ದುಬೈ| DSBK ಮಧ್ಯಪ್ರಾಚ್ಯ ರೇಸ್ ಚಾಂಪಿಯನ್ ಶಿಪ್; ಮೆರುಗು ನೀಡಿದ ಬಾಲಿವುಡ್ ತಾರೆಯರು ಹಾಗೂ ಗಣ್ಯರು

ದುಬೈ: ದುಬೈ ಆಟೊಡ್ರಮ್ ರೇಸಿಂಗ್ ಸರ್ಕೀಟ್ ನಲ್ಲಿ ಫೆಬ್ರವರಿ 2ರಂದು ಆಯೋಜನೆಗೊಂಡಿದ್ದ DSBK ಮಧ್ಯಪ್ರಾಚ್ಯ ಚಾಂಪಿಯನ್ ಶಿಪ್ ಬಾಲಿವುಡ್ ತಾರೆಯರ ಉಪಸ್ಥಿತಿ ಹಾಗೂ ರೋಮಾಂಚನಕಾರಿ ಸೂಪರ್ ಬೈಕ್ ರೇಸ್ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಈ ರೇಸ್ ನಲ್ಲಿ ಭಾಗವಹಿಸಿದ್ದ ಬಾಲಿವುಡ್ ತಾರೆಯರು ರೇಸ್ ಗೆ ವಿಶೇಷ ಮೆರುಗು ನೀಡಿದರು. ಆ ಮೂಲಕ ನೆರೆದಿದ್ದ ಭಾರೀ ಜನಜಂಗುಳಿಯನ್ನು ಸೆಳೆದರು.
ಅರ್ಬಾಝ್ ಖಾನ್, ಸೊಹೈಲ್ ಖಾನ್, ವಿವೇಕ್ ಒಬೆರಾಯ್, ಗೌಹರ್ ಖಾನ್ ಹಾಗೂ ಝೈದ್ ದರ್ಬಾರ್ ರಂತಹ ಖ್ಯಾತ ಬಾಲಿವುಡ್ ನಟರು ಈ ರೇಸ್ ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಬಾಲಿವುಡ್ ತಾರೆಯರೊಂದಿಗೆ, ಡನ್ಯೂಬ್ ಪ್ರಾಪರ್ಟೀಸ್ ಮಾಲಕರಾದ ರಿಝ್ವಾನ್ ಸಾಜನ್ ಹಾಗೂ ಅನೀಸ್ ಸಾಜನ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದುಬೈ ರಾಜಮನೆತನದ ಶೇಖ್ ಜುಮಾ ಬಿನ್ ಮಕ್ತೂಮ್ ಅಲ್ ಮಕ್ತೂಮ್ ಕಚೇರಿಯಲ್ಲಿ ಕಾರ್ಯಕಾರಿ ನಿರ್ದೇಶಕ ಹಾಗೂ ಆಪ್ತ ಸಲಹೆಗಾರರಾಗಿರುವ ಯಾಕೂಬ್ ಅಲ್ ಅಲಿ ಕೂಡಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದರು.
“DSBK ಮಧ್ಯಪ್ರಾಚ್ಯ ಚಾಂಪಿಯನ್ ಶಿಪ್ ರೇಸ್ ಗಿಂತ ಹೆಚ್ಚಿನದು. ಈ ಪ್ರಾಂತ್ಯದಲ್ಲಿ ಹೊಣೆಯರಿತ ಚಾಲನೆ ಹಾಗೂ ಮೋಟಾರ್ ಕ್ರೀಡೆ ಸಂಸ್ಕೃತಿ ಪೋಷಣೆಯನ್ನು ಪ್ರಚಾರ ಮಾಡುವ ಒಂದು ಆಂದೋಲನವಾಗಿದೆ. ಮಧ್ಯಪ್ರಾಚ್ಯ ಮೋಟರ್ ಕ್ರೀಡಾ ವೇಳಾಪಟ್ಟಿಯಲ್ಲಿ DSBK ರೇಸ್ ಅನ್ನು ಬೃಹತ್ ಕಾರ್ಯಕ್ರಮವನ್ನಾಗಿ ಬೆಳೆಸುವುದು ನಮ್ಮ ಗುರಿಯಾಗಿದೆ” ಎಂದು DSBK ರೇಸಿಂಗ್ ನ ಸ್ಥಾಪಕ ಹಾಗೂ ಅಂತರ್ ರಾಷ್ಟ್ರೀಯ ಖ್ಯಾತಿಯ ಬೈಕ್ ಸವಾರ ಮಂಗಳೂರಿನ ನಾಸಿರ್ ಸೈಯದ್ ಹಾಗೂ ಸಹ ಸ್ಥಾಪಕ ಅಬ್ದುಲ್ ಸಮೀ DSBK ಚಾಂಪಿಯನ್ ಶಿಪ್ ಕುರಿತು ಮಾಹಿತಿ ಹಂಚಿಕೊಂಡರು.
ಯುಎಇಯ ಪ್ರಪ್ರಥಮ ಸೂಪರ್ ಬೈಕ್ ತರಬೇತಿ ಅಕಾಡೆಮಿಯಾದ DSBK, ಆಕಾಂಕ್ಷಿ ಬೈಕ್ ಸವಾರರಿಗೆ ಅಚ್ಚುಕಟ್ಟಾದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮುಂದಿನ ತಲೆಮಾರಿನ ರೇಸಿಂಗ್ ಪ್ರತಿಭೆಗಳನ್ನು ರೂಪಿಸುವ ಗುರಿ ಹೊಂದಿದೆ. ಇದರೊಂದಿಗೆ, ರೇಸ್ ಗಳು ಮಾತ್ರವಲ್ಲದೆ, ಶಿಕ್ಷಣ ಹಾಗೂ ಮನರಂಜನೆಯೊಂದಿಗೆ ಅತ್ಯಾಸಕ್ತಿಯ ಸವಾರರ ಗುಂಪುಗಳು, ಕುಟುಂಬಗಳು ಹಾಗೂ ಮೋಟಾರ್ ಕ್ರೀಡೆಯ ಅಭಿಮಾನಿಗಳನ್ನು ಬೆಳೆಸಲು DSBK ಬದ್ಧವಾಗಿದೆ ಎಂದು DSBK ರೇಸಿಂಗ್ ಎರಡು ಮಹತ್ವದ ಉಪಕ್ರಮಗಳನ್ನು ಪ್ರಮುಖ ಪ್ರಕಟಣೆಯೊಂದರಲ್ಲಿ ಅನಾವರಣಗೊಳಿಸಿತು.