ಒಎಫ್ಸಿ ಕೇಬಲ್ ಅಳವಡಿಕೆಯಲ್ಲಿ ಜಿಯೋ ಸಹಿತ ವಿವಿಧ ಕಂಪೆನಿಗಳಿಂದ ಶುಲ್ಕ ವಸೂಲಿ ಮಾಡದೆ ‘ಉದಾರತೆ’ ಪ್ರದರ್ಶಿಸಿದ ಗ್ರಾಪಂಗಳು

ಸಾಂದರ್ಭಿಕ ಚಿತ್ರ PC: istockphoto
ಬೆಂಗಳೂರು: ಒಎಫ್ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಸರಕಾರವು ನಿಗದಿಪಡಿಸಿದ್ದ ಶುಲ್ಕವನ್ನು ರಾಜ್ಯದ ಹಲವು ಗ್ರಾಮ ಪಂಚಾಯತ್ಗಳು ವಸೂಲು ಮಾಡಿಲ್ಲ. ರಿಲಯನ್ಸ್ ಸಮೂಹದ ಜಿಯೋ ಸಂಸ್ಥೆ ಸೇರಿದಂತೆ ಹಲವು ಕಂಪನಿಗಳಿಂದ ನಿಗದಿತ ಶುಲ್ಕವನ್ನು ವಸೂಲು ಮಾಡದೇ ಉದಾರತೆ ತೋರಿರುವುದು ಇದೀಗ ಬಹಿರಂಗವಾಗಿದೆ.
ಅದೇ ರೀತಿ 29 ಜಿಲ್ಲೆಗಳಲ್ಲಿನ 1,830 ಪಂಚಾಯತ್ಗಳು ಮಾಡಿದ್ದ 356.65 ಕೋಟಿ ರೂ. ವೆಚ್ಚಕ್ಕೆ ಪೂರಕ ಬಿಲ್ಗಳೇ ಇಲ್ಲ. ವೆಚ್ಚ ಮಾಡಿರುವ ಬಿಲ್ಗಳನ್ನು ಲೆಕ್ಕ ಪರಿಶೋಧನೆಗೆ ವಹಿಸಿಲ್ಲ. ಹೀಗಾಗಿ ಇಷ್ಟೊಂದು ಮೊತ್ತವು ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯ (2022-23) ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇವೆ.
ರಾಜ್ಯದ 2,916 ಗ್ರಾಮ ಪಂಚಾಯತ್ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಹಾಗೂ ವಸೂಲಾತಿಯಲ್ಲಿ ಪಂಚಾಯತ್ಗಳ ನಿರ್ಲಕ್ಷ್ಯ, ಪಂಚಾಯತ್ಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿದ್ದವು.
ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು, ಗ್ರಾಮ ಪಂಚಾಯತ್ಗಳು ವಸೂಲು ಮಾಡುವ ಉಪ ಕರಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ ಎಂಬ ಸಂಗತಿಯು ಬಹಿರಂಗಗೊಂಡಿದ್ದರ ಬೆನ್ನಲ್ಲೇ ಒಎಫ್ಸಿ ಕೇಬಲ್ ಶುಲ್ಕವನ್ನೂ ಸಹ ವಸೂಲು ಮಾಡಿಲ್ಲ ಎಂಬ ವರದಿಯನ್ನೂ ಲೆಕ್ಕ ಪರಿಶೋಧಕರು ಬಿಡುಗಡೆ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "the-file.in"ಗೆ ಲಭ್ಯವಾಗಿದೆ.
ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಅಳವಡಿಸಲು ರಸ್ತೆ ಅಗೆತ ಮಾಡಲು ಶುಲ್ಕ ವಸೂಲು ಮಾಡಬೇಕು ಎಂದು 2016ರಲ್ಲೇ ಸುತ್ತೋಲೆ ಹೊರಡಿಸಿತ್ತು. ಪ್ರಕರಣ 199ರಂತೆ ಗ್ರಾಮ ಪಂಚಾಯತ್ಗಳು ತೆರಿಗೆ ಮತ್ತು ಶುಲ್ಕವನ್ನು ಅನುಸೂಚಿಯಲ್ಲಿ ನಿಗಿದಿಪಡಿಸಿದಂತೆ ಮತ್ತು ನಿಯಮಗಳ ಪ್ರಕಾರ ಯಾವುದೇ ಇತರ ಶುಲ್ಕಗಳನ್ನು ವಿಧಿಸಿ ವಸೂಲು ಮಾಡಲು ಅವಕಾಶ ಕಲ್ಪಿಸಿತ್ತು.
ಗ್ರಾಮ ಪಂಚಾಯತ್ಗಳು ಒಎಫ್ಸಿ ಕೇಬಲ್ ದರಗಳು ಮತ್ತು ಶುಲ್ಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು. ಮತ್ತು ವಸೂಲು ಮಾಡುವುದು ಸಹ ಪಂಚಾಯತ್ಗಳ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಶುಲ್ಕ ನಿಗದಿ ಮತ್ತು ವಸೂಲು ಮಾಡುವಲ್ಲಿ ಹಲವು ನ್ಯೂನತೆಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿ ರುವುದು ವರದಿಯಿಂದ ಗೊತ್ತಾಗಿದೆ.
ಪ್ರತೀ ವರ್ಷ ತಮ್ಮ ವ್ಯಾಪ್ತಿಯಲ್ಲಿ ಒಎಫ್ಸಿ ಕೇಬಲ್ ಅಳವಡಿಕೆಯ ಬಗ್ಗೆ ಗ್ರಾಮ ಪಂಚಾಯತ್ ತಮ್ಮ ಸಿಬ್ಬಂದಿಯಿಂದ ಸಮೀಕ್ಷೆ ಮಾಡಿಸಿಲ್ಲ. ಒಎಫ್ಸಿ ಕೇಬಲ್ ಅಳವಡಿಕೆಗೆ ಗ್ರಾಮ ಪಂಚಾಯತ್ಗಳ ಅನುಮತಿ ಇಲ್ಲದೆಯೇ ಅಳವಡಿಸಲಾಗಿತ್ತು. ಕೇಬಲ್ ಅಳವಡಿಕೆ ದರಗಳನ್ನು ವಸೂಲು ಮಾಡಿರಲಿಲ್ಲ. ಹಾಗೂ ಪ್ರತೀ ವರ್ಷ ನವೀಕರಣವನ್ನೂ ಮಾಡಿರಲಿಲ್ಲ.
ಈ ಸಂಬಂಧ ಡಿಸಿಬಿ ವಹಿಯನ್ನೂ ಸಹ ಸಮರ್ಪಕವಾಗಿ ಮತ್ತು ನಿಯಮಿತವಾಗಿ ನಿರ್ವಹಿಸಿರಲಿಲ್ಲ. ಹೀಗಾಗಿ ಅಂಕಿ ಅಂಶಗಳ ಕೊರತೆಯಿಂದಾಗಿ ಪಂಚಾಯತ್ಗೆ ಬರಬೇಕಿದ್ದ ವರಮಾನ ನಷ್ಟವಾಗಿದೆ.
ರಾಜ್ಯದ 6 ಜಿಲ್ಲೆಗಳ 16 ಗ್ರಾಮ ಪಂಚಾಯತ್ಗಳು ಒಎಫ್ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಕಂಪೆನಿಗಳಿಂದ ಕೇಬಲ್ ಶುಲ್ಕವನ್ನು ವಸೂಲು ಮಾಡಿಲ್ಲ. ಇದರ ಮೊತ್ತ 33.26 ಲಕ್ಷ ರೂ.ನಷ್ಟಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
356.65 ಕೋಟಿ ರೂ. ವೆಚ್ಚಕ್ಕೆ ಪೂರಕ ಬಿಲ್ಗಳೇ ಇಲ್ಲ
29 ಜಿಲ್ಲೆಗಳಲ್ಲಿನ 1,830 ಪಂಚಾಯತ್ಗಳು ವೆಚ್ಚಗಳಿಗೆ ಪೂರಕವಾದ ಬಿಲ್ಗಳನ್ನೂ ಸಹ ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ. ಒಂದೊಮ್ಮೆ ಲೆಕ್ಕ ಪರಿಶೋಧನೆಗೆ ಬಿಲ್ಗಳನ್ನು ಹಾಜರುಪಡಿಸದೇ ಇದ್ದಲ್ಲಿ ಅಂತಹ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪವೆಂದು ಪರಿಗಣಿಸಲಾಗುತ್ತದೆ. ಮತ್ತು ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು ಮತ್ತು ಸಿವಿಲ್, ಕ್ರಿಮಿನಲ್ ಮೊಕದ್ದಮೆಯನ್ನೂ ಸಹ ಹೂಡಲು ಅವಕಾಶವಿದೆ. ಅದೇ ರೀತಿ ಆಡಿಟ್ ಕೈಪಿಡಿ ನಿಯಮ 537ರ ಪ್ರಕಾರ ಇದನ್ನು ಹಣ ದುರುಪಯೋಗವೆಂದೂ ಸಹ ಪರಿಗಣಿಸಬಹುದು. ಈ 1,830 ಪಂಚಾಯತ್ಗಳು ಮಾಡಿದ್ದ 356.65 ಕೋಟಿ ರೂ. ವೆಚ್ಚಕ್ಕೆ ಪೂರಕವಾದ ಬಿಲ್ಗಳನ್ನೇ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಜಿಯೋ ಸಂಸ್ಥೆ ಮೇಲೆ ಉದಾರತೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುಂಡಗದೊರೆ ಪಂಚಾಯತ್ ವ್ಯಾಪ್ತಿಯಲ್ಲಿ ಟೆಲಿಸೋನಿಕ್ ಸಂಸ್ಥೆಯು 1,710 ಮೀ. ಮತ್ತು ಜಿಯೋ ಸಂಸ್ಥೆಯು 550 ಮೀಟರ್ ಸೇರಿ ಒಟ್ಟು 2,260 ಮೀಟರ್ ಉದ್ದದ ಕೇಬಲ್ ಅಳವಡಿಸಿತ್ತು. ನಿಗದಿಪಡಿಸಿದ್ದ ದರಗಳ ಪ್ರಕಾರ ಈ ಸಂಸ್ಥೆಗಳಿಂದ 14,56,570 ರೂ.ಗಳನ್ನು ವಸೂಲಿ ಮಾಡಬೇಕಿತ್ತು. ಆದರೆ ಈ ಪಂಚಾಯತ್ ಕೇವಲ 11,86,500 ರೂ.ಗಳನ್ನು ಮಾತ್ರ ವಸೂಲು ಮಾಡಿತ್ತು. ಇನ್ನುಳಿದ 2.70 ಲಕ್ಷ ರೂ.ಗಳನ್ನು ವಸೂಲು ಮಾಡಿರಲಿಲ್ಲ. ಇದು ಪಂಚಾಯತ್ಗೆ ಆಗಿರುವ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.







