ಶಾರ್ಜಾದಲ್ಲಿ ಅಗ್ನಿದುರಂತ ಇಬ್ಬರು ಭಾರತೀಯರ ಸಹಿತ 5 ಮಂದಿ ಮೃತ್ಯು

PC : timesofindia.indiatimes.com
ಶಾರ್ಜಾ : ಶಾರ್ಜಾದ ಅಲ್ನಹ್ದಾ ಪ್ರದೇಶದಲ್ಲಿ ಕಳೆದ ವಾರ 750 ಅಪಾರ್ಟ್ಮೆಂಟ್ಗಳಿರುವ 39 ಅಂತಸ್ತಿನ ಕಟ್ಟಡದಲ್ಲಿ ನಡೆದ ಬೆಂಕಿ ದುರಂತದಲ್ಲಿ ಇಬ್ಬರು ಭಾರತೀಯರ ಸಹಿತ 5 ಮಂದಿ ಸಾವನ್ನಪ್ಪಿದ್ದು ಇತರ 44 ಮಂದಿ ಗಾಯಗೊಂಡಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಮೈಕೆಲ್ ಸತ್ಯದಾಸ್ ಮತ್ತು ಮುಂಬೈಯ ಮಹಿಳೆ ಮೃತಪಟ್ಟವರಲ್ಲಿ ಸೇರಿದ್ದಾರೆ. ಮಹಿಳೆ ಫೆಬ್ರವರಿಯಲ್ಲಿ ವಿವಾಹವಾಗಿದ್ದು ಆಕೆಯ ಪತಿ ಬೆಂಕಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುಬೈ ವಲ್ರ್ಡ್ ಟ್ರೇಡ್ಸೆಂಟರ್ನಲ್ಲಿ `ಡಿಎಕ್ಸ್ಬಿ ಲೈವ್' ಸಂಸ್ಥೆಯಲ್ಲಿ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸತ್ಯದಾಸ್, ಬ್ರೂನೋ ಮಾರ್ಸ್, ಎ.ಆರ್.ರಹ್ಮಾನ್, ಕೊಲೋನಿಯಲ್ ಕಸಿನ್ಸ್, ದೀಪ್ ಪರ್ಪಲ್ರಂತಹ ಕಲಾವಿದರು ಭಾಗವಹಿಸಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು ಎಂದು ವರದಿ ಹೇಳಿದೆ.
ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬದ ಜತೆ ಸಂಪರ್ಕದಲ್ಲಿದ್ದು ಸಂಪೂರ್ಣ ನೆರವು ಒದಗಿಸುವುದಾಗಿ ಭಾರತದ ಕಾನ್ಸುಲೆಟ್ ಜನರಲ್ ಹೇಳಿದ್ದಾರೆ.





