ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಗೆ ಪ್ರತಿಷ್ಠಿತ ವೆಸ್ಟ್ ಫೋರ್ಡ್ ಪ್ರಶಸ್ತಿ
ಮಂಗಳೂರಿನ ಹನಿ ಎಂ. ಹನೀಫ್ ಸಾರಥ್ಯದ ಕಂಪೆನಿ

ಯುಎಇ: ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಉದ್ಯಮ ಶ್ರೇಷ್ಠತೆಗಾಗಿ ಪ್ರತಿಷ್ಠಿತ ವೆಸ್ಟ್ ಫೋರ್ಡ್ ಪ್ರಶಸ್ತಿಗೆ ಪಾತ್ರವಾಗಿದೆ.
ದುಬೈನ ಮಿನಾ ಅಲ್ ಸಲಾಮ್ ನ ಮದೀನತ್ ಜುಮೇರಾದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಪ್ರಶಸ್ತಿಯನ್ನು ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ , ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹನೀ ಎಂ.ಹನೀಫ್ ಮತ್ತು ಸಹ ಸಂಸ್ಥಾಪಕಿ ಮತ್ತು ನಿರ್ದೇಶಕರಾದ ಶಹನಾಝ್ ಹನೀಫ್ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹನೀಫ್, ಈ ಪ್ರಶಸ್ತಿಯನ್ನು ಸ್ವೀಕರಿಸಲು ನಮಗೆ ಹೆಮ್ಮೆ ಇದೆ. ಪ್ರಶಸ್ತಿಯ ಶ್ರೇಯ ನಮ್ಮ ಅದ್ಭುತ ತಂಡ, ಪಾಲುದಾರರು ಮತ್ತು ಬೆಂಬಲಿಗರಿಗೆ ಸೇರುತ್ತದೆ. ಈ ಯಶಸ್ಸು ಸಮರ್ಪಣೆ ಮತ್ತು ಜೊತೆಯಾಗಿ ಕೆಲಸ ಮಾಡಿರುವುದರಿಂದ ಸಾಧ್ಯವಾಗಿದೆ, ಇದು ಕೇವಲ ಪ್ರಾರಂಭವಾಗಿದೆ, ಮುಂದೆ ಸಾಧಿಸಲು ಬಹಳ ಇದೆ ಎಂದು ಹೇಳಿದ್ದಾರೆ.
ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಲಾಗಿದೆ. ಸಂಸ್ಥೆಯು ಜಾಗತಿಕವಾಗಿ ಆಹಾರ ಸಾಮಾಗ್ರಿಗಳ ಪ್ರಮುಖ ಪೂರೈಕೆದಾರರಾಗಿ ಬೆಳೆದಿದೆ.
ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಯು ನ್ಯೂಯಾರ್ಕ್, ಮೆಕ್ಸಿಕೋ, ಇಂಗ್ಲೆಂಡ್ ಮತ್ತು ದುಬೈಯಲ್ಲೂ ಕಚೇರಿಗಳನ್ನು ಹೊಂದಿದೆ. 50 ದೇಶಗಳಲ್ಲಿ ಆಹಾರ ವಿತರಣಾ ಜಾಲವನ್ನು ಹೊಂದಿದೆ. ಕಂಪನಿಯು 20ಕ್ಕೂ ಅಧಿಕ ಆಹಾರ ವಿಭಾಗಗಳನ್ನು ಹೊಂದಿದೆ. ವಿಶ್ವದಾದ್ಯಂತ ಪ್ರಮುಖ ಅಂತಾರಾಷ್ಟ್ರೀಯ ಆಹಾರ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುತ್ತದೆ.
ವೆಸ್ಟ್ ಫೋರ್ಡ್ ಪ್ರಶಸ್ತಿಗಳನ್ನು ಉದ್ಯಮ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಪ್ರಶಸ್ತಿಯು ಆಹಾರ ಮತ್ತು ಪಾನೀಯ ವಲಯದಲ್ಲಿ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಯ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುತ್ತದೆ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಿದೆ.