ದುಬೈನಲ್ಲಿ ವಿತರಣಾ ಕೇಂದ್ರದಲ್ಲಿ 1,25,000 ಚದರ ಅಡಿ ವಿಸ್ತೀರ್ಣದ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದ 'ಎಲೆಕ್ಟ್ರಿಕ್ ವೇ'

ದುಬೈ, ಯುಎಇ : ಕೇಬಲ್ಗಳು ಮತ್ತು ಲೈಟಿಂಗ್ ಸೇರಿದಂತೆ ಎಲೆಕ್ಟ್ರಿಕಲ್ ಉತ್ಪನ್ನಗಳ ವಿತರಣೆಯಲ್ಲಿ ಪ್ರಮುಖ ಪ್ರಾದೇಶಿಕ ಸಂಸ್ಥೆಯಾಗಿರುವ 'ಎಲೆಕ್ಟ್ರಿಕ್ ವೇ' ತನ್ನ ಪ್ರಮುಖ ವಿತರಣಾ ಕೇಂದ್ರದ ಬೃಹತ್ ವಿಸ್ತರಣಾ ಯೋಜನೆಗೆ ನ್ಯಾಷನಲ್ ಇಂಡಸ್ಟ್ರೀಸ್ ಪಾರ್ಕ್ ನಲ್ಲಿ ಇಂದು ಅಧಿಕೃತವಾಗಿ ಅಡಿಗಲ್ಲು ಹಾಕಿತು.
ಇದು ಕಂಪನಿಯ ನಿರಂತರ ಬೆಳವಣಿಗೆಯ ಹಾದಿಯಲ್ಲಿ ಒಂದು ಮಹತ್ವದ ಘಟ್ಟವಾಗಿದ್ದು , ಮಧ್ಯಪ್ರಾಚ್ಯದಾದ್ಯಂತ ಅತ್ಯಾಧುನಿಕ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಸಲು ಸಹಕಾರಿಯಾಗಲಿದೆ.
ಹೆಚ್ಚುವರಿಯಾಗಿ 1,25,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನು ಹೊಂದಲಿರುವ ಈ ಹೊಸ ಅತ್ಯಾಧು ನಿಕ ವಿಸ್ತರಣಾ ಯೋಜನೆಯು , ಈಗ ಚಾಲಿಯಲ್ಲಿರುವ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದೆ. ಆ ನಿಟ್ಟಿನಲ್ಲಿ ಅತ್ಯಂತ ನಿಖರವಾಗಿ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಬೃಹತ್ ಮೂಲಸೌಕರ್ಯ ಹೂಡಿಕೆಯು ತಕ್ಷಣದ ಪೂರೈಕೆ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಲಿದೆ. ಬೃಹತ್ ಆರ್ಡರ್ ಗಳನ್ನು ವೇಗವಾಗಿ ಪೂರೈಸಲು ಮತ್ತು ನಿರ್ಮಾಣ, ಉತ್ಪಾದನೆ, ಯುಟಿಲಿಟಿಸ್ ಹಾಗೂ ಡೇಟಾ ಸೆಂಟರ್ ವಲಯ ಗಳಲ್ಲಿ ವೇಗವಾಗಿ ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ವ್ಯವಹಾರವನ್ನು ಸಜ್ಜುಗೊಳಿಸಲು ಇದು ನೆರವಾಗಲಿದೆ.
ಸಭೆಯಲ್ಲಿ ಮಾತನಾಡಿದ ತುಂಬೆ ಗ್ರೂಪ್ ಉಪಾಧ್ಯಕ್ಷರಾದ ಅಕ್ಬರ್ ಮೊಹಿದ್ದೀನ್ ತುಂಬೆ , ಎಲೆಕ್ಟ್ರಿಕ್ ವೇ ಸಂಸ್ಥೆಯು ಮೂಲಸೌಕರ್ಯ ಅಭಿವೃದ್ಧಿಯ ಹೊಸ ಹಂತಕ್ಕೆ ಕಾಲಿಡುತ್ತಿರುವುದಕ್ಕೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಯು ಸಂಸ್ಥೆಯ ದೃಢವಾದ ಆರ್ಥಿಕ ಚೈತನ್ಯ ಮತ್ತು ಮುನ್ನೋಟದ ನಾಯಕತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
1,25,000 ಚದರ ಅಡಿ ವಿಸ್ತರಣೆಯು ಕೇವಲ ಭೌತಿಕ ಸ್ಥಳಾವಕಾಶದ ಹೆಚ್ಚಳವಲ್ಲ. ಬದಲಿಗೆ ನಾವೀನ್ಯತೆ ಮತ್ತು ಸೇವೆ ಸಲ್ಲಿಸುವ ನಮ್ಮ ಭವಿಷ್ಯದ ಸಾಮರ್ಥ್ಯದ ಮೇಲಿನ ಯೋಜಿತ ಹೂಡಿಕೆಯಾಗಿದೆ. ನಮ್ಮ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಮೂಲಕ, ಗ್ರಾಹಕರ ನಿರೀಕ್ಷೆಗಳನ್ನು ಮೀರಿ ಬೆಳೆಯಲು ನಮ್ಮ ಸಂಸ್ಥೆಗೆ ಸಾಧ್ಯವಾಗಿದೆ ಎಂದು ಕಂಪನಿಯ ಸಿಇಒ ಅತೀಕ್ ಅನ್ಸಾರಿ ಹೇಳಿದರು.
ಎಲೆಕ್ಟ್ರಿಕ್ ವೇ ಸಂಸ್ಥೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಮೊಹಮ್ಮದ್ ಮೀರಾನ್ ಸಾಹೇಬ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು . ನಿರ್ದೇಶಕ ಡಾ. ಉಝೈರ್ ಅನ್ಸಾರಿ ಉಪಸ್ಥಿತರಿದ್ದರು.
ಆಶಿಯಾನ ಕಾಂಟ್ರಾಕ್ಟಿಂಗ್ ಸಂಸ್ಥೆಯ ಉಸ್ತುವಾರಿಯೊಂದಿಗೆ ನಿರ್ಮಾಣ ಕಾರ್ಯಗಳು ನಡೆಯಲಿದ್ದು ಸುಸ್ಥಿರ ನಿರ್ಮಾಣ ಮಾನದಂಡಗಳ ಅತ್ಯುನ್ನತ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ಬದ್ಧವಾಗಿರಲಿದೆ ಎಂದು ಸಂಸ್ಥೆಯು ಹೇಳಿದೆ.






