ಸೌದಿ ಅರೇಬಿಯಾ | ಎಸಿ ಕಂಪ್ರೆಸರ್ ಸ್ಫೋಟಗೊಂಡು ಮಲೆಯಾಳಿ ಯುವಕ ಮೃತ್ಯು

PC : keralakaumudi.com
ರಿಯಾದ್: ಎಸಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಲಸಿಗ ಮಲೆಯಾಳಿ ಯುವಕ ರವಿವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಇಡುಕ್ಕಿ ಜಿಲ್ಲೆಯ ರುಂದುಪುಳಂನ ತೋಡುಪುಳದ ನಿವಾಸಿ ಕನಿಯಾಂ ಪರಂಪಿಲ್ ಬಷೀರ್ ಅವರ ಪುತ್ರ ಝಿಯಾದ್ (36) ಎಂದು ಗುರುತಿಸಲಾಗಿದ್ದು, ಸದ್ಯ ಅವರು ಮಂಜಲಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಝಿಯಾದ್ ಅವರು ರಿಯಾದ್ ನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಸಂಭವಿಸಿದ ಎಸಿಯ ಕಂಪ್ರೆಸರ್ ಸ್ಫೋಟದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.
ಎಸಿಯ ಕಂಪ್ರೆಸರ್ ಸ್ಫೋಟದ ತೀವ್ರತೆಗೆ ಗಂಭೀರ ಸ್ವರೂಪದ ಸುಟ್ಟು ಗಾಯಗಳಿಗೆ ತುತ್ತಾಗಿದ್ದ ಝಿಯಾದ್ ರನ್ನು ತಕ್ಷಣವೇ ಅಲ್ ಮೌವಾಸತ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ಮಧ್ಯಾಹ್ನ ಸುಮಾರು 2.10ರ ವೇಳೆಗೆ ಮೃತಪಟ್ಟಿದ್ದಾರೆ. ಝಿಯಾದ್ ಅವರ ಮೃತದೇಹವನ್ನು ಸೋಮವಾರ ಮಧ್ಯಾಹ್ನ ನಸೀಂ ಅಲ್ ಸಲಾಂ ಮೌಸೋಲಿಯಂನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಝಿಯಾದ್ ಅವರು ಕಳೆದ ಐದು ವರ್ಷಗಳಿಂದ ಸೌದಿ ಪ್ರಜೆಯೊಬ್ಬರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.