ಮಕ್ಕಾದ ಗ್ರ್ಯಾಂಡ್ ಮಸೀದಿಯ ಮುಅಝ್ಝಿನ್ ಇಬ್ರಾಹಿಂ ಅಲ್ ಮದನಿ ನಿಧನ

ಮುಅಝ್ಝಿನ್ ಇಬ್ರಾಹಿಂ ಅಲ್ ಮದನಿ| Photo Credit : X
ಜಿದ್ದಾ: ಮಕ್ಕಾದ ಗ್ರ್ಯಾಂಡ್ ಮಸೀದಿ ಮಸ್ಜಿದುಲ್ ಹರಮ್ ನ ಮುಅಝ್ಝಿನ್ ಆಗಿದ್ದ ಶೇಖ್ ಇಬ್ರಾಹಿಂ ಅಲ್ ಮದನಿ ಅವರು ಸೋಮವಾರ ನಿಧನರಾದರು. ಅವರು ಗ್ರ್ಯಾಂಡ್ ಮಸೀದಿಯ ಮುಅಝ್ಝಿನ್ ಗಳ ತಂಡದ ಸದಸ್ಯರಾಗಿದ್ದರು ಎಂದು gulfnews.com ವರದಿ ಮಾಡಿದೆ.
ಅಲ್ ಮದನಿ ಅವರು ಗ್ರ್ಯಾಂಡ್ ಮಸೀದಿಯಲ್ಲಿ ಅಝಾನ್ (ಪ್ರಾರ್ಥನೆಗೆ ಕರೆ) ಮತ್ತು ತಕ್ಬೀರ್ ಗಳನ್ನು ಪಠಿಸುತ್ತಿರುವ ಧ್ವನಿಮುದ್ರಿಕೆಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶೇಖ್ ಅಲ್ ಮದನಿ ಅವರು ಗ್ರ್ಯಾಂಡ್ ಮಸೀದಿಯ 24 ಪ್ರಮುಖ ಮುಅಝ್ಝಿನ್ ಗಳಲ್ಲಿ ಒಬ್ಬರಾಗಿದ್ದರು. ಈ ಪೈಕಿ ಆರು ಮಂದಿ ಪ್ರತಿದಿನ ಸರದಿಯ ಪ್ರಕಾರ ಐದು ಹೊತ್ತಿನ ನಮಾಝ್ ಗೆ ಅಝಾನ್ ನೀಡುವ ಜವಾಬ್ದಾರಿ ನಿರ್ವಹಿಸುತ್ತಾರೆ.
ಅಲ್ ಮದನಿ ಅವರು ವಿಶೇಷವಾಗಿ ಫಜ್ರ್ ಅಧಾನ್ ಮತ್ತು ತಕ್ಬೀರ್ ಗಳ ಪಠಣಕ್ಕಾಗಿ ಪ್ರಸಿದ್ಧರಾಗಿದ್ದರು. ಇಮಾಮ್ ಪಠಿಸಿದ ತಕ್ಬೀರ್ ಗಳನ್ನು ಪುನರಾವರ್ತಿಸಿ, ಮಸೀದಿಯ ವಿವಿಧ ಭಾಗಗಳಲ್ಲಿದ್ದ ಜನರಿಗೆ ಕೇಳಿಸುವಂತೆ ಮಾಡುವ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಿದ್ದರು.
ಸೌಜನ್ಯ: gulfnews.com






