ಉದ್ಯಮದ ಬೆಳವಣಿಗೆಗೆ ಹೊಸ ಅವಕಾಶಗಳ ಅನಾವರಣ : ದುಬೈನಲ್ಲಿ ಸಾಹೇಬಾನ್ SPAEN 2026

ದುಬೈ : ಉದ್ಯಮಿಗಳ ನಡುವೆ ಸಂಪರ್ಕ, ಜ್ಞಾನ ಹಂಚಿಕೆ ಮತ್ತು ಸಹಯೋಗವನ್ನು ಉತ್ತೇಜಿಸುವ ಮೂಲಕ ಉದ್ಯಮದ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದ ಸಾಹೇಬಾನ್ ವೃತ್ತಿಪರರು ಮತ್ತು ಉದ್ಯಮದ ನೆಟ್ವರ್ಕಿಂಗ್ (SPAEN) ಕಾರ್ಯಕ್ರಮ ದುಬೈನಲ್ಲಿ ನಡೆಯಿತು.
ವಿವಿಧ ಕ್ಷೇತ್ರಗಳ ಉದ್ಯಮಿಗಳು, ವ್ಯಾಪಾರ ಮಾಲಕರು ಹಾಗೂ ವೃತ್ತಿಪರರು ಭಾಗವಹಿಸಿದ್ದ ಕಾರ್ಯಕ್ರಮವು ಪರಸ್ಪರ ಸಹಕಾರ ಮತ್ತು ವೃತ್ತಿಪರ ಸಂಬಂಧಗಳನ್ನು ಬಲಪಡಿಸಲು ವೇದಿಕೆಯಾಯಿತು.
ನೋಂದಣಿ ಮತ್ತು ಪರಸ್ಪರ ಪರಿಚಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದಲ್ಲಿ ಜನಾಬ್ ಮೊಹ್ಸಿನ್ ಶೇಕ್ ಕಿರಾತ್ ಪಠಣ ಮಾಡಿದರು. ಬಳಿಕ ಭಾಗವಹಿಸಿದವರು ಪರಸ್ಪರ ಪರಿಚಯ ಮಾಡಿಕೊಂಡು ವೃತ್ತಿಪರ ಸಂಪರ್ಕ ಬೆಳೆಸಿಕೊಂಡರು.
ಸ್ವಾಗತ ಭಾಷಣ ಮಾಡಿದ ಜನಾಬ್ ಅಲ್ತಾಫ್ ಎಂ.ಎಸ್., ನೆಟ್ವರ್ಕಿಂಗ್ ಅನ್ನು ಬ್ಯುಸಿನೆಸ್ ಕಾರ್ಡ್ ಗಳ ವಿನಿಮಯಕ್ಕೆ ಸೀಮಿತಗೊಳಿಸದೆ, ಅರ್ಥಪೂರ್ಣ ವೃತ್ತಿಪರ ಸಂಬಂಧಗಳನ್ನು ಬೆಳೆಸುವ ವೇದಿಕೆಯನ್ನಾಗಿ ರೂಪಿಸಬೇಕೆಂದು ಹೇಳಿದರು.
ಸ್ವಾಗತ ಭಾಷಣ ಮಾಡಿದ ಅಲ್ತಾಫ್ ಎಂ.ಎಸ್., ಉದ್ಯಮಿಗಳು ಪರಸ್ಪರ ಸಹಕಾರದೊಂದಿಗೆ ವ್ಯವಹಾರ ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು. ಪರಸ್ಪರ ಮಾರ್ಗದರ್ಶನ ನೀಡುವುದು, ಜ್ಞಾನ ಹಂಚಿಕೊಳ್ಳುವುದು ಮತ್ತು ವ್ಯವಹಾರದ ಅವಕಾಶಗಳನ್ನು ಪರಸ್ಪರ ಪರಿಚಯಿಸುವ ಮೂಲಕ ಸಮುದಾಯದ ಉದ್ಯಮಗಳ ಬೆಳವಣಿಗೆಗೆ ನೆರವಾಗಬೇಕು ಎಂದು ಹೇಳಿದರು.
ವಕೀಲ ಕೆ.ಪಿ. ಅಬ್ದುಲ್ ಶುಕೂರ್ ಅವರು ‘ಉದ್ಯಮ ಮತ್ತು ಕಾನೂನು’ ವಿಷಯದ ಕುರಿತು ಮಾತನಾಡಿ, ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಕಾನೂನಿನ ಅರಿವು ಹೊಂದಿರುವುದು ಅಗತ್ಯ ಎಂದು ವಿವರಿಸಿದರು.
ಕರಾವಳಿ ಕರ್ನಾಟಕದ ಜನರಿಗೆ ನ್ಯಾಯ ಪಡೆಯಲು ಅನುಕೂಲವಾಗುವಂತೆ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ನ ಸರ್ಕ್ಯೂಟ್ ಪೀಠ ಸ್ಥಾಪಿಸಬೇಕು ಎಂದು ವಕೀಲರಾದ ಕೆ.ಪಿ.ಎ. ಶುಕೂರ್ ಮತ್ತು ಮೊಹಮ್ಮದ್ ಶಮಿಲ್ ಶುಕೂರ್ ಹೇಳಿದರು. ಈ ಉದ್ದೇಶಕ್ಕೆ ಸಮುದಾಯದ ಬೆಂಬಲವನ್ನೂ ಕೋರಿದರು.
TEDx ಸ್ಪೀಕರ್, ಲೇಖಕ ಹಾಗೂ ‘ದಿ ಕ್ಲಾರಿಟಿ ಗೇಮ್’ ಸಂಸ್ಥಾಪಕ ಸಮೀರ್ ಜೀಪೀ ಅವರು ಉದ್ಯಮಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹತ್ವವನ್ನು ವಿವರಿಸಿದರು. ಈ ಬಗ್ಗೆ ಆಟದ ಮೂಲಕ ತಿಳಿಸಿಕೊಟ್ಟರು.
ಉದ್ಯಮ ಸೇವೆಗಳ ಪರಿಚಯ :
ಕಾರ್ಯಕ್ರಮದಲ್ಲಿ ಕೆಲವು ಉದ್ಯಮಿಗಳು ತಮ್ಮ ವ್ಯವಹಾರ ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಸಯೀದ್ ಮೊಹಮ್ಮದ್ ಮಾನವ ಸಂಪನ್ಮೂಲ ಸೇವೆಗಳ ಕುರಿತು ವಿವರಿಸಿದರು. ಸುಹೈಲ್ ಎಚ್.ಎ. ಮತ್ತು ಫೈಝಾನ್ ಖಾನ್ ಹಂಚಿಕೆಯ ಕಚೇರಿ ಸೌಲಭ್ಯಗಳು ಹಾಗೂ ಮಾನವ ಸಂಪನ್ಮೂಲ ಸೇವೆಗಳನ್ನು ಪರಿಚಯಿಸಿದರು. ಮೊಹಮ್ಮದ್ ಷರೀಫ್ ಅವರ ಪರವಾಗಿ ಸನ್ನನ್ ಸಿದ್ದಿಕ್ ಅವರು ‘ದಿ ಬಿಝ್ರೆಫ್ ರೂಟ್ವರ್ಕ್’ ಸಂಸ್ಥೆಯ ಪರಿಚಯ ಮಾಡಿಕೊಟ್ಟರು.
SPAEN ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವುದು ಮತ್ತು ಮುಂದಿನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸದಸ್ಯರನ್ನು ಭಾಗವಹಿಸುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಪ್ರಶ್ನೋತ್ತರದಲ್ಲಿ ಚರ್ಚಿಸಲಾಯಿತು. ಉದ್ಯಮಿಗಳು ಪರಸ್ಪರ ಉದ್ಯಮದ ಅವಕಾಶಗಳನ್ನು ಪರಿಚಯಿಸಿಕೊಳ್ಳುವುದು, ಅನುಭವ ಹಂಚಿಕೊಳ್ಳುವುದು ಮತ್ತು ಉದ್ಯಮದ ಬೆಳವಣಿಗೆಗೆ ಪರಸ್ಪರ ಸಹಕರಿಸುವಂತೆ ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಸಿಎ ಅಬಿದ್ ಅಲಿ ಶೇಖ್, ಸೈಯದ್ ನಾಸಿರ್ ಹುಸೇನ್, ರಿಝ್ವಾನ್ ಅಝೀಝ್, ಸಿಎ ಶಬ್ಬೀರ್ ಅಹ್ಮದ್, ಸಾಹೇಬಾನ್ ಸಂಚಾಲಕ ಅಫ್ರೋಝ್ ಅಸ್ಸಾದಿ ಸೇರಿದಂತೆ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು. ನಾರ್ದರ್ನ್ ಇನ್ಶುರೆನ್ಸ್ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತ್ತು.
ಅಲ್ತಾಫ್ ಖಲೀಫೆ, ಸಮೀವುಲ್ಲಾ ಹಬೀಬಿ, ಅಲ್ತಾಫ್ ಎಂ.ಎಸ್. ಮತ್ತು ಅಜ್ಮಲ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.






