ಪೋಲೆಂಡ್‌ನ ಲುಬ್ಲಿನ್ ವಿವಿಯಿಂದ ಡಾ.ತುಂಬೆ ಮೊಯ್ದಿನ್‌ರಿಗೆ ಗೌರವ ಡಾಕ್ಟರೇಟ್

ಪೋಲೆಂಡ್: ತುಂಬೆ ಗ್ರೂಪ್ ಸ್ಥಾಪಕರಾದ ಡಾ.ತುಂಬೆ ಮೊಯ್ದಿನ್ ಅವರಿಗೆ ಪೋಲೆಂಡ್‌ನ ಲುಬ್ಲಿನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಇದು ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಗಳಿಗಾಗಿ ಅವರಿಗೆ ದೊರೆತ ಐದನೇ ಗೌರವ ಪದವಿಯಾಗಿದೆ.
ತುಂಬೆ ಗ್ರೂಪ್ ಮೂಲಕ ಖಾಸಗಿ ಶೈಕ್ಷಣಿಕ ಆರೋಗ್ಯ ವ್ಯವಸ್ಥೆ ಮತ್ತು ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಪಾತ್ರವನ್ನು ಪರಿಗಣಿಸಿ ಪೋಲೆಂಡ್‌ನ ಲುಬ್ಲಿನ್ ವಿಶ್ವವಿದ್ಯಾಲಯ ಈ ಗೌರವ ಪದವಿ ನೀಡಿದೆ.
ತುಂಬೆ ಅಂತಾರಾಷ್ಟ್ರೀಯ ಸಂಶೋಧನಾ ಅನುದಾನ(TIRG) ಮೂಲಕ ಕ್ಯಾನ್ಸರ್ ರೋಗನಿರೋಧಕ ಕ್ಷೇತ್ರಗಳಲ್ಲಿ ಸಂಶೋಧನೆ, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಬೆಂಬಲಿಸಲು ವಾರ್ಷಿಕವಾಗಿ 3 ಮಿಲಿಯನ್ ದಿರ್‌ಹಮ್ ಅನುದಾನ ಒದಗಿಸುತ್ತದೆ ಎಂಬುದನ್ನು ವಿವಿಯು ಗಮನಿಸಿದೆ.
ಕರ್ನಾಟಕದ ಮಂಗಳೂರಿನ ದಿವಂಗತ ತುಂಬೆ ಬಿ. ಅಹ್ಮದ್ ಹಾಜಿ ಮೋಹಿಯುದ್ದೀನ್ ಅವರ ಪುತ್ರ ಡಾ. ಮೊಯ್ದಿನ್ ಅವರು ಗಲ್ಫ್ ರಾಷ್ಟ್ರಗಳಲ್ಲಿ ವಿಶೇಷವಾಗಿ ಅನಿವಾಸಿ ಭಾರತೀಯ (ಎನ್ಆರ್‌ಐ) ಸಮುದಾಯಗಳಲ್ಲಿ ಹೆಸರುವಾಸಿಯಾಗಿದ್ದಾರೆ.
ಗಲ್ಫ್ ದೇಶಗಳಲ್ಲಿ ಪ್ರಪ್ರಥಮ ಖಾಸಗಿ ವೈದ್ಯಕೀಯ ಕಾಲೇಜು, ವಿವಿ ಹಾಗೂ ಬೃಹತ್ ಆರೋಗ್ಯ ಸೇವಾ ಸಮೂಹವನ್ನು ಅಜ್ಮಾನ್ ನಲ್ಲಿ ಸ್ಥಾಪಿಸಿ, ಬೆಳೆಸಿದ ಹೆಗ್ಗಳಿಕೆ ಅವರದ್ದು. ಹಲವಾರು ದೇಶಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು , ಆಧುನಿಕ ಚಿಕಿತ್ಸೆ ಪಡೆಯುವವರು ಇರುವ ಪ್ರತಿಷ್ಟಿತ ಸಮೂಹವಾಗಿದೆ ತುಂಬೆ ಗ್ರೂಪ್. ಈ ಸಮೂಹ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ.
ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಾ.ಮೊಯ್ದಿನ್, ನಮ್ಮ ಕೆಲಸ ಇತರರಿಗೆ ಕನಸು ಕಾಣಲು, ಬೆಳೆಯಲು ಅವಕಾಶ ನೀಡಿದ್ದರೆ ನಾನು ಅದನ್ನು ಯಶಸ್ಸು ಎಂದು ಪರಿಗಣಿಸುತ್ತೇನೆ. ನಾನು ಎಷ್ಟು ಪ್ರಗತಿ ಸಾಧಿಸಿದ್ದೇನೆ ಎಂಬುದು ಮುಖ್ಯವಲ್ಲ. ನಾನು ಎಷ್ಟು ಜನರನ್ನು ಮುಂದಕ್ಕೆ ಕರೆತಂದಿದ್ದೇನೆ ಎಂಬುದು ಮುಖ್ಯ. ತುಂಬೆ ಗ್ರೂಪ್ ಅನ್ನು ಅವಕಾಶ ವಂಚಿತರ ಸಬಲೀಕರಣಗೊಳಿಸಿದ ಮತ್ತು ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಿದ ಶಕ್ತಿಯಾಗಿ ಸ್ಮರಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.