Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಶಬ್ದ: ಕವಿ ಸೃಷ್ಟಿಯೋ? ಸಮಾಜ ಸೃಷ್ಟಿಯೋ?

ಶಬ್ದ: ಕವಿ ಸೃಷ್ಟಿಯೋ? ಸಮಾಜ ಸೃಷ್ಟಿಯೋ?

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್30 March 2026 10:05 AM IST
share
ಶಬ್ದ: ಕವಿ ಸೃಷ್ಟಿಯೋ? ಸಮಾಜ ಸೃಷ್ಟಿಯೋ?

ಇದು ಒಮ್ಮೆ ಮೈಸೂರಿನ ದಾರಿಯಲ್ಲಿ ಕವಿ ಚಂದ್ರಶೇಖರ ಕಂಬಾರರು ನನಗೆ ಹೇಳಿದ ಪ್ರಸಂಗ:

ಸಭೆಯೊಂದರಲ್ಲಿ ಮಾತಾಡುತ್ತಿದ್ದ ಶಂಬಾ ಜೋಷಿ ಸಮಾಜ ಶಬ್ದಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಬೇಂದ್ರೆ ಹೇಳಿದರು: ‘ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುವುದಿಲ್ಲ; ಕವಿ ಸೃಷ್ಟಿಸುತ್ತಾನೆ; ಸಮಾಜ ಅದಕ್ಕೆ ಮುದ್ರೆ ಒತ್ತುತ್ತದೆ.’

ಶಂಬಾ: ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುತ್ತದೆ.

ಬೇಂದ್ರೆ: ಇಲ್ಲ ಇಲ್ಲ. ಸಮಾಜದಲ್ಲಿ ‘ಪ್ರಜೆ’ ಅನ್ನೋ ಶಬ್ದ ಒಂದು ಕಡೆ ಬಿದ್ದಿರುತ್ತೆ; ‘ಪ್ರಭುತ್ವ’ ಅನ್ನೋದು ಒಂದು ಕಡೆ ಬಿದ್ದಿರುತ್ತೆ. ಕವಿ ಅವೆರಡನ್ನೂ ಸೇರಿಸಿ ‘ಪ್ರಜಾಪ್ರಭುತ್ವ’ ಅನ್ನೋ ಪದಾನ ಸೃಷ್ಟಿಸುತ್ತಾನೆ.’

ಸಂಸ್ಕೃತಿ ಅಧ್ಯಯನಕಾರ ಶಂಬಾ-ಕವಿ ಬೇಂದ್ರೆ ನಡುವಣ ಈ ಚರ್ಚೆಯಲ್ಲಿರುವ ತಾತ್ವಿಕ ಜಗಳ ನನ್ನೊಳಗೆ ಬಹುಕಾಲದಿಂದ ಉಳಿದಿದೆ. ಕಳೆದ ಮಾರ್ಚ್ 21ರಂದು ‘ವಿಶ್ವ ಕಾವ್ಯ ದಿನ’ದ ಪೋಸ್ಟರುಗಳನ್ನು ಕವಿ, ಕವಯಿತ್ರಿಯರು ಪ್ರಕಟಿಸುತ್ತಿದ್ದಾಗ ಅದು ಮತ್ತೊಮ್ಮೆ ನೆನಪಾಯಿತು.

ಬೇಂದ್ರೆ ಉಲ್ಲೇಖಿಸಿದ ‘ಪ್ರಜಾಪ್ರಭುತ್ವ’ ಪದದ ಹುಟ್ಟನ್ನು ಗಮನಿಸಿ: ಪ್ರಜಾಪ್ರಭುತ್ವದ ಆರಂಭದ ಚರ್ಚೆಗಳು ಸಾವಿರಾರು ವರ್ಷಗಳ ಕೆಳಗೆ ಗ್ರೀಸ್ ಅಥವಾ ರೋಮ್‌ನಲ್ಲಿ ಇದ್ದವು; ಅಥವಾ ಫ್ರಾನ್ಸ್ ದೇಶದ ವರ್ಸೈಲ್ಸ್ ಎಂಬ ಊರಿನಲ್ಲಿ 1789ರಲ್ಲಿ ಒಂದು ದಿನ ಟೆನಿಸ್ ಕೋರ್ಟ್ನಲ್ಲಿ ನಡೆದ ಚರ್ಚೆಗಳು ಡೆಮಾಕ್ರಸಿ ಅಥವಾ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದವು. ಈ ವಿವರಗಳೆಲ್ಲ ಈಗ ಪರಿಚಿತ. ರಾಜಪ್ರಭುತ್ವವನ್ನು, ಧರ್ಮಪ್ರಭುತ್ವವನ್ನು ಕಂಡ ಕವಿಮನಸ್ಸಿನ ಕನಸುಗಾರ ವ್ಯಕ್ತಿಯೊಬ್ಬ ಜನರೇ ಆಳುವ ‘ಪ್ರಜಾಪ್ರಭುತ್ವ’ ಪದವನ್ನು ಸೃಷ್ಟಿಸಿರಬಹುದು, ಉಳಿದವರು ಅದನ್ನು ಒಪ್ಪಿರಬಹುದು; ಅಥವಾ ಬುದ್ಧಿವಂತರು ಮಾತುಮಾತಾಡುತ್ತಾ ‘ಡೆಮಾಕ್ರಸಿ’ ಎಂಬ ಪದ ಸೃಷ್ಟಿಯಾಗಿರಬಹುದು; ಡೆಮಾಕ್ರಸಿಯಲ್ಲಿ ದುಷ್ಟರ ದರ್ಬಾರು ಸೃಷ್ಟಿಯಾದಾಗ ಅದೇ ಪಶ್ಚಿಮ ‘ಡೆಮನೋಕ್ರಸಿ’ ಅಥವಾ ‘ರಾಕ್ಷಸ ಪ್ರಭುತ್ವ’ ಎಂಬ ಪದವನ್ನು ಸೃಷ್ಟಿಸಿರಬಹುದು!

ಕವಿಯ ‘ನವಪದ ನಿರ್ಮಾಣ ಶಕ್ತಿ’ ಎಂದರೆ ಇದೇ! ನವಪದ ನಿರ್ಮಾಣ ಎಂದರೆ ನವತತ್ವ ನಿರ್ಮಾಣ ಕೂಡ. ಹಿಂದೊಮ್ಮೆ, ಕಿ.ರಂ. ನಾಗರಾಜರು ಕವಿಯ ನವಪದ ನಿರ್ಮಾಣ ಶಕ್ತಿಯ ಬಗ್ಗೆ ಮೈದುಂಬಿ ಮಾತಾಡಿದ್ದು ನೆನಪಾಗುತ್ತದೆ: ‘ಈಗ ನೋಡಿ! ಪ್ರೇಮ ಅನ್ನೋ ಪದ ಇರುತ್ತೆ! ಕಾಶ್ಮೀರ ಅನ್ನೋ ಪದ ಇರುತ್ತೆ. ಇವೆರಡೂ ಸೇರಿ ಕುವೆಂಪುಗೆ ‘ಪ್ರೇಮ ಕಾಶ್ಮೀರ’ ಅನ್ನೋ ಶಬ್ದ ಹೊಳೆಯುತ್ತೆ. ‘ಪಕ್ಷಿ’ ಅನ್ನೋ ಪದ ಇರುತ್ತೆ; ‘ಕಾಶಿ’ ಅನ್ನೋ ಪದ ಇರುತ್ತೆ; ಕುವೆಂಪು ಪದ್ಯದಲ್ಲಿ ಅದು ‘ಪಕ್ಷಿಕಾಶಿ’ ಆಗುತ್ತೆ!’

ಅಂದರೆ, ಸಮಾಜದಲ್ಲಿ ತಂತಮ್ಮ ಕೆಲಸ ಮಾಡುತ್ತಿದ್ದ ಪದಗಳು ಕವಿಯ ನವಪದ ನಿರ್ಮಾಣ ಪ್ರತಿಭೆಯಲ್ಲಿ ‘ಪ್ರೇಮ ಕಾಶ್ಮೀರ’ ಅಥವಾ ‘ಪಕ್ಷಿಕಾಶಿ’ ಆಗಿ ಹೊಸ ರೂಪಕಗಳಾಗುತ್ತವೆ; ಆಗ ಬೇರೆ ಬೇರೆ ಅರ್ಥಗಳು, ಚಿತ್ರಗಳು, ದರ್ಶನಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಇದನ್ನೆಲ್ಲ ಬರೆಯುವಾಗ, ಬೇಂದ್ರೆ ಶಂಬಾಗೆ ಹೇಳಿದ ಮಾತನ್ನೇ ಬದಲಾಯಿಸಿ ಹೇಳಬೇಕೆನ್ನಿತ್ತದೆ: ಕವಿತೆ ಬಿದ್ದಿರುತ್ತೆ; ಓದುವವರು ಅದಕ್ಕೆ ಹೊಸ ಅರ್ಥ ಕೊಡುತ್ತಾರೆ. ಆಗ ಕವಿತೆಗೆ ರೆಕ್ಕೆ ಮೂಡಿ ಹಾರುತ್ತದೆ!

ಕೆಲವೊಮ್ಮ ‘ಈಗ ಕವಿತೆ ಓದುವವರೇ ಇಲ್ಲ’ ಎಂದು ಕೆಲವು ಕವಿಗಳು ಹಲುಬುವುದು ನೆನಪಾಗುತ್ತದೆ. ಆದರೆ ಕವಿತೆಗಳನ್ನು ಯಾರು ಓದಲಿ ಬಿಡಲಿ, ಕರ್ನಾಟಕದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಮೇಡಂ, ಮೇಷ್ಟರುಗಳು ಕೊನೇ ಪಕ್ಷ ಪಠ್ಯಪುಸ್ತಕಗಳಲ್ಲಿರುವ ಕವಿತೆಗಳನ್ನಾದರೂ ಓದುತ್ತಲೇ ಇರುತ್ತಾರಲ್ಲವೆ? ನಿತ್ಯ ಹಾಡು ಕೇಳುವ ಕೋಟ್ಯಂತರ ಜನ ಒಂದಲ್ಲ ಒಂದು ಬಗೆಯ ಕಾವ್ಯಕ್ಕೆ ಕಿವಿ ಕೊಟ್ಟೇ ಇರುತ್ತಾರೆ. ಪಾಪ್ಯುಲರ್ ಮ್ಯೂಸಿಕ್, ರ್ಯಾಪ್ ಮ್ಯೂಸಿಕ್, ಸಿನೆಮಾ ಹಾಡು ಯಾವುದೇ ಇರಲಿ ಅಲ್ಲೆಲ್ಲ ಕಾವ್ಯದ ಒಂದು ಎಳೆ- ಅದು ಕ್ಲೀಷೆಯಾದರೂ ಸರಿ, ಸವಕಲಾದರೂ ಸರಿ- ಇದ್ದೇ ಇರುತ್ತದೆ; ಅಂಥ ರಚನೆಗಳಲ್ಲಿ ಕೂಡ ಕಾವ್ಯ ಪ್ರತಿಮೆಗಳು ಜನರ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ.

ಅಷ್ಟೇ ಯಾಕೆ, ನಿಮ್ಮ ಸುತ್ತ ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಹಲವು ಮಟ್ಟಗಳಲ್ಲಿ ನಡೆಯುವ ಹಲ ಬಗೆಯ ಸಾಹಿತ್ಯ ಸಮ್ಮೇಳನಗಳಲ್ಲಿ ಹತ್ತಾರು ಹೊಸ ಹುಡುಗ ಹುಡುಗಿಯರು ಒಂದಲ್ಲ ಒಂದು ಥರದ ಕವಿತೆಯನ್ನು ಅಥವಾ ಕವಿತೆಯಂಥ ರಚನೆಗಳನ್ನು ಉತ್ಸಾಹದಿಂದ ಓದುತ್ತಲೇ ಇರುತ್ತಾರೆ ತಾನೆ? ಇವರ ನಡುವಿನಿಂದಲೇ ಒಬ್ಬನೋ ಒಬ್ಬಳೋ ಬರಬರುತ್ತಾ ಕಾವ್ಯವನ್ನು ಗಟ್ಟಿಯಾಗಿ ಹಿಡಿಯುತ್ತಾರೆ; ಇಂಥವರಿಗೆ ಸಾವಿರಾರು ವರ್ಷಗಳ ಕನ್ನಡ ಕಾವ್ಯ ಪರಂಪರೆಯ ಜೊತೆಗಿನ ತಕ್ಕಮಟ್ಟಿನ ಒಡನಾಟ ದಕ್ಕಿದರೆ ಕನ್ನಡ ಭಾಷೆಯ ಸಹಜ ಲಯಗಳು ಅವರೊಳಗೆ ನುಡಿಯತೊಡಗುತ್ತವೆ. ಒಂದು ಭಾಷಾಪರಂಪರೆಯ ಸಹಜ ಲಯಗಳು ದಕ್ಕದಿದ್ದರೆ ಯಾರೂ ದೊಡ್ಡ ಕವಿಯಾಗುವುದಿಲ್ಲ. ಈ ನಂಟು ಬೆಳೆಸಿಕೊಂಡು, ಸಾವಿರಾರು ಸಾಲು ಗಳನ್ನು ಬರೆದು, ಅಳಿಸಿ, ಬೇಸರವಾಗಿ, ಬಿಸುಟೆದ್ದು...ಎಲ್ಲೋ ಒಂದು ಹೊಸ ಪ್ರತಿಮೆ ಹುಟ್ಟುತ್ತದೆ. ಹೊಸ ಸತ್ಯ ಕಂಡರೆ ತಾನೇ ಹೊಸ ಪ್ರತಿಮೆಯ ಹುಟ್ಟು! ಈ ಪ್ರಕ್ರಿಯೆಯನ್ನೂ ಕವಿಯೇ ಹೇಳಿದ್ದು:

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರುವ ಚಿನ್ನದದಿರು.

ಹೊರ ತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ

ಇನ್ನಾದರೂ ಕೊಂಚ ಕಲಿಯಬೇಕು;

ಹೊನ್ನ ಕಾಯಿಸಿ, ಹಿಡಿದು ಬಡಿದಿಷ್ಟದೇವತಾ

ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

ಹೀಗೆ ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಾಗುವಂತೆ ಕವಿತೆ ಶ್ರಮದಿಂದ ಒಡೆದು, ಮುರಿದು ಕಟ್ಟಿ ರೂಪುಗೊಳ್ಳಬಹುದು; ಅಥವಾ ಅದು ಬೇಂದ್ರೆಯ ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿರಬಹುದು; ನಾದದ ನವನೀತವಾಗಿರಬಹುದು; ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ’ವಾಗಿರಬಹುದು? ಅಥವಾ ವರ್ಡ್ಸ್‌ವರ್ತನ ‘ಸಹಜ ಭಾವನೆಗಳ ಸ್ವಚ್ಛಂದ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವನೆ’ ಕೂಡ ಆಗಿರಬಹುದು.

ಹೀಗೆ ಕಾವ್ಯದ ಮೂಲಕವೇ ಲೋಕವನ್ನು ನೋಡುವ ಕವಿಗಳಿಗಿಂತ ಭಿನ್ನವಾಗಿ ಲೋಕವನ್ನು ನೋಡುವ, ಸಮಾಜವನ್ನು ಕಟ್ಟಬಯಸುವ ದೊಡ್ಡ ದೊಡ್ಡ ಚಿಂತಕರಿಗೂ ಇದ್ದ ಕಾವ್ಯ ಪ್ರೇರಣೆಗಳು ನೆನಪಾಗುತ್ತವೆ. ಮಾರ್ಕ್ಸ್-ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ವನ್ನು ಚಿಂತಕರು ಯಾಕೆ ಅಪ್ಪಟ ಕಾವ್ಯ ಎನ್ನುತ್ತಾರೆಂದು ಹಲವು ಸಲ ಯೋಚಿಸಿದ್ದೇನೆ. ತರುಣ ಕಾರ್ಲ್ ಮಾರ್ಕ್ಸ್ ಕವಿಯಾಗಿದ್ದುದು ನೆನಪಾಗುತ್ತದೆ.

ಮಾರ್ಕ್ಸ್ ಹದಿನೆಂಟು-ಹತ್ತೊಂಭತ್ತನೇ ವಯಸ್ಸಿನಲ್ಲಿ ಕಡು ರೊಮ್ಯಾಂಟಿಕ್ ಕವಿತೆಗಳನ್ನು ಬರೆದ. ಇವು ತನ್ನ ಪ್ರಿಯತಮೆ ಜೆನ್ನಿಗಾಗಿ ಬರೆದ ‘ಟು ಜೆನ್ನಿ’, ‘ಕನ್‌ಕ್ಲೂಡಿಂಗ್ ಸಾನೆಟ್ಸ್ ಟು ಜೆನ್ನಿ’ ಎಂಬ ಕವಿತಾಗುಚ್ಛಗಳಾದವು. ಮಾರ್ಕ್ಸ್ ಮುಂದೆ ಜೆನ್ನಿಯನ್ನೇ ಮದುವೆಯಾದ. ಅವುಗಳಲ್ಲೊಂದು ಕವಿತೆ ಹೀಗೆ ಶುರುವಾಗುತ್ತದೆ:

ನೋಡು ನೋಡು! ಸಾವಿರ ಸಂಪುಟಗಳನ್ನು ತುಂಬಿಸಬಲ್ಲೆ

ಪ್ರತಿ ಸಾಲಿನಲ್ಲೂ ಬರೆಬರೆದು ‘ಜೆನ್ನಿ’ ‘ಜೆನ್ನಿ’ ಎಂದು.

ಹದಿ ಹರೆಯದ ಧುಮ್ಮಿಕ್ಕುವ ಉದ್ವೇಗದಲ್ಲಿ ಶುರುವಾದ ಹುಡುಗ ಮಾರ್ಕ್ಸ್ ಬರೆದ ಕವಿತೆಯ ಕೊನೆಯ ಪಂಕ್ತಿ:

ನಿಜಕ್ಕೂ ಇದನ್ನೊಂದು ಪಲ್ಲವಿಯಾಗಿ ಬರೆಯುವೆನು-

ಮುಂಬರುವ ಶತಶತಮಾನ ಇದನ್ನು ಕಾಣಲೆಂದು:

ಪ್ರೀತಿ ಎಂದರೆ ಜೆನ್ನಿ; ಜೆನ್ನಿ ಎಂಬುದು ಪ್ರೀತಿಯ ಹೆಸರು.

ಹದಿನೆಂಟರ ಆಸುಪಾಸಿನಲ್ಲಿ ಈ ಕವಿತೆಗಳನ್ನು ಬರೆದ ಮಾರ್ಕ್ಸ್ ಇದಾದ ಹತ್ತು ಹದಿನೈದು ವರ್ಷಗಳ ನಂತರ ಕಮ್ಯುನಿಸಮನ್ನು ಹೊಸ ರೀತಿಯಲ್ಲಿ ವಿವರಿಸುವ ಗಂಭೀರ ಸಂಶೋಧನೆ ಶುರು ಮಾಡಿದ. ಅದು ಅವನ ಜೀವಮಾನದ ಸಂಶೋಧನಾಶ್ರಮವಾಗಿತ್ತು. ಅವನ ನಂತರದ ಶತಮಾನದಲ್ಲಿ ಚಿಲಿಯ ಕವಿ ಪಾಬ್ಲೊ ನೆರೂಡ ತನ್ನ ಹದಿನೆಂಟನೇ ವಯಸ್ಸಿನಲ್ಲಿ ತೀವ್ರ ಪ್ರೇಮಪದ್ಯಗಳನ್ನು ಬರೆದ; ಇದಾಗಿ ಹತ್ತು ಹದಿನೈದು ವರ್ಷಗಳ ನಂತರ ಮಾರ್ಕ್ಸ್ ವಾದಿಯಾದ. ಅಂದರೆ, ಎಲ್ಲ ತೀವ್ರ ಬರವಣಿಗೆಗೂ ಕಾವ್ಯವೇ ಮೂಲ. ಬರೆಯುವವರಿಗೆ ನಿತ್ಯವೂ ಕಾವ್ಯ ದಿನವೇ! ಏನನ್ನಾದರೂ ಬರೆಯಲಿ, ಕಾವ್ಯದ ತೀವ್ರಸ್ಥಿತಿ ದಕ್ಕದಿದ್ದರೆ ಬರವಣಿಗೆಯಲ್ಲಿ ಜೀವ ಸಂಚಾರ ಎಂಬುದಿಲ್ಲ!

ಈ ಬರಹದ ಆರಂಭದಲ್ಲಿರುವ ಶಂಬಾ-ಬೇಂದ್ರೆ ಚರ್ಚೆಗೆ ಮತ್ತೆ ವಾಪಸಾಗೋಣ: ಎಲ್ಲೋ ಭಾಷೆಯಲ್ಲಿ, ಸಮಾಜದಲ್ಲಿ ಇದ್ದ ‘ವರ್ಗ-ವರ್ಗ- ಸಂಘರ್ಷ-ವರ್ಗಪ್ರಜ್ಞೆ’, ‘ಉಳ್ಳವರು-ನಿರ್ಗತಿಕರು’, ‘ದುಡಿವ ಜನರ ಸರ್ವಾಧಿಕಾರ’ ಈ ಎಲ್ಲ ಪದಗಳು ಪರಿಕಲ್ಪನೆಗಳಾಗಿ, ಕವಿ ಮಾರ್ಕ್ಸ್ ಕಂಡ ಕನಸಿನಲ್ಲಿದ್ದ ಹೊಸ ಸಮಾಜದ ಹಿನ್ನೆಲೆಯಲ್ಲಿ ಹೊಸ ಅರ್ಥ ಪಡೆದಿರಬಹುದಲ್ಲವೆ? ಮಾರ್ಕ್ಸ್ ಕನಸಿದ ಸಮಸಮಾಜದ ಸಿದ್ಧಾಂತದ ಆಶಯಗಳು ಮುಂದೆ ಕವಿಮನಸ್ಸಿನ ಕನಸುಗಾರ ಹೋರಾಟಗಾರರು, ಕಾರ್ಮಿಕರು ಚಿಂತಕ ಚಿಂತಕಿಯರು ಅವನ್ನು ಮುಂದೊಯ್ದದ್ದರಿಂದ ಎಲ್ಲೆಡೆ ಹಬ್ಬಿದವಲ್ಲವೆ?

ಈ ಮಹಾನ್ ಸಮತಾವಾದಿ ಪಯಣದಲ್ಲಿ ಮಹಾಕವಿ ಗಯಟೆ, ಶೆಲ್ಲಿ ಮೊದಲಾದವರ ಕಾವ್ಯದಿಂದ ಮಾರ್ಕ್ಸ್ ಪಡೆದ ಪ್ರೇರಣೆಗಳೂ ಮುಖ್ಯವಲ್ಲವೆ? ಅಥವಾ ಅಂಬೇಡ್ಕರ್ ಸಂತ ಕವಿ ತುಕಾರಾಮನ ಅಭಂಗಗಳಿಂದ ಪಡೆದ ಸ್ಫೂರ್ತಿ ಕೂಡ ಅವರ ಸಾಮಾಜಿಕ ಚಿಂತನೆಗಳನ್ನೂ ರೂಪಿಸಿರಬಹುದಲ್ಲವೆ? ‘ಸಾವಿರ ಹೂಗಳು ಅರಳಲಿ’ ಎಂದ ಚೀನಾದ ಕಮ್ಯುನಿಸ್ಟ್ ನಾಯಕ, ಚೇರ್ಮನ್ ಮಾವೋ ಕೂಡ ಕವಿಯಾಗಿದ್ದ. ಅವನು ಈ ಅರ್ಥಪೂರ್ಣ ರೂಪಕವನ್ನು ಘೋಷಿಸುವ ಮೊದಲು ಅವು ಚೀನಾದ ಸಮಾಜದಲ್ಲಿ ಇದ್ದವು; ಆದರೆ ಕವಿ ಬೇಂದ್ರೆ ಹೇಳಿದಂತೆ ಅವು ಎಲ್ಲೆಲ್ಲೋ ಬಿದ್ದಿದ್ದವು, ಅಲ್ಲವೆ!

Tags

WordPoetSociety
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X