Saudi Arabia | ಜುಬೈಲ್ ನ ಅನಿಲ ಸ್ಥಾವರದ ಮೇಲೆ ದಾಳಿ

Photo Credit : X
ರಿಯಾದ್, ಆ. 9: ಯೆಮನ್ ನ ಹೌದಿಗಳು ಸೌದಿ ಅರೇಬಿಯಾದ ಅತಿದೊಡ್ಡ ಅನಿಲ ಸಂಸ್ಕರಣಾ ಸೌಲಭ್ಯಗಳಲ್ಲಿ ಒಂದಾದ ಅಲ್ ಜುಬೈಲ್ ನಲ್ಲಿರುವ ಸೌದಿ `ಅರಾಮ್ಕೋ ಬೆರ್ರಿ' ಅನಿಲ ಸ್ಥಾವರದ ಮೇಲೆ ದಾಳಿ ಮಾಡಿರುವುದಾಗಿ ವರದಿಯಾಗಿದೆ. NASAದ ಉಪಗ್ರಹ ಚಿತ್ರಗಳು ಈ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸಿವೆ.
ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರಿ ಸ್ಫೋಟ ವರದಿಯಾಗಿದೆ. ಜುಬೈಲ್ ವಿಶ್ವದ ಅತಿದೊಡ್ಡ ಪೆಟ್ರೋಕೆಮಿಕಲ್ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದ್ದು, ಜಾಗತಿಕ ಪೆಟ್ರೋಕೆಮಿಕಲ್ ಪೂರೈಕೆಯ ಶೇಕಡಾ 6ರಿಂದ 8ರಷ್ಟನ್ನು ಹೊಂದಿದೆ. ಜುಬೈಲ್ ಸೌದಿ ಅರೇಬಿಯಾದ GDPಗೆ ಶೇಕಡಾ 7ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು `ಸೌದಿ ಅರಾಮ್ಕೋ, ಸ್ಯಾಬಿಕ್, ಎಕ್ಸಾನ್ಮೊಬಿಲ್, ಡೌ ಕೆಮಿಕಲ್ ಹಾಗೂ ಚೆವ್ರಾನ್ ಫಿಲಿಪ್ಸ್ ಕಂಪೆನಿಗಳ ಪ್ರಮುಖ ಕಾರ್ಯಾಚರಣೆಗಳನ್ನು ಒಳಗೊಂಡಿದೆ.
ಜುಬೈಲ್ ಬಳಿಯ ಬೆರ್ರಿ ಗ್ಯಾಸ್ ಪ್ಲಾಂಟ್ನಲ್ಲಿ ಅಂದಾಜು 125 ಮೆಗಾವ್ಯಾಟ್ ನಷ್ಟು ಬೆಂಕಿಯ ವಿಕಿರಣ ಶಕ್ತಿಯನ್ನು NASA ಉಪಗ್ರಹ ಪತ್ತೆಹಚ್ಚಿದೆ. ಏಪ್ರಿಲ್ ನಲ್ಲಿ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲೂ ಈ ಸೌಲಭ್ಯವನ್ನು ಗುರಿಯಾಗಿಸಲಾಗಿತ್ತು.
ಪ್ರತ್ಯೇಕ ಘಟನೆಯಲ್ಲಿ ಕೆಂಪು ಸಮುದ್ರದ ಉದ್ದಕ್ಕೂ ಯೆಮನ್ ಗೆ ಹೊಂದಿಕೊಂಡಂತೆ ಇರುವ, ನೈಋತ್ಯ ಸೌದಿ ಅರೇಬಿಯಾದ ಜಝಾನ್ ನಲ್ಲಿರುವ ಅರಾಮ್ಕೋ ಸಂಸ್ಕರಣಾಗಾರದಲ್ಲಿ ರವಿವಾರ ಮತ್ತೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸೌದಿ ಅರೇಬಿಯಾದ ವಿದ್ಯುತ್ ಸಚಿವಾಲಯ ತಿಳಿಸಿದೆ.
► ದಾಳಿಯ ಹೊಣೆ ಹೊತ್ತ ಹೌದಿ ಬಂಡುಕೋರರು
ಜಝಾನ್ ನಲ್ಲಿರುವ ಅರಾಮ್ಕೋ' ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿ ಡ್ರೋನ್ ಮೂಲಕ ನಿಖರವಾಗಿ ದಾಳಿ ನಡೆಸಲಾಗಿದೆ ಎಂದು ಹೌದಿ ಸೇನಾ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾರೆ. ಅರಾಮ್ಕೋ' ಸೌದಿ ಅರೇಬಿಯಾದ ಸರ್ಕಾರಿ ಒಡೆತನದ ತೈಲ ಸಂಸ್ಥೆಯಾಗಿದೆ.
ಹೌದಿಗಳು ತಮ್ಮ ನೆರೆಯ ದೇಶವಾದ ಸೌದಿಯ ವಿರುದ್ಧ ಕಡಲ ದಿಗ್ಬಂಧನವನ್ನು ಘೋಷಿಸಿದ್ದು, ಕೆಂಪು ಸಮುದ್ರದಲ್ಲಿ ಸೌದಿಯ ತೈಲ ನೌಕೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ರಾಜಧಾನಿ ಸನಾ ಸೇರಿದಂತೆ ಯೆಮನ್ ನ ವಿಶಾಲ ಭಾಗಗಳು ಹಾಗೂ ಸೌದಿ ಅರೇಬಿಯಾದ ಕೆಂಪು ಸಮುದ್ರದ ಗಡಿ ಪ್ರದೇಶಗಳು ಹೌದಿಗಳ ನಿಯಂತ್ರಣದಲ್ಲಿವೆ.






