ಉತ್ತರಾಖಂಡ ಬಳಿಕ ಯುಸಿಸಿ ಜಾರಿಗೆ ಗುಜರಾತ್ ಚಿಂತನೆ

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ PC: x.com/Bhupendrapbjp
ಗಾಂಧಿನಗರ: ಉತ್ತರಾಖಂಡ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿದ ಬೆನ್ನಲ್ಲೇ, ಗುಜರಾತ್ ನಲ್ಲಿ ಇದರ ಅಗತ್ಯತೆಯನ್ನು ಅಧ್ಯಯನ ಮಾಡುವ ಸಲುವಾಗಿ ಮತ್ತು ಮಸೂದೆಯ ಕರಡು ಸಿದ್ಧಪಡಿಸಲು ಬಿಜೆಪಿ ಸರ್ಕಾರ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಐದು ಮಂದಿಯ ಉನ್ನತ ಮಟ್ಟದ ಸಮಿತಿ ರಚಿಸಿದೆ. 45 ದಿನಗಳಲ್ಲಿ ಈ ಸಮಿತಿ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪ್ರಕಟಿಸಿದ್ದಾರೆ. ರಾಷ್ಟ್ರವ್ಯಾಪಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುಸಿಸಿ ಬಗ್ಗೆ ವ್ಯಾಪಕ ಚರ್ಚೆಗಳು ದೇಶಾದ್ಯಂತ ನಡೆಯುತ್ತಿರುವ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. ಎಲ್ಲ ಸಮುದಾಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ. ಆದರೆ ಇದು ಅಲ್ಪಸಂಖ್ಯಾತರ ಸಂಪ್ರದಾಯಗಳಿಗೆ ಧಕ್ಕೆ ತರುತ್ತದೆ ಹಾಗೂ ಸಂವಿಧಾನಾತ್ಮಕ ರಕ್ಷಣೆಯನ್ನು ನಾಶಪಡಿಸುತ್ತದೆ ಎನ್ನುವುದು ವಿರೋಧ ಪಕ್ಷಗಳ ವಾದ. ಆದಿವಾಸಿಗಳ ಹಕ್ಕನ್ನು ಯುಸಿಸಿ ಖಾತರಿಪಡಿಸುತ್ತದೆ ಹಾಗೂ ಪ್ರಕ್ಷುಬ್ಧ ಕ್ಷೇತ್ರಗಳ ಕಾಯ್ದೆಯ ನಿಬಂಧನೆಗಳಿಗೆ ಇದು ಧಕ್ಕೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಉತ್ತರಾಖಂಡ ಸರ್ಕಾರ ಇತ್ತೀಚೆಗೆ ಯುಸಿಸಿ ಜಾರಿಗೊಳಿಸಿ, ದೇಶದಲ್ಲೇ ಈ ವಿವಾದಾತ್ಮಕ ಕ್ರಮ ಕೈಗೊಂಡ ಮೊದಲ ರಾಜ್ಯ ಎನಿಸಿದೆ. ಗುಜರಾತ್ ಸರ್ಕಾರದ ನಿರ್ಣಯವನ್ನು ವಿರೋಧ ಪಕ್ಷಗಳು ಟೀಕಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲಾಭ ಪಡೆಯಲು ನಡೆಸಿದ ರಾಜಕೀಯ ತಂತ್ರ ಎಂದು ಬಣ್ಣಿಸಿವೆ. ಸಮುದಾಯಗಳ ನಡುವೆ ವಿಭಜನೆ ತರುವ ಉದ್ದೇಶದಿಂದ ಬಿಜೆಪಿ ಯುಸಿಸಿ ಜಾರಿಗೆ ಮುಂದಾಗಿದೆ ಎಂದು ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ಆಪಾದಿಸಿದ್ದಾರೆ.