ನ.9ರಂದು ದುಬೈ ಕರ್ನಾಟಕ ಸಂಘದ ವತಿಯಿಂದ 'ದುಬೈ ಕರ್ನಾಟಕ ರಾಜ್ಯೋತ್ಸವ -2025'

ಸಮದ್ ಬಿರಾಲಿ ಉಚ್ಚಿಲ / ಇರ್ಷಾದ್ ಮೂಡುಬಿದಿರೆ/ ಅಲ್ವೀನ್ ಪಿಂಟೋ / ಚಿದಾನಂದ ಪೂಜಾರಿ
ದುಬೈ : ಕರ್ನಾಟಕ ಸಂಘ ದುಬೈ ಆಯೋಜನೆಯ "ದುಬೈ ಕರ್ನಾಟಕ ರಾಜ್ಯೋತ್ಸವ -2025" ನವೆಂಬರ್ 9ರಂದು ನಗರದ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಮುಹೇಸಿನ ಕಿಸೀಸ್ (ಮದೀನಾ ಮಾಲ್ ಹಿಂಬದಿಯಲ್ಲಿ) ನ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10:30 ರಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮತ್ತು ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣಗಳು ನಡೆಯಲಿರುವುದು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಕರ್ನಾಟಕ ಸರಕಾರದ ಸಂಪುಟ ಸಚಿವರಾದ ಶಿವರಾಜ ತಂಗಡಗಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಅನಿವಾಸಿ ಉದ್ಯಮಿಗಳಾದ ಡಾ.ಬಿ.ಆರ್ ಶೆಟ್ಟಿ, ಡಾ.ರೊನಾಲ್ಡ್ ಕೊಲಾಸೊ, ಡಾ.ತುಂಬೆ ಮೊಯ್ದೀನ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.
ಅನಿವಾಸಿ ಕನ್ನಡಿಗರ ಸಮಾಜ ಸೇವೆಗಾಗಿ ವರ್ಷಂಪ್ರತಿ ಕೊಡಮಾಡುವ "ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2025" ಪ್ರಶಸ್ತಿಯನ್ನು ಸಮದ್ ಬಿರಾಲಿ ಉಚ್ಚಿಲರವರಿಗೆ ಹಾಗೂ "ಸಾಧಕ ರತ್ನ ಪ್ರಶಸ್ತಿ-2025"ಯನ್ನು ಪತ್ರಿಕಾ ರಂಗ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ್ದ ಇರ್ಷಾದ್ ಮೂಡುಬಿದಿರೆ, ಕಲಾ ಸೇವೆಯ ಮೂಲಕ ಸೇವೆ ಸಲ್ಲಿಸಿದ್ದ ಆಲ್ವಿನ್ ಪಿಂಟೋ ಮತ್ತು ಯಕ್ಷಗಾನ-ನಾಟಕ ರಂಗದಲ್ಲಿ ಸೇವೆ ಸಲ್ಲಿಸಿದ್ದ ಚಿದಾನಂದ ಪೂಜಾರಿರವರನು ಗೌರವಿಸಲಾಗುವುದು.
ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯುಎಇಯ ಎಲ್ಲಾ ಕನ್ನಡಿಗರೂ ಭಾಗವಹಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.







