ಮಸ್ಕತ್ ನೈಟ್ ಫೆಸ್ಟಿವಲ್ | ಕರಾಟೆ ಓಪನ್ ಚಾಂಪಿಯನ್‌ಶಿಪ್ ನಲ್ಲಿ ಝಾರಾ ವಸೀಮ್ ಅಸ್ಸಾದಿಗೆ ನಾಲ್ಕು ಚಿನ್ನದ ಪದಕ

ಮಸ್ಕತ್, ಫೆ.2: ಮಸ್ಕತ್ ನೈಟ್ ಫೆಸ್ಟಿವಲ್ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಕರಾಟೆ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಝಾರಾ ವಸೀಮ್ ಅಸ್ಸಾದಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಈ ಸ್ಪರ್ಧೆಯಲ್ಲಿ 24 ಕ್ಲಬ್‌ಗಳನ್ನು ಪ್ರತಿನಿಧಿಸಿದ ವಿವಿಧ ದೇಶಗಳ ಸುಮಾರು 400 ಕ್ರೀಡಾಪಟುಗಳು ಭಾಗವಹಿಸಿದ್ದರು.
ತೀವ್ರ ಪೈಪೋಟಿಯ ನಡುವೆಯೂ 10 ವರ್ಷ ವಯಸ್ಸಿನ ಝಾರಾ ವೈಯಕ್ತಿಕ ಕಟಾ, ವೈಯಕ್ತಿಕ ಕುಮಿತೆ, ತಂಡ ಕಟಾ ಹಾಗೂ ತಂಡ ಕುಮಿತೆ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿ ಚಾಂಪಿಯನ್‌ಶಿಪ್‌ನ ತಾರೆಯಾಗಿ ಹೊರಹೊಮ್ಮಿದರು. ನಾಲ್ಕೂ ವಿಭಾಗಗಳಲ್ಲಿ ಚಿನ್ನ ಗೆದ್ದ ಏಕೈಕ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐದು ವರ್ಷ ವಯಸ್ಸಿನಿಂದಲೇ ಕಟಾ ವಿಭಾಗದಲ್ಲಿ ಮುಂದುವರಿದಿರುವ ಝಾರಾ ಅವರ ಪಯಣ ಸ್ಪೂರ್ತಿದಾಯಕವಾಗಿದೆ.
ಪ್ರಸ್ತುತ ಝಾರಾ ವಸೀಮ್ ಅಸ್ಸಾದಿ ಒಮಾನ್ ನ ಮಸ್ಕತ್‌ನ ‘ದಿ ಚಾಂಪ್ ಸ್ಪೋರ್ಟ್ಸ್ & ಆರ್ಟ್ಸ್’ ಸಂಸ್ಥೆಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಮೂಲತಃ ಉಡುಪಿಯ ಬೆಳಪು ಪ್ರಸಾದ್ ನಗರದವರಾದ ಝಾರಾ ವಸೀಮ್ ಅಸ್ಸಾದಿ ಅವರು ವಸೀಮ್ ಅಸ್ಸಾದಿ ಮತ್ತು ಹಸ್ರಾ ಸನಾ ಅವರ ಪುತ್ರಿ. ಜಿಕ್ರಿಯಾ ಅಸ್ಸಾದಿಯವರ ಮೊಮ್ಮಗಳು.





