ಸೌದಿ ಅರೇಬಿಯ | ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕನನ್ನು ಗುಂಡಿಕ್ಕಿ ಹತ್ಯೆ

ಬಷೀರ್
ರಿಯಾದ್: ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ರವಿವಾರ ಬೆಳಗಿನ ಜಾವ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಸೌದಿ ಅರೇಬಿಯದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು 41 ವರ್ಷದ ಬಷೀರ್ ಎಂದು ಗುರುತಿಸಲಾಗಿದೆ. ಅವರು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಳೆದ 13 ವರ್ಷಗಳಿಂದ ಬಷೀರ್ ಅವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ಹೌಸ್ ಡ್ರೈವರ್ ವೀಸಾದ ಮೇಲೆ ಸೌದಿಗೆ ಆಗಮಿಸಿದ್ದರು ಎನ್ನಲಾಗಿದೆ.
ಬಿಶಾ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಷೀರ್, ತನ್ನ ನಿವಾಸದ ಬಳಿ ತನ್ನ ಟ್ಯಾಕ್ಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಬಿಶಾದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರಸ್ತೆಯಲ್ಲಿ ರವಿವಾರ ಮಧ್ಯರಾತ್ರಿಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗುಂಡಿನ ದಾಳಿ ಕೇಳಿ ಸುತ್ತಮುತ್ತಲಿನ ಪ್ರದೇಶದ ಜನ ಒಮ್ಮೆಲೇ ಬೆಚ್ಚಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ನೋಡಿದಾಗ ಬಷೀರ್ ಅವರು ಕಾರಿನೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದನ್ನು ಕಂಡ ಈಜಿಪ್ಟ್ ನಾಗರಿಕರೋರ್ವರು ಬಷೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆ ವೇಳೆದಾಗಲೇ ಬಷೀರ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದು ಬಂದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ಬಂದು ಬಷೀರ್ ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ಮೃತದೇಹವನ್ನು ಕಾಸರಗೋಡಿಗೆ ಕಳುಹಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್(ಕೆಎಂಸಿಸಿ) ಬಿಶಾ ಘಟಕವು ಬಷೀರ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಗತ್ಯವಾದ ಕಾನೂನು ಕಾರ್ಯವಿಧಾನಗಳನ್ನು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.
ಬಷೀರ್ ಅವರು ಪತ್ನಿ, ಇಬ್ಬರು ಮಕ್ಕಳು, ಪೋಷಕರನ್ನು ಅಗಲಿದ್ದಾರೆ.