ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ʼಮನೆ ಇಲ್ಲದವರಿಗೆ ಮನೆʼ ಹಸ್ತಾಂತರ ಕಾರ್ಯಕ್ರಮ

ಕುವೈತ್: ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ (KKMA)ನ ಕರ್ನಾಟಕ ಶಾಖೆಯ ವತಿಯಿಂದ ಶುಕ್ರವಾರ 'ಮನೆ ಇಲ್ಲದವರಿಗೆ ಮನೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮತ್ತು ಕುಕ್ಕಾಜೆ ಗ್ರಾಮಗಳಲ್ಲಿ ಇಬ್ಬರು ಅರ್ಹರಿಗೆ ಮನೆಗಳನ್ನು ಹಸ್ತಾಂತರಿಸಲಾಯಿತು.
ಸಮುದಾಯ ಅಭಿವೃದ್ಧಿಗೆ ತನ್ನ ನಿರಂತರ ಬದ್ಧತೆಯ ಭಾಗವಾಗಿ ನಿರ್ಮಿಸಲಾದ 2 ಮನೆಗಳನ್ನು ಅರ್ಹ ಕುಟುಂಬಗಳಿಗೆ ಹಸ್ತಾಂತರಿಸುವುದರೊಂದಿಗೆ 'ಮನೆ ಇಲ್ಲದವರಿಗೆ ಮನೆ' ಕಾರ್ಯಕ್ರಮದಡಿ ಇದುವರೆಗೂ 17 ಮನೆಗಳನ್ನು ಹಸ್ತಾಂತರಿಸಿದಂತಾಗಿದೆ. ಆ ಮೂಲಕ ಹಿಂದುಳಿದವರನ್ನು ಮೇಲೆತ್ತುವ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಗುರಿಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಗುರುತಿಸಲಾಗಿದೆ.
ಮನೆಯ ಕೀಲಿಕೈ ಹಸ್ತಾಂತರ ಕಾರ್ಯಕ್ರಮದಲ್ಲಿ ಕೆಕೆಎಂಎ ನ ಪೋಷಕ ಪಿ.ಕೆ.ಅಕ್ಬರ್ ಸಿದ್ದಿಕ್, ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೆಲಾಡಿ, ಸಿಎಫ್‌ಒ ರಫೀಕ್ ಮುಲ್ಕಿ, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ. ಫಾರೂಕ್, ಹಿರಿಯ ಸದಸ್ಯ ರಫೀಕ್ ಮಂಚಿ, ಶಾಝ್ ಯೂಸುಫ್, ಸಲಾಂ, ಆದಮ್ ಆಹಿಲ್ ಮತ್ತಿತರರು ಹಾಜರಿದ್ದರು. ಅಲ್ಲದೇ ಕೆಕೆಎಂಎ ನ ಕೇಂದ್ರ, ಕೇರಳ, ಕರ್ನಾಟಕ ಘಟಕಗಳ ಹಿರಿಯ ನಾಯಕರೂ ಉಪಸ್ಥಿತರಿದ್ದರು.