ಲಕ್ನೋ ವಿರುದ್ಧದ ಸೋಲಿನ ಬಳಿಕವೂ ಗುಜರಾತ್ ಟೈಟನ್ಸ್ ಗೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ

PV: x.com/gujarat_titans
ಹೊಸದಿಲ್ಲಿ: ಪ್ರಸಕ್ತ ಐಪಿಎಲ್ ನ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡ ಗುರುವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 33 ರನ್ ಗಳ ಆಘಾತಕಾರಿ ಸೋಲು ಅನುಭವಿಸಿದೆ. ಪ್ರಸಕ್ತ ಐಪಿಎಲ್ ನಲ್ಲಿ ಇದು ಜಿಟಿ ತಂಡಕ್ಕೆ ನಾಲ್ಕನೇ ಸೋಲು. ಇದು ಎಲ್ಎಸ್ ವಿರುದ್ಧ ಈ ಸೀಸನ್ ನಲ್ಲಿ ಎರಡನೇ ಸೋಲು. ಇದನ್ನು ಹೊರತುಪಡಿಸಿದರೆ ಕೇವಲ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಜಿಟಿ ಸೋಲು ಅನುಭವಿಸಿದೆ.
ಈ ಸೋಲಿನ ಹೊರತಾಗಿಯೂ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಶುಭಮನ್ ಗಿಲ್ ತಂಡ ಅಗ್ರಸ್ಥಾನದಲ್ಲಿದೆ. ಆದರೆ ಅಂತಿಮವಾಗಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡದ ಅವಕಾಶ ಮತ್ತಷ್ಟು ಜಟಿಲವಾಗಿದೆ. ಪ್ಲೇಆಫ್ ಹಂತದ ಎಲ್ಲ ನಾಲ್ಕು ಸ್ಥಾನಗಳು ಈಗಾಗಲೇ ಖಾತರಿಯಾಗಿದ್ದರೂ, ಅಗ್ರ ಎರಡು ತಂಡಗಳಿಗೆ ಕ್ವಾಲಿಫೈಯರ್ 1 ಆಡುವ ಅವಕಾಶವಿದ್ದು, ಫೈನಲ್ ತಲುಪಲು ಎರಡನೇ ಅವಕಾಶ ಇರುತ್ತದೆ.
ಜಿಟಿ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಎದುರಾಳಿ. ಮೇ 25ರಂದು ಕೊನೆಯ ಪಂದ್ಯವನ್ನು ಆಡುವ ಜಿಟಿ ಇಲ್ಲಿ ಗೆಲುವು ಸಾಧಿಸಿದರೆ ಅಗ್ರ-2ರಲ್ಲಿ ಸ್ಥಾನ ಪಡೆಯುವುದು ಖಚಿತ. ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ 12 ಪಂದ್ಯಗಳಿಂದ ತಲಾ 17 ಅಂಕ ಸಂಪಾದಿಸಿದ್ದು, ಎರಡೂ ತಂಡಗಳು ತಮ್ಮ ಉಳಿಕೆ ಪಂದ್ಯಗಳಲ್ಲಿ ಜಯ ಸಾಧಿಸಿದರೆ 21 ಅಂಕ ಗಳಿಸಿದಂತಾಗುತ್ತದೆ. ಆದರೆ ಎರಡು ತಂಡಗಳ ಪೈಕಿ ಒಂದು ತಂಡ ಒಂದು ಪಂದ್ಯವನ್ನು ಸೋತರೂ ಜಿಟಿ ಅಗ್ರ-2ರ ಪಟ್ಟಿಯಲ್ಲಿ ಉಳಿಯಲಿದೆ. ಆರ್ ಸಿಬಿ ತಂಡ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದ ಎಸ್ಆರ್ ಎಚ್ ಹಾಗೂ ಎಲ್ಎಸ್ ಜಿ ವಿರುದ್ಧ ಆಡಲಿದ್ದು, ಎರಡೂ ಅಪಾಯಕಾರಿ ತಂಡಗಳು.
ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಪಂಜಾಬ್ ಆಸೆಗೆ ತಣ್ಣೀರು ಎರಚಲು ಮುಂಬೈ ಗೆಲ್ಲುವುದು ಅನಿವಾರ್ಯವಾಗಿದೆ. ಆದ್ದರಿಂದ ಜಿಟಿ ಭವಿಷ್ಯ ಇತರ ತಂಡಗಳ ಕೈಯಲ್ಲಿದ್ದು, ಉಭಯ ತಂಡಗಳು ಎರಡೂ ಪಂದ್ಯಗಳನ್ನು ಗೆದ್ದರೆ, ಜಿಟಿ 20 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಬೇಕಾಗುತ್ತದೆ.







