ದುಬೈ | ನ.22ರಂದು ಐತಿಹಾಸಿಕ 'ದುಬೈ ರನ್ 2026' ; ಆಕರ್ಷಕ ವೇಷಭೂಷಣ ತೊಡುವ 10 ಮಂದಿಗೆ ತಲಾ 10 ಸಾವಿರ ದಿರ್ಹಂ ಬಹುಮಾನ !
ಬೃಹತ್ ಓಟದ ಟ್ರ್ಯಾಕ್ ಆಗಿ ಪರಿವರ್ತನೆಯಾಗಲಿದೆ ದುಬೈನ 'ಶೇಖ್ ಝಾಯೆದ್' ರಸ್ತೆ

ದುಬೈ: ದುಬೈನ ವಿಶ್ವವಿಖ್ಯಾತ ಶೇಖ್ ಝಾಯೆದ್ ರಸ್ತೆಯಲ್ಲಿ ನವೆಂಬರ್ 22ರಂದು ನಡೆಯಲಿರುವ ಐತಿಹಾಸಿಕ ‘ದುಬೈ ರನ್ 2026’ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ದುಬೈ ನಗರದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ, ಸದಾಕಾಲ ವಾಹನಗಳಿಂದ ಗಿಜಿಗುಡುತ್ತಿರುವ ಶೇಖ್ ಝಾಯೆದ್ ರಸ್ತೆ, ವಾಹನ ಸಂಚಾರದಿಂದ ಮುಕ್ತಗೊಂಡು ಬೃಹತ್ ಓಟದ ಟ್ರ್ಯಾಕ್ ಆಗಿ ಪರಿವರ್ತನೆಯಾಗಲಿದೆ.
ದುಬೈ ಫಿಟ್ನೆಸ್ ಚಾಲೆಂಜ್ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಈ ಕಾರ್ಯಕ್ರಮದಲ್ಲಿ ಎಲ್ಲ ವಯೋಮಾನದವರು, ಕುಟುಂಬಗಳು, ಆರಂಭಿಕ ಓಟಗಾರರು ಹಾಗೂ ಅನುಭವಿ ಕ್ರೀಡಾಪಟುಗಳು ಭಾಗವಹಿಸಲು ಅವಕಾಶ ನೀಡಲಾಗಿದೆ.
5 - 10 ಕಿ.ಮೀ. ಓಟಕ್ಕೆ ಅವಕಾಶ
ರವಿವಾರ ಬೆಳಗ್ಗೆ 6.30ಕ್ಕೆ ಆರಂಭಗೊಳ್ಳಲಿರುವ 'ದುಬೈ ರನ್'ನಲ್ಲಿ ಭಾಗವಹಿಸುವವರು 5 ಕಿ.ಮೀ. ಮತ್ತು 10 ಕಿ.ಮೀ. ಎಂಬ ಎರಡು ಮಾರ್ಗಗಳಲ್ಲಿ ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಓಡುವುದು, ನಿಧಾನವಾಗಿ ಓಡುವುದು ಅಥವಾ ನಡೆಯುವ ಮೂಲಕವೂ ಭಾಗವಹಿಸಬಹುದಾದ ಈ ಕಾರ್ಯಕ್ರಮದಲ್ಲಿ ದುಬೈನ ಪ್ರಮುಖ ಹೆಗ್ಗುರುತುಗಳನ್ನು ವೀಕ್ಷಿಸುತ್ತಾ ನಗರದ ವಿಭಿನ್ನ ಸೌಂದರ್ಯವನ್ನು ಆಸ್ವಾದಿಸುವ ಅವಕಾಶ ಸಿಗಲಿದೆ. ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿರುವ ದುಬೈ ರನ್, ಆರೋಗ್ಯಕರ ಜೀವನಶೈಲಿ ಮತ್ತು ಸಾಮೂಹಿಕ ಕ್ರೀಡಾಸ್ಫೂರ್ತಿಗೆ ಪ್ರೋತ್ಸಾಹ ನೀಡಲಿದೆ.
ಎರಡು ವಿಭಿನ್ನ ಓಟದ ಮಾರ್ಗಗಳು
ಎರಡೂ ಓಟದ ಮಾರ್ಗಗಳು ದುಬೈನ ಮ್ಯೂಸಿಯಂ ಆಫ್ ದಿ ಫ್ಯೂಚರ್ ಸಮೀಪದ ಶೇಖ್ ಝಾಯೆದ್ ರಸ್ತೆಯಿಂದ ಆರಂಭವಾಗಲಿವೆ. 5 ಕಿ.ಮೀ. ಮಾರ್ಗವು ಮಕ್ಕಳು, ಕುಟುಂಬ ಸಮೇತರಾಗಿ ಹಾಗೂ ಆರಂಭಿಕ ಓಟಗಾರರಿಗೆ ಅನುಕೂಲಕರವಾಗಿದ್ದು, ಡೌನ್ಟೌನ್ ದುಬೈ ಮೂಲಕ ಸಾಗಲಿದೆ. ಈ ಮಾರ್ಗದಲ್ಲಿ ಬುರ್ಜ್ ಖಲೀಫಾ ಮತ್ತು ದುಬೈ ಒಪೆರಾ ಸೇರಿದಂತೆ ಪ್ರಮುಖ ಆಕರ್ಷಣೆಗಳನ್ನು ವೀಕ್ಷಿಸುವ ಅವಕಾಶವಿದ್ದು, ದುಬೈ ಮಾಲ್ ಸಮೀಪದ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಬೌಲೆವಾರ್ಡ್ನಲ್ಲಿ ಓಟ ಮುಕ್ತಾಯಗೊಳ್ಳಲಿದೆ.
10 ಕಿ.ಮೀ. ಮಾರ್ಗವು ಹೆಚ್ಚಿನ ದೂರ ಕ್ರಮಿಸಲು ಬಯಸುವವರಿಗೆ ಸವಾಲಿನ ಅನುಭವ ನೀಡಲಿದೆ. ಮ್ಯೂಸಿಯಂ ಆಫ್ ದಿ ಫ್ಯೂಚರ್ನಿಂದ ಆರಂಭವಾಗುವ ಈ ಓಟವು, ದುಬೈ ಕೆನಾಲ್ ಸೇತುವೆಯನ್ನು ದಾಟಿ, ಶೇಖ್ ಝಾಯೆದ್ ರಸ್ತೆಯ ಮೂಲಕ ಸಾಗಲಿದ್ದು, ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ನ (DIFC) ಗೇಟ್ ಬಿಲ್ಡಿಂಗ್ ಸಮೀಪ ಅಂತ್ಯಗೊಳ್ಳಲಿದೆ. ಮಾರ್ಗದುದ್ದಕ್ಕೂ ಎಮಿರೇಟ್ಸ್ ಟವರ್ಸ್ ಸೇರಿದಂತೆ ದುಬೈನ ಪ್ರಸಿದ್ಧ ಕಟ್ಟಡಗಳ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.
ಆಕರ್ಷಕ ವೇಷಭೂಷಣ ತೊಡುವ 10 ಮಂದಿಗೆ ತಲಾ 10 ಸಾವಿರ ದಿರ್ಹಂ ಬಹುಮಾನ!
ದುಬೈ ರನ್ನಲ್ಲಿ ಪಾಲ್ಗೊಳ್ಳುವವರು ತಮ್ಮ ಸೃಜನಶೀಲ ಹಾಗೂ ಆಕರ್ಷಕ ವೇಷಭೂಷಣಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ 10 ಸಾವಿರ ದಿರ್ಹಂ ಬಹುಮಾನ ಗೆಲ್ಲುವ ಅವಕಾಶವನ್ನೂ ಪಡೆಯಲಿದ್ದಾರೆ.
ದುಬೈ ಫಿಟ್ನೆಸ್ ಚಾಲೆಂಜ್ನ 10ನೇ ಆವೃತ್ತಿಯ ಹಿನ್ನೆಲೆಯಲ್ಲಿ ಈ ಬಾರಿ ‘ಡ್ರೆಸ್ ಯುವರ್ ರನ್’ ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಆಯ್ಕೆಯಾಗುವ 10 ಮಂದಿಗೆ ತಲಾ 10,000 ದಿರ್ಹಂನಂತೆ ಒಟ್ಟು 1 ಲಕ್ಷ ದಿರ್ಹಂ ಬಹುಮಾನ ಘೋಷಿಸಲಾಗಿದೆ.
ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಈ ಬೃಹತ್ ಕ್ರೀಡಾಕೂಟದಲ್ಲಿ ವಿಭಿನ್ನ, ವರ್ಣರಂಜಿತ ಹಾಗೂ ಸೃಜನಶೀಲ ಓಟದ ಉಡುಪುಗಳನ್ನು ಧರಿಸಿ ಪಾಲ್ಗೊಳ್ಳುವಂತೆ ಆಯೋಜಕರು ಆಹ್ವಾನಿಸಿದ್ದಾರೆ.
ಈ ಹಿಂದೆ ನಡೆದ ದುಬೈ ರೈಡ್ ಸಂದರ್ಭದಲ್ಲಿಯೂ ಇಂತಹದ್ದೇ ಸ್ಪರ್ಧೆ ಆಯೋಜಿಸಲಾಗಿತ್ತು. ಆಗ ಹಲವು ಮಂದಿ ಆಕರ್ಷಕ ಹಾಗೂ ಬಣ್ಣಬಣ್ಣದ ವೇಷಭೂಷಣಗಳೊಂದಿಗೆ ಭಾಗವಹಿಸಿ ಗಮನ ಸೆಳೆದಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ ?
ದುಬೈ ರನ್ನ ಅಧಿಕೃತ ವೆಬ್ಸೈಟ್ ಮೂಲಕ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಬಳಿಕ ವಿಭಿನ್ನ ಹಾಗೂ ಸೃಜನಶೀಲ ಓಟದ ಉಡುಪುಗಳನ್ನು ಧರಿಸಿ ದುಬೈ ರನ್ನಲ್ಲಿ ಪಾಲ್ಗೊಳ್ಳಬೇಕು. ಈ ಸಂದರ್ಭದಲ್ಲಿ ಅಧಿಕೃತ ಬಿಬ್ (ಓಟಗಾರರ ಸಂಖ್ಯೆಯ ಗುರುತಿನ ಚೀಟಿ) ಸ್ಪಷ್ಟವಾಗಿ ಕಾಣುವಂತೆ ಫೋಟೊ ತೆಗೆದುಕೊಳ್ಳಬೇಕು.
ನಂತರ ಇನ್ಸ್ಟಾಗ್ರಾಮ್ನಲ್ಲಿ @dubaifitnesschallenge ಅಧಿಕೃತ ಖಾತೆಯನ್ನು ಫಾಲೋ ಮಾಡಿ, ನ.22ರಂದು ಬೆಳಗ್ಗೆ 5ರಿಂದ ಸಂಜೆ 5 ಗಂಟೆಯೊಳಗೆ ನೇರ ಮೆಸೇಜ್ ಮೂಲಕ ಫೋಟೊ ಕಳುಹಿಸಬೇಕು.
18 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ನೇರವಾಗಿ ಭಾಗವಹಿಸಬಹುದು. ಅಪ್ರಾಪ್ತ ವಯಸ್ಕರ ಪರವಾಗಿ ಅವರ ಪೋಷಕರು ಅಥವಾ ಪಾಲಕರು ಫೋಟೊ ರವಾನಿಸಬಹುದು. ವಿಜೇತರನ್ನು ನ. 29ರಂದು ಘೋಷಿಸಲಾಗುತ್ತದೆ.
ದುಬೈ ರನ್ ಬಗ್ಗೆ ...
ಓಟವು ಬೆಳಗ್ಗೆ 6.30ಕ್ಕೆ ಆರಂಭವಾಗಲಿದ್ದು, ಭಾಗವಹಿಸುವವರ ನೋಂದಣಿ ಸಮಯಕ್ಕೆ ಅನುಗುಣವಾಗಿ ಬೆಳಗ್ಗೆ 4 ಗಂಟೆಯಿಂದ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಆರಂಭಿಕ ಸಮಯಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನೋಂದಣಿ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಗೆ ಆರಂಭಿಕ ಮಾರ್ಗವನ್ನು ಮುಚ್ಚಲಾಗುತ್ತದೆ.
ನೋಂದಾಯಿತ ಸ್ಪರ್ಧಿಗಳು 21ರವರೆಗೆ ದುಬೈ ಮುನ್ಸಿಪಾಲಿಟಿಯ 30x30 ಫಿಟ್ನೆಸ್ ವಿಲೇಜ್, ಝಬೀಲ್ ಪಾರ್ಕ್ನಲ್ಲಿ ತಮ್ಮ ಅಧಿಕೃತ ಬಿಬ್ ಮತ್ತು ಟಿ-ಶರ್ಟ್ಗಳನ್ನು ಪಡೆದುಕೊಳ್ಳಬಹುದು.
ಸ್ಪರ್ಧಿಗಳು ಅಧಿಕೃತ ಬಿಬ್ ಧರಿಸುವುದು ಕಡ್ಡಾಯವಾಗಿದ್ದು, ಆಯ್ಕೆ ಮಾಡಿಕೊಂಡ ಮಾರ್ಗದಲ್ಲಿ ಓಡಲು ಅಥವಾ ನಡೆಯಲು ಅನುಕೂಲವಾಗುವ ಉಡುಪುಗಳನ್ನು ಧರಿಸಬೇಕು. ಇತರ ಸ್ಪರ್ಧಿಗಳಿಗೆ ತೊಂದರೆಯಾಗದಂತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಆಯೋಜಕರು ಸೂಚಿಸಿದ್ದಾರೆ.
ಕಳೆದ ವರ್ಷ ದಾಖಲೆಯ 3.07 ಲಕ್ಷ ಮಂದಿ ಭಾಗಿ
ಕಳೆದ ವರ್ಷ(2025)ದ ದುಬೈ ರನ್ನಲ್ಲಿ ದಾಖಲೆಯ 3,07,000 ಮಂದಿ ಭಾಗವಹಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು ಹಾಗೂ ಪ್ರವಾಸಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕಳೆದ ವರ್ಷ ದಾಖಲೆಯ ಸಂಖ್ಯೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ 8ನೇ ಆವೃತ್ತಿಯ ದುಬೈ ರನ್ಗೆ ಮತ್ತೆ ಶೇಖ್ ಝಾಯೆದ್ ರಸ್ತೆಯಲ್ಲಿ ಎಲ್ಲರನ್ನು ಸ್ವಾಗತಿಸಲು ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಕುಟುಂಬಗಳು, ಮೊದಲ ಬಾರಿಗೆ ಓಟದಲ್ಲಿ ಪಾಲ್ಗೊಳ್ಳುವವರು ಹಾಗೂ ಅನುಭವಿ ಕ್ರೀಡಾಪಟುಗಳು ಒಟ್ಟಾಗಿ ದುಬೈ ಫಿಟ್ನೆಸ್ ಚಾಲೆಂಜ್ನ 30x30 ಗುರಿಯನ್ನು ಸಾಧಿಸಲು ಅವಕಾಶ ಕಲ್ಪಿಸಲಾಗಿದೆ.
ದುಬೈ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ದುಬೈ ಸ್ಪೋರ್ಟ್ಸ್ ಕೌನ್ಸಿಲ್ ಜಂಟಿಯಾಗಿ ‘ದುಬೈ ರನ್’ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯಿದೆ.
ಮೆಟ್ರೋ ಪ್ರಯಾಣಕ್ಕೆ ಆದ್ಯತೆ
ದುಬೈ ರನ್ ದಿನದಂದು ಸಾರ್ವಜನಿಕರ ಅನುಕೂಲಕ್ಕಾಗಿ ದುಬೈ ಮೆಟ್ರೋ ಸೇವೆಯನ್ನು ಮುಂಜಾನೆಯೇ ಆರಂಭಿಸಲಾಗುತ್ತದೆ. ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆಯ ಸಮಸ್ಯೆ ತಪ್ಪಿಸಲು ಮೆಟ್ರೋ ಬಳಕೆಗೆ ಆಯೋಜಕರು ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಪ್ರಯಾಣಿಕರು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಮುಂಚಿತವಾಗಿಯೇ ತಮ್ಮ ನೋಲ್ ಕಾರ್ಡ್ನಲ್ಲಿ ಕನಿಷ್ಠ 15 ದಿರ್ಹಮ್ ಬ್ಯಾಲೆನ್ಸ್ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
5 ಕಿ.ಮೀ. ಓಟದಲ್ಲಿ ಭಾಗವಹಿಸುವವರು ವರ್ಲ್ಡ್ ಟ್ರೇಡ್ ಸೆಂಟರ್ ಮೆಟ್ರೋ ನಿಲ್ದಾಣದಲ್ಲಿ ಇಳಿಯುವಂತೆಯೂ, 10 ಕಿ.ಮೀ. ಓಟಗಾರರು ಎಮಿರೇಟ್ಸ್ ಟವರ್ಸ್ ಮೆಟ್ರೋ ನಿಲ್ದಾಣವನ್ನು ಬಳಸಬಹುದು ಎಂದು ಸಂಘಟಕರು ಸೂಚಿಸಿದ್ದಾರೆ.
ವಾಹನಗಳಲ್ಲಿ ಆಗಮಿಸುವ 5 ಕಿ.ಮೀ. ಓಟಗಾರರಿಗೆ ದುಬೈ ಮಾಲ್ನಲ್ಲಿ ಹಾಗೂ 10 ಕಿ.ಮೀ. ಓಟಗಾರರಿಗೆ ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶಕಲ್ಪಿಸಲಾಗಿದೆ. ಅಲ್ಲಿಂದ ಮೆಟ್ರೋ ಮೂಲಕ ಓಟದ ಆರಂಭಿಕ ಸ್ಥಳಕ್ಕೆ ತಲುಪುವಂತೆ ಸೂಚಿಸಲಾಗಿದೆ.
ಆರೋಗ್ಯಕರ ಜೀವನಶೈಲಿ, ದೈಹಿಕ ಚಟುವಟಿಕೆ ಹಾಗೂ ಸಾಮೂಹಿಕ ಕ್ರೀಡಾಸ್ಫೂರ್ತಿಯನ್ನು ಉತ್ತೇಜಿಸುವ ದುಬೈ ರನ್, ನಗರದ ನಿವಾಸಿಗಳು ಮತ್ತು ಪ್ರವಾಸಿಗರಿಗೆ ವಿಶ್ವದ ಪ್ರಸಿದ್ಧ ಹೆದ್ದಾರಿಗಳಲ್ಲಿ ಒಂದಾದ ಶೇಖ್ ಝಾಯೆದ್ ರಸ್ತೆಯಲ್ಲಿ ಓಡುವ ಅಪರೂಪದ ಅನುಭವವನ್ನು ಒದಗಿಸಲಿದೆ.






