ಗಲ್ಫ್ ಮೆಡಿಕಲ್ ಯೂನಿವರ್ಸಿಟಿಗೆ 28ರ ಸಂಭ್ರಮ; ಜಾಗತಿಕ ಶ್ರೇಯಾಂಕದಲ್ಲಿ ಮಹತ್ತರ ಸಾಧನೆ
► ಅಂತರರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ

ಅಜ್ಮಾನ್ (UAE): ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ತನ್ನ 28ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
ತುಂಬೆ ಗ್ರೂಪ್ ನ ಆಸ್ಪತ್ರೆಗಳಲ್ಲಿ ಜನಿಸಿ, GMUನಲ್ಲಿ ಶಿಕ್ಷಣ ಪಡೆದು ಅದೇ ಸಂಸ್ಥೆಯ ಆಸ್ಪತ್ರೆಗಳಲ್ಲಿ ಉದ್ಯೋಗಕ್ಕೆ ಸೇರಿದ ಹಳೆಯ ವಿದ್ಯಾರ್ಥಿಗಳು ಹಾಗೂ ಈಗ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಅವರ ಮಕ್ಕಳು ಒಂದೇ ವೇದಿಕೆಯಲ್ಲಿ ಸೇರಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, "ನಮ್ಮ ಆಸ್ಪತ್ರೆಗಳಲ್ಲಿ ಜನಿಸಿದ ವಿದ್ಯಾರ್ಥಿಗಳು, ಮತ್ತೆ ನಮ್ಮ ಬಳಿಗೇ ಮರಳಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ನಮ್ಮ ತರಗತಿಗಳಲ್ಲಿ ಕಲಿಯುತ್ತಿರುವ ಅವರ ಮಕ್ಕಳನ್ನು ಇಂದು ಒಂದೇ ವೇದಿಕೆಯಲ್ಲಿ ಕಾಣುತ್ತಿರುವುದು ಸಂತಸದ ಸಂಗತಿ. ಈ ಪ್ರದೇಶಕ್ಕಾಗಿ ಮಾತ್ರವಲ್ಲದೆ ಇಡೀ ಜಗತ್ತಿಗಾಗಿ ನಾವು ಈ ಸಂಸ್ಥೆಯನ್ನು ನಿರ್ಮಿಸಿದ್ದೇವೆ. ಇದು ಕೇವಲ ಆರಂಭವಷ್ಟೇ" ಎಂದರು.
GMUನ ಕುಲಪತಿ ಪ್ರೊ. ಮಂದಾ ವೆಂಕಟರಮಣ ಮಾತನಾಡಿ, ವೈದ್ಯಕೀಯ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಆವಿಷ್ಕಾರದಲ್ಲಿ ಶ್ರೇಷ್ಠತೆ ಸಾಧಿಸುವುದು ವಿಶ್ವವಿದ್ಯಾಲಯದ ಬದ್ಧತೆಯಾಗಿದೆ. ಅಂತರರಾಷ್ಟ್ರೀಯ ಮಾನ್ಯತೆಗಳು ಮತ್ತು ಜಾಗತಿಕ ಶ್ರೇಯಾಂಕಗಳ ಮೂಲಕ ಸಂಸ್ಥೆಯ ಜಾಗತಿಕವಾಗಿ ಬಲಗೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಡಾ. ತುಂಬೆ ಮೊಯ್ದೀನ್ ಮತ್ತು ಪ್ರೊ. ಮಂದಾ ವೆಂಕಟರಮಣ ಗೌರವಿಸಿದರು.
'ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ 2027'ರಲ್ಲಿ GMU ಮೊದಲ ಬಾರಿಗೆ 1001–1200ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಅಂತರರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ ಜಾಗತಿಕವಾಗಿ ಮೊದಲ ಸ್ಥಾನ ಗಳಿಸಿದೆ. 118 ದೇಶಗಳು ಮತ್ತು ಪ್ರಾಂತ್ಯಗಳ 2,297 ವಿಶ್ವವಿದ್ಯಾಲಯಗಳ ಪೈಕಿ 99.4 ಅಂಕಗಳನ್ನು ಪಡೆದಿದೆ.
►'ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್:-
ಅರಬ್ ಪ್ರದೇಶ 2027'ರಲ್ಲಿ 125ನೇ ಸ್ಥಾನ ಪಡೆದಿರುವ GMU, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತ ದಲ್ಲಿ ಅರಬ್ ಪ್ರದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಷಯದಲ್ಲಿ ಜಾಗತಿಕವಾಗಿ 351–400ರ ಶ್ರೇಣಿಯಲ್ಲಿದೆ. 'THE ಅರಬ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ 2027'ರಲ್ಲಿ 88ನೇ ಸ್ಥಾನ ಪಡೆದಿದೆ.
2026ರ ಜೂನ್ ನಲ್ಲಿ ಬ್ರಿಟನ್ ನ ಕ್ವಾಲಿಟಿ ಅಶ್ಯೂರೆನ್ಸ್ ಏಜೆನ್ಸಿ ಫಾರ್ ಹೈಯರ್ ಎಜುಕೇಶನ್ ನಿಂದ GMU ಸಾಂಸ್ಥಿಕ ಮಾನ್ಯತೆ ಪಡೆದಿದೆ. ಈ ಮಾನ್ಯತೆ 2031ರವರೆಗೆ ಇರಲಿದೆ.
►117ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು
1998ರಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದ GMU ಪ್ರಸ್ತುತ 7 ಕಾಲೇಜುಗಳು ಮತ್ತು 45 ಮಾನ್ಯತೆ ಪಡೆದ ಕೋರ್ಸ್ ಗಳನ್ನು ಹೊಂದಿದೆ. 117ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಹಾಗೂ 56 ದೇಶಗಳ ಬೋಧಕರು ಇಲ್ಲಿದ್ದಾರೆ. ವಿಶ್ವವಿದ್ಯಾಲಯದ 5,000ಕ್ಕೂ ಹೆಚ್ಚು ಪದವೀಧರರು ಜಗತ್ತಿನ ವಿವಿಧ ದೇಶಗಳ ಆರೋಗ್ಯ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತುಂಬೆ ಗ್ರೂಪ್ ನ ಅಧೀನದಲ್ಲಿ 7 ಆಸ್ಪತ್ರೆಗಳಿದ್ದು, ಅವುಗಳಲ್ಲಿ ಒಟ್ಟು 3,100ಕ್ಕೂ ಹೆಚ್ಚು ಹಾಸಿಗೆಗಳಿವೆ. ಈ ಆಸ್ಪತ್ರೆಗಳು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದರ ಜೊತೆಗೆ ರೋಗಿಗಳಿಗೆ ಚಿಕಿತ್ಸೆ ಯನ್ನೂ ಒದಗಿಸುತ್ತವೆ. ಅಲ್ಲದೇ 75ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ತುಂಬೆ ಹೆಲ್ತ್‌ಕೇರ್ UAEಯಲ್ಲಿ ಜಂಟಿ ಆಯೋಗದ ಅಂತರರಾಷ್ಟ್ರೀಯ ಗುಣಮಟ್ಟದ ಮಾನ್ಯತೆ ಪಡೆದ ಮೊದಲ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಈ ಪ್ರದೇಶದ ಅತಿದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆಯಾಗಿರುವ ತುಂಬೆ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ 175ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆರೋಗ್ಯ ವಿಜ್ಞಾನ, ಆರೋಗ್ಯ ಸೇವೆ ಮತ್ತು ನಿರ್ವಹಣೆ ಹಾಗೂ ಪಶು ವೈದ್ಯಕೀಯ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕೋರ್ಸ್ ಗಳನ್ನು GMU ಒದಗಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.






