ಸೌದಿ ಅರೇಬಿಯಾ ಮೇಲೆ ಹೌತಿಗಳಿಂದ ದಾಳಿ : 73 ನಾಗರಿಕರಿಗೆ ಗಾಯ

ಸಾಂದರ್ಭಿಕ ಚಿತ್ರ | x.com/DiwanDaily
ರಿಯಾದ್: ಸೌದಿ ಅರೇಬಿಯದ ವಿವಿಧ ನಾಗರಿಕ ಮತ್ತು ಆರ್ಥಿಕ ತಾಣಗಳ ಮೇಲೆ ಹೌತಿ ನಡೆಸಿದ ಇತ್ತೀಚಿನ ದಾಳಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹೌತಿಗಳ ದಾಳಿ ಅಪಾಯಕಾರಿ ರೀತಿಯಲ್ಲಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಒಕ್ಕೂಟದ ವಕ್ತಾರ ಬ್ರಿಗೇಡಿಯರ್ ಜನರಲ್ ಟರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.
ಸೌದಿ ಅರೇಬಿಯ, ಅದರ ರಾಷ್ಟ್ರೀಯ ಆಸ್ತಿಗಳು, ನಾಗರಿಕರು ಮತ್ತು ದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಹೌತಿಗಳು ಗುರಿಯಾಗಿಸುತ್ತಿದ್ದಾರೆ. ಇದು ಅವರ ಆಕ್ರಮಣಕಾರಿ ಮತ್ತು ಬೇಜವಾಬ್ದಾರಿ ನಡೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಹೌತಿಗಳ ದಾಳಿಯು ಸೌದಿ ಅರೇಬಿಯದ ಸಾರ್ವಭೌಮತ್ವವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಅಲ್ಲದೆ, ಸೌದಿ ಜನರ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ ಎಂದು ಅಲ್-ಮಾಲಿಕಿ ಹೇಳಿದ್ದಾರೆ.
ಹೌತಿಗಳಿಂದ ಮತ್ತಷ್ಟು ದಾಳಿಯಾಗದಂತೆ ತಡೆಯಲು ಹಾಗೂ ಸೌದಿ ಅರೇಬಿಯದತ್ತ ಬರುವ ಬೆದರಿಕೆಗಳನ್ನು ನಿಷ್ಕ್ರಿಯಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಒಕ್ಕೂಟದ ಜಂಟಿ ಪಡೆಗಳು ಕೈಗೊಳ್ಳಲಿವೆ. ದಾಳಿಗಳಿಗೆ ದೃಢವಾದ ಪ್ರತಿಕ್ರಿಯೆ ನೀಡುವುದಾಗಿ ಅವರು ಎಚ್ಚರಿಸಿದ್ದಾರೆ.




