ಯುಎಇಯಲ್ಲಿ ಮುಂದುವರಿದ ಮಳೆಯ ಆರ್ಭಟ: ಜನರ ಪರದಾಟ; ನಾಳೆ ಭಾರೀ ಮಳೆಯ ಸಾಧ್ಯತೆ

ದುಬೈ: ಯುಎಇಯಲ್ಲಿ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದೆ. ದೇಶದ ವಿವಿಧೆಡೆ ಸುರಿದ ಭಾರೀ ಮಳೆಗೆ ಪ್ರಮುಖ ರಸ್ತೆಗಳು ಸೇರಿದಂತೆ ಹಲವೆಡೆ ಕೃತಕ ಪ್ರವಾಹ ಉಂಟಾಗಿದ್ದು, ಜನರು ಪರದಾಡುವಂತಾಗಿದೆ.
ಗುರುವಾರ ಮಧ್ಯಾಹ್ನದಿಂದ ಆರಂಭಗೊಂಡ ಭಾರಿ ಮಳೆಯಿಂದ ದುಬೈ, ಶಾರ್ಜಾ, ಅಜ್ಮಾನ್ ಸೇರಿದಂತೆ ಯುಎಇಯ ನಾನಾ ಭಾಗಗಳಲ್ಲಿ ನೀರು ತುಂಬಿದ್ದು, ರಸ್ತೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿತ್ತು. ಇದರಿಂದ ವಾಹನಗಳು ಕೂಡ ಮುಳುಗಡೆಯ ಭೀತಿಯನ್ನು ಎದುರಿಸಿದ್ದು, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ವಾಹನ ಸವಾರರು, ಜನರು ಸಂಕಷ್ಟವನ್ನು ಎದುರಿಸಬೇಕಾಯಿತು.
ಭಾರೀ ಮಳೆ ಮತ್ತು ರಸ್ತೆಗಳ ಮೇಲೆ ನೀರು ತುಂಬಿರುವ ಕಾರಣದಿಂದ ಶಾರ್ಜಾ ಮತ್ತು ಅಜ್ಮಾನ್ ಕಡೆ ತೆರಳುವ ದುಬೈಯ ಬಸ್ ಸೇವೆಯನ್ನು ಗುರುವಾರ ಸಂಜೆ 7 ಗಂಟೆಯಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ದುಬೈನ ರೋಡ್ಸ್ ಆ್ಯಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ(RTA) ತಿಳಿಸಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರದವರಗೆ ಭಾರಿ ಮಳೆ, ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜನರ ಸುರಕ್ಷತೆಗೆ ಬೇಕಾದ ಎಲ್ಲ ರೀತಿಯ ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಯುಎಇಯಲ್ಲಿ ಮಳೆಯ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಹಾಗು ವಾಹನಗಳ ಮೇಲೆ ಭಾರಿ ದಂಡವಿಧಿಸುವುದಾಗಿ ಯುಎಇ ಆಂತರಿಕ ವಿಷಯಗಳ ಸಚಿವಾಲಯ (UAE Ministry of Interior) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಯುಎಇ ಆಂತರಿಕ ವಿಷಯಗಳ ಸಚಿವಾಲಯ ಸುರಕ್ಷತೆ ಮತ್ತು ಸಮುದಾಯ ಪಾಲನೆಯ ಮಹತ್ವವನ್ನು ಗಮನ ದಲ್ಲಿ ಇಟ್ಟುಕೊಂಡು ಕಣಿವೆ, ಪ್ರವಾಹ ಪೀಡಿತ ಪ್ರದೇಶಗಳತ್ತ ವಾಹನವನ್ನು ಚಲಾಯಿಸಿಕೊಂಡು ಹೋಗುವವರಿಗೆ 1 ರಿಂದ 2 ಸಾವಿರ ದಿರ್ಹಾಮ್ ವರಗೆ ದಂಡ, 6 ರಿಂದ 23ರ ವರಗೆ ಟ್ರಾಫಿಕ್ ಪಾಯಿಂಟ್‌ಗಳು, ಚಾಲನಾ ಪರವಾನಗಿಯನ್ನು 60 ದಿನಗಳ ಕಾಲ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾರ್ಜಾ ನಿವಾಸಿಗಳಿಗೆ ಅನಿವಾರ್ಯವಾಗದಿದ್ದರೆ ಮನೆಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಮಳೆಯ ಸಮಯದಲ್ಲಿ ಅಪಾಯದ ಪ್ರದೇಶಗಳಿಗೆ ಹೋಗದೇ, ಸುರಕ್ಷಿತವಾಗಿರುವಂತೆ ಸಾರ್ವಜನಿಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.






