"ದುಬೈ; ಏರಿಕೆಯಾಗುತ್ತಿರುವ ದಿನನಿತ್ಯ ವಸ್ತುಗಳ ಬೆಲೆ: ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಳ್ಳಿ"

ಹಿದಾಯತ್ ಅಡ್ಡೂರು
ದುಬೈ: ಸಂಘರ್ಷದ ಹಿನ್ನೆಲೆಯಲ್ಲಿ ಯುಎಇಯಲ್ಲಿ ದಿನನಿತ್ಯ ವಸ್ತುಗಳ ಬೆಲೆ ಏರಿಯುಕೆಯಾಗುತ್ತಿದ್ದು, ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಸಂಯೋಜಕರು, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ಮನವಿ ಮಾಡಿದ್ದಾರೆ.
ವಾರ್ತಾ ಭಾರತಿ' ಚಾನೆಲ್ ನಡೆಸಿದ 'Iran- Israel, America ಸಂಘರ್ಷ | ಗಲ್ಫ್ ದೇಶಗಳಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ ?' ಎಂಬ ಚರ್ಚಾ ವಿಷಯದಲ್ಲಿ ಯುಎಇಯ ಪ್ರಸಕ್ತ ಪರಿಸ್ಥಿತಿಯ ಕುರಿತು ಅವರು ಮಾತನಾಡುತ್ತಿದ್ದರು.
'ದುಬೈಯಲ್ಲಿ ದಿನನಿತ್ಯ ವಸ್ತುಗಳಿಗೆ, ಆಹಾರ ಉತ್ಪನ್ನಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ, ನೀವು ಹೆಚ್ಚು ತಂದು ಸಂಗ್ರಹ ಮಾಡಬೇಡಿ' ಎಂದು ದುಬೈ ಎಕನಾಮಿಕ್ ನ ಅಧಿಕಾರಿಯೊಬ್ಬರು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಆದರೆ ಯಾವುದಕ್ಕೂ ನಮ್ಮ ಕನ್ನಡಿಗರು ತಮ್ಮ ಬಳಿ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಕಾರಣ, ಬೆಲೆ ಏರಿಕೆ ಆಗುತ್ತಿದೆ. ಹಣ್ಣು-ಹಂಪಲುಗಳ ಬೆಲೆ ದುಪ್ಪಟ್ಟು ಆಗುತ್ತಿದೆ. ಇನ್ನೊಂದೆಡೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಹಾರದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.
ಯುಎಇಯಲ್ಲಿ ಒಟ್ಟು 3.3 ಲಕ್ಷ ಕನ್ನಡಿಗರಿದ್ದೇವೆ. ಅವರಿಗೆ ಯಾವುದೇ ರೀತಿಯ ಸಮಸ್ಯೆ, ಸಂಕಷ್ಟ ಎದುರಾದರೆ ಅವರ ಸಹಾಯಕ್ಕೆ ಕನ್ನಡಿಗಾಸ್ ಹೆಲ್ಪ್ ಲೈನ್ ಸದಾ ಸಿದ್ಧವಿದೆ. ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಯಾವುದೇ ರೀತಿಯ ಸಾವು-ನೋವು ಇಲ್ಲಿ ಆಗಿಲ್ಲ. ಇಲ್ಲಿನ ಸರಕಾರ ಜನರಿಗೆ ಒಳ್ಳೆಯ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಅಪಪ್ರಚಾರವಾಗಲಿ, ಗಾಳಿ ಸುದ್ದಿಯಾಗಲಿ ಹರಡಬೇಡಿ. ದುಬೈಗೆ ಪ್ರವಾಸಕ್ಕೆಂದು ಬಂದು ಸಂಕಷ್ಟಕ್ಕೆ ಸಿಕ್ಕಿರುವ ಸುಮಾರು 200ಕ್ಕೂ ಹೆಚ್ಚು ಮಂದಿ ನಮ್ಮ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಜೊತೆಗೆ ಇನ್ನಿತರ ರೀತಿಯಲ್ಲಿ ಸಮಸ್ಯೆ ಸಂಕಷ್ಟದಲ್ಲಿರುವವರನ್ನು ಕೂಡ ಭೇಟಿಯಾಗಿ, ಅವರ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ ಎಂದು ಹಿದಾಯತ್ ಅಡ್ಡೂರು ಹೇಳಿದರು.
ನಾವು ರಾಜ್ಯ ಹಾಗು ಕೇಂದ್ರ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಜೊತೆಗೆ ಇಲ್ಲಿರುವ ಭಾರತೀಯ ರಾಯಭಾರಿ ಹಾಗು ಕಚೇರಿಯೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರೊಂದಿಗೂ ಸಭೆ, ಚರ್ಚೆ ನಡೆಸಲಾಗಿದೆ. ಅವರು ನಮಗೆ ಮಾಹಿತಿ, ಸೂಚನೆಗಳನ್ನು ಪಡೆಯುತ್ತಿದ್ದೇವೆ. 13 ಸಾವಿರ ವಿಮಾನ ರದ್ದಾಗಿರುವುದರಿಂದ ವಿಮಾನ ಹಾರಾಟ ಆರಂಭವಾದ ಕೂಡಲೇ ತುರ್ತು ಪರಿಸ್ಥಿತಿಯಲ್ಲಿರುವವರು, ಈಗಾಗಲೇ ಟಿಕೆಟ್ ಕಾಯ್ದಿರಿಸಿದವರನ್ನು ಆದ್ಯತೆ ಮೇರೆಗೆ ಕಳುಹಿಸಲಾಗುತ್ತದೆ ಎಂದರು.







