ಗುಜರಾತ್ : ಪಾಕ್ ಬೇಹುಗಾರರಿಗೆ ಬಿಎಸ್ಎಫ್, ನೌಕಾಪಡೆಯ ಮಾಹಿತಿ ಹಂಚಿಕೆ; ಆರೋಗ್ಯ ಕಾರ್ಯಕರ್ತನ ಬಂಧನ

ಸಹದೇವ್ ಸಿನ್ಹ ಗೋಹಿಲ್ PC: x.com/JAMMULINKS
ಅಹ್ಮದಾಬಾದ್: ಭಾರತದ ಗಡಿಭದ್ರತಾ ಪಡೆ ಮತ್ತು ನೌಕಾಪಡೆ ಬಗೆಗಿನ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರ ಜತೆ ಹಂಚಿಕೊಂಡ ಆರೋಪದಲ್ಲಿ ಕಚ್ ಪ್ರದೇಶದ ಆರೋಗ್ಯ ಕಾರ್ಯಕರ್ತನೊಬ್ಬನನ್ನು ಗುಜರಾತ್ ಭಯೋತ್ಪಾದಕ ನಿಗ್ರಹ ಪಡೆ ಬಂಧಿಸಿದೆ.
ಬಂಧಿತ ವ್ಯಕ್ತಿಯನ್ನು ಸಹದೇವ್ ಸಿನ್ಹ ಗೋಹಿಲ್ (28) ಎಂದು ಗುರುತಿಸಲಾಗಿದೆ. ಈತನನ್ನು ಲೋಕಪಥ ತಾಲೂಕಿನಿಂದ ಬಂಧಿಸಲಾಗಿದೆ. ಅದಿತಿ ಭಾರದ್ವಾಜ್ ಎಂದು ತನ್ನನ್ನು ಪರಿಚಯಿಸಿಕೊಂಡ ಪಾಕ್ ಏಜೆಂಟ್ ನ ಆಮಿಷಕ್ಕೆ ಒಳಗಾಗಿ ಆರೋಪಿ, ಸೇನೆಯ ಹಾಲಿ ಇರುವ ಹಾಗೂ ನಿರ್ಮಾಣ ಹಂತದಲ್ಲಿರುವ ಸಂಸ್ಥೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಎಂದು ಎಟಿಎಸ್ ಹೇಳಿದೆ.
"ಲೋಕಪಥ್ ನಿವಾಸಿಯಾಗಿದ್ದ ಈತ ಕಚ್ ಪ್ರದೇಶದ ಬಿಎಸ್ಎಫ್ ಮತ್ತು ನೌಕಾಪಡೆ ಸೌಲಭ್ಯಗಳ ಬಗೆಗಿನ ಚಿತ್ರವನ್ನು ವಾಟ್ಸಪ್ ಮೂಲಕ ಪಾಕಿಸ್ತಾನಿ ಬೇಹುಗಾರರ ಜತೆ ಹಣಕ್ಕಾಗಿ ಹಂಚಿಕೊಂಡಿದ್ದ" ಎಂದು ಎಟಿಎಸ್ ಎಸ್ಪಿ ಸಿದ್ಧಾರ್ಥ ಹೇಳಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತ ಗೋಹಿಲ್ ನನ್ನು ಪಾಕಿಸ್ತಾನಿ ಏಜೆಂಟ್ ಮೊದಲು ಮಾತಾ ನೋ ಮಧ್ ಗ್ರಾಮದಲ್ಲಿ 2023ರ ಜೂನ್ ನಲ್ಲಿ ವಾಟ್ಸಪ್ ಮೂಲಕ ಸಂಪರ್ಕಿಸಿದ್ದು, ಬಳಿಕ ಇಬ್ಬರೂ ಸ್ನೇಹ ಬೆಳೆಸಿದ್ದರು ಎಂದು ಅವರು ವಿವರಿಸಿದ್ದಾರೆ.
"ಆತನ ವಿಶ್ವಾಸ ಸಂಪಾದಿಸಿದ ಬಳಿಕ ಏಜೆಂಟ್ ಬಿಎಸ್ಎಫ್ ಮತ್ತು ನೌಕಾಪಡೆಯ ಹಾಲಿ ಇರುವ ಮತ್ತು ನಿರ್ಮಾಣ ಹಂತದ ಸೌಲಭ್ಯಗಳ ಬಗ್ಗೆ ಚಿತ್ರಗಳನ್ನು ಕೇಳಿದ್ದಾಳೆ. ಆ ವರ್ಗೀಕೃತ ಮಾಹಿತಿಗಳನ್ನು ಗೋಹಿಲ್ ಹಂಚಿಕೊಂಡಿದ್ದಾನೆ. ಆಕೆ ಪಾಕಿಸ್ತಾನಿ ಏಜೆಂಟ್ ಎನ್ನುವುದು ಗೋಹಿಲ್ ಗೆ ತಿಳಿದಿತ್ತು" ಎಂದು ಎಸ್ಪಿ ಸಿದ್ಧಾರ್ಥ ಹೇಳಿದ್ದಾರೆ.







