ದುಬೈ: ಫೆ.15ರಂದು ‘ಸಾಹೇಬಾನ್’ ಯುಎಇಯಿಂದ ‘ಕುಟುಂಬ ಸ್ನೇಹಕೂಟ’, ಸಾಧಕರಿಗೆ ಸನ್ಮಾನ

ದುಬೈ: ‘ಸಾಹೇಬಾನ್’ ಸಮುದಾಯದ ಆಶ್ರಯದಲ್ಲಿ ಫೆ.15ರಂದು ದುಬೈಯ ಅಲ್ ಖಿಸೆಸ್ ಅಮಿಟಿ ಸ್ಕೂಲಿನಲ್ಲಿ ‘ಕುಟುಂಬ ಸ್ನೇಹಕೂಟ' ಆಯೋಜಿಸಲಾಗಿದೆ.
‘ಸಾಹೇಬಾನ್’ ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿದ್ದು, ಈ ‘ಕುಟುಂಬ ಸ್ನೇಹಕೂಟ’ವು ಫೆ.15ರಂದು ಸಂಜೆ 4ರಿಂದ ರಾತ್ರಿ 11ರ ವರಗೆ ನಡೆಯಲಿದ್ದು, ಹಲವು ಕಾರ್ಯಕ್ರಮಗಳು ಈ ವೇಳೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ, ಪೋಷಕ H.M.ಆಫ್ರೋಝ್ ಅಸ್ಸಾದಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ‘ರಾಜಕುಮಾರ ಮತ್ತು ರಾಜಕುಮಾರಿ’ ವೇಷ-ಭೂಷಣ(Prince and Princess), ಮಕ್ಕಳಿಗೆ ನಾಥ್ ಸ್ಪರ್ಧೆ, ದೇಶಭಕ್ತಿ ಗೀತೆ, ಭಾಗವಹಿಸುವ ಕುಟುಂಬದವರಿಗೆ ಸ್ಪರ್ಧೆ, ಸೇರಿದಂತೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
5 ಮಂದಿ ಸಾಧಕರಿಗೆ ಸನ್ಮಾನ
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಹಿತಿ ಇರ್ಷಾದ್ ಮೂಡಬಿದ್ರೆ, ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸಿಂಗ್’ನಲ್ಲಿ ಸಾಧನೆ ಮಾಡುತ್ತಿರುವ ನಾಸಿರ್ ಸೈಯದ್, ಬ್ಯುಸಿನೆಸ್ ಕ್ಷೇತ್ರದಲ್ಲಿ ಅಬುಧಾಬಿಯ ಅಲ್ ಸಿತಾರಾ ಕಾಂಟ್ರಾಕ್ಟಿಂಗ್’ನ ಮೊಹಮ್ಮದ್ ಅಕ್ರಂ, ಶೈಕ್ಷಣಿಕ ಕ್ಷೇತ್ರದಲ್ಲಿ ಖ್ಯಾತ ವಿದ್ವಾಂಸ, ಸಾಮಾಜಿಕ ಚಿಂತಕ ದಿವಂಗತ ಪ್ರೊ.ಮುಝಫರ್ ಹುಸೇನ್ ಅಸ್ಸಾದಿ ಹಾಗು ಸಮುದಾಯ ಕಲ್ಯಾಣ ಕ್ಷೇತ್ರದಲ್ಲಿ ಅಬುಧಾಬಿಯ ಮೊಹಮ್ಮದ್ ಆಸಿಫ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು H.M.ಆಫ್ರೋಝ್ ಅಸ್ಸಾದಿ ತಿಳಿಸಿದರು.
ಸಾಧಕ ಮಕ್ಕಳಿಗೂ ಸನ್ಮಾನ
ಯುಎಇಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಮಕ್ಕಳಿಗೆ ಹಾಗು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ‘ಸಾಹೇಬಾನ್’ ಪೋಷಕರಾದ ಉದ್ಯಮಿ, ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈಯ ನ್ಯಾಶ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಕೆ.ಎಸ್. ನಿಸಾರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.







