ಬಾಗಲಕೋಟೆಯಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ ಶೀಘ್ರದಲ್ಲಿಯೇ ಭೂಮಿಪೂಜೆ : ಆರ್.ಬಿ.ತಿಮ್ಮಾಪುರ

ಬಾಗಲಕೋಟೆ: ನವನಗರ ಜಿಲ್ಲಾ ಕ್ರೀಡಾಂಗಣ ದಲ್ಲಿ ನಡೆದ 70 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ ಧ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ನುಡಿದಂತೆ ನಡೆದಿದ್ದು, ಹಲವು ವರ್ಷಗಳ ಹೋರಾಟ ಸಾಕಾರಗೊಳಿಸಿದೆ. ಅತ್ಯಂತ ಮಾನವೀಯತೆಯ ದೃಷ್ಠಿಯಿಂದ ಜನಪರ ನಿರ್ಣಯ ಕೈಗೊಂಡಿರುವುದು ನಮ್ಮ ರೈತ ಭಾಂದವರಿಗೆ ಸಂತಸ ತಂದಿದೆ. ಈ ಚಾರಿತ್ರಿಕ ತೀರ್ಮಾಣ ಕೈಗೊಂಡ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಘೋಷಿಸಿದಂತೆ ಬಾಗಲಕೋಟೆಯಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುತ್ತಿದೆ. 150 ಎಂ.ಬಿ.ಬಿ.ಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅವಶ್ಯವಿರುವ ವೈದ್ಯಕೀಯ ಕಾಲೇಜ ಕಟ್ಟಡ, ಬಾಲಕರ, ಬಾಲಕಿಯರ ಹಾಸ್ಟೇಲ್‍ಗಳು, ಬೋಧಕ ಸಿಬ್ಬಂದಿಗಳ ವಸತಿ ಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ 450 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್ ನಿಂದ 524.256 ಮೀಟರ್‌ಗೆ ಏರಿಸಲು ಅನುಮತಿ ನೀಡಲಾಗಿದೆ ಎಂದರು.
ಈ ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ. ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿದೆ. ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ಕಾರ್ಯಕ್ರಮಗಳಿಗೆ ಅಗತ್ಯವಿರುವ ಹೆಚ್ಚುವರಿ ಸುಮಾರು 75 ಸಾವಿರ ಕೋಟಿ ಮೊತ್ತವನ್ನು ನಾಲ್ಕು ಆರ್ಥಿಕ ವರ್ಷದೊಳಗೆ ಭರಿಸಲು ಸುಮಾರು 18 ಸಾವಿರ ಕೋಟಿ ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸೂಕ್ತವಾಗಿ ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಆಕರ್ಷಣೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







