'ಕಿಸ್ವ'ದ ಸಮುದಾಯ ಸೇವೆ ಶ್ಲಾಘನೀಯ: ಬಿ.ಎಂ ಫಾರೂಕ್

ಅಲ್ ಜುಬೈಲ್: 'ಕಿಸ್ವ'ದ ಸಮುದಾಯ ಸೇವೆ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರು ಹೇಳಿದರು.
ಅವರು ಇತ್ತೀಚೆಗೆ ಸೌದಿ ಅರೇಬಿಯಾದ ಅಲ್ ಜುಬೈಲ್ ನಲ್ಲಿ ಕಿಸ್ವ (ಕೃಷ್ಣಾಪುರ ಇಸ್ಲಾಮಿಕ್ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ ) ಸಂಸ್ಥೆ ಇದರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಯಿ ನಾಡನ್ನು ಬಿಟ್ಟು ಬಂದರೂ ನಾಡಿನ ಬಡವರ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುವ ಕಿಸ್ವ ಸದಸ್ಯರ ಶ್ರಮವನ್ನು ಈ ಸಂದರ್ಭ ಅವರು ಶ್ಲಾಘಿಸಿದರು ಮತ್ತು ಕಿಸ್ವ ಹಮ್ಮಿಕೊಂಡಿರುವ ಆರೋಗ್ಯ ಕೇಂದ್ರದ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆ ನೀಡಿದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರನ್ನು ಸನ್ಮಾನಿಸಲಾಯಿತು.
NGC ಅಲ್ ಜುಬೈಲ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಹಾಜಿ ಇಸ್ಮಾಯಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಿಸ್ವ ಇದರ ಅಧ್ಯಕ್ಷರಾದ ಕೆ.ಎಂ. ಕಬೀರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅನಿವಾಸಿ ಉದ್ಯಮಿ ಮುಬೀನ್ ಸ್ವಾಗತಿಸಿದರು. ಮುಹಮ್ಮದಾಲಿ ಕೃಷ್ಣಾಪುರ ಕಾರ್ಯಕ್ರಮ ನಿರ್ವಹಿಸಿದರು. ಇಮ್ತಿಯಾಝ್ ಜಮಾತ್ ವಂದಿಸಿದರು. ಮುಹಮ್ಮದ್ ಮುಇಝ್ ಕಿರಾಅತ್ ಪಠಿಸಿದರು.







