ದುಬೈ; ಕನ್ನಡದ ಕಂಪು, ನಾಡು-ನುಡಿಯ ವೈಭವಕ್ಕೆ ಸಾಕ್ಷಿಯಾದ 'ದುಬೈ ಕರ್ನಾಟಕ ರಾಜ್ಯೋತ್ಸವ–2026'
► ಅರಬರ ನಾಡಿನಲ್ಲಿ ಮೊಳಗಿದ ಕನ್ನಡದ ಕಹಳೆ; ಕಲಾ ವೈಭವ, ಸಾಂಸ್ಕೃತಿಕ ಸಂಭ್ರಮದಲ್ಲಿ ಒಂದಾದ ಅನಿವಾಸಿ ಕನ್ನಡಿಗರು! ► ಡಾ.ಎನ್. ಸೋಮೇಶ್ವರ-ರಾಮಚಂದ್ರ ಹೆಗ್ಡೆ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ

ದುಬೈ: ಕರ್ನಾಟಕ ಸಂಘ ದುಬೈ ಹಾಗು ಕನ್ನಡಿಗರ ಕೂಟ ದುಬೈ ನೇತೃತ್ವದಲ್ಲಿ ದುಬೈನ ಅಲ್ ಖಿಸೈಸ್ನ ನ್ಯೂ ಡಾನ್ ಪ್ರೈವೇಟ್ ಸ್ಕೂಲಿನ ಸಭಾಂಗಣದಲ್ಲಿ ರವಿವಾರ ಅದ್ದೂರಿಯಾಗಿ ಆಯೋಜಿಸಲಾದ 'ದುಬೈ ಕರ್ನಾಟಕ ರಾಜ್ಯೋತ್ಸವ – 2026', ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವಕ್ಕೆ ಸಾಕ್ಷಿಯಾಯಿತು.
ಕನ್ನಡದ ಕಹಳೆ ಮೊಳಗಿದ ಸಂಭ್ರಮ, ನಾಡಿನ ಕಲಾಪ್ರಕಾರಗಳ ಸೊಬಗು, ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕನ್ನಡಿಗರ ಅಭೂತಪೂರ್ವ ಒಗ್ಗಟ್ಟು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಸಾವಿರಾರು ಮೈಲುಗಳ ದೂರದಲ್ಲಿದ್ದರೂ ತಾಯ್ನಾಡಿನ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಎದೆಯಾಳದಲ್ಲಿ ಜೀವಂತವಾಗಿರಿಸಿಕೊಂಡಿರುವ ಅನಿವಾಸಿ ಕನ್ನಡಿಗರು, ದುಬೈ ನೆಲದಲ್ಲಿ ಕನ್ನಡದ ಅಸ್ಮಿತೆ ಮತ್ತು ಏಕತೆಯ ಶಕ್ತಿಯನ್ನು ಮತ್ತೊಮ್ಮೆ ಸಾರಿದರು.
1985ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘ ದುಬೈಯು 2002ರಲ್ಲಿ ಸ್ಥಾಪಿತವಾದ ಕನ್ನಡಿಗರ ಕೂಟ ದುಬೈ ಸಹಯೋಗದೊಂದಿಗೆ ಈ ಬಾರಿ ‘ದುಬೈ ಕರ್ನಾಟಕ ರಾಜ್ಯೋತ್ಸವ–2026’ ಅನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ರವಿವಾರ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ನಿರಂತರವಾಗಿ ನಡೆದ ಈ ಕನ್ನಡ ಹಬ್ಬವು ದಿನವಿಡೀ ನಾಡು-ನುಡಿ, ಭಾಷೆ, ಕಲೆ ಮತ್ತು ಸಂಸ್ಕೃತಿಯ ಸಂಭ್ರಮವನ್ನು ಹರಡಿತು. ಜಾಗತಿಕ ಕನ್ನಡಿಗರ ಏಕತೆ, ಒಗ್ಗಟ್ಟು, ಕನ್ನಡಾಭಿಮಾನ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಈ ಉತ್ಸವ, ದುಬೈ ನೆಲದಲ್ಲಿ ಕನ್ನಡತನದ ಹಿರಿಮೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.
ಗಲ್ಫ್ ರಾಷ್ಟ್ರಗಳಲ್ಲೇ ಅತಿದೊಡ್ಡ ಕನ್ನಡ ಹಬ್ಬವೆಂಬ ಖ್ಯಾತಿ ಪಡೆದಿರುವ ‘ದುಬೈ ಕರ್ನಾಟಕ ರಾಜ್ಯೋತ್ಸವ’ಕ್ಕೆ ಸಾವಿರಾರು ಮಂದಿ ಕನ್ನಡಿಗರು ಸಾಕ್ಷಿಯಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಅನಾವರಣಗೊಳಿಸಿದರು. ಸಮಾರಂಭವು ಅನಿವಾಸಿ ಕನ್ನಡಿಗರ ಒಗ್ಗಟ್ಟು ಮತ್ತು ಕನ್ನಡಾಭಿಮಾನದ ಸಂಭ್ರಮಕ್ಕೆ ವೇದಿಕೆಯಾಯಿತು.
ಈ ಭವ್ಯ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಖ್ಯಾತ ಅನಿವಾಸಿ ಉದ್ಯಮಿ, ಪೋಷಕ ಡಾ. ರೊನಾಲ್ಡ್ ಕೊಲಾಸೊ, ಯುಎಇಯ ಪ್ರತಿಷ್ಠಿತ ತುಂಬೆ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, ಖ್ಯಾತ ಉದ್ಯಮಿ ಡಾ. ಬಿ. ಆರ್. ಶೆಟ್ಟಿ, ಖ್ಯಾತ ಕ್ವಿಜ್ ಮಾಸ್ಟರ್ ಹಾಗೂ ಲೇಖಕರಾದ ಡಾ. ನಾ. ಸೋಮೇಶ್ವರ, ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸೈಯೋನ್(SAION) ಪ್ರಾಪರ್ಟೀಸ್, ದುಬೈನ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಅಮರನಾಥ್, ದುಬೈ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಉದ್ಯಮಿ ರಾಮಚಂದ್ರ ಹೆಗ್ಡೆ, ರೊನಾಲ್ಡ್ ಮಾರ್ಟಿಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕರ್ನಾಟಕ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡಾ. ರೊನಾಲ್ಡ್ ಕೊಲಾಸೊ
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ ಅವರು, ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರ ಬಗ್ಗೆ ಕರ್ನಾಟಕ ರಾಜ್ಯ ಸರಕಾರದ ಧೋರಣೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು. ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿಗಳಂತೆಯೇ ಸಮಾನ ಗೌರವ ಮತ್ತು ಮನ್ನಣೆಯಿಂದ ಕಾಣಬೇಕು ಎಂದು ಅವರು ಒತ್ತಾಯಿಸಿದರು.
ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಪರವಾಗಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಸಹಕಾರವಾಗಲಿ, ಆರ್ಥಿಕ ನೆರವಾಗಲಿ ನೀಡದೆ ಕಡೆಗಣಿಸಲಾಗುತ್ತಿರುವುದು ವಿಷಾದನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅನಿವಾಸಿ ಕನ್ನಡಿಗರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿದ್ದರೂ, ಕರ್ನಾಟಕ ರಾಜ್ಯ ಸರಕಾರ ಬಾಯಿ ಮಾತಿನಲ್ಲಷ್ಟೇ ಘೋಷಸಿದ್ದು ಬಿಟ್ಟರೆ ಈವರೆಗೆ ಆ ಬೇಡಿಕೆಯನ್ನು ಈಡೇರಿಸಿಲ್ಲ. ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದ್ದು, ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದುಬೈನಲ್ಲಿ ಕನ್ನಡ ಭವನ ನಿರ್ಮಿಸುವಂತೆ ಶಶಿಧರ ನಾಗರಾಜಪ್ಪ ಒತ್ತಾಯ
ಇದೇ ವೇಳೆ ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ ಮಾತನಾಡಿ, ನಮಗೆ ಅತೀ ಮುಖ್ಯವಾಗಿ ದುಬೈನಲ್ಲಿ ಕನ್ನಡ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ಭವನ ನಿರ್ಮಿಸಲು ರಾಜ್ಯ ಸರಕಾರ ನಮಗೆ ಆರ್ಥಿಕ ನೆರವಿನ ಜೊತೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ಮಾತನಾಡಿ, 2002ರಿಂದ ಸಂಸ್ಥೆ ನಡೆದುಬಂದ ಹಾದಿ, ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸಲು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪ್ರಯತ್ನಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ, ಸಂಸ್ಥೆಯ ಇದುವರೆಗಿನ ಸಾಧನೆಗಳು ಮತ್ತು ಕಾರ್ಯಚಟುವಟಿಕೆಗಳನ್ನು ಒಳಗೊಂಡ ಅಧಿಕೃತ ಪ್ರೊಫೈಲ್ ಅನ್ನು ಅನಾವರಣಗೊಳಿಸಿದರು. ಅಲ್ಲದೆ, ಮುಂದಿನ ವರ್ಷ ನಡೆಯಲಿರುವ ಸಂಸ್ಥೆಯ ರಜತ ಮಹೋತ್ಸವದ (ಬೆಳ್ಳಿ ಹಬ್ಬ) ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನು ಪ್ರಕಟಿಸಿದರು.
ಡಾ. ರೊನಾಲ್ಡ್ ಕೊಲಾಸೊಗೆ “ಗ್ಲೋಬಲ್ ಐಕಾನ್ ಆನ್ ಯುನಿಟಿ” ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ದುಬೈ ಹಾಗು ಕನ್ನಡಿಗರ ಕೂಟ ದುಬೈ ವತಿಯಿಂದ ಡಾ. ರೊನಾಲ್ಡ್ ಕೊಲಾಸೊ ಅವರಿಗೆ “ಗ್ಲೋಬಲ್ ಐಕಾನ್ ಆನ್ ಯುನಿಟಿ” ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಈ ವರ್ಷದಿಂದ ಒಂದೇ ರಾಜ್ಯೋತ್ಸವವನ್ನು ಆಚರಿಸುವ ಉದ್ದೇಶದಿಂದ ಎರಡೂ ಸಂಘಟನೆಗಳನ್ನು ಒಗ್ಗೂಡಿಸಿದ ಡಾ. ರೊನಾಲ್ಡ್ ಕೊಲಾಸೊ ಅವರ ಮಹತ್ವದ ಪ್ರಯತ್ನಕ್ಕೆ ಮತ್ತು ಮಾತಿನಂತೆ ನಡೆದು ತೋರಿಸುವ (Walk the Talk) ಆದರ್ಶ ವ್ಯಕ್ತಿಯಾಗಿ ಮಾದರಿಯಾಗಿರುವುದಕ್ಕೆ ಈ ಗೌರವವನ್ನು ನೀಡಲಾಯಿತು. ಇದೇ ವೇಳೆ ಡಾ. ತುಂಬೆ ಮೊಯ್ದೀನ್ ಅವರನ್ನು ಸನ್ಮಾನಿಸಲಾಯಿತು.
ಡಾ.ಎನ್. ಸೋಮೇಶ್ವರ-ರಾಮಚಂದ್ರ ಹೆಗ್ಡೆ ಸೇರಿದಂತೆ ಹಲವರಿಗೆ ಪ್ರಶಸ್ತಿ
ಕನ್ನಡ ಭಾಷೆ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕ ರನ್ನು ಎರಡೂ ಸಂಘಟನೆಗಳ ವತಿಯಿಂದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಗೌರವಿಸಲಾಯಿತು.
ಕರ್ನಾಟಕ ಸಂಘ ದುಬೈನಿಂದ ಪ್ರಶಸ್ತಿ...
ಉದ್ಯಮಿ ರಾಮಚಂದ್ರ ಹೆಗ್ಡೆ ಅವರಿಗೆ ಕರ್ನಾಟಕ ಸಂಘ ದುಬೈನ 'ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಲಾಯಿತು. 'ಮೊಹಮ್ಮದ್ ಸಮೀರ್ ಸೇವಾ ರತ್ನ' ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಕಿಶೋರ್ ಗಟ್ಟಿ ಉಚ್ಚಿಲ ಅವರಿಗೆ, 'ಗಿರೀಶ್ ಶೆಟ್ಟಿ ಸೇವಾ ರತ್ನ' ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಶೇಖರ್ ಡಿ. ಶೆಟ್ಟಿಗಾರ್ ಅವರಿಗೆ, 'ಯುವರಾಜ್ ದೇವಾಡಿಗ ಸೇವಾ ರತ್ನ' ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ ಶೇಖ್ ಮುಝಾಫರ್ ಅವರಿಗೆ ನೀಡಿ ಗೌರವಿಸಲಾಯಿತು. ಇದೆ ವೇಳೆ ಪ್ರಾಣಿ ಸಂರಕ್ಷಕಿ ಮಂಗಳೂರಿನ ರಜನಿ ಶೆಟ್ಟಿ ಅವರಿಗೆ ವಿಶೇಷ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕನ್ನಡಿಗರ ಕೂಟ ದುಬೈನಿಂದ ನೀಡಲಾದ ಪ್ರಶಸ್ತಿ...
ಲೇಖಕ ಡಾ.ಎನ್. ಸೋಮೇಶ್ವರ ಅವರಿಗೆ ಕನ್ನಡಿಗರ ಕೂಟ ದುಬೈ ವತಿಯಿಂದ 'ಅಂತಾರಾಷ್ಟ್ರೀಯ ಕನ್ನಡ ರತ್ನ' ಪ್ರಶಸ್ತಿನೀಡಿ ಗೌರವಿಸಲಾಯಿತು. ವಿಮಾನಯಾನ ಕ್ಷೇತ್ರ, ನಾಯಕತ್ವ, ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಸಾಧನೆಗಾಗಿ ರಾಜೇಶ್ ಮರ್ವಿನ್ ಅಲೋಸಿಯಸ್ ಸಿಕ್ವೇರ ಅವರಿಗೆ ಪ್ರತಿಷ್ಠಿತ 'ಡಾ. ಪುನೀತ್ ರಾಜ್ಕುಮಾರ್ ಪ್ರಶಸ್ತಿ - 2026' ಹಾಗೂ ಕನ್ನಡಪರ ಸಂಘಟಕರು ಮತ್ತು ಸಾಧಕರಾದ 'ಸಿ. ಎಂ. ನಾಗರಾಜ್ ಅವರಿಗೆ 'ಪ್ರತಿಷ್ಠಿತ ಕನ್ನಡ ಸೇವಾರತ್ನ ಪ್ರಶಸ್ತಿ - 2026' ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ನಾ. ಸೋಮೇಶ್ವರ ಅವರು, ಈ ಗೌರವವು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. “ನಾನು ವಿವಿಧ ಹೂವುಗಳಿಂದ ಮಕರಂದ ಸಂಗ್ರಹಿಸಿ, ಅದನ್ನು ಜೇನಿನ ರೂಪದಲ್ಲಿ ಜನರಿಗೆ ತಲುಪಿಸುವ ಜೇನುನೊಣದಂತೆ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ತಮ್ಮ ಕಾರ್ಯವೈಖರಿಯನ್ನು ವಿವರಿಸಿದರು.
ಸಮಾರಂಭದ ಮಧ್ಯೆ ಲೇಖಕ ಇರ್ಷಾದ್ ಮೂಡಬಿದ್ರೆ ಅವರ 'ಬದುಕಿನ ಸವಾರಿ' ಪ್ರಬಂಧ ಸಂಕಲನವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಗಮನ ಸೆಳೆದ ಭವ್ಯ ಸಾಂಸ್ಕೃತಿಕ ಮಹೋತ್ಸವ
ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾದ ‘ಸಾಂಸ್ಕೃತಿಕ ವೈಭವದ ಮೆರವಣಿಗೆ’ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಅನಾವರಣಗೊಳಿಸಿತು. ಹುಲಿವೇಷ (ನೃತ್ಯಾಪ್ಸರ ಟೈಗರ್ ಡ್ಯಾನ್ಸ್), ಕಂಸಾಳೆ, ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಭೂತಾರಾಧನೆ ಹಾಗೂ ಚೆಂಡೆ ವಾದನಗಳ ಸೊಗಸಾದ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಸಂಜೆಯ ಪ್ರಮುಖ ಆಕರ್ಷಣೆಯಾಗಿ ಖ್ಯಾತ ಕಲಾವಿದರಾದ ವಸುಶ್ರೀ ಹಳೇಮನೆ, ಭೂಮಿಕಾ ಮಧುಸೂದನ್ ಮತ್ತು ಸುಪ್ರೀತ್ ಫಾಲ್ಗುಣ ಅವರಿಂದ ಮೂಡಿಬಂದ ಭಾವಪೂರ್ಣ ಸಂಗೀತ ಹಾಗೂ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.
ಕುಮಾರಿ ಸಾಯಿಶ್ರುತಿ ಪಿಲಿಕಜೆ ಅವರ ವೆಂಟ್ರಿಲೋಕ್ವಿಸ್ಟ್ (ಮಾತನಾಡುವ ಗೊಂಬೆ) ಪ್ರದರ್ಶನ, ಟೀಮ್ ನೃತ್ಯಪ್ರಿಯ ತಂಡದ ‘ತುಳುನಾಡ ಪಿಲಿ ನಲಿಕೆ’, ಪ್ರದೀಪ್ ಬಾರ್ಬೋಜಾ ಮತ್ತು ತಂಡದವರ ‘ಸಾಂಗೊನ್ ಮುಗ್ಡಾನ’ ಹಾಸ್ಯ ಪ್ರಹಸನ ಹಾಗೂ ಸಹಚೇತನ ನಾಟ್ಯಾಲಯ ಸೇರಿದಂತೆ ಯುಎಇಯ ವಿವಿಧ ನೃತ್ಯ ತಂಡಗಳ ಆಕರ್ಷಕ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
ಕನ್ನಡ ಪಾಠಶಾಲೆ ದುಬೈಯ ತರಗತಿಗಳಿಗೆ ಚಾಲನೆ
ಇದೇ ಸಂದರ್ಭದಲ್ಲಿ ವಿಶ್ವದ ಅತಿ ದೊಡ್ಡ ಉಚಿತ ಅನಿವಾಸಿ ಕನ್ನಡ ಭಾಷಾ ಶಾಲೆಯಾದ 'ಕನ್ನಡ ಮಿತ್ರರು' ನಡೆಸುತ್ತಿರುವ 'ಕನ್ನಡ ಪಾಠಶಾಲೆ ದುಬೈ'ನ 13ನೇ ವರ್ಷದ ತರಗತಿಗಳ ಔಪಚಾರಿಕ ಉದ್ಘಾಟನೆಯನ್ನು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಕರ್ನಾಟಕ ಸಂಘ ದುಬೈನ ಉಪಾಧ್ಯಕ್ಷ ದಯಾ ಕಿರೋಡಿಯನ್ ಎಲ್ಲರನ್ನು ಸ್ವಾಗತಿಸಿದರು. ಖ್ಯಾತ ಅಂತಾರಾಷ್ಟ್ರೀಯ ನಿರೂಪಕಿ ಸವಿ ಪ್ರಕಾಶ್ ಮತ್ತು ಯುಎಇಯ ಖ್ಯಾತ ನಿರೂಪಕಿ ಆರತಿ ಅಡಿಗ ಅವರ ನಿರೂಪಣೆ ಕಾರ್ಯಕ್ರಮದ ಚೆಂದವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿತು.
ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಖಜಾಂಚಿ ನಾಗರಾಜ್ ರಾವ್, ಮನರಂಜನಾ ಕಾರ್ಯದರ್ಶಿ ವಿನುತಾ ಪ್ರಕಾಶ್ ಹಾಗು ಕನ್ನಡಿಗರ ಕೂಟ ದುಬೈ ಅಧ್ಯಕ್ಷರಾದ ಅರುಣ್ ಕುಮಾರ್ ಎಂ.ಕೆ., ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿ ದೀಪಕ್ ಸೋಮಶೇಖರ, ಖಜಾಂಚಿ ವಿನೀತ್ ರಾಜ್ ಮತ್ತು ಪದಾಧಿಕಾರಿಗಳ ತಂಡವು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತು.






