ಕತಾರ್‌ನಲ್ಲಿ ಡಾ.ಈಶ್ ಸಿಂಘಾಲ್‌ಗೆ ಬೀಳ್ಕೊಡುಗೆ

ದೋಹಾ-ಕತಾರ್, ಆ.17: ಕತಾರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಕಾರ್ಮಿಕ ಮತ್ತು ಸಮುದಾಯ ಕಲ್ಯಾಣ, ವೀಸಾ ಮತ್ತು ಒಸಿಐ) ಡಾ.ಈಶ್ ಸಿಂಘಾಲ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.
ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ ವತಿಯಿಂದ ನಡೆದ ಸಮಾರಂಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಪ್ರಮುಖ ರಾಜತಾಂತ್ರಿಕರು, ಭಾರತೀಯ ಉನ್ನತ ಶೃಂಗ ಸಂಸ್ಥೆಗಳ ಮುಖಂಡರು ಮತ್ತು ವಿವಿಧ ಸಂಯೋಜಿತ ಸಮುದಾಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ (ಡಿಸಿಎಂ) ಸಂದೀಪ್ ಕುಮಾರ್, ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಹಾಗೂ ಪ್ರಮುಖ ಉನ್ನತ ಶೃಂಗ ಸಂಸ್ಥೆಗಳ ನಿರ್ವಹಣಾ ಸಮಿತಿ ಸದಸ್ಯರು ಮತ್ತು ವಿವಿಧ ಸಮುದಾಯ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ಈ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಕರ್ನಾಟಕ ಸಂಘ ಕತಾರ್ ಪ್ರತಿನಿಧಿಸಿ, ಕೆಎಸ್‌ಕ್ಯೂ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಕೆಎಸ್‌ಕ್ಯೂ ಸಲಹಾ ಸಮಿತಿ ಸದಸ್ಯರು ಹಾಗೂ ಐಸಿಬಿಎಫ್ ಪ್ರಧಾನ ಕಾರ್ಯದರ್ಶಿಯಾದ ದೀಪಕ್ ಶೆಟ್ಟಿ, ಐಸಿಸಿ ಮಾಜಿ ಅಧ್ಯಕ್ಷರಾದ ಮಿಲನ್ ಅರುಣ್, ಕೆಎಸ್‌ಕ್ಯೂ ಉಪಾಧ್ಯಕ್ಷ ಅನಿಲ್ ಭಾಸಗಿ, ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ಕಾರ್ಯದರ್ಶಿ ಪ್ರಶಾಂತ್ ಹಿರೇಮಠ ಅವರು ಡಾ. ಈಶ್ ಸಿಂಘಾಲ್ ಅವರಿಗೆ ಗೌರವಿಸಿ, ಶುಭ ಹಾರೈಸಿದರು.






