ಕಸ ಸಂಗ್ರಹಣೆ, ಸಾಗಣೆ: ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣಿಸುವುದು ಸೂಕ್ತವಲ್ಲ : ಅಂಜುಂ ಪರ್ವೇಝ್ ನೇತೃತ್ವದ ಸಮಿತಿ

ಸಾಂದರ್ಭಿಕ ಚಿತ್ರ Photo: magnific
ಬೆಂಗಳೂರು : ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಎಲ್ಲಾ ಪ್ಯಾಕೇಜುಗಳಿಗೂ ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣಿಸುವುದು ಸೂಕ್ತವಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಅಭಿಪ್ರಾಯಿಸಿದೆ.
ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಣೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಗಂಭೀರ ಸ್ವರೂಪದ ಅಕ್ರಮಗಳು ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಸರಕಾರಕ್ಕೆ ವರದಿ ನೀಡಿದೆ. ಈ ವರದಿಯು, ಕಸ ಸಂಗ್ರಹಣೆ ಮತ್ತು ಸಾಗಣೆಯ ಟೆಂಡರ್ ಪ್ರಕ್ರಿಯೆಗಳ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಿದೆ.
ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಸರಕಾರಕ್ಕೆ ನೀಡಿರುವ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಣೆ ಕುರಿತು 2012ರಿಂದಲೂ ಟೆಂಡರ್ ಕರೆಯಲಾಗುತ್ತಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಮಿತಿಯು ಹೇಳಿರುವಂತೆ ಇದುವರೆಗೆ ಒಂದಿಲ್ಲೊಂದು ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಸದೃಢಗೊಳಿಸಿ ಕಾರ್ಯಾದೇಶ ನೀಡಲು ಸಾಧ್ಯವಾಗಿಲ್ಲ ಎಂಬ ಕುರಿತು ಸಮಿತಿಯು ಯಾವುದೇ ಟಿಪ್ಪಣಿ ಮಾಡಿಲ್ಲ.
ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥಾಪನಾ ಮಂಡಳಿಯು 7 ವರ್ಷಗಳ ಅವಧಿಗೆ ಬೇಕಾಗುವ ವಾಹನಗಳ ಅಧಾರದ ಮೇಲೆ ತಯಾರಿಸಿರುವ ಅಂದಾಜನ್ನು ಸಮಿತಿಯು ಪರಿಶೀಲಿಸಿದೆ. ಪ್ರಸ್ತಾಪಿತ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಅಂದಾಜನ್ನು ಪ್ರಸಕ್ತ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯ ಮತ್ತು ಅಂದಾಜು ಬೆಳವಣಿಗೆ ಆಧಾರದ ಮೇಲೆ ತಯಾರಿಸಿರುವುದನ್ನು ಸಮಿತಿಯು ಗಮನಿಸಿದೆ. ಇದರ ಅಧಾರದ ಮೇಲೆಯೇ 7 ವರ್ಷಗಳಿಗೆ ಬೇಕಾಗುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿರುವುದು, ವಾಹನಗಳ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ವೆಚ್ಚದ ಆಧಾರದ ಮೇಲೆ ಅಂದಾಜು ತಯಾರಿಸಿರುವುದನ್ನು ಸಮಿತಿಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ. ಅಂದಾಜನ್ನು ತಯಾರಿಸುವ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ವಾರ್ಷಿಕ ಶೇ.5ರ ದರ ಹೆಚ್ಚಳದ ಅಂದಾಜಿಗೆ ಅವಕಾಶ ಕಲ್ಪಿಸಿದೆ. ಆದರೆ ಟೆಂಡರ್ ದಾಖಲೆಯಲ್ಲಿ ಇಂಧನ ದರಗಳಲ್ಲಿನ ಹೆಚ್ಚಳ ಮತ್ತು ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ ಪಾವತಿಸುವ ಷರತ್ತು ಅಳವಡಿಸಿದೆ. ಇಂಧನ ವೆಚ್ಚವನ್ನು ಸಗಟು ದರ ಆಧಾರದದಲ್ಲಿ, ಕಾರ್ಮಿಕರ ವೆಚ್ಚವನ್ನು ಕನಿಷ್ಠ ವೇತನ ದರಗಳ ಆಧಾರದ ಮೇಲೆ ಪಾವತಿಸುವ ಷರತ್ತು ಅಳವಡಿಸಿದೆ. ಆದರೆ ಗುತ್ತಿಗೆದಾರರಿಗೆ ಇವೆರಡರಲ್ಲಿ ಯಾವ ಮೊತ್ತವನ್ನು ಪಾವತಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿತ್ತು. ಇದಕ್ಕೆ ಅನುಪಾಲನೆ ವರದಿ ನೀಡಿದ್ದ ಬಿಎಸ್ಡಬ್ಲ್ಯೂಎಂಎಲ್, ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ಅಂದಾಜು ತಯಾರಿಸುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ವೆಚ್ಚದ ಏರಿಳಿತಗಳನ್ನು ಪರಿಗಣಿಸಿದೆ, ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚುವರಿ ಮೊತ್ತವನ್ನು ಕೇವಲ ಅಂದಾಜು ಹಾಗೂ ಆಡಳಿತಾತ್ಮಕ ಅನುಮೋದನೆ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಅಲ್ಲದೇ ಶೇ.5ರಷ್ಟು ಹೆಚ್ಚುವರಿ ಮೊತ್ತವು ಗುತ್ತಿಗೆದಾರರಿಗೆ ಪಾವತಿಸಬೇಕಾದ ನಿಗದಿತ ಎಸ್ಕಲೇಷನ್ ಆಗಿಲ್ಲ ಎಂದು ಸಮಜಾಯಿಷಿ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ ಅಂದಾಜು ಪಟ್ಟಿಯಲ್ಲಿ ಒಳಗೊಂಡಿರುವ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ಷರತ್ತುಗಳು ಪರಸ್ಪರ ವಿಭಿನ್ನ ಉದ್ದೇಶ ಹೊಂದಿದೆ. ವಾರ್ಷಿಕ ಶೇ.5ರಷ್ಟು ಹೆಚ್ಚುವರಿ ಮೊತ್ತವು ಕೇವಲ ಅಂದಾಜು ತಯಾರಿಕೆ ಹಾಗೂ ಆಡಳಿತಾತ್ಮಕ ಅನುಮೋದನೆಗಾಗಿ ಒದಗಿಸಿರುವ ಬಜೆಟ್ ಮೀಸಲು ಆಗಿದೆ. ಗುತ್ತಿಗೆದಾರರಿಗೆ ಪಾವತಿಯನ್ನು ನಿರ್ಧರಿಸುವ ಅಧಾರವಾಗಿರುವುದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಇಂಧನ ಮತ್ತು ಕಾರ್ಮಿಕ ವೇತನದ ವ್ಯತ್ಯಾಸದ ಮೊತ್ತಗಳನ್ನು ಷರತ್ತುಗಳ ಪ್ರಕಾರ ಮಾತ್ರ ಪರಿಷ್ಕರಿಸಿ ಪಾವತಿಸಲಾಗುತ್ತದೆ ಎಂದು ಸಮಿತಿಗೆ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ಅಂದಾಜಿನಲ್ಲಿನ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ವ್ಯವಸ್ಥೆ ನಡುವೆ ಯಾವುದೇ ವೈರುಧ್ಯವಿಲ್ಲ. ಟೆಂಡರ್ ಅಂತಿಮಗೊಂಡು ಕಾರ್ಯಾದೇಶ ನೀಡಿದ ನಂತರ ಷರತ್ನಂತೆ ಇಂಧನ ಮತ್ತು ಕಾರ್ಮಿಕರ ವೇತನ ವ್ಯತ್ಯಾಸದ ದರಗಳನ್ನು ಪಾವತಿ ಅಥವಾ ಕಡಿತಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ದರಗಳು ಹೆಚ್ಚಿದಲ್ಲಿ ಶೇ.5ರವರೆಗೂ ಅವಕಾಶ ಕಲ್ಪಿಸಿರುವುದರಿಂದ ಅದೇ ಮೊತ್ತದಲ್ಲಿ ಪಾವತಿಸಲಾಗುವುದು. ದರಗಳು ಅಸಹಜವಾಗಿ ಏರಿಳಿತವಾದಲ್ಲಿ ಶೇ.5ರಷ್ಟು ಹೆಚ್ಚು ಮೀರಿದ್ದಲ್ಲಿ ಮುಂದಿನ ಹೆಚ್ಚುವರಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದು ಪಾವತಿಸಬೇಕಾಗುತ್ತದೆ ಎಂದು ವಿವರಿಸಿದೆ. ಬಿಎಸ್ಡಬ್ಲ್ಯೂಎಂಎಲ್ ತಯಾರಿಸಿರುವ 21 ಪ್ಯಾಕೇಜ್ಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮೌಲ್ಯಮಾಪನ ಮಾಡಿ ಶೇ. 4.5ರಿಂದ ಶೇ.14ವರೆಗಿನ ಟೆಂಡರ್ ಪ್ರೀಮಿಯಂ ಅನ್ನು ಪರಿಗಣಿಸಲು ಒಪ್ಪಿಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದೆ. ಅದೇ ರೀತಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಉಳಿಕೆ ಪ್ಯಾಕೇಜ್ಳಿಗೆ ಸಂಬಂಧಿಸಿದಂತೆಯೂ ಸಹ ಶೇ.14ರ ಟೆಂಡರ್ ಪ್ರೀಮಿಯಂನ್ನು ಪರಿಗಣಿಸಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಪ್ರಸ್ತಾವಿಸಿದೆ.
ಈ ಸಂಬಂಧ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಅವಲೋಕಿಸಿ ತನ್ನ ಅಭಿಪ್ರಾಯ ನೀಡಿದೆ. 2022ರ ಮೇ 10ರಂದು ಸರಕಾರ ಹೊರಡಿಸಿದ್ದ ಸುತ್ತೋಲೆ (ಆಇ/128/ವೆಚ್ಚ-12/2021) ಪ್ರಕಾರ ಗರಿಷ್ಠ ಶೇ. 5ರಷ್ಟು ಟೆಂಡರ್ ಪ್ರೀಮಿಯಂನ್ನು ಪರಿಗಣಿಸಲು ಹಾಗೂ ಅದಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ನ್ನು ಅಂಗೀಕರಿಸ ಬಯಸಿದ್ದಲ್ಲಿ ಸಮರ್ಥನೀಯ ಕಾರಣಗಳನ್ನು ನೀಡಬೇಕು. ಮತ್ತು ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆದು ಅಂಗೀಕರಿಸಬೇಕು ಎಂದು ಹೇಳಿದೆ. ಅಲ್ಲದೇ ಇನ್ನು ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಪ್ಯಾಕೇಜ್ಗಳ ಸಂಬಂಧದಲ್ಲಿ ಸಹ ಶೇ. 14 ಟೆಂಡರ್ ಪ್ರೀಮಿಯಂನ್ನು ಪರಿಗಣಿಸುವುದು ಸೂಕ್ತವಾಗಿ ಕ್ರಮವಾಗಿಲ್ಲ ಎಂದು ಸಮಿತಿಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಇದೇ 21 ಪ್ಯಾಕೇಜ್ಗಳಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದಿಸಿದ್ದ ಸಚಿವ ಸಂಪುಟವು ಸಾರ್ವಜನಿಕ ಹಿತಾಸಕ್ತಿ, ಘನತೆಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದೊಂದು 4,791.95 ಕೋಟಿ ರೂ. ಮೊತ್ತದ ಹಗರಣವಿದು ಎಂಬ ಮಾತು ಕೇಳಿ ಬಂದಿತ್ತು. ಈ ಕುರಿತು ದಿ ಫೈಲ್ ಸಚಿವ ಸಂಪುಟ ರಹಸ್ಯ ಹಾಳೆಗಳ ಸಮೇತ ವರದಿ ಪ್ರಕಟಿಸಿತ್ತು.






