ದಾವೋಸ್‌ನಲ್ಲಿ ರಾಜಕೀಯ–ಉದ್ಯಮ ನಾಯಕರನ್ನು ಭೇಟಿಯಾದ ಎಕ್ಸ್‌ಪರ್ಟೈಸ್ ಕಂಪೆನಿ ಮುಖ್ಯಸ್ಥರು

ದಾವೋಸ್ (ಸ್ವಿಟ್ಜರ್ಲೆಂಡ್): ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ವಾರ್ಷಿಕ ಸಭೆಯಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿಯ ಉನ್ನತ ಮಟ್ಟದ ನಿಯೋಗ ಭಾಗವಹಿಸಿ, ಭಾರತೀಯ ರಾಜಕೀಯ ನಾಯಕರು ಹಾಗೂ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿತು.
ಜಾಗತಿಕ ಪಾಲುದಾರಿಕೆಗಳನ್ನು ವಿಸ್ತರಿಸುವುದು ಹಾಗೂ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ ಈ ಸಂವಾದಗಳು ನಡೆದವು.
ಎಕ್ಸ್‌ಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಆಶಿಫ್ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಮುಹಮ್ಮದ್ ಅನ್ಶಿಫ್ ಅವರನ್ನು ಒಳಗೊಂಡ ನಿಯೋಗವು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕ ವಿಧಾನಸಭಾ ಸದಸ್ಯ ಎನ್.ಎ. ಹ್ಯಾರಿಸ್, ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀಧರ್ ಬಾಬು ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿತು.
ಇದಲ್ಲದೆ, ಬುರ್ಜೀಲ್ ಹೋಲ್ಡಿಂಗ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಶಂಶೀರ್ ವಯಲಿಲ್, ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ರೆಡ್ಡಿ ಹಾಗೂ ಜನರಲ್ ಕ್ಯಾಟಲಿಸ್ಟ್‌ನ ಸಿಇಒ ಹೇಮಂತ್ ತನೇಜಾ ಸೇರಿದಂತೆ ಪ್ರಮುಖ ಉದ್ಯಮ ನಾಯಕರೊಂದಿಗೂ ಸಮಾಲೋಚನೆ ನಡೆಯಿತು. ಈ ಚರ್ಚೆಗಳು ಆರೋಗ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ಸಹಯೋಗ - ಸಾಧ್ಯತೆಗಳ ಮೇಲೆ ಕೇಂದ್ರೀಕೃತವಾಗಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ಎಕ್ಸ್‌ಪರ್ಟೈಸ್ ಕಂಪೆನಿಯ ಸಿಇಒ ಮುಹಮ್ಮದ್ ಆಶಿಫ್, “WEF ದಾವೋಸ್ 2026ರಲ್ಲಿ ನಮ್ಮ ಭಾಗವಹಿಸುವಿಕೆಯು ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ನವೀನತೆಯನ್ನು ಉತ್ತೇಜಿಸುವ ಉಪ ಕ್ರಮಗಳತ್ತ ಕಂಪೆನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ರಾಜಕೀಯ ನಾಯಕರು ಮತ್ತು ಸರ್ಕಾರದ ಪ್ರತಿನಿಧಿಗಳ ಜೊತೆ ನಡೆದ ಸಂವಾದಗಳು ವಿಸ್ತರಣೆ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿವೆ” ಎಂದರು.
ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ಹಿರಿಯ ರಾಜಕೀಯ - ಸರಕಾರದ ಪ್ರತಿನಿಧಿಗಳು, ಜಾಗತಿಕ ಸಿಇಒಗಳು ಹಾಗೂ ವಿವಿಧ ದೇಶಗಳ ಉದ್ಯಮ ನಾಯಕರು ಭಾಗವಹಿಸುತ್ತಾರೆ. ಅಂತರರಾಷ್ಟ್ರೀಯ ಆರ್ಥಿಕ ಸವಾಲುಗಳು, ಹೂಡಿಕೆ ಅವಕಾಶಗಳು ಹಾಗೂ ಸುಸ್ಥಿರ ಬೆಳವಣಿಗೆ ಕುರಿತ ಚರ್ಚೆಗೆ ಇದು ಪ್ರಮುಖ ವೇದಿಕೆಯಾಗಿದೆ. ಈ ಸಭೆಯಲ್ಲಿ ನಡೆದ ಸಂವಾದಗಳು ಆದ್ಯತೆಯ ವಲಯಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿಯ ಹಾಜರಾತಿಯನ್ನು ಬಲಪಡಿಸುವತ್ತ ಗಮನಹರಿಸಿವೆ.
ಕಂಪೆನಿಯ CSO ಮುಹಮ್ಮದ್ ಅನ್ಶಿಫ್ ಮಾತನಾಡಿ, “ಉದ್ಯಮ ವಲಯದ ನಾಯಕರು ಹಾಗೂ ನೀತಿ ನಿರೂಪಕರೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸಲು WEF ದಾವೋಸ್ ಬಲವಾದ ವೇದಿಕೆಯನ್ನು ಒದಗಿಸಿದೆ. ಅದರಲ್ಲಿ ಭಾಗವಹಿಸಿರುವುದು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಕಂಪೆನಿಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿವೆ” ಎಂದು ಹೇಳಿದರು.
ಸೌದಿ ಅರೇಬಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಂಗಳೂರು ಮೂಲದ ಎಕ್ಸ್‌ಪರ್ಟೈಸ್ ಗ್ರೂಪ್ ಜಾಗತಿಕ ಕೈಗಾರಿಕಾ ಹಾಗೂ ಮೂಲಸೌಕರ್ಯ ಸೇವೆ ಪೂರೈಕೆದಾರ ಸಂಸ್ಥೆಯಾಗಿದ್ದು, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಹೊಂದಿದೆ.







