ಶೇ.60ರಷ್ಟು ತೆರಿಗೆಯೇತರ ಆದಾಯ ವಸೂಲಿ ಮಾಡದ ಗ್ರಾಮ ಪಂಚಾಯತ್ಗಳು

Photo: chatgpt.com
ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತ್ಗಳು ಶೇ.60ರಷ್ಟು ತೆರಿಗೆಯೇತರ ಆದಾಯವನ್ನು ವಸೂಲಿ ಮಾಡಿಲ್ಲ. ಆರಂಭಿಕ ಮೊತ್ತದೊಂದಿಗೆ ಕೇವಲ ಶೇ.36ರಷ್ಟು ತೆರಿಗೆಯೇತರ ಆದಾಯವನ್ನಷ್ಟೇ ವಸೂಲು ಮಾಡಿದೆ. ಅಷ್ಟೇ ಅಲ್ಲ ರಾಜ್ಯದ 27 ಜಿಲ್ಲೆಗಳ 1,478 ಗ್ರಾಮ ಪಂಚಾಯತ್ಗಳು ವಸೂಲು ಮಾಡಿದ್ದ 13.07 ಕೋಟಿ ರೂ.ಯಷ್ಟು ಆಂತರಿಕ ಆದಾಯವನ್ನು ಗ್ರಾಮ ಪಂಚಾಯತ್ ನಿಧಿಗೆ ಜಮೆಯನ್ನೇ ಮಾಡಿಲ್ಲ. ಹೀಗಾಗಿ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸುಸ್ಥಿರ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಯಲು ಮಾಡಿದೆ.
ಅದಷ್ಟೇ ಅಲ್ಲ ಕಡಿಮೆ ಪ್ರಮಾಣದ ತೆರಿಗೆ ಮತ್ತು ತೆರಿಗೆಯೇತರ ಆದಾಯವು ವಸೂಲಿ ಅಗಿರುವುದರಿಂದ ಹಣಕಾಸು ಆಯೋಗವು ಬಿಡುಗಡೆ ಮಾಡುವ ಅನುದಾನದ ಮೇಲೂ ಇದು ಪರಿಣಾಮ ಬೀರಿದೆ. ಹೀಗಾಗಿಯೇ ಪ್ರೋತ್ಸಾಹ ಧನ ಬಿಡುಗಡೆಯಲ್ಲಿಯೂ ಇಳಿಕೆಯಾಗಿದೆ ಎಂದು ಲೆಕ್ಕ ಪರಿಶೋಧಕರು ಪತ್ತೆಹಚ್ಚಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ವರದಿಯನ್ನು ಬಿಡುಗಡೆ ಮಾಡಿದೆ. ತೆರಿಗೆ ಮತ್ತು ತೆರಿಗೆಯೇತರ ಆದಾಯ ಸಂಗ್ರಹಣೆಯಲ್ಲಿ ಗ್ರಾಮ ಪಂಚಾಯತ್ಗಳು ಹಿಂದೆ ಬಿದ್ದಿರುವುದು ಮತ್ತು ಇದರಿಂದಾಗಿ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿರುವುದನ್ನು ಮುನ್ನೆಲೆಗೆ ತಂದಿದೆ.
2023-24ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯ ಪ್ರತಿಯು ‘the-file.in"ಗೆಲಭ್ಯವಾಗಿದೆ.
ವರ್ಷದ ಬೇಡಿಕೆಗಳನ್ನೊಳಗೊಂಡಂತೆ ತೆರಿಗೆಯೇತರ ಆದಾಯವನ್ನು ಶೇ.36ರಷ್ಟು ಮಾತ್ರ ವಸೂಲಿ ಮಾಡಿದೆ. ಶೇ.64ರಷ್ಟನ್ನು ವಸೂಲು ಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಮೊತ್ತವು ವರ್ಷದಿಂದ ವರ್ಷಕ್ಕೆ ಸಂಚಯಿತವಾಗುತ್ತಿದೆ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡುಬಂದಿದೆ.
‘ಪಂಚಾಯತ್ಗಳು ತಮ್ಮ ಸ್ವಂತ ವರಮಾನಗಳನ್ನು ಪರಿಪೂರ್ಣವಾಗಿ ವಸೂಲು ಮಾಡಲು ಕ್ರಮಕೈಗೊಂಡಿಲ್ಲ. ಸಂಪೂರ್ಣವಾಗಿ ಸರಕಾರದ ಅನುದಾನಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಗ್ರಾಮ ಪಂಚಾಯತ್ಗಳ ಸುಸ್ಥಿರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯುಂಟಾಗಿದೆ. ಇದು ಸಂಸ್ಥೆಗಳಲ್ಲಿನ ವೃತ್ತಿಪರತೆ ಮತ್ತು ದಕ್ಷತೆ ಜೊತೆಗೆ ಹೊಣೆಗಾರಿಕೆ ಇಲ್ಲದಿರುವುದನ್ನು ತೋರಿಸುತ್ತದೆ,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.
ತೆರಿಗೆ ಸಂಗ್ರಹಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಪಂಚಾಯತ್ಗಳು ಮ್ಯಾನುಯಲ್ ಮೂಲಕ ರಸೀದಿ ನೀಡುತ್ತಿವೆ. ಮತ್ತು ರದ್ದುಗೊಳಿಸಿರುವ ರಸೀದಿಗಳ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಹೀಗಾಗಿ ತೆರಿಗೆ ಪಾವತಿಯಲ್ಲಿ ದುರ್ಬಳಕೆ ಆಗಿದೆ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. 2017ರಲ್ಲಿ ಸರಕಾರವು ಹೊರಡಿಸಿದ್ದ ಸುತ್ತೋಲೆ ಪ್ರಕಾರ ( ಗ್ರಾಅಪ 11 ಗ್ರಾಪಸ 2016 ದಿನಾಂಕ 09-03-2017) ಮತ್ತು ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 200ರ ಅನ್ವಯ ಗ್ರಾಮ ಪಂಚಾಯತ್ಗಳು ತಮ್ಮ ಕಾರ್ಯಕ್ಷಮತೆಯಿಂದ ಹಿಂದಿನ ವರ್ಷಕ್ಕಿಂತ ಆ ಸಾಲಿನಲ್ಲಿ ತೆರಿಗೆ ಆದಾಯ, ತೆರಿಗೆಯೇತರ ಆದಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಸೂಲು ಮಾಡಬೇಕು. ಅಲ್ಲದೇ ತನ್ನ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿ
ಸಿಕೊಂಡಿರಬೇಕು. ವಸೂಲಾಗಬೇಕಾಗಿರುವ ತೆರಿಗೆಯಲ್ಲಿ ಶೇ.80ಕ್ಕಿಂತ ಕಡಿಮೆ ವಸೂಲಿಯಾಗಿದ್ದರೇ ಹಣಕಾಸು ಆಯೋಗದಿಂದ ಬಿಡುಗಡೆಯಾಗುವ ಅನುದಾನದ ಮೇಲೆ ಕಡಿಮೆ ವಸೂಲಾತಿಯು ಪರಿಣಾಮ ಬೀರುತ್ತದೆ. ಅಲ್ಲದೇ ಪ್ರೋತ್ಸಾಹ ಧನದ ಬಿಡುಗಡೆಯಲ್ಲಿಯೂ ಕಡಿಮೆಯಾಗುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
<ಆಂತರಿಕ ಆದಾಯ ಜಮೆಯಾಗಿಲ್ಲ: ಕರ್ನಾಟಕ ಪಂಚಾಯತ್ರಾಜ್ ಆಯವ್ಯಯ ಮತ್ತು ಲೆಕ್ಕಪತ್ರ ನಿಯಮಗಳು 2006ರ ನಿಯಮ 19 ಮತ್ತು 25ರ ಅನ್ವಯ ಗ್ರಾಮ ಪಂಚಾಯತ್ನಿಂದ ಸಂಗ್ರಹಿಸುವ ಆಸ್ತಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ವಿಳಂಬವಿಲ್ಲದೇ ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇಧ 4 (ಎ) ಪ್ರಕಾರ 2 ದಿನಗಳ ಒಳಗಾಗಿ ಗ್ರಾಮ ಪಂಚಾಯತ್ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಆದರೆ ಗ್ರಾಮ ಪಂಚಾಯತ್ ವಸೂಲು ಮಾಡಿರುವ ತೆರಿಗೆ ಮತ್ತು ಶುಲ್ಕಗಳ ಮೊತ್ತವನ್ನು ಗ್ರಾಮ ಪಂಚಾಯತ್ನ ನಿಧಿಗೆ ಜಮೆ ಮಾಡಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ಗಳ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಆರ್ಥಿಕ ಶಿಸ್ತು ಇಲ್ಲ. ಇಂತಹ ಹಲವು ಪ್ರಕರಣಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
<13.07 ಕೋಟಿ ರೂ.ಎಲ್ಲಿದೆ?: ರಾಜ್ಯದ 27 ಜಿಲ್ಲೆಗಳಲ್ಲಿರುವ 1,478 ಗ್ರಾಮ ಪಂಚಾಯತ್ಗಳು 13.07 ಕೋಟಿ ರೂ. ವಸೂಲಿ ಮಾಡಿದ್ದ ಆಂತರಿಕ ಆದಾಯವನ್ನು ಗ್ರಾಮ ಪಂಚಾಯತ್ಗಳಿಗೆ ಜಮೆಯನ್ನೇ ಮಾಡಿಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ.
57 ಪಂಚಾಯತ್ಗಳಲ್ಲಿ ಹಣ ದುರುಪಯೋಗ
ಕರ್ನಾಟಕ ಪಂಚಾಯತ್ರಾಜ್ 2006ರ ನಿಯಮಗಳು 30(5) ರ ಅನ್ವಯ ನೀಡಲಾದ ರಸೀದಿಗಳ ಕಚೇರಿ ಪ್ರತಿಗಳನ್ನು ಆದರಿಸಿ ರಿಜಿಸ್ಟರ್ನಲ್ಲಿ ಸಂಬಂಧಪಟ್ಟ ಕಾಲಂ ಅಡಿಯಲ್ಲಿ ವಸೂಲಾತಿಗಳನ್ನು ಅದೇ ದಿನವೇ ನಮೂದಿಸಬೇಕು. ಈ ದಾಖಲೆ ಪುಸ್ತಕಗಳನ್ನು ಕಚೇರಿ ಸಿಬ್ಬಂದಿಯೇ ನಿರ್ವಹಣೆ ಮಾಡಬೇಕು. ತೆರಿಗೆದಾರರಿಂದ ಹಣ ವಸೂಲು ಮಾಡುವ ವ್ಯಕ್ತಿಗೆ ಯಾವ ಸಂದರ್ಭದಲ್ಲಿಯೂ ಈ ರಿಜಿಸ್ಟರ್ ನೀಡಕೂಡದು. ಆದರೆ ಗ್ರಾಮ ಪಂಚಾಯತ್ ವಸೂಲಿ ಮಾಡಿದ ಮೊತ್ತವನ್ನು ಡಿಸಿಬಿ ವಹಿಯಲ್ಲಿ ಕಡಿಮೆ, ಹೆಚ್ಚು ನಮೂದಿಸಿ ಆ ಮೂಲಕ ಹಣ ದುರುಪಯೋಗ ಮಾಡಿರುವ ಪ್ರಕರಣಗಳು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡು ಬಂದಿದೆ. ಸಂಬಂಧಿತ ವ್ಯಕ್ತಿಯು ಸಂಸ್ಥೆಗೆ ಬರಬೇಕಾದಂತಹ ಆದಾಯ, ವರಮಾನವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಸರಕಾರಕ್ಕೆ ನಷ್ಟ ಉಂಟು ಮಾಡಿದೆ. ಅಂತಹಹವರನ್ನು ಸೇವಾ ನಿಯಮಗಳ ಅನ್ವಯ ಗುರುತರ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಇದು ಸಂಸ್ಥೆಯ ಆಡಳಿತ ವೈಫಲ್ಯ ಮತ್ತು ಆರ್ಥಿಕ ಶಿಸ್ತು ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖವಾಗಿದೆ.






