Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಕಣ್ಣ ರೆಪ್ಪೆಯ ಬರವಣಿಗೆ

ಕಣ್ಣ ರೆಪ್ಪೆಯ ಬರವಣಿಗೆ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್3 Aug 2026 12:20 PM IST
share
ಕಣ್ಣ ರೆಪ್ಪೆಯ ಬರವಣಿಗೆ

ಮೊನ್ನೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಕತೆಗಾರ-ಗೆಳೆಯ ಮೊಗಳ್ಳಿ ಗಣೇಶರ ಸಾಹಿತ್ಯ ಕುರಿತು ಮಾತಾಡುತ್ತಾ, ಮೊಗಳ್ಳಿ ಎಡೆಬಿಡದೆ ಬರೆಯುತ್ತಿದ್ದುದು ನೆನಪಾಗಿ, ‘ಬರೆಯುವುದು 24/7 ಕೆಲಸ; ಅದು ಪಾರ್ಟ್ ಟೈಮ್ ಕೆಲಸ ಅಲ್ಲ’ ಅಂದೆ. ಗಣೇಶ್ ಸಾವಿನ ಹಾಸಿಗೆಯಲ್ಲಿ ಬರೆದ ‘ಹೊಸಿಲು ದಾಟಿದವರು’ ಎಂಬ ಕೊನೆಯ ಕತೆಯ ಹಸ್ತಪ್ರತಿಯ ಹಾಳೆಗಳು ಕಣ್ಣೆದುರು ಬಂದವು. ಸಾವನ್ನು ಮುಂದೂಡಲು ‘ಅರೇಬಿಯನ್ ನೈಟ್ಸ್’ನ ಶಹರ್ಜಾದೆ ಹೇಳಿದ ಸಾವಿರದೊಂದು ಕತೆಗಳಂತೆ ಗಣೇಶ್ ಕೂಡ ಸಾವನ್ನು ಮುಂದೂಡಲು ಕತೆ ಬರೆಯುತ್ತಿದ್ದನೇನೋ ಅನ್ನಿಸಿತು.

ಹೀಗೆ ಬರೆಯುವ ಆಸೆ, ಕಾತರ, ಒತ್ತಡ, ಬರೆದು ಹಗುರಾಗುವ ತುಡಿತ ಇವೆಲ್ಲ ಸೇರಿ ಸಾವನ್ನು ಕೆಲ ಕಾಲ ಮುಂದೂಡಿದ ಅಪೂರ್ವ ಜೀವನಗಾಥೆಯನ್ನು ಅಧರಿಸಿದ ‘ದ ಡೈವಿಂಗ್ ಬೆಲ್ ಆಂಡ್‌ದ ಬಟರ್ ಫ್ಲೈ’ ಸಿನೆಮಾವನ್ನು ಕೆಲ ವರ್ಷಗಳ ಕೆಳಗೆ ನೋಡಿದಾಗ, ಮೂಲ ಪುಸ್ತಕ ಸಿಕ್ಕಿರಲಿಲ್ಲ. 1997ರಲ್ಲಿ ಪ್ರಕಟವಾದ ಜಾನ್ ಡೊಮಿನೀಕ್ ಬಾಬಿಯ ಈ ಪುಸ್ತಕ ಮೊನ್ನೆ ಕಣ್ಣಿಗೆ ಬಿತ್ತು. ಈ ಪುಟ್ಟ ಪುಸ್ತಕ ಹೀಗೆ ಶುರುವಾಗುತ್ತದೆ:

‘ಕಿಟಕಿಯ ಸವೆದ ಪರದೆಯ ಮೂಲಕ ಹರಿದು ಬಂದ ಮಂದ ಬೆಳಕು ಬೆಳಗಾಯಿತು ಎಂದು ಘೋಷಿಸುತ್ತದೆ. ನನ್ನ ಹಿಮ್ಮಡಿ ನೋಯುತ್ತಿದೆ. ತಲೆಯ ಮೇಲೆ ಹೆಣ ಭಾರವಿದೆ. ಎಂಥದೋ ಅಗೋಚರವಾದ ಡೈವಿಂಗ್ ಬೆಲ್ ನನ್ನ ದೇಹವನ್ನು ಸೆರೆಯಾಳಾಗಿಸಿಬಿಟ್ಟಿದೆ. ನನ್ನ ರೂಮು ಕತ್ತಲೆಯಿಂದ ಮೆಲ್ಲಗೆ ಹೊರಗಿಣುಕುತ್ತಿದೆ. ನನ್ನ ವಸ್ತುಗಳ ಮೇಲೆ ಕಣ್ಣಾಡಿಸುತ್ತೇನೆ: ಪ್ರಿಯರ ಫೋಟೊಗಳು, ನನ್ನ ಮಕ್ಕಳು ಬರೆದ ಚಿತ್ರಗಳು, ಪೋಸ್ಟರುಗಳು, ಗೆಳೆಯ ಕಳಿಸಿದ ಪುಟ್ಟ ತಗಡಿನ ಸೈಕ್ಲಿಸ್ಟ್? ಕಳೆದ ಆರು ತಿಂಗಳಿಂದ, ಬಂಡೆಗೆ ಅಂಟಿಕೊಂಡ ಒಂಟಿ ಏಡಿಯ ಥರ ನಾನು ಅಂಟಿಕೊಂಡಿರುವ ಈ ಹಾಸಿಗೆಯ ಮೇಲೆ ತೂಗುತ್ತಿರುವ ನಾಲ್ಕನೇ ಕಂಬಿ? ನನ್ನ ಚಿರಪರಿಚಿತ ಬದುಕು ಕಳೆದ ವರ್ಷದ 8ನೇ ಡಿಸೆಂಬರ್ ಆರಿಹೋಯಿತು ಎಂಬುದನ್ನು ಮತ್ತೆ ನೆನೆಯಬೇಕಾದ್ದೇ ಇಲ್ಲ.’

ಈ ಪುಸ್ತಕವನ್ನು ಆಧರಿಸಿದ ಸಿನೆಮಾ ಮಾನವನ ಮೈ ಮನಸ್ಸು ಪ್ರಜ್ಞೆಗಳ ಹೋರಾಟದ ಹೊಸ ಮುಖವನ್ನು ಕಾಣಿಸಿದ್ದನ್ನು ಕುರಿತ ನನ್ನ ಹಳೆಯ ಟಿಪ್ಪಣಿಗಳು:

8 ಡಿಸೆಂಬರ್ 1995. ‘ಎಲ್ಲೆ’ ಎಂಬ ಫ್ರೆಂಚ್ ಪತ್ರಿಕೆಯ ಸಂಪಾದಕನಾಗಿದ್ದ ಜಾನ್ ಡೊಮಿನೀಕ್ ಬಾಬಿಗೆ ಇದ್ದಕ್ಕಿದ್ದಂತೆ ಸ್ಟ್ರೋಕ್ ಆಯಿತು. ಮೂರು ವಾರಗಳಿಂದ ಕೋಮಾ ಸ್ಥಿತಿಯ ನಂತರ ಇದೀಗ ಪ್ರಜ್ಞೆ ಬಂದಿದೆ. ಡಾಕ್ಟರ್ ಮಾತಾಡುತ್ತಿದ್ದಾರೆ. ಅದು ಬಾಬಿಗೆ ಅರ್ಥವಾಗುತ್ತಿದೆ.

‘ಆದರೆ, ಡಾಕ್ಟರೇ, ನನ್ನ ಮಾತೇಕೆ ನಿಮಗೆ ಕೇಳಿಸುತ್ತಿಲ್ಲ?’ ಬಾಬಿಯ ಮನಸ್ಸು ಚೀರುತ್ತಿದೆ...ನರಶಾಸ್ತ್ರಜ್ಞ ಡಾ. ಅಲನ್ ಲೆಪಾಗ್ ಹೇಳುತ್ತಾನೆ. ನಿನಗೆ ಸೆರೆವಾಸ್ಕುಲಾರ್ ಅಪಘಾತ ಆಗಿದೆ. ಇದರಿಂದಾಗಿ ನಿನ್ನ ಮೆದುಳು ಮತ್ತು ಸ್ಟೈನಲ್ ಕಾರ್ಡಿನ ನಡುವಣ ಕೊಂಡಿ ಕಳಚಿಹೋಗಿದೆ. ಮೊದಲಾಗಿದ್ದರೆ, ಇಷ್ಟಕ್ಕೇ ನೀನು ಸತ್ತೆ ಅಂತ ತೀರ್ಮಾನಿಸುತ್ತಿದ್ದರು. ಈಗ ಹಾಗಲ್ಲ, ನಾವು ನಿನ್ನನ್ನು ಇನ್ನಷ್ಟು ಕಾಲಜೀವಿಸುವ ಥರ ಮಾಡಬಲ್ಲೆವು.’

‘ಇದು ಜೀವನವೇ?’ ಎಂದುಕೊಳ್ಳುತ್ತಾನೆ ಬಾಬಿ. ಅದು ಯಾರಿಗೂ ಕೇಳಿಸುವುದಿಲ್ಲ.

ಡಾಕ್ಟರು, ನಿನಗೆ ಸಂಪೂರ್ಣ ಪಾರ್ಶ್ವವಾಯು ಬಡಿದಿದೆ. ಇದಕ್ಕೆ ‘ಲಾಕ್ಡ್ ಇನ್ ಸಿಂಡ್ರೋಮ್’ ಅಂತಾರೆ. ಅಲ್ಲಪ್ಪಾ, ನೀನು ಸಿಗರೇಟ್ ಸೇದ್ತಾ ಇರಲಿಲ್ಲ. ಈ ಸ್ಟ್ರೋಕ್‌ಗೆ ಕಾರಣಾನೇ ಗೊತ್ತಾಗ್ತಾ ಇಲ್ಲ. ಆದರೂ ಒಂದು ಭರವಸೆ ಇದೆ. ಅದೇನೂ ಅಂದ್ರೆ, ನಿನ್ನ ಮೆದುಳು ಚೆನ್ನಾಗಿ ಕೆಲಸ ಮಾಡ್ತಾ ಇದೆ. ನಿನ್ನ ಒಂದು ಕಣ್ಣು ಕೆಲಸ ಮಾಡ್ತಾ ಇದೆ. ಹಾಂ, ನಿನ್ನ ನೋಡಿಕೊಳ್ಳೋಕೆ ಇಬ್ಬರು ಸುಂದರಿಯರು ಬರ್ತಾರೆ. ಟ್ರೈ ಮಾಡೋಣ’ ಎನ್ನುತ್ತಾರೆ.

ಮಾರನೆಯ ದಿನ ಹೆನ್ರಿಟ್ ಮತ್ತು ಮಾರೀ ಎಂಬ ಇಬ್ಬರು ಸುಂದರಿಯರು ಬಾಬಿಗೆ ಫಿಸಿಯೋ ಥೆರಪಿ ಮಾಡಲು ಒಳಬರುತ್ತಾರೆ! ‘ಅರೆ! ನಾನೇನು ಸ್ವರ್ಗದಲ್ಲಿದ್ದೀನಾ!’ ಎನಿಸುತ್ತದೆ ಬಾಬಿಗೆ.

‘ನಾನು ಸ್ಪೀಚ್ ಥೆರಪಿಸ್ಟ್, ನಿನ್ನ ನಾಲಿಗೆ ಮತ್ತು ತುಟಿಗಳ ಮೇಲೆ ವರ್ಕ್ ಮಾಡೋಳು’ ಎನ್ನುತ್ತಾಳೆ ಹೆನ್ರಿಟ್.

‘ಇದೊಳ್ಳೆ ತಮಾಷೆಯಾಗಿದೆಯಲ್ಲ!’ ಬಾಬಿ ಅಂದುಕೊಂಡ.

‘ಈಗ ಒಂದು ಕೆಲಸ ಮಾಡೋಣ. ನಾನೀಗ ಕೆಲವು ಪ್ರಶ್ನೆ ಕೇಳೀನಿ. ನೀನು ಒಂದು ಸಲ ರೆಪ್ಪೆ ಬಡಿದರೆ ‘ಹೌದು’ ಅಂತ. ಎರಡು ಸಲ ರೆಪ್ಪೆ ಬಡಿದರೆ ‘ಇಲ್ಲ’ ಅಂತ. ಈಗ ಹೇಳು- ‘ನಾನು, ಅಂದರೆ ಹೆನ್ರಿಟ್, ಗಂಡಸಾ?’ ಹೆನ್ರಿಟ್ ಕೇಳುತ್ತಾಳೆ.

ಬಾಬಿಯ ರೆಪ್ಪೆ ‘ಇಲ್ಲ’ ಎಂದು ಸೂಚಿಸಲು ಎರಡು ಸಲ ಬಡಿಯುತ್ತದೆ.

ಹೆನ್ರಿಟ್, ‘ನಾನು ಹೆಂಗಸಾ?’ ಎಂದಾಗ, ಬಾಬಿಯ ರೆಪ್ಪೆಒಂದು ಸಲ ಬಡಿಯುತ್ತದೆ. ಬಾಬಿ ಈಗ ‘ರೆಪ್ಪೆ ಭಾಷೆ’ ಕಲಿಯಲು ಶುರುಮಾಡಿದ್ದಾನೆ!

ಮರುದಿನ ಥೆರಪಿಸ್ಟ್ ಹೆನ್ರಿಟ್ ಹೇಳುತ್ತಾಳೆ: ‘ನಾವೆಲ್ಲ ಸೇರಿ ಒಂದು ಮೆಥೆಡ್ ಹುಡುಕಿದೀವಿ, ನಾನೀಗ ಆರ್ ಇ ಎಸ್ ಎ ಆರ್ ಐ ಎನ್ - ಹೀಗೆ ಫ್ರೆಂಚ್ ಅಕ್ಷರ ತೋರಿಸ್ತೀನಿ. ನೀನು ಏನಾದರೂ ಹೇಳಬೇಕೂಂತ ಅನ್ನಿಸಿದಾಗ ರೆಪ್ಪೆ ಮಿಟುಕಿಸು. ನಾನು ಒಂದೊಂದೇ ಅಕ್ಷರ ಓದ್ತೀನಿ, ನಿನಗೆ ಬೇಕಾದ ಮೊದಲನೇ ಅಕ್ಷರ ಬಂದಾಗ ಒಂದ್ಬಲ ರೆಪ್ಪೆ ಬಡಿ. ನಾನು ಬರ್ಕೋತೀನಿ. ಇದೇ ಥರ ಶಬ್ದ, ವಾಕ್ಯ ರಚನೆ ಮಾಡೋಣ.’

ಈ ರೆಪ್ಪೆ ಬಡಿತದ ಶಬ್ದರಚನೆ ಬಾಬಿಗೆ ತ್ರಾಸವೆನ್ನಿಸತೊಡಗುತ್ತದೆ. ಒಂದೊಂದೇ ಅಕ್ಷರಕ್ಕೆ ಬಾಬಿ ರೆಪ್ಪೆ ಬಡಿದಂತೆ, ‘ಐ ವಾಂಟ್ ಟು ಡೈ’ ಎಂಬ ವಾಕ್ಯ ಮೂಡುತ್ತದೆ.

‘ಆಂ! ಎಷ್ಟು ಧೈರ್ಯ ನಿನಗೆ! ನಿನಗಾಗಿ ಕಾಳಜಿ ತೋರಿಸೋರು, ಇಷ್ಟೊಂದು ಪ್ರೀತಿಸೋರು ಇದಾರೆ. ಹೀಗಿದ್ದೂ ನಾನು ಸಾಯಬೇಕು ಅಂತೀಯಲ್ಲ?’ ಎನ್ನುತ್ತಾಳೆ ಹೆನ್ರಿಟ್.

ಹಿಂದೊಮ್ಮೆ ಬಾಬಿ ಪ್ರಕಾಶಕಿಯೊಬ್ಬಳಿಗೆ ಪುಸ್ತಕ ಬರೆದು ಕೊಡಲು ಒಪ್ಪಿದ್ದ. ‘ಈಗಲೂ ಬಾಬಿ ಪುಸ್ತಕ ಬರೆಯಬಲ್ಲ’ ಎಂದು ಹೆನ್ರಿಟ್ ಆ ಪ್ರಕಾಶಕಿಗೆ ಫೋನ್ ಮಾಡುತ್ತಾಳೆ.

ಬಾಬಿ ತನ್ನ ರೆಪ್ಪೆ ಭಾಷೆಯ ಮೂಲಕ ಸೂಚಿಸಿದ್ದನ್ನು ಕ್ಲಾಡ್ ಎಂಬ ಹುಡುಗಿ ಅಪಾರ ಸಹನೆಯಿಂದ ಬರೆದುಕೊಳ್ಳಲಾರಂಭಿಸುತ್ತಾಳೆ. ಲ್ಯಾಟಿನ್ ಭಾಷೆಯಲ್ಲಿ ಈ ಥರದ ಬರವಣಿಗೆಯನ್ನು amanuensis ಎನ್ನುತ್ತಾರೆ. ಅಂದರೆ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಬರೆದುಕೊಳ್ಳುವುದು. ಡಿಕ್ಟೇಶನ್, ಉಕ್ತಲೇಖನದ ಥರ ಬಾಬಿಯ ಬರವಣಿಗೆಯನ್ನು ‘ಸಂಜ್ಞಾಲೇಖನ’ ಅನ್ನಬಹುದೇನೋ.

ಬಾಬಿಯ ರೆಪ್ಪೆಯ ಬಡಿತ ಸೂಚಿಸಿದಂತೆ ಕ್ಲಾಡ್ ಬರೆದುಕೊಳ್ಳುವ ಸಂಜ್ಞಾಲೇಖನದ ಕಸರತ್ತು ಮುಂದುವರಿಯುತ್ತದೆ:

‘ನನ್ನಿಡೀ ಜೀವನ ವೈಫಲ್ಯಗಳ ಸರಣಿಯಂತೆ ಕಾಣುತ್ತಿದೆ?ನಾನು ಪ್ರೀತಿಸಲಾಗದ ಹೆಂಗಸರು, ಕೈ ತಪ್ಪಿದ ಅವಕಾಶಗಳು, ನಾನೇ ಜಾರಿಹೋಗಲು ಬಿಟ್ಟ ಸಂತೋಷದ ಗಳಿಗೆಗಳು... ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿದ್ದರೂ, ಗೆಲ್ಲುವವನ ಮೇಲೆ ಬೆಟ್ ಕಟ್ಟದೇ ಕಳೆದುಕೊಂಡ ರೇಸುಗಳು... ನಾನೇನು ಕುರುಡಾಗಿದ್ದೆನೆ? ಮೂರ್ಖನಾಗಿದ್ದೆನೆ?’

ಬಾಬಿಯ ರೆಪ್ಪೆ ಭಾಷೆ ಬರೆಸುತ್ತಾ ಹೋಗುತ್ತದೆ: ನನಗೆ ರವಿವಾರ ಎಂದರೆ ಭಯ. ಇವತ್ತು ಫಿಸಿಯೋಥೆರಪಿಸ್ಟ್ ಬರಲ್ಲ. ರವಿವಾರ ಅನ್ನೋದು ಸುದೀರ್ಘ ಮರುಭೂಮಿಯ ಹಾಗೆ...’

ಈಜುಕೊಳದಲ್ಲಿ ಡೈವಿಂಗ್ ಸೂಟ್‌ನಲ್ಲಿ ಜಲಚಿಕಿತ್ಸೆ ಪಡೆಯುತ್ತಿರುವ ಬಾಬಿಗೆ ತಾನು ಬರೆಯುತ್ತಿರುವ ಅನುಭವ ಕಥನಕ್ಕೆ ‘ಪ್ರೆಷರ್ ಕುಕರ್’ ಅಥವಾ ‘ಡೈವಿಂಗ್ ಬೆಲ್’ ಅಂತ ಹೆಸರಿಡಬಹುದು ಅನಿಸುತ್ತದೆ. ಪವಾಡಗಳು ಜರುಗುವುದಿಲ್ಲ ಎಂಬ ಕಟು ಸತ್ಯ ಬಾಬಿಗೆ ಗೊತ್ತಿತ್ತು. ಆದರೂ ಏನಾದರೂ ಪವಾಡವಾಗಿ, ನಾನು ಹಾಡಬಲ್ಲೆ ಎಂದುಕೊಳ್ಳುತ್ತಾನೆ. ‘ನೀನು ಹಾಡಬಲ್ಲೆ’ ಎಂದು ಎಲ್ಲರೂ ಹುರಿದುಂಬಿಸುತ್ತಾರೆ. ಆದರೆ ಕೊನೆಗೂ ಹಾಡಲಾಗದ ಬಾಬಿಯ ಪುಸ್ತಕವೇ ಅವನ ಹಾಡಾಗಿತ್ತು.

ಜಾನ್ ಡೊಮಿನೀಕ್ ಬಾಬಿ ‘ದಿ ಡೈವಿಂಗ್ ಬೆಲ್ ಆಂಡ್ ದಿ ಬಟರ್ ಪ್ಲೈ’ ಪುಸ್ತಕವನ್ನು ಎರಡು ಲಕ್ಷ ಸಲ ತನ್ನ ಎಡಗಣ್ಣಿನ ರೆಪ್ಪೆ ಬಡಿದು ಬರೆಸಿದ. ಇದನ್ನು ಬರೆದುಕೊಂಡ ಕ್ಲಾಡ್ ಎಂಬ ಹುಡುಗಿಯ ಸಹನೆ, ಬದ್ಧತೆಗಳು ಊಹಿಸಲೂ ಅಸಾಧ್ಯವಾದುವು. ಅದು ಪಶ್ಚಿಮ. ಅದರಲ್ಲೂ ಫ್ರಾನ್ಸ್. ಅಲ್ಲಿನ ವೃತ್ತಿಪರತೆಯ ಬದ್ಧತೆ, ಶಿಸ್ತುಗಳ ಥರವೇ ಬೇರೆ.

ಪುಸ್ತಕದ ಕೊನೆಯ ಪ್ಯಾರಾದ ಆರಂಭದ ಸಾಲುಗಳು:

‘ಕಳೆದ ಎರಡು ತಿಂಗಳಿಂದ ಪ್ರತೀ ಮಧ್ಯಾಹ್ನದ ಮೌನದಲ್ಲಿ, ಶೂನ್ಯದಲ್ಲಿ ನಾವು ತಾಳ್ಮೆಯಿಂದ ಅಗೆದು ತೆಗೆದ ಈ ಪುಟಗಳನ್ನು ಕ್ಲಾಡ್ ಗಟ್ಟಿಯಾಗಿ ಓದುತ್ತಿದ್ದಾಳೆ. ಕೆಲವು ಪುಟಗಳನ್ನು ಮತ್ತೆ ನೋಡಿದಾಗ ಖುಷಿ. ಇನ್ನು ಕೆಲವನ್ನು ಕಂಡಾಗ ಬೇಜಾರು. ಇದೆಲ್ಲ ಸೇರಿ ಒಂದು ಪುಸ್ತಕ ಆಗುತ್ತದೆಯೆ?’

ಪುಸ್ತಕದ ಕೊನೆಯ ಮೂರು ಸಾಲುಗಳು:

‘ನನ್ನ ಡೈವಿಂಗ್ ಬೆಲ್ ತೆರೆಯುವ ಕೀಲಿಕೈಗಳು ಈ ಬ್ರಹ್ಮಾಂಡದಲ್ಲಿವೆಯೆ? ನಿಲ್ದಾಣವಿಲ್ಲದ ಒಂದು ಸುರಂಗ ಮಾರ್ಗ? ನನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಶಕ್ತಿಯಿರುವ ನಾಣ್ಯ ಇದೆಯೆ? ನಾವು ಹೀಗೇ ನೊಡುತ್ತಾ ಕಾಯುತ್ತಾ ಇರಬೇಕು. ಈಗ ವಿರಮಿಸುವೆ. (ಬರ್ಕ್-ಪ್ಲೇಗ್, ಜುಲೈ-ಆಗಸ್ಟ್ 1996)

7 ಮಾರ್ಚ್ 1997. ‘ದ ಡೈವಿಂಗ್ ಬೆಲ್ ಆಂಡ್ ದ ಬಟರ್ ಫ್ಲೈ’ ಪುಸ್ತಕ ಪ್ರಕಟವಾದ ಮೊದಲ ದಿನವೇ 25,000 ಪ್ರತಿಗಳು ಮಾರಾಟವುವು. ಈ ಫ್ರೆಂಚ್ ಪುಸ್ತಕ ಬಿಡುಗಡೆಯಾದ ಎರಡೇ ದಿನಕ್ಕೆ, 9 ಮಾರ್ಚ್ 1997ರಂದು, ಜಾನ್‌ಡೋಮಿನೀಕ್ ಬಾಬಿ ನ್ಯುಮೋನಿಯಾದಿಂದ ತೀರಿಕೊಂಡ. ಆ ವಾರ ಪುಸ್ತಕದ ಒಂದೂವರೆ ಲಕ್ಷ ಪ್ರತಿಗಳು ಮಾರಾಟವು. ಈಗ ಮರಾಠಿ, ತಮಿಳು ಅನುವಾದಗಳೂ ಸೇರಿದಂತೆ ಮಿಲಿಯನ್‌ಗಟ್ಟಲೆ ಪ್ರತಿಗಳು ಓದುಗ, ಓದುಗಿಯರನ್ನು ತಲುಪಿವೆ.

ಕೊನೆಯದಾಗಿ, ಕಣ್ಣ ರೆಪ್ಪೆ ಬರವಣಿಗೆಯನ್ನು ಸಹಜವಾಗಿ ಬಲ್ಲ, ಆದರೆ ಬರೆಯದ, ಬರೆಯಲಾಗದ, ಮಹಿಳೆಯರು ಕೊನೇಪಕ್ಷ ರೆಪ್ಪೆಬರವಣಿಗೆಯ ಮೂಲಕವಾದರೂ ತಮ್ಮ ಬರವಣಿಗೆಯನ್ನು ಮುನ್ನಡೆಸಲು ಬಾಬಿಯ ರೆಪ್ಪೆ ಬರವಣಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸುವೆ!

Tags

Writingeye
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X