್ನೇಹದ ಕೆಲವು ಆದರ್ಶ ನಿಯಮಗಳು ನನ್ನೆದುರು ಸುಳಿಯುತ್ತಲೇ ಇರುತ್ತವೆ. ಸ್ನೇಹದ ಅಂಥ ಸುಂದರ ಅಲಿಖಿತ ನಿಯಮಗಳ ಸಂಕ್ಷಿಪ್ತ ಪಟ್ಟಿಯನ್ನು ಹಿಂದೊಮ್ಮೆ ಕೊಡಲೆತ್ನಿಸಿದ್ದೆ:

ನಾವು ನಿಜಕ್ಕೂ ಅಂಟಿಕೊಂಡ ಸ್ನೇಹಿತರಾದ ಮೇಲೆ, ಅಲ್ಲಿ ಎಲ್ಲವನ್ನೂ ಹೇಳುವ ಅವಕಾಶವಿರಬೇಕು; ಅಲ್ಲಿ ಹೆಚ್ಚಿನ ಸುಳ್ಳಿಗೆ ಅವಕಾಶವಿರಬಾರದು. ಈಕೆ ಮಹಿಳೆಯೆಂದಾಗಲಿ ಅಥವಾ ನಮ್ಮ ಕಡೆಯವರೆಂದಾಗಲಿ, ನಮ್ಮ ಜಾತಿಯವರೆಂದಾಗಲಿ, ದುರ್ಬಲರೆಂದಾಗಲಿ ಮುಖಸ್ತುತಿ ಮಾಡಬಾರದು. ಒಂದು ವಿಚಾರದಲ್ಲಿ ನಮ್ಮನ್ನು ಒಪ್ಪಲಿಲ್ಲವೆಂದ ಮಾತ್ರಕ್ಕೆ ಅವರನ್ನು ದ್ವೇಷಿಸಬಾರದು. ಅಲ್ಲಿ ಮೆಚ್ಚುಗೆ, ಟೀಕೆಗಳೆರಡೂ ಸಹಜವಾಗಿರಬೇಕು. ‘ಎಲ್ಲ ತತ್ವದೆಲ್ಲೆ ಮೀರಿ’ ಒಂದು ಗೆಳೆತನದಲ್ಲಿ ಭಾಗಿಯಾದ ಇಬ್ಬರೂ ಸೇರಿ ಸತ್ಯ ಹುಡುಕುವ ಕುತೂಹಲ, ಮುಕ್ತತೆ ಬೆಳೆಸಿಕೊಂಡರಂತೂ ಈ ನಂಟಿನ ಫಲ ಇನ್ನಷ್ಟು ಅದ್ಭುತವಾಗಿರಬಲ್ಲದು...

ಹೀಗೇ ಈ ಪಟ್ಟಿಯನ್ನು ನೀವು ಬೆಳೆಸುತ್ತಾ ಹೋಗಬಹುದು.

ಒಂದು ಸಂಬಂಧದಲ್ಲಿ ‘ಎಲ್ಲವೂ ಸೈ’ ಎನ್ನುವ ಸಹನೆಯ, ಮುಕ್ತತೆಯ ಸ್ನೇಹ ವಲಯವೇ ಇಲ್ಲದಿದ್ದರೆ ಈ ಬದುಕು ಎಷ್ಟು ಉಸಿರುಗಟ್ಟಿಸಿರುತ್ತಿತ್ತು ಎಂದು ಚಣ ಊಹಿಸಿಕೊಳ್ಳಿ!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X