ಯುಎಇ | ಸ್ವಿಸ್ ಬ್ಯಾಂಕಿನ ಅಪಾಯಕಾರಿ ಬಾಂಡ್ ಗಳ ಮಾರಾಟ; ಭಾರತದ ಎಚ್ಡಿಎಫ್ಸಿ ಬ್ಯಾಂಕ್ ಮೇಲೆ ನಿಗಾ!
ಸುಳ್ಳು ಹಣಕಾಸು ದಾಖಲೆಗಳನ್ನು ಸೃಷ್ಟಿಸಿ ಬಾಂಡ್ ಮಾರಾಟದ ಆರೋಪ

HDFC BANK
ದುಬೈ: ಎಚ್ಡಿಎಫ್ಸಿ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗೆ ಕ್ರೆಡಿಟ್ ಸುಯಿಸ್ಸೆ ಸ್ವಿಸ್ ಬ್ಯಾಂಕಿನ ಅಪಾಯಕಾರಿ ಬಾಂಡ್ ಗಳನ್ನು ಮಾರಾಟ ಮಾಡಿತ್ತು ಎಂಬ ಆರೋಪಗಳ ನಡುವೆಯೇ ಭಾರತದ ಈ ಅತಿ ದೊಡ್ಡ ಖಾಸಗಿ ಬ್ಯಾಂಕ್ ಇಲ್ಲಿಯ ನಿಯಂತ್ರಕ ಸಂಸ್ಥೆಗಳ ಪರಿಶೀಲನೆಗೆ ಒಳಪಟ್ಟಿದೆ. ಸ್ವಿಸ್ ಬ್ಯಾಂಕ್ ಕುಸಿತದ ಸಂದರ್ಭದಲ್ಲಿ ತಮ್ಮ ಹೂಡಿಕೆಗಳು ಸಂಪೂರ್ಣವಾಗಿ ಕರಗಿ ಹೋಗಿವೆ ಎಂದು ಅನೇಕ ಹೂಡಿಕೆದಾರರು ಆರೋಪಿಸಿದ್ದಾರೆ ಎಂದು khaleejtimes ಸುದ್ದಿಸಂಸ್ಥೆಯು ವರದಿ ಮಾಡಿದೆ.
ದುಬೈ ಹಣಕಾಸು ಸೇವೆಗಳ ಪ್ರಾಧಿಕಾರ(ಡಿಎಫ್ಎಸ್ಎ)ದ ನಿಯಮಗಳಡಿ ಸಂಕೀರ್ಣ,ಹೆಚ್ಚಿನ ಅಪಾಯವನ್ನು ಹೊಂದಿರುವ ಅಡಿಷನಲ್ ಟಯರ್-1(AT1) ಬಾಂಡ್ ಗಳು ಅಗತ್ಯ ಹಣಕಾಸು ಮತ್ತು ಪರಿಣತಿಯ ಕನಿಷ್ಠ ಮಾನದಂಡಗಳನ್ನು ಪೂರೈಸಿರದಿದ್ದರೂ ಎಚ್ಡಿಎಫ್ಸಿ ತನ್ನ ಗ್ರಾಹಕರಿಗೆ ಅವುಗಳನ್ನು ಮಾರಾಟ ಮಾಡಿತ್ತು ಎನ್ನುವುದನ್ನು ಸುದ್ದಿಸಂಸ್ಥೆಯು ಪರಿಶೀಲಿಸಿರುವ ದಾಖಲೆಗಳು ಮತ್ತು ಕಾನೂನು ನೋಟಿಸ್ಗಳು ಬಹಿರಂಗಗೊಳಿಸಿವೆ. ಈಗ ನಿಷ್ಕ್ರಿಯಗೊಂಡಿರುವ ಕ್ರೆಡಿಟ್ ಸುಯಿಸ್ಸೆ ವಿತರಿಸಿದ್ದ ಈ ಬಾಂಡ್ ಗಳ ಮೌಲ್ಯವನ್ನು 2023 ಮಾರ್ಚ್ ನಲ್ಲಿ ಯುಬಿಎಸ್ನೊಂದಿಗೆ ತುರ್ತು ವಿಲೀನದ ಸಂದರ್ಭದಲ್ಲಿ ಶೂನ್ಯಕ್ಕಿಳಿಸಲಾಗಿತ್ತು. ಇದರಿಂದಾಗಿ ಹೂಡಿಕೆದಾರರು ತಾವು ತೊಡಗಿಸಿದ್ದ ಅಷ್ಟೂ ಹಣವನ್ನು ಕಳೆದುಕೊಂಡಿದ್ದರು.
ಡಿಎಫ್ಎಸ್ಎ ನಿಯಮಗಳಡಿ AT1 ಬಾಂಡ್ ಗಳನ್ನು ‘ವೃತ್ತಿಪರ ಗ್ರಾಹಕರಿಗೆ’ ಅಂದರೆ ಸಾಮಾನ್ಯವಾಗಿ 10 ಲಕ್ಷ ಡಾಲರ್ ಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವವರು ಅಥವಾ ಹಣಕಾಸು ಸಾಧನಗಳಲ್ಲಿಯ ಅಪಾಯಗಳನ್ನು ಗುರುತಿಸುವಲ್ಲಿ ಪರಿಣತಿಯನ್ನು ಹೊಂದಿರುವವರಿಗೆ ಮಾತ್ರ ಮಾರಾಟ ಮಾಡಬಹುದು. ಆದಾಗ್ಯೂ,ಎಚ್ಡಿಎಫ್ಸಿ ಬ್ಯಾಂಕಿನ ರಿಲೇಷನ್ ಶಿಪ್ ಮ್ಯಾನೇಜರ್ಗಳು ಸುರಕ್ಷತಾ ನಿಯಮಗಳನ್ನು ಬೈಪಾಸ್ ಮಾಡಲು ಸುಳ್ಳು ಹಣಕಾಸು ದಾಖಲೆಗಳನ್ನು ಸೃಷ್ಟಿಸಿ ತಮಗೆ ಈ ಬಾಂಡ್ ಗಳನ್ನು ಮಾರಾಟ ಮಾಡಿದ್ದರು ಎಂದು ಸಾಮಾನ್ಯ ಚಿಲ್ಲರೆ ಹೂಡಿಕೆದಾರರು ಆರೋಪಿಸಿದ್ದಾರೆ.
ಈ ಸಂಬಂಧ ಯುಎಇ, ಬಹರೇನ್ ಮತ್ತು ದುಬೈ ಇಂಟರ್ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್(ಡಿಐಎಫ್ಸಿ)ನ ನಿಯಂತ್ರಕರಿಗೆ ದೂರುಗಳನ್ನು ಸಲ್ಲಿಸಲಾಗಿದೆಯಾದರೂ ಔಪಚಾರಿಕ ತನಿಖೆಗಳ ಬಗ್ಗೆ ಈವರೆಗೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಸುದ್ದಿಸಂಸ್ಥೆಯ ವಿವರವಾದ ವಿಚಾರಣೆಗೆ ಪ್ರತಿಕ್ರಿಯಿಸಿರುವ ಎಚ್ಡಿಎಫ್ಸಿ ಬ್ಯಾಂಕ್ ತಾನು ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿದೆ. ಹಣಕಾಸು ಉತ್ಪನ್ನದ ವೈಶಿಷ್ಟ್ಯಗಳನ್ನು ವಿವರಿಸಲು ಹಾಗೂ ಈ ಉತ್ಪನ್ನಗಳಿಂದ ಲಾಭಗಳು ಮತ್ತು ಅಪಾಯಗಳನ್ನು ಅರ್ಥ ಮಾಡಿಕೊಳ್ಳಲು ಗ್ರಾಹಕರಿಗೆ ನೆರವಾಗಲು ಸದೃಢ ಕಾರ್ಯವಿಧಾನಗಳನ್ನು ಬ್ಯಾಂಕ್ ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅದು, ಯಾವುದೇ ಅವ್ಯವಹಾರವನ್ನು ಬ್ಯಾಂಕ್ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಸಮಜಾಯಿಷಿ ನೀಡಿದೆ.
ಶೋ-ಕಾಸ್ ನೋಟಿಸ್ ಸ್ವೀಕರಿಸಿದ ಬಳಿಕ ತನ್ನ ಅಧ್ಯಕ್ಷರು ಡಿಐಎಫ್ಸಿ ನಿಯಂತ್ರಕರನ್ನು ಭೇಟಿಯಾಗಿದ್ದನ್ನು ‘ಊಹಾತ್ಮಕ ವರದಿಗಳು’ ಎಂದು ಬ್ಯಾಂಕ್ ತಳ್ಳಿಹಾಕಿದೆ. ಸುದ್ದಿಸಂಸ್ಥೆಯು ಡಿಎಫ್ಎಸ್ಎ ಅನ್ನು ಸಂಪರ್ಕಿಸಿತ್ತಾದರೂ ನಿಯಂತ್ರಕ ಕಾನೂನಿನ ವಿಧಿ 38ರಡಿ ಗೋಪ್ಯತೆಯ ಬಾಧ್ಯತೆಗಳನ್ನು ಉಲ್ಲೇಖಿಸಿ ಅದು ಪ್ರತಿಕ್ರಿಯಿಸಲು ನಿರಾಕರಿಸಿದೆ.
ತಮ್ಮ ಹೂಡಿಕೆ ಮೊತ್ತವನ್ನು ಕಳೆದುಕೊಂಡವರಲ್ಲಿ ದುಬೈ ನಿವಾಸಿ ವರುಣ್ ಮಹಾಜನ್ ಅವರೂ ಒಬ್ಬರಾಗಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕಿನ ಡಿಐಎಫ್ಸಿ ಶಾಖೆಯ ತನ್ನ ರಿಲೇಷನ್ ಶಿಪ್ ಮ್ಯಾನೇಜರ್ ಸಲಹೆಯ ಮೇರೆಗೆ ಕ್ರೆಡಿಟ್ ಸುಯಿಸ್ಸೆಯ ಶೇ.4.5 ಶಾಶ್ವತ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದ ಅವರು ತನ್ನ ಇಡೀ ಜೀವಮಾನದ ಗಳಿಕೆಯಾಗಿದ್ದ ಮೂರು ಲಕ್ಷ ಡಾಲರ್ ಗಳನ್ನು ಕಳೆದುಕೊಂಡಿದ್ದಾರೆ.
‘2023ರ ಆರಂಭದಲ್ಲಿ ಕ್ರೆಡಿಟ್ ಸುಯಿಸ್ಸೆ ಬಿಕ್ಕಟ್ಟು ತೀವ್ರಗೊಂಡಾಗ ನಾನು ಕಳವಳವನ್ನು ವ್ಯಕ್ತಪಡಿಸಿದ್ದೆ. ಆದರೆ ಬಾಂಡ್ನ ಮೌಲ್ಯ ಮತ್ತೆ ಪುಟಿದೇಳುತ್ತದೆ ಮತ್ತು ಆತಂಕಕ್ಕೆ ಕಾರಣವಿಲ್ಲ ಎಂದು ಬ್ಯಾಂಕ್ ನನಗೆ ತಿಳಿಸಿತ್ತು. ಇದು ದ್ರೋಹವಾಗಿತ್ತು, ನನಗೆ AT1 ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಕಲ್ಪನೆ ನನಗಿರಲಿಲ್ಲ. ಎಲ್ಲವೂ ಮುಗಿದ ಬಳಿಕವಷ್ಟೇ ನನಗೆ ಅದು ಗೊತ್ತಾಗಿತ್ತು’ ಎಂದು ಮಹಾಜನ ಹತಾಶೆಯನ್ನು ವ್ಯಕ್ತಪಡಿಸಿದರು.
ಮಹಾಜನ್ ಅವರಂತೆ ಸುದ್ದಿಸಂಸ್ಥೆಯು ಸಂಪರ್ಕಿಸಿದ ಇನ್ನೂ ಅನೇಕ ಹೂಡಿಕೆದಾರರು ತಾವು ವಂಚಿಸಲ್ಪಟ್ಟಿದ್ದೇವೆ ಎಂದು ಆರೋಪಿಸಿದ್ದಾರೆ.