NMC ವಂಚನೆ ಪ್ರಕರಣ | B R ಶೆಟ್ಟಿ, ಮಾಜಿ CEOಗೆ 20 ಬಿಲಿಯನ್ ದಿರ್ಹಮ್ ಹೊಣೆಗಾರಿಕೆ!
ಹಣ ದುರುಪಯೋಗ, ಶತಕೋಟಿ ಡಾಲರ್ ಸಾಲ ಮರೆಮಾಚುವಿಕೆ; ವಂಚನೆಯಲ್ಲಿ ಇಬ್ಬರೂ ಭಾಗಿ: ಅಬುಧಾಬಿ ನ್ಯಾಯಾಲಯದಿಂದ ತೀರ್ಪು

B R ಶೆಟ್ಟಿ - ಪ್ರಶಾಂತ್ ಮಂಗಾಟ್
ಅಬುಧಾಬಿ: ಬಹುಕೋಟಿ ಹಣಕಾಸು ವಂಚನೆಯಿಂದ ಸುದ್ದಿಯಾಗಿದ್ದ NMC ಹೆಲ್ತ್ಕೇರ್ ಪ್ರಕರಣದಲ್ಲಿ ಸಂಸ್ಥಾಪಕ B R ಶೆಟ್ಟಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪ್ರಶಾಂತ್ ಮಂಗಾಟ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪೆನಿಯಲ್ಲಿ ನಡೆದ ವಂಚನೆಗೆ ಇಬ್ಬರೂ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು ಎಂದು ಅಬುಧಾಬಿ ಗ್ಲೋಬಲ್ ಮಾರ್ಕೆಟ್ (ADGM) ಕೋರ್ಟ್ ಆಫ್ ಫಸ್ಟ್ ಇನ್ಸ್ಟನ್ಸ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಹಣಕಾಸಿನ ಹೊಣೆಗಾರಿಕೆಯನ್ನು ನಿರ್ಧರಿಸಲು 5.397 ಬಿಲಿಯನ್ ಡಾಲರ್ (ಸುಮಾರು 19.82 ಬಿಲಿಯನ್ ದಿರ್ಹಮ್) ಮೊತ್ತವನ್ನು ಆರಂಭಿಕ ಆಧಾರವಾಗಿ ಗುರುತಿಸಲಾಗಿದೆ. ಆದರೆ, ಪ್ರತಿಯೊಬ್ಬರು ಪಾವತಿಸಬೇಕಾದ ಅಂತಿಮ ಮೊತ್ತ ಇನ್ನೂ ನಿರ್ಧಾರವಾಗಿಲ್ಲ ಎಂದು gulfnews.com ವರದಿ ಮಾಡಿದೆ.
ನ. 5ರಂದು ನ್ಯಾಯಮೂರ್ತಿ ಸರ್ ಆಂಡ್ರ್ಯೂ ಸ್ಮಿತ್ ನೀಡಿದ ತೀರ್ಪಿನಲ್ಲಿ, ಶೆಟ್ಟಿ ಮತ್ತು ಮಂಗಾಟ್ ಇಬ್ಬರೂ ವಂಚನೆಯಿಂದ ನಡೆಸಲಾಗುತ್ತಿದ್ದ ವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
NMC ಹೆಲ್ತ್ಕೇರ್, NMC ಹೋಲ್ಡಿಂಗ್ ಮತ್ತು ಅವುಗಳ ಜಂಟಿ ಆಡಳಿತಾಧಿಕಾರಿಗಳು ದಾಖಲಿಸಿದ್ದ ದಿವಾಳಿತನ ಹಾಗೂ ಯುಎಇ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ತೀರ್ಪು ಹೊರಬಿದ್ದಿದೆ. ಮಂಗಾಟ್ ವಿರುದ್ಧ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ (ADCB) ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿಯೂ ಬ್ಯಾಂಕ್ ಪರವಾಗಿ ತೀರ್ಪು ಬಂದಿದೆ.
► ಶೆಟ್ಟಿ ಖಾತೆಗಳಿಗೆ ಬಂದಿತ್ತು 2.6 ಬಿಲಿಯನ್ ದಿರ್ಹಮ್!
NMC ಕಂಪೆನಿಯ ಖಾತೆಗಳಿಂದ B R ಶೆಟ್ಟಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಒಟ್ಟು 4.183 ಬಿಲಿಯನ್ ದಿರ್ಹಮ್ ವರ್ಗಾವಣೆಯಾಗಿತ್ತು ಎಂಬುದಕ್ಕೆ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಲೆಕ್ಕಪತ್ರ ದಾಖಲೆಗಳು ಸಾಕ್ಷಿಯಾಗಿವೆ.
ಈ ಸಂಬಂಧ 500ಕ್ಕೂ ಹೆಚ್ಚು ಹಣ ವರ್ಗಾವಣೆಗಳ ವಿವರಗಳನ್ನು ಹಕ್ಕುದಾರರು ಸಲ್ಲಿಸಿದ್ದರು. ಇವುಗಳಲ್ಲಿ ಹೆಚ್ಚಿನ ವರ್ಗಾವಣೆಗಳು ಬ್ಯಾಂಕ್ ಆಫ್ ಬರೋಡಾದಲ್ಲಿದ್ದ NMC ಗ್ರೂಪ್ ನ ಖಾತೆಗಳಿಂದ ಬಿ ಆರ್ ಶೆಟ್ಟಿ ಅವರ ಮೂರು ವೈಯಕ್ತಿಕ ಖಾತೆಗಳಿಗೆ ನಡೆದಿದ್ದವು.
ವರ್ಗಾವಣೆಯಾದ ಹಣದ ಒಂದು ಭಾಗವನ್ನು ಮತ್ತೆ NMCಗೆ ಹಿಂದಿರುಗಿಸಲಾಗಿತ್ತು. ಅದನ್ನು ಕಡಿತಗೊಳಿಸಿದ ಬಳಿಕ ಶೆಟ್ಟಿ ಅವರ ಖಾತೆಗಳಿಗೆ ವರ್ಗಾವಣೆಯಾಗಿದ್ದ ನಿವ್ವಳ ಮೊತ್ತ 2.6 ಬಿಲಿಯನ್ ದಿರ್ಹಮ್ ಎಂದು ನ್ಯಾಯಾಲಯ ತಿಳಿಸಿದೆ.
ಕಂಪೆನಿಯ ಹಣವನ್ನು ಬಳಸಿಕೊಂಡು ಶೆಟ್ಟಿ ವೈಯಕ್ತಿಕ ಆಸ್ತಿಗಳು ಮತ್ತು ಹೂಡಿಕೆಗಳನ್ನು ಮಾಡಿದ್ದರು ಎಂದು ನ್ಯಾಯಾಲಯ ಗುರುತಿಸಿದೆ. ಟ್ರಾವೆಲೆಕ್ಸ್ ನಲ್ಲಿನ ಹೂಡಿಕೆ, ವಿಮಾನದಲ್ಲಿನ ಪಾಲು, ದುಬೈ ಹಿಲ್ಸ್ ನ ಆಸ್ತಿಗಳು ಮತ್ತು ಅಮೆರಿಕದ ವ್ಯೋಮಿಂಗ್ ನಲ್ಲಿನ ತೈಲ ಹೂಡಿಕೆಗಳು ಇವುಗಳಲ್ಲಿ ಸೇರಿವೆ.
2014ರ ಜುಲೈನಲ್ಲಿ ಶೆಟ್ಟಿ ಮತ್ತು ಪುತನ್ ಎನ್.ಸಿ. ಮೆನನ್ ಅವರು ಗಲ್ಫ್ ಸ್ಟ್ರೀಮ್ G450 ಮಾದರಿಯ ವಿಮಾನವನ್ನು ಸಮಾನ ಪಾಲುದಾರಿಕೆ ಒಪ್ಪಂದದಡಿ ಖಾಸಗಿ ಬಳಕೆಗಾಗಿ ಜಂಟಿಯಾಗಿ ಖರೀದಿಸಿದ್ದರು. ಇತರ ಸ್ವಾಧೀನಗಳಿಗೂ NNMC ಸಂಸ್ಥೆಯನ್ನು ಬಳಸಲಾಗಿತ್ತು. ಈ ಸಂಸ್ಥೆಯಲ್ಲಿ ಶೆಟ್ಟಿ ಏಕೈಕ ಷೇರುದಾರರಾಗಿದ್ದರೆ, ಶೆಟ್ಟಿ ಮತ್ತು ಮಂಗಾಟ್ ನಿರ್ದೇಶಕರಾಗಿದ್ದರು.
► 3.888 ಬಿಲಿಯನ್ ಡಾಲರ್ ಸಾಲ ಮರೆಮಾಚಿದ್ದ ಕಂಪೆನಿ
NMCಯ ಹಣಕಾಸು ಅಕ್ರಮಗಳ ಮತ್ತೊಂದು ಗಂಭೀರ ಅಂಶವೆಂದರೆ ಕಂಪೆನಿಯ ನೈಜ ಸಾಲದ ವಿವರಗಳನ್ನು ಮರೆಮಾಚಿದ್ದು. 2018ರ ಡಿಸೆಂಬರ್ 31ರ ವೇಳೆಗೆ ಕಂಪೆನಿ ಬಹಿರಂಗಪಡಿಸದೆ ಉಳಿಸಿದ್ದ ಸಾಲದ ಮೊತ್ತ ಬರೋಬ್ಬರಿ 3.888 ಬಿಲಿಯನ್ ಡಾಲರ್ ಆಗಿತ್ತು. ಇದೇ ಅವಧಿಯಲ್ಲಿ ಅಧಿಕೃತವಾಗಿ ವರದಿ ಮಾಡಿದ್ದ ಸಾಲದ ಮೊತ್ತ 1.993 ಬಿಲಿಯನ್ ಡಾಲರ್ ಮಾತ್ರ.
2012ರಿಂದ 2019ರ ಜೂನ್ 30ರವರೆಗೆ ಕಂಪೆನಿಯ ಒಟ್ಟು ಸಾಲ ಹಾಗೂ ಬಹಿರಂಗಪಡಿಸದ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿತ್ತು ಎಂದು ನ್ಯಾಯಾಲಯ ಕಂಡುಕೊಂಡಿದೆ.
ಆಂತರಿಕ ಲೆಕ್ಕಪತ್ರಗಳಲ್ಲಿ ನಿಜವಾದ ಸಾಲದ ವಿವರಗಳನ್ನು ದಾಖಲಿಸಲಾಗಿದ್ದರೂ, ದಾಖಲೆಗಳನ್ನು ತಿರುಚುವ ಮೂಲಕ ಲೆಕ್ಕಪರಿಶೋಧನಾ ಸಂಸ್ಥೆ ಅರ್ನ್ಸ್ಟ್ ಆ್ಯಂಡ್ ಯಂಗ್ (EY)ನಿಂದಲೂ ಅವುಗಳನ್ನು ಮರೆಮಾಚಲಾಗಿತ್ತು.
ನೈಜವಾಗಿ ಸರಕು ಅಥವಾ ಸೇವೆಗಳನ್ನು ಪೂರೈಸದ ಪೂರೈಕೆದಾರರ ಹೆಸರಿನಲ್ಲಿ ನಕಲಿ ವಹಿವಾಟುಗಳನ್ನು ಸೃಷ್ಟಿಸಿ ಹಣಕಾಸು ಪಡೆಯುವ ವ್ಯವಸ್ಥೆಯನ್ನೂ ಬಳಸಲಾಗಿತ್ತು. ಕಂಪೆನಿಯ ಲೆಕ್ಕಪತ್ರ ವ್ಯವಸ್ಥೆಗಳನ್ನು ನವೀಕರಿಸಿದ ಸಂದರ್ಭದಲ್ಲಿಯೂ ಎರಡು ಪ್ರತ್ಯೇಕ ಲೆಕ್ಕಪತ್ರಗಳನ್ನು ನಿರ್ವಹಿಸುವ ಮೂಲಕ ವಂಚನೆಯನ್ನು ಮುಂದುವರಿಸಲಾಗಿತ್ತು ಎಂದು ನ್ಯಾಯಾಲಯ ತಿಳಿಸಿದೆ.
►B R ಶೆಟ್ಟಿ, ಮಂಗಾಟ್ ಪರಸ್ಪರ ಆರೋಪ; ಇಬ್ಬರ ವಾದವೂ ತಿರಸ್ಕೃತ
ವಂಚನೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ. ಮಂಗಾಟ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ದುಷ್ಕೃತ್ಯಕ್ಕೆ ತಾನೇ ಬಲಿಯಾಗಿದ್ದೆ ಎಂದು B R ಶೆಟ್ಟಿ ನ್ಯಾಯಾಲಯದಲ್ಲಿ ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ಮಂಗಾಟ್, ಶೆಟ್ಟಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ವಂಚನೆ ನಡೆಸಿದ್ದರು ಎಂದು ಆರೋಪಿಸಿದ್ದರು. ಕಂಪೆನಿಯ ಹಣಕಾಸು ವ್ಯವಹಾರಗಳ ಮೇಲೆ ತನಗೆ ಯಾವುದೇ ನಿಯಂತ್ರಣ ಇರಲಿಲ್ಲ ಮತ್ತು ಪ್ರಮುಖ ಷೇರುದಾರರ ಅಧೀನದಲ್ಲಿ ತಾನು ಕೆಲಸ ಮಾಡುತ್ತಿದ್ದೆ ಎಂದೂ ಮಂಗಾಟ್ ವಾದಿಸಿದ್ದರು.
ಆದರೆ, ಇಬ್ಬರ ವಾದಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ. ವಂಚನೆಯಲ್ಲಿ ಇಬ್ಬರೂ ಅಪ್ರಾಮಾಣಿಕವಾಗಿ ಭಾಗಿಯಾಗಿದ್ದರು ಎಂದು ತೀರ್ಮಾನಿಸಿದೆ.
ಕಂಪೆನಿಯ CEO ಆಗಿದ್ದ ಮಂಗಾಟ್ ಅವರು ಹಣಕಾಸು ವ್ಯವಹಾರಗಳ ಮೇಲೆ ನಿಯಂತ್ರಣವಿರಲಿಲ್ಲ ಎಂದು ಹೇಳಿರುವುದನ್ನು ನ್ಯಾಯಮೂರ್ತಿ ಸ್ಮಿತ್ ಪ್ರಶ್ನಿಸಿದ್ದಾರೆ. "FTSE 100 ಕಂಪೆನಿಯ CEO ಆಗಿದ್ದ ವ್ಯಕ್ತಿಯೊಬ್ಬರು ಇಂತಹ ವಾದ ಮಂಡಿಸುವುದು ಅಸಂಭವನೀಯ. ಇದು ಸಾಕ್ಷ್ಯಗಳಿಗೆ ವಿರುದ್ಧವಾಗಿದೆ" ಎಂದು ಅವರು ಹೇಳಿದ್ದಾರೆ.
NMCಯ ಪ್ರಮುಖ ನಿರ್ಧಾರಗಳನ್ನು ಮಂಗಾಟ್ ಅವರೇ ತೆಗೆದುಕೊಳ್ಳುತ್ತಿದ್ದರು. ಕಂಪೆನಿಯ ಹಣಕಾಸು ಮತ್ತು ಖಜಾನೆ ವ್ಯವಹಾರಗಳ ನಿರ್ವಹಣೆಯೂ ಅವರ ಜವಾಬ್ದಾರಿಯಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಕಂಪೆನಿಯ ಹಣವನ್ನು ಅಕ್ರಮವಾಗಿ ವರ್ಗಾಯಿಸಲು B R ಶೆಟ್ಟಿ ಮತ್ತು ಇತರರಿಗೆ ನೆರವಾಗಿದ್ದಲ್ಲದೆ, EYಯಿಂದ ಸಾಲದ ವಿವರಗಳನ್ನು ಮರೆಮಾಚುವಲ್ಲಿಯೂ ಮಂಗಾಟ್ ಭಾಗಿಯಾಗಿದ್ದರು. ಹಣದ ದುರುಪಯೋಗ ಮತ್ತು ಅದನ್ನು ಮುಚ್ಚಿಡುವ ಪ್ರಕ್ರಿಯೆಯಲ್ಲಿ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂದು ನ್ಯಾಯಾಧೀಶರು ಹೇಳಿದ್ದಾರೆ.
► ಮಂಗಾಟ್ ವಿರುದ್ಧ ADCBಗೆ 1.022 ಬಿಲಿಯನ್ ಡಾಲರ್ ವಸೂಲಿಗೆ ಅವಕಾಶ
ಮಂಗಾಟ್ ವಿರುದ್ಧ ADCB ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿಯೂ ನ್ಯಾಯಾಲಯ ಬ್ಯಾಂಕ್ ಪರವಾಗಿ ತೀರ್ಪು ನೀಡಿದೆ. ಮಂಗಾಟ್ ಅವರಿಂದ ಸುಮಾರು 1.022 ಬಿಲಿಯನ್ ಡಾಲರ್ ಬಾಕಿ ಹೊಣೆಗಾರಿಕೆ ಹಾಗೂ 168.989 ಮಿಲಿಯನ್ ಡಾಲರ್ ನಷ್ಟವಾದ ಲಾಭವನ್ನು ವಸೂಲಿ ಮಾಡಲು ಬ್ಯಾಂಕ್ ಅರ್ಹವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆದರೆ, ಮಂಗಾಟ್ ಅವರು ಸಮರ್ಥಿಸಿಕೊಳ್ಳಬಹುದಾದ ಹೊಂದಾಣಿಕೆಗಳಿಗೆ ಅವಕಾಶವಿದೆ. ಬ್ಯಾಂಕ್ ಈಗಾಗಲೇ ವಸೂಲಿ ಮಾಡಿರುವ ಹಣವನ್ನು ಒಟ್ಟು ಬಾಕಿ ಮೊತ್ತದಿಂದ ಕಡಿತಗೊಳಿಸಬೇಕಾಗಿದೆ.
►ಬ್ಯಾಂಕ್ ಆಫ್ ಬರೋಡಾ ಪ್ರಕರಣ ಇತ್ಯರ್ಥ
NMC ಆಡಳಿತಾಧಿಕಾರಿಗಳು ದಾಖಲಿಸಿದ್ದ ಪ್ರಕರಣದಲ್ಲಿ ಬ್ಯಾಂಕ್ ಆಫ್ ಬರೋಡಾ ಕೂಡ ಆರಂಭದಲ್ಲಿ ಪ್ರತಿವಾದಿಯಾಗಿತ್ತು. ಆದರೆ, ವಿಚಾರಣೆಯ ಅಂತಿಮ ಹಂತದಲ್ಲಿ ಬ್ಯಾಂಕ್ ಹಕ್ಕುದಾರರೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿತ್ತು. ಬ್ಯಾಂಕ್ ವಿರುದ್ಧದ ದೂರುಗಳನ್ನು ಹಕ್ಕುದಾರರು ಹಿಂಪಡೆದಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
NMCಯ ನೈಜ ಖಾತೆಗಳ ಸ್ಥಿತಿಯನ್ನು ಮರೆಮಾಚುವುದಕ್ಕೆ ಪ್ರತಿಯಾಗಿ ಕಂಪೆನಿಯ ಹೊಣೆಗಾರಿಕೆಗಳನ್ನು ಮರುಪಾವತಿಸಲು ಶೆಟ್ಟಿ ಮತ್ತು ಬ್ಯಾಂಕ್ ಆಫ್ ಬರೋಡಾದ ಆಗಿನ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್. ಜಯಕುಮಾರ್ ಒಪ್ಪಿಕೊಂಡಿದ್ದರೇ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಹಕ್ಕುದಾರರ ಅಂತಿಮ ವಾದಗಳಿಗೆ ಬ್ಯಾಂಕ್ ಪ್ರತಿಕ್ರಿಯೆ ನೀಡುವ ಅವಕಾಶವನ್ನು ತಾನು ನೀಡಿರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ತೀರ್ಮಾನಿಸುವುದು ಬ್ಯಾಂಕ್ ಮತ್ತು ಜಯಕುಮಾರ್ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
►1975ರಲ್ಲಿ ಆರಂಭವಾಗಿತ್ತು NMC
B R ಶೆಟ್ಟಿ ಅವರು 1975ರಲ್ಲಿ ಅಬುಧಾಬಿಯಲ್ಲಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸಿದ್ದರು. ನಂತರ ಅದು NMC ಹೆಲ್ತ್ಕೇರ್ ಆಗಿ ಬೆಳೆದಿತ್ತು. 2012ರಲ್ಲಿ ಕಂಪೆನಿಯ ಮಾತೃಸಂಸ್ಥೆ ಲಂಡನ್ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿತ್ತು.
ಆದರೆ, ಹಣಕಾಸಿನ ಅಕ್ರಮಗಳು ಬಹಿರಂಗವಾದ ಹಿನ್ನೆಲೆಯಲ್ಲಿ 2020ರ ಎಪ್ರಿಲ್ 9ರಂದು ಇಂಗ್ಲೆಂಡ್ ನ ಹೈಕೋರ್ಟ್ ಆದೇಶದ ಮೂಲಕ ಕಂಪೆನಿ ಆಡಳಿತಾಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿತ್ತು. ಅದೇ ವರ್ಷದ ಸೆಪ್ಟೆಂಬರ್ ನಲ್ಲಿ NMC ಹೆಲ್ತ್ಕೇರ್, NMC ಹೋಲ್ಡಿಂಗ್ ಮತ್ತು ಸಮೂಹದ 34 ಕಂಪೆನಿಗಳು ADGM ಆಡಳಿತ ಪ್ರಕ್ರಿಯೆಗೆ ಒಳಪಟ್ಟಿದ್ದವು.
►ಅಂತಿಮ ಮೊತ್ತಕ್ಕೆ ಇನ್ನೂ ಕಾಯಬೇಕು
ಶೆಟ್ಟಿ ಮತ್ತು ಮಂಗಾಟ್ ಇಬ್ಬರೂ 2012ರ ಎಪ್ರಿಲ್ 30ರಿಂದ 2020ರ ಎಪ್ರಿಲ್ 9ರವರೆಗಿನ ಅವಧಿಯಲ್ಲಿ ವಂಚನೆಯ ವ್ಯವಹಾರಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು ಎಂದು ನ್ಯಾಯಾಲಯ ಹೇಳಿದೆ.
ಆದರೆ, 5.397 ಬಿಲಿಯನ್ ಡಾಲರ್ ಮೊತ್ತವು ಹಣಕಾಸಿನ ಹೊಣೆಗಾರಿಕೆ ನಿರ್ಧರಿಸುವ ಆರಂಭಿಕ ಆಧಾರ ಮಾತ್ರ. ಇಬ್ಬರೂ ಪ್ರತ್ಯೇಕವಾಗಿ ಪಾವತಿಸಬೇಕಾದ ಅಂತಿಮ ಮೊತ್ತವನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು.
ಇದರ ಜತೆಗೆ ಶಾಸನಬದ್ಧ ಬಡ್ಡಿ, ನ್ಯಾಯಾಲಯದ ವೆಚ್ಚಗಳು ಹಾಗೂ ಇತರ ಬಾಕಿ ವಿಷಯಗಳನ್ನೂ ನ್ಯಾಯಾಲಯ ಪರಿಶೀಲಿಸಲಿದೆ. ನಾಗರಿಕ ಮತ್ತು ದಿವಾಳಿತನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಂದೇ ನಷ್ಟಕ್ಕೆ ಎರಡು ಬಾರಿ ಹಣ ವಸೂಲಿ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಬಂಧನೆಯನ್ನೂ ತೀರ್ಪು ಒಳಗೊಂಡಿದೆ.
ಸೌಜನ್ಯ: gulfnews.com






