Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಫುಟ್ಬಾಲ್ ನಡುವೆ ಬರವಣಿಗೆಯ ಧ್ಯಾನ!

ಫುಟ್ಬಾಲ್ ನಡುವೆ ಬರವಣಿಗೆಯ ಧ್ಯಾನ!

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್22 Jun 2026 10:38 AM IST
share
ಫುಟ್ಬಾಲ್ ನಡುವೆ ಬರವಣಿಗೆಯ ಧ್ಯಾನ!

ಎಲ್ಲ ಸೂಕ್ಷ್ಮ ಲೇಖಕ ಲೇಖಕಿಯರಿಗೂ ಅನಿಸುವಂತೆ ಬೋರ್ಹೆಸ್‌ಗೆ ಕೂಡ ತಾನಿರುವ ಕಾಲ ಮಹಾಕೇಡಿನ ಕಾಲ ಅನಿಸುತ್ತಿತ್ತು. ಕಾಲದ ಕೇಡು ಕುರಿತ ಅವನ ಭಯದಲ್ಲಿ ಪುಸ್ತಕಗಳು ಮಾಯವಾಗುವ ಭಯ ಕೂಡ ಸೇರಿತ್ತು. ‘ನಮ್ಮ ಕಾಲದ ಕೇಡು ಹಿಂದಿನ ಕಾಲಗಳ ಕೇಡಿನಂತಲ್ಲ’ ಎನ್ನುವ ಬೋರ್ಹೆಸ್‌ಗೆ,

ವರ್ಡ್ಸ್‌ವರ್ತ್‌ನ ‘ದಿ ಪ್ರಿಲ್ಯೂಡ್’ ಖಂಡಕಾವ್ಯದಲ್ಲಿ ಬರುವ ಕನಸು ನೆನಪಾಗುತ್ತದೆ.

ಫಿಫಾ ಫುಟ್ಬಾಲ್ ವರ್ಲ್ಡ್ ಕಪ್‌ನ ಪೂರಾ ಮ್ಯಾಚುಗಳನ್ನು ನೋಡುವ ವ್ಯವಧಾನ, ಸಮಯ ಇಲ್ಲದೆ ರಾತ್ರಿ ಮ್ಯಾಚುಗಳ ಹೈಲೈಟ್ಸ್ ಮಾತ್ರ ನೋಡುತ್ತಿದ್ದರೆ, ಒಂದು ಜಡ ಚಣವೂ ಇಲ್ಲದ (‘ನಾಟ್ ಎ ಡಲ್ ಮೊಮೆಂಟ್’) ಈ ಆಟದ ಲವಲವಿಕೆ ವಿಸ್ಮಯಗೊಳಿಸತೊಡಗುತ್ತದೆ. ಮೈ, ಮನ, ಕಣ್ಣು, ಕಾಲು, ಕೈ, ಕಲ್ಪನೆ, ಊಹೆ, ಆಕ್ಷಣದ ಒಳಪ್ರೇರಣೆ, ಮುನ್ನೋಟ, ನಿರೀಕ್ಷೆ, ಜಾಣತನ, ಚತುರತೆ, ಏನನ್ನಾದರೂ ಒದೆಯುವ ಖುಷಿ, ಗುರಿಯೊಂದನ್ನೇ ಗುರಿಯಾಗಿಸಿಕೊಂಡು ಗುರಿಮುಟ್ಟುವ ಛಲ... ಇವೆಲ್ಲವೂ ಅರೆಚಣದಲ್ಲಿ ಬೆರೆಯುವ ಆಟದ ಮಾಂತ್ರಿಕತೆ ನೋಡುಗರಲ್ಲಿ ವಿಚಿತ್ರ ಎನರ್ಜಿ ತುಂಬತೊಡಗುತ್ತದೆ. ಮೆಸ್ಸಿ, ರೊನಾಲ್ಡೊ ಥರದ ಸ್ಟಾರ್‌ಗಳ ನಡುವೆಯೇ ಹೊಸ ಹೊಸ ಅನಾಮಧೇಯರು ಸ್ಟಾರ್‌ಗಳಾಗಿ ಹೊಮ್ಮುವ ರೀತಿ, ಹಲವು ದೇಶಗಳ ತಂಡದಲ್ಲಿರುವ ಆಫ್ರಿಕಾ ಮೂಲದ ಆಟಗಾರರ ಸಹಜ ಸ್ಟೆಮಿನಾ ಕಂಡು ಮನ ತುಂಬಿ ಬರುತ್ತದೆ.

ಈ ಆಟ ನೋಡನೋಡುತ್ತಾ, ಅದೇಕೋ ಏನೋ, ನಮ್ಮ ಬರವಣಿಗೆಗೂ ಇಂಥ ಜಡ ಚಣವಿಲ್ಲದ ಭಾಗ್ಯ ದಕ್ಕಬಲ್ಲದೇ ಎಂದು ಹಂಬಲಿಸುವಂತಾಗುತ್ತದೆ. ನನ್ನ ಓದಿನ ಅನುಭವದಲ್ಲಿ ಹೆಚ್ಚಿನ ಜಡ ಗಳಿಗೆಗಳು ಇಲ್ಲದಂಥ ಬರವಣಿಗೆ ಮಾಡಿರುವವರು ಯಾರು ಎಂದು ಹಿಂದಿರುಗಿ ನೋಡಿದರೆ ಕೆಲವೇ ಹೆಸರುಗಳು ಹೊಳೆಯುತ್ತವೆ: ನಾಟಕಕಾರರಾದ ಸೋಫೋಕ್ಲಿಸ್, ಶೇಕ್ಸ್‌ಪಿಯರ್; ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ಮಿಲನ್ ಕುಂದೇರ, ಪಿ.ಜಿ. ವೋಡ್‌ಹೌಸ್; ಕನ್ನಡದಲ್ಲಿ ತಕ್ಷಣ ಹೊಳೆವ ಹೆಸರು ಲಂಕೇಶ್... ಮುಂದಿನ ಹೆಸರಿಗೆ ತಡಕಾಡುವಂತಾಗುತ್ತದೆ.

ನಿತ್ಯ ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಮುಳುಗಿರುವವರು ಕೂಡ ‘ನಾಟ್ ಎ ಡಲ್ ಮೊಮೆಂಟ್’ ಎನ್ನಲಾದ ಸ್ಥಿತಿಯಲ್ಲಿರಬಹುದು! ಆದರೆ ಪುಸ್ತಕಗಳ ಜೊತೆಯಲ್ಲಿ ನಮ್ಮಂಥವರಿಗೆ ಆಗುವ ಸೃಜನಶೀಲ ಅನುಭವ ಅಲ್ಲಿರಲಾರದು. ಓದುವುದು ನಿಷ್ಕ್ರಿಯ (ಪ್ಯಾಸೀವ್) ಅನುಭವ ಎಂದು ತಿಳಿದವರು ಕೆಟ್ಟರು! ಓದುವಾಗ ನಾವು ‘ಕ್ರಿಯೇಟಿವ್’ ಆಗುತ್ತೇವೆ, ಮನಸ್ಸಿನಲ್ಲೇ ಬರೆಯುತ್ತಿರುತ್ತೇವೆ; ಒಂದು ಪಾತ್ರದ ಮೂಲಕ ಮತ್ತೊಂದು ಪಾತ್ರ, ಒಂದು ಐಡಿಯಾ ತಗಲಿ ಮತ್ತೊಂದು ಐಡಿಯಾ- ಹೀಗೆ ನಮ್ಮ ಸೃಜನಶೀಲ ಒರತೆ ಬರಿದಾಗದ ಹಾಗೆ ಓದು ನಮ್ಮನ್ನು ಪೊರೆಯುತ್ತಿರುತ್ತದೆ.

ಮೊನ್ನೆ ಉಪನ್ಯಾಸವೊಂದರ ನಂತರ ಹುಡುಗ ಹುಡುಗಿಯರು ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ: ಪೊಲಿಟಿಕಲ್ ಸೈನ್ಸ್ ಎಂ.ಎ. ಓದುವ ವಿದ್ಯಾರ್ಥಿಯೊಬ್ಬ ಭಾಷೆ, ಬರವಣಿಗೆ ಇತ್ಯಾದಿಗಳನ್ನು ಹೇಗೆ ಕಲಿಯುವುದು ಎಂದು ಕೇಳುತ್ತಿದ್ದ. ಕೃತಕ ಜಾಣತನ (ಕೃಜಾ-ಎಐ) ಬಂದಿದೆ; ಮುಂದೆ ಪುಸ್ತಕಗಳ ಗತಿ ಏನು ಎಂದು ಇನ್ನೊಬ್ಬರು ಕೇಳುತ್ತಿದ್ದರು.

ಉತ್ತರವಾಗಿ ನನ್ನ ಅನುಭವವನ್ನೇ ಅವರಿಗೂ ಹೇಳಿದೆ: ನಿತ್ಯ ಓದುವುದನ್ನು ಬಿಟ್ಟರೆ, ಬರೆಯುವುದನ್ನು ಕಲಿಯಲು ಇನ್ಯಾವುದೇ ಮಾರ್ಗಗಳಿಲ್ಲ. ನನ್ನ ಪ್ರಕಾರ, ಬರೆಯುವ ಹುಡುಗಿಗೆ ಇನ್ನೊಬ್ಬ ಲೇಖಕಿ ಅಥವಾ ಲೇಖಕನೇ ಟೀಚರ್. ನಿತ್ಯ ನನಗೆ ಒದಗಿ ಬರುವ ಭಾಷೆ, ಹೊಸ ಹೊಸ ಯೋಚನೆ, ಶಬ್ದಗಳು ಇವೆಲ್ಲವೂ ನಾನು ಓದುವ ಹೊಸ ಅಥವಾ ಹಳೆಯ ಪುಸ್ತಕಗಳಿಂದಲೂ ಬರುತ್ತಿರುತ್ತವೆ.

ಆದರೆ, ನಾವಿರುವ ಈ ಯುಗ ಈಗ ಎಲ್ಲರೂ ಬಲ್ಲಂತೆ ‘ತೆರೆಯುಗ’ ಅಥವಾ ‘ಏಜ್ ಆಫ್ ದಿ ಸ್ಕ್ರೀನ್’. ಈ ಶತಮಾನದ ಹೊಸ ತಲೆಮಾರಿನ ಬಹುತೇಕರು ಒಂದಲ್ಲ ಒಂದು ಬಗೆಯ ಸ್ಕ್ರೀನಿನಲ್ಲೇ ಓದುವುದು, ಬರೆಯುವುದು. ನಮ್ಮ ಮಕ್ಕಳು ಇನ್ನೂ ಬರೆಯಬಲ್ಲ ‘ಅಕ್ಷರಸ್ಥ’ರಾಗಿರುವುದಕ್ಕೆ ಹತ್ತನೇ ತರಗತಿಯವರೆಗಿನ ನಮ್ಮ ಮೇಡಂಗಳಿಗೆ ಇಡೀ ಜಗತ್ತಿನ ಸಂಸ್ಕೃತಿ ಕೃತಜ್ಞವಾಗಿರಬೇಕು! ಆದರೂ ಮುದ್ರಿತ ಪುಸ್ತಕಗಳನ್ನೇ ಓದುವ, ಪೆನ್ ಹಿಡಿದು ಕೈಯಲ್ಲೇ ಬರೆಯುವ ತಲೆಮಾರು ನಿಧಾನಕ್ಕೆ ಹಿಂದಕ್ಕೆ ಸರಿಯುತ್ತಿದೆ ಎನ್ನಿಸತೊಡಗಿದೆ. ಇಷ್ಟೆಲ್ಲದರ ನಡುವೆ ಹೊಸ ಹೊಸ ಪುಸ್ತಕಗಳನ್ನು ಮನೆಗೆ ಒಯ್ಯುತ್ತಲೇ ಇರುವ ಹಿರಿಯರೂ ಕಿರಿಯರೂ ಕಂಡಾಗ ಆನಂದವಾಗುತ್ತದೆ.

ಇದೆಲ್ಲ ಬರೆಯುವಾಗ ಅರ್ಜೆಂಟೀನದ ಲೇಖಕ ಬೋರ್ಹೆಸ್ ಹೇಳಿದ ಮಾತು ಕಣ್ಣಿಗೆ ಬಿತ್ತು: ‘ಸ್ವರ್ಗ ಅಂದರೆ ಒಂಥರದ ಲೈಬ್ರರಿ ಎಂದು ಸದಾ ನಾನು ಊಹಿಸಿಕೊಂಡಿದ್ದೇನೆ.’

ಹಾಂ! ಬೋರ್ಹೆಸ್ ಕೂಡ ಜಡ ಗಳಿಗೆಗಳಿಲ್ಲದ ಜೀವಂತ ಬರವಣಿಗೆ ಮಾಡಬಲ್ಲವನಾಗಿದ್ದ. ತಾರುಣ್ಯದಿಂದಾಚೆಗೆ ಕಣ್ಣಿನ ದೃಷ್ಟಿ ಮಂಕಾಗತೊಡಗಿದ್ದ ಜಾರ್ಜ್ ಲೂಯಿ ಬೋರ್ಹೆಸ್ ಐವತ್ತೈದನೆಯ ವಯಸ್ಸಿನಲ್ಲಿ ತಾನು ಬಹುವಾಗಿ ಪ್ರೀತಿಸುವ ಪುಸ್ತಕಗಳ ಜೊತೆಗೆ ಬದುಕುವ ಆಸೆಯಿಂದ ಅರ್ಜೆಂಟೀನದ ರಾಷ್ಟ್ರೀಯ ಗ್ರಂಥಾಲಯದ ನಿರ್ದೇಶಕನಾಗಿ ನೇಮಕಗೊಂಡ. ಆ ಕಾಲದಲ್ಲೇ ತನ್ನ ಕಣ್ಣೆರಡನ್ನೂ ಕಳೆದುಕೊಂಡ. ಆಮೇಲೂ ಎರಡು ಮೂರು ದಶಕ ಕತೆ, ಕವಿತೆ ಬರೆಯುತ್ತಲೇ ಇದ್ದು ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನೆನ್ನಿಸಿಕೊಂಡ.

ಕಣ್ಣು ಕಳೆದುಕೊಂಡ ಕಾಲದ ಬಗ್ಗೆ ಮಾತಾಡುತ್ತಾ ಬೋರ್ಹೆಸ್ ಸಂದರ್ಶಕ ಆಲಿಫ್ಯಾನೋಗೆ ಹೇಳುತ್ತಾನೆ: ‘‘ನಿನಗೊಂದು ಗುಟ್ಟು ಹೇಳಲೆ? ಇವತ್ತಿಗೂ ‘ನಾನು ಕುರುಡ ಅಲ್ಲ’ ಅಂತ ನನಗೆ ನಾನೇ ಹೇಳಿಕೊಳ್ತಾ ಪುಸ್ತಕದಂಗಡಿಯಿಂದ ಪುಸ್ತಕಗಳನ್ನು ಕೊಂಡುಕೊಂಡು ಬಂದು ಮನೆಯ ತುಂಬಾ ಅವನ್ನು ತುಂಬಿಸಿದ್ದೀನಿ. ಪುಸ್ತಕಗಳ ಸ್ನೇಹದ ಚುಂಬಕ ಶಕ್ತಿಯನ್ನು ಅನುಭವಿಸ್ತಾ ಇದ್ದೀನಿ. ಒಂದು ಪುಸ್ತಕ ನಮ್ಮ ಖುಷಿಯ ಸಾಧ್ಯತೆಗಳನ್ನು ತೆರೆಯುತ್ತೆ ಅಂತ ನಾನು ನಂಬಿರೋದಕ್ಕೆ ಕಾರಣ ಏನು ಅಂತ ಕೇಳಿದರೆ, ಅದಕ್ಕೆ ನನ್ನ ಬಳಿ ಉತ್ತರ ಇಲ್ಲ!’’

ಎಲ್ಲ ಸೂಕ್ಷ್ಮ ಲೇಖಕ ಲೇಖಕಿಯರಿಗೂ ಅನಿಸುವಂತೆ ಬೋರ್ಹೆಸ್‌ಗೆ ಕೂಡ ತಾನಿರುವ ಕಾಲ ಮಹಾಕೇಡಿನ ಕಾಲ ಅನಿಸುತ್ತಿತ್ತು. ಕಾಲದ ಕೇಡು ಕುರಿತ ಅವನ ಭಯದಲ್ಲಿ ಪುಸ್ತಕಗಳು ಮಾಯವಾಗುವ ಭಯ ಕೂಡ ಸೇರಿತ್ತು. ‘ನಮ್ಮ ಕಾಲದ ಕೇಡು ಹಿಂದಿನ ಕಾಲಗಳ ಕೇಡಿನಂತಲ್ಲ’ ಎನ್ನುವ ಬೋರ್ಹೆಸ್‌ಗೆ,

ವರ್ಡ್ಸ್‌ವರ್ತ್‌ನ ‘ದಿ ಪ್ರಿಲ್ಯೂಡ್’ ಖಂಡಕಾವ್ಯದಲ್ಲಿ ಬರುವ ಕನಸು ನೆನಪಾಗುತ್ತದೆ:

ಇದ್ದಕ್ಕಿದ್ದಂತೆ ಪ್ರಳಯವಾಗಿ ಕಲೆ, ವಿಜ್ಞಾನ

ಎಲ್ಲವೂ ನಾಶವಾಗಿ ಬಿಡಬಹುದು ಎಂಬ ಭಯ

ವರ್ಡ್ಸ್‌ವರ್ತ್‌ನಿಗಿತ್ತು. ಆ ಭಯವೇ ಆ ಕವಿತೆಯಲ್ಲಿ ದುಃಸ್ವಪ್ನದ ಚಿತ್ರವಾಗಿ ಬರುತ್ತದೆ. ಈ ದುಃಸ್ವಪ್ನದಲ್ಲಿ ಕವಿ ವರ್ಡ್ಸ್‌ವರ್ತ್ ಸಮುದ್ರದ ಬದಿಯ ಗುಹೆಯಲ್ಲಿದ್ದಾನೆ. ಮಧ್ಯಾಹ್ನದ ಮಂಪರಿನಲ್ಲಿ ಕವಿ ತನ್ನ ಪ್ರೀತಿಯ ಪುಸ್ತಕಗಳಲ್ಲೊಂದಾದ ಸರ್ವಾಂಟಿಸ್‌ನ ‘ಡಾನ್‌ಕ್ವಿಯೋಟೆ’ಯನ್ನು ಓದುತ್ತಿರುವಾಗ ನಿದ್ರೆ ಆವರಿಸುತ್ತದೆ. ಕನಸು. ಸುತ್ತ ಕಪ್ಪು ಮರಳಿನ ರಾಶಿ. ಎಲ್ಲೂ ನೀರಿಲ್ಲ. ಅದೊಂದು ಮರುಭೂಮಿ, ದಿಗ್ಭ್ರಮೆಗೊಂಡ ವರ್ಡ್ಸ್‌ವರ್ತ್ ಅಲ್ಲಿಂದ ಓಡಲೆತ್ನಿಸುತ್ತಾನೆ. ಪಕ್ಕದಲ್ಲಿ ಯಾರೋ ಇದ್ದಾರೆ. ನೋಡಿದರೆ ಬೆಡೋಯಿನ್ ಬುಡಕಟ್ಟಿಗೆ ಸೇರಿದ ಅರಬಿ. ಅವನ ಬಲಗೈಯಲ್ಲೊಂದು ಕತ್ತಿ, ಎಡ ಕಂಕುಳಲ್ಲಿ ಒಂದು ಕಲ್ಲು, ಎಡಗೈಯಲ್ಲೊಂದು ಕಪ್ಪೆಚಿಪ್ಪು. ‘ನಾನು ಕಲೆಯನ್ನು ಉಳಿಸಲು ಬಂದಿದ್ದೇನೆ’ ಎನ್ನುವ ಅರಬಿ, ತಾನು ತಂದ ಸುಂದರವಾದ ಕಪ್ಪೆಚಿಪ್ಪನ್ನು ಕವಿಗೆ ಕೊಟ್ಟು ‘ಇದನ್ನು ಕಿವಿಯ ಬಳಿ ಇಟ್ಟುಕೋ’ ಎನ್ನುತ್ತಾನೆ.

ಮರುಕ್ಷಣವೇ ‘ದೇವರು ಸಿಟ್ಟಿಗೆದ್ದಿದ್ದಾನೆ. ಮಹಾ ಪ್ರವಾಹವೊಂದು ಮುನ್ನುಗ್ಗಿ ಬರುತ್ತಿದೆ. ಅದು ಎಲ್ಲವನ್ನೂ ನಾಶ ಮಾಡುತ್ತದೆ’ ಎಂದು ಎಚ್ಚರಿಸುತ್ತಾನೆ. ಬಳಿಕ ಒಂದು ಕಲ್ಲನ್ನು ತೆಗೆದು ಕಪ್ಪೆಚಿಪ್ಪಿನ ಬದಿಗಿಡುತ್ತಾನೆ. ಅದು ಪುಸ್ತಕ ರೂಪದಲ್ಲಿರುವ ಒಂದು ಕಲ್ಲು. ವರ್ಡ್ಸ್‌ವರ್ತ್ ನೋಡುತ್ತಾನೆ: ಆ ಕಪ್ಪೆಚಿಪ್ಪು ಕೂಡ ಒಂದು ಪುಸ್ತಕವೇ. ಜಗತ್ತಿನ ಕಾವ್ಯವೆಲ್ಲವೂ ಅದರೊಳಗಿದೆ. ‘ಇವೆರಡೂ ಪುಸ್ತಕಗಳನ್ನು ನಾನು ಕಾಪಾಡಬೇಕು’ ಎನ್ನುತ್ತಾನೆ ಅರಬಿ. ಆದರೆ ಅವನ ಮುಖದ ತುಂಬಾ ಭಯ, ಕಳವಳ. ದೂರದಿಂದ ಹರಿದುಬಂದ ಬೆಳಕೊಂದು ಆ ಮರುಭೂಮಿಯನ್ನು ಮುತ್ತುತ್ತಿದೆ. ನೋಡಿದರೆ, ಅದು ಬೆಳಕಲ್ಲ; ಪ್ರವಾಹ. ಅರಬಿ ಅಲ್ಲಿಂದ ಹೊರಡುತ್ತಾನೆ. ಕವಿ ಭಯದಿಂದ ಅತ್ತ ನೋಡುತ್ತಿದ್ದರೆ, ಆ ಅರಬಿ ಡಾನ್‌ಕಿಯೋಟೆಯಾಗಿದ್ದಾನೆ. ಚಣ ಕಳೆದ ಮೇಲೆ ಅವನೂ ಇಲ್ಲ. ನೀರು ವರ್ಡ್ಸ್‌ವರ್ತ್‌ನ ಕುತ್ತಿಗೆಯ ತನಕ ಬರುತ್ತಿದೆ. ಕಿರುಚುತ್ತಾ ಮೇಲೇಳುತ್ತಾನೆ...

ಇದು ತನ್ನ ಕಾಲದಲ್ಲಿ ಕಾವ್ಯ, ಕಲೆ ಕಣ್ಮರೆಯಾಗಬಹುದೆನ್ನುವ ಕವಿಯ ಭಯ. ಈ ಭಯ ಎಲ್ಲ ಕಾಲದ ಕವಿಗಳಲ್ಲೂ ಲೇಖಕರಲ್ಲೂ ಇರುವ ಭಯ. ಆ ಬಗ್ಗೆ ಮಾತಾಡುತ್ತಾ ‘ಹೊಸ ಕಾಲದಲ್ಲಿ ಪುಸ್ತಕಗಳಿಗೆ ಸ್ಥಾನವೇ ಇಲ್ಲ; ಇನ್ನು ಪುಸ್ತಕಗಳ ಕಾಲ ಮುಗಿದಂತೆಯೇ ಎಂದು ಬಹುತೇಕರು ಹೇಳುತ್ತಾರಲ್ಲ?’ ಎಂದು ಆಲಿಫ್ಯಾನೋ ಬೋರ್ಹೆಸ್‌ನನ್ನು ಕೇಳುತ್ತಾನೆ.

‘ಅದು ಮಾತ್ರ ಎಂದೆಂದಿಗೂ ಸಾಧ್ಯವಿಲ್ಲ. ನನ್ನ ಪ್ರಕಾರ ಮನುಷ್ಯನ ಅತ್ಯಂತ ಶ್ರೇಷ್ಠ ಸಂಶೋಧನೆಯೆಂದರೆ ಪುಸ್ತಕ, ಮನುಷ್ಯನ ಉಳಿದೆಲ್ಲ ಸಂಶೋಧನೆಗಳೂ ಅವನ ದೇಹದ ವಿಸ್ತರಣೆ. ಟೆಲಿಸ್ಕೋಪ್ ಹಾಗೂ ಮೈಕ್ರೋಸ್ಕೋಪ್‌ಗಳು ನಮ್ಮ ದೃಷ್ಟಿಯ ವಿಸ್ತರಣೆ; ಕತ್ತಿ ಮತ್ತು ನೇಗಿಲು ನಮ್ಮ ತೋಳುಗಳ ವಿಸ್ತರಣೆ. ಆದರೆ ಪುಸ್ತಕ ಮಾತ್ರ ನಮ್ಮ ಕಲ್ಪನಾವಿಲಾಸ ಮತ್ತು ನೆನಪಿನ ವಿಸ್ತರಣೆ. ಪುಸ್ತಕಗಳು ಮಾಯವಾದರೆ ಚರಿತ್ರೆಯೂ ಕಣ್ಮರೆಯಾಗುತ್ತದೆ. ಜೊತೆಗೆ ಮನುಷ್ಯನೂ ಕಣ್ಮರೆಯಾಗುತ್ತಾನೆ’ ಎನ್ನುತ್ತಾನೆ ಬೋರ್ಹೆಸ್. ಅವನು ಅಂಧನಾದ ಎಷ್ಟೋ ವರ್ಷಗಳ ಕಾಲ ಪೋಷಿಸಿಕೊಂಡು ಬಂದ ಒಂದು ಆಸೆಯೆಂದರೆ ಪುಸ್ತಕಗಳ ಇತಿಹಾಸ ಕುರಿತ ಪುಸ್ತಕವೊಂದನ್ನು ಬರೆಯುವುದು!

ಪುಸ್ತಕಗಳಿಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ನನ್ನಂಥವರಿಗೆ ಕಷ್ಟ; ಈ ಪುಸ್ತಕಗಳು ಫುಟ್ಬಾಲ್

ಆಟದ ಥರ ಒಂದು ಜಡ ಗಳಿಗೆಯೂ ಇಲ್ಲದಂತೆ ಇದ್ದರೆ, ಅಂಥ ಪುಸ್ತಕಗಳು ಪ್ರಿಯರಾದ

ಎಲ್ಲರಿಗಿಂತಲೂ ಇಷ್ಟ!

Tags

FootballFIFA 2026FIFAWorldCup
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X