ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಇಫ್ತಾರ್ ಕೂಟ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ದುಬೈ ಅಬುಹೈಲ್ ನ ಅಲ್ ಝಾಹಿಯಾ ಸಭಾಂಗಣದಲ್ಲಿ ಇಫ್ತಾರ್ ಕೂಟ ನಡೆಯಿತು.
ಇಸ್ಲಾಮಿಕ್ ಕ್ವಿಝ್ ಮತ್ತು ಮಕ್ಕಳ ಕುರ್‌ಆನ್ ಸ್ಪರ್ಧೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತದ ಕಾನ್ಸುಲ್ ಜನರಲ್ ಸತೀಶ್ ಕುಮಾರ್ ಸಿವಾನ್ ಮತ್ತು ಬಿಸಿಎಫ್ ದುಬೈ ಇದರ ಪೋಷಕ ಹಾಗೂ ತುಂಬೆ ಗ್ರೂಪ್ ಚೇರ್ಮ್ಯಾನ್ ಡಾ.ತುಂಬೆ ಮೊಯಿದಿನ್ ಅವರನ್ನು ಬಿಸಿಎಫ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಾಸ್ತಾವಿಕ ಮಾತನ್ನಾಡಿದ ಬಿಸಿಎಫ್ ನ ಅಧ್ಯಕ್ಷ ಡಾ. ಬಿ.ಕೆ.ಯೂಸುಫ್ ರವರು ಹಲವು ವರ್ಷಗಳಿಂದ ಬಿಸಿಎಫ್ ಯುಎಈ ಯಲ್ಲಿ ನಡೆಸಿಕೊಂಡು ಬರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತಾಯ್ನಾಡಿನ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದನ್ನು ಪ್ರಾಸ್ತಾಪಿಸಿದರು. ಇದೇ ಸಂದರ್ಭದಲ್ಲಿ ಪ್ರಚಲಿತ ವರ್ಷದಲ್ಲಿ ನೀಡಲ್ಪಡುವ ವಿದ್ಯಾರ್ಥಿ ವೇತನದ ಘೋಷಣೆಯನ್ನು ಮಾಡಲಾಯಿತು.
ಬಿಸಿಎಫ್ ಸಲಹೆಗಾರರಾದ ಗಡಿಯಾರ್ ಗ್ರೂಪ್ ಚೇರ್ಮ್ಯಾನ್ ಇಬ್ರಾಹಿಮ್ ಗಡಿಯಾರ್, ನಫೀಸ್ ಗ್ರೂಪ್ ಚೇರ್ಮ್ಯಾನ್ ಅಬೂ ಸಾಲಿಹ್ ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬಿಸಿಎಫ್ ಇಫ್ತಾರ್ ಚೇರ್ಮ್ಯಾನ್ ಅಬ್ದುಲ್ ಲತೀಫ್ ಮುಲ್ಕಿ ಅವರು ಇಫ್ತಾರ್ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಬರುವ ಆಗಸ್ಟ್ ತಿಂಗಳಲ್ಲಿ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯಲಿರುವ ಬಿಸಿಎಫ್ ಸ್ಕಾಲರ್‌ಶಿಪ್ ಮೀಟ್ ಬಗ್ಗೆ ಪ್ರಸ್ತಾಪಿಸಿದ ಬಿಸಿಎಫ್ ಸ್ಕಾಲರ್‌ಶಿಪ್ ಚೇರ್ಮ್ಯಾನ್ ಎಂ.ಇ ಮೂಳೂರು ರವರು ಎಲ್ಲರನ್ನೂ ಬಿಸಿಎಫ್ ಪರವಾಗಿ ಆಮಂತ್ರಿಸಿದರು.

















