ನೇಪಾಳ | ಹಿಂಸಾತ್ಮಕ ಪ್ರತಿಭಟನೆ ವೇಳೆ ಹೊಟೇಲ್ಗೆ ಬೆಂಕಿ : ಭಾರತೀಯ ಮಹಿಳೆ ಮೃತ್ಯು

Photo | indiatoday
ಕಠ್ಮಂಡು: ನೇಪಾಳ ಸರಕಾರದ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಕಠ್ಮಂಡವಿನ ಹೋಟೆಲ್ ಮೇಲೆ ನಡೆದ ದಾಳಿಯಲ್ಲಿ ಘಾಝಿಯಾಬಾದ್ ಮೂಲದ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಪತಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ರಾಜೇಶ್ ದೇವಿ ಸಿಂಗ್ ಗೋಲಾ ಎಂದು ಗುರುತಿಸಲಾಗಿದೆ.
ಪ್ರತಿಭಟನಾಕಾರರ ಗುಂಪು ಹೋಟೆಲ್ ಗೆ ಬೆಂಕಿ ಹಚ್ಚಿದಾಗ, ಅಲ್ಲಿಂದ ತಪ್ಪಿಸಿಕೊಳ್ಳಲು ಕಿಟಕಿಯ ಪರದೆಯನ್ನು ತಾತ್ಕಾಲಿಕ ಹಗ್ಗವನ್ನಾಗಿ ಬಳಸಿಕೊಂಡು, ಹೋಟೆಲ್ ನ ನಾಲ್ಕನೆ ಅಂತಸ್ತಿನಿಂದ ಕೆಳಗಿಳಿಯುವ ಪ್ರಯತ್ನ ನಡೆಸುವಾಗ, ಕೆಳಗೆ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮೃತ ಮಹಿಳೆಯ ಪುತ್ರ ವಿಶಾಲ್, ತಾಯಿ ರಾಜೇಶ್ ದೇವಿ ಸಿಂಗ್ ಹಾಗೂ ತಂದೆ ರಾಮ್ ವೀರ್ ಸಿಂಗ್ ಗೋಲಾ (55) ಒಂದು ವಾರದ ರಜೆಗಾಗಿ ಸೆಪ್ಟೆಂಬರ್ 7ರಂದು ಕಠ್ಮಂಡುಗೆ ತೆರಳಿದ್ದರು. ಅವರು ಅಲ್ಲಿ ಹಯಾತ್ ರೀಜೆನ್ಸಿಯಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ, ಸೆಪ್ಟೆಂಬರ್ 9ರಂದು ಪಶುಪತಿನಾಥ್ ದೇವಾಲಯಕ್ಕೆ ತೆರಳಿದ್ದರು. ಕಠ್ಮಂಡವಿನ ಹೋಟೆಲ್ ಮೇಲೆ ಬೆಂಕಿ ಹಚ್ಚಿದಾಗ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.





